ಪುಟ:Mysore-University-Encyclopaedia-Vol-6-Part-10.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೃಹ ಸೂತ್ರಗಳು 6.ದ್ವಾರಗಳು : ವಾಸ್ತುಗೃಹಗಳ ದ್ವಾರಗಳು ಗಾಳಿ ಬೆಳಕು ಮತ್ತು ಜನರು ಸಾಮಾನ್ಯವಾಗಿ ಬಳಸುವ ಗೃಹಲಂಕರಣ ವಸ್ತುಗಳ ಪ್ರವೇಶಕ್ಕೆ ಅಡ್ಡಿಯಿಲ್ಲದಷ್ಟು ವಿಶಾಲವಾಗಿದ್ದು,ಕಳ್ಳಕಾಕರ ಪ್ರಯತ್ನಗಳನ್ನು ಎದುರಿಸಿ ನಿಲ್ಲವಷ್ಟು ಬಲಯುತವಾಗಿರಬೇಕಾಗುತ್ತದೆ.ಬಿರುಗಾಳಿ,ಮಳೆ,ಹಿಮ ಮುಂತಾದವುಗಳ ಉಪದ್ರವಿರುವೆಡೆಗಳಲ್ಲಿ ದ್ವಾರಗಳ ಗಾತ್ರ,ನೆಲ ಮತ್ತು ಸಾಮಗ್ರಿಗಳು ಈ ಉಪದ್ರವಗಳ ಬಾಧಕವಿಲ್ಲದಂತೆ ಇರಬೇಕು.ಗೃಹಗಳ ಸಂಯೋಜನೆ ಮತ್ತು ಅಂದದ ದೃಷ್ಟಿಯಿಂದ ದ್ವಾರಗಳ ಗಾತ್ರ,ಸಂಖ್ಯೆ ಮತ್ತು ಆಕಾರಗಳು ಯೋಗ್ಯವಾಗಿ ಇರಬೇಕು. 7.ವಾಸ್ತುಶಿಲ್ಪ : ವಾಸ್ತುಗೃಹಗಳ ವಾಸ್ತುಶಿಲ್ಪ ನಿರ್ದಿಷ್ಟವಾಗಿರುವುದಿಲ್ಲ.ಹಿಂದೆ ಖಾಸಗಿ ಗೃಹಗಳು,ಮಾಲೀಕರ ದರ್ಜೆ ಮತ್ತು ಅಭೀಷ್ಟಗಳಿಗೆ ತಕ್ಕಂತೆ ಬಲು ಹೆಚ್ಚಿನ ಅಲಂಕಾರ,ಕೆತ್ತನೆ ಕೆಲಸಗಳು,ಬಣ್ಣಗಳಿಂದ ಕೂಡಿರುತ್ತಿದ್ದುವು.ಈಚೆಗೆ ವಾಸ್ತುಶಿಲ್ಪದ ರೀತಿಯೇ ಬದಲಾವಣೆಯಾಗಿ ಸರಳವಾದ ಸಂಯೋಜನೆ,ರೇಖಾಲಂಕಾರ ಮತ್ತು ವರ್ಣವಿನ್ಯಾಸಗಳಿಗೆ ಹೆಚ್ಚು ಗಮನ ಕೊದಲಾಗುತ್ತದೆ. (ಕೆ.ಎಸ್.ಕೆ) ಗೃಹವಾಸ್ತು (ಹಸ್ತಪ್ರತಿಗಳಲ್ಲಿ) : ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ವಾಸ್ತುಶಾಸ್ತ್ರದ ಹಸ್ತಪ್ರತಿಗಳು ಕಂಡುಬಂದಿದ್ದು ಕನ್ನಡದಲ್ಲಿ ಅದೊಂದು ಪ್ರತ್ಯೇಕ ಶಾಸ್ತ್ರವಾಗಿ ಬೆಳೆದು ಬಂದಿವುದಕ್ಕೆ ಸಾಕ್ಷಿಯಗಿದೆ.ಚಾವುಂಡರಾಯನ (ಪ್ರ.ಶ.ಸು1150) 'ಲೋಕೋಪಕಾರಿ' ಎಂಬ ಗ್ರಂಥದ ಹಸ್ತಪ್ರತಿಗಳಲ್ಲಿ ವಾಸ್ತುಶಾಸ್ತ್ರಕ್ಕೂ ಸ್ಥಾನ ಕಲ್ಪಿಸಲಾಗಿದೆ.ಇದರಲ್ಲಿ ನಿವೇಶನದ ಆಯ್ಕೆ,ಮನೆಯ ಉದ್ದಗಲಗಳು,ನಕ್ಷತ್ರಗಳ ಪ್ರಭಾವ,ಉಪಯೋಗಿಸಬಾರದಂತಹ ಮರಮುಟ್ಟುಗಳು ಮುಂತಾದ ವಿಚಾರಗಳನ್ನು ಹೇಳಲಾಗಿದೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕುಮಾರವಾಸ್ತು ಸಟೀಕು,ಗೃಹವಾಸ್ತು ಪುಸ್ತಕ,ಜಲವಾಸ್ತು,ಜಲಶಿಲ್ಪ,ಧನವಾಸ್ತುನಿರ್ಣಯ,ವಾಸ್ತುಪ್ರಕರಣ ಟೀಕು,ವಾಸ್ತುಶಾಸ್ತ್ರ,ವಾಸ್ತುಶಾಸ್ತ್ರ ಸಟೀಕು,ವಾಸ್ತುಪ್ರಕರಣ ಟೀಕು ಎಂಬ ಶೀರ್ಷಿಕೆಯ ಹಸ್ತಪ್ರತಿಗಳಿವೆ.ವಾಸ್ತುಶಾಸ್ತ್ರ ಪ್ರಕಾರದಂತೆ ನಿರ್ಮಿಸಿದ ಮನೆಗಳಿಂದ ವಾಸಿಸುವವರಿಗೆ ಸುಖ ಸಂತೋಷಗಳು ಉಂಟಾಗುತ್ತದೆ ಎಂಬ ಆಶಯವನ್ನು ಈ ಹಸ್ತಪ್ರತಿಗಳಿವೆ ವ್ಯಕ್ತಪಡಿಸುತ್ತವೆ. ಕನ್ನಡದಲ್ಲಿ ಸನತ್ಕುಮಾರ ವಾಸ್ತುಶಾಸ್ತ್ರ ಹಸ್ತಪ್ರತಿಗಳು ಜನಪ್ರಿಯವಾಗಿದೆ.ಇದರಲ್ಲಿ ಗೃಹನಿರ್ಮಾಣ ಮಾಡುವಾಗ ವಾಸ್ತುಪುರುಷನ ಯಾವ ಭಾಗದಲ್ಲಿ ಕಂಬ ನಿಲ್ಲಿಸ ಬೇಕೆಂಬುದನ್ನು ವಿವರಿಸಲಾಗಿದೆ.ಈ ರೀತಿ ಮಾನವ ದೇಹದ ಸದ್ಬಳಕೆಯಾಗಬೇಕೆಂಬುದನ್ನು ಸೂಚಿಸಲಾಗಿದೆ. ಆಯ ನೋಡಿ ಮನೆ ಕಟ್ಟಬೇಕೆಂದು ಸನತ್ಕುಮಾರ ವಾಸ್ತುಶಾಸ್ತ್ರ ಹಸ್ತಪ್ರತಿಗಳ ಅಭಿಮತ.ಈ ಪ್ರಕಾರ ಆಯದ ಮಾಪನ ಹೀಗಿದೆ - ಮನೆಯ ಒಡೆಯನ ಹಸ್ತಪ್ರಮಾಣದಲ್ಲಿ ಎಷ್ಟು ಅಗಲ ಎಷ್ಟು ಉದ್ದ ಬರುತ್ತದೆಯೋ ಆ ಪ್ರಮಾಣದಲ್ಲಿ ಅಳತೆ ತೆಗೆದುಕೊಂಡು ಗುಣಿಸಿದಾಗ ಬರುವ ಲಬ್ಧವೇ 'ಪಾದ'.ಈ ಪಾದವನ್ನು 8ರಿಂದ ಗುಣಿಸಿ 12ರಿಂದ ಭಾಗಿಸಿದರೆ ಉಳಿಯುವ ಶೇಷವೇ ಆಯ. ಮನೆಗೆ ಮರ ಕಡಿಯಬೇಕಾದರೆ ಮೊದಲು ಮರಕ್ಕೆ ಹಾಲು ಜೇನುತುಪ್ಪ ಎರೆದು ಸಕಲ ದೇವತೆಗಳನ್ನು ನೆನೆದು ಮರದ ಕ್ಷಮೆ ಕೇಳಬೇಕು,ಮರ ಕತ್ತರಿಸಲು ಬಳಸುವ ಕೊಡಲಿ ಮತ್ತು ಬಾಚಿಗೆ ನೀರು ಜೇನುತುಪ್ಪ ಲೇಪಿಸಬೇಕು,ಇದರಿಂದ ಮರ ಹದನಾಗಿ ಕತ್ತರಿಸಲು ಬರುತ್ತದೆ ಹಾಗೂ ಮರ ಹುಳಿಯುವುದಿಲ್ಲ ಎಂದು ಸನತ್ಕುಮಾರ ವಾಸ್ತುಶಾಸ್ತ್ರದಲ್ಲಿ ವರ್ಣಿಸಿದೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ 'ವಾಸ್ತುಶಾಸ್ತ್ರದ ಪುಸ್ತಕ' ಎಂಬ ಹಸ್ತಪ್ರತಿಯಲ್ಲಿ ಸೂರ್ಯ ಯಾವ ರಾಶಿಯಲ್ಲಿದ್ದಾಗ ಮನೆ ಕಟ್ಟಬೇಕು,ಯಾವ ನಕ್ಷತ್ರದವರು ಯಾವ ಯಾವ ಮರಗಳನ್ನು ಕತ್ತರಿಸಬಾರದು,ಕತ್ತರಿಸಿದ ಮರ ಬೀಳುವ ಭಂಗಿ,ಹೇಗೆ ಬಿದ್ದರೆ ಅಂಥ ಮರದ ತುಂಡನ್ನು ಮನೆಗೆ ಬಳಸಬಾರದು ಎಂದು ಮರಮುಟ್ಟುಗಳ ಬಗೆಗೆ ವಿಚಾರ ಮಾಡಿದೆ.ದೇವಸ್ಥಾನ,ಕೆರೆಯ ತಡಿ,ಬಾವಿಯ ತಡಿ,ಸುಡುಗಾಡಿನಲ್ಲಿರುವ ಮರವನ್ನು ಕಡಿಯಬಾರದು.ಹಾಳು ಮನೆಯ ಮರ ಮತ್ತು ಒಬ್ಬರು ಕಡಿದುಬಿಟ್ಟ ಮರ ಬಳಸಬಾರದು ಎಂದೂ ಸೂಚಿಸಲಾಗಿದೆ.ಮರದ ಬಣ್ಣ ನೋಡಿ ಆ ಮರದಲ್ಲಿ ವಾಸಿಸಿದ್ದ ಪ್ರಾಣಿಗಳ ಹೆಸರು ಹೇಳುವ ನೈಪುಣ್ಯತೆ ಈ ಶಾಸ್ತ್ರಕಾರರಲ್ಲಿ ಕಂಡುಬರುತ್ತದೆ.ಮರ ಕೃಷ್ಣವರ್ಣ ಇದ್ದರೆ ಹಾವು,ವಿವರ್ಣವಾಗಿದ್ದರೆ ಚೇಳು ಮತ್ತು ಕಪ್ಪೆ,ಗೂಢವರ್ಣವಾಗಿದ್ದರೆ ಕಲ್ಲು ಇದ್ದುದನ್ನು ಭಾವಿಸಬಲ್ಲರು.ಇಂಥ ಮರಗಳು ಮನೆಗೆ ಯೋಗ್ಯವಲ್ಲ ಎಂಬ ಅಂಶ ಉಕ್ತವಾಗಿದೆ. ಮನೆಯ ನಿವೇಶನ ಆಯ್ಕೆ ಮಾಡುವಾಗ ಹಾಲುಮರ ಇದ್ದ ಕಡೆ,ದೇವಾಲಯದ ಸಮೀಪ,ನೆರಳು ಬರುವ ಜಾಗ,ಜವುಳು ನೆಲ,ನೀರು ಹರಿದ ಸ್ಥಳ.ಶ್ಮಶಾನ,ಊರ ಹೆಬ್ಬಾಗಿಲು,ದನದ ಹಟ್ಟಿ,ಮರಳುನೆಲ,ಕೆಸರು ಹುಟ್ಟುವ ಎಡೆಗಳಲ್ಲಿ ಮನೆ ನಿರ್ಮಿಸಬಾರದೆಂಬುದು ಹೇಳಿದೆ.(ವೈ.ಸಿ.ಬಿ) ಗೃಹ್ಯಸೂತ್ರಗಳು : ಗೃಹ್ಯ ಮತ್ತು ವೇದೋಕ್ತ ಕರ್ಮಗಳನ್ನು ತಿಳಿಸುವ ಶಾಸ್ತ್ರಗ್ರಂಥಗಳು.ಇವು ಭಾರತೀಯ ಸಾಮಾಜಿಕ ಜೀವನರಚನೆ ತಳಹದಿಯಾಗಿವೆ.ಇವುಗಳ ಕಾಲವನ್ನು ನಿರ್ಣಯಿಸುವುದು ದುಸ್ಸಾಧ್ಯವಾಗಿದ್ದರೂ ಇವು ಸಂಹಿತೆ,ಬ್ರಾಹ್ಮಣ ಮತ್ತು ಶ್ರೌತಸೂತ್ರಗಳಿಗಿಂತ ಈಚಿನವೆಂದು ನಿರ್ಧರಿಸಲಾಗಿದೆ.ಇವುಗಳಿಗೆ ವೇದಗಳೇ ಆಧಾರವಾಗಿದೆ ಎನ್ನಬಹುದು.ಋಗ್ವೇದ ಕಾಲವನ್ನು ಪ್ರ.ಶ.ಪೂ. 2500 ಎಂದು ಇಟ್ಟುಕೊಂಡರೆ ಗೃಹ್ಯಸೂತ್ರಗಳ ಕಾಲವನ್ನು ಪ್ರ.ಶ.ಪೂ. ಸುಮಾರು 2000 ಎಂದು ನಿರ್ಣಯಿಸಬಹುದಾದರೂ ಎಲ್ಲ ಗೃಹ್ಯಸೂತ್ರಗಳೂ ಸಮಕಾಲೀನವಾದುವುಗಳೆಂದು ಭಾವಿಸಲಾಗುವುದಿಲ್ಲ. ಇವುಗಳಲ್ಲಿ ಮುಖ್ಯವಾದುವು ಈ ರೀತಿ ಇವೆ : ಸಾಂಖ್ಯಾಯನ,ಅಶ್ವಲಾಯನ,ಸಾಂಖ್ಯಾನ್ಯ,ಆಶ್ವಲಾಯನ,ಸಾಂಖ್ಯಾನ್ಯ,ಕೌಶೀತಕಿ-ಇವು ಋಗ್ವೇದಕ್ಕೆ ಸೇರಿದುವು.ಗೋಭಿಲ,ಖಾಧಿರ,ಜೈಮಿನಿ-ಇವು ಸಾಮವೇದಕ್ಕೆ ಸೇರಿದುವು.ಆಪಸ್ತಂಬ,ಹೆರಣ್ಯಕೇಶಿ,ಭಾರದ್ವಾಜ,ಬೌಧಾಯನ,ಮಾನವ, ಕಾಥಕ,ವೈಖಾನಸ-ಇವು ಕೃಷ್ಣ ಯಜುರ್ವೇದಕ್ಕೆ ಸೇರಿದವು.ಕಾತ್ಯಯನ ಗೃಹ್ಯಸೂತ್ರ ಶುಕ್ಲ ಯಜುರ್ವೇದಕ್ಕೂ ಕೌಶಿಕ ಗೃಹ್ಯಸೂತ್ರ ಅಥರ್ವ ವೇದಕ್ಕೂ ಸೇರಿವೆ. ಗೃಹ್ಯಸೂತ್ರಗಳಲ್ಲಿ ಸಾಮಾಜಿಕ ಪ್ರಗತಿಗೆ ಸಂಬಂಧಿಸಿರುವ ವಿಷಯಗಳ ಸವಿಸ್ತಾರ ನಿರೂಪಣೆ ಇದೆ.ಚತುರ್ವರ್ಣಗಳು,ವಿವಾಹ,ಸ್ತ್ರೀಯರ ಸ್ಥಾನಮಾನಗಳು,ಕುಟುಂಬ ನಿರ್ವಹಣೆ,ಕೃಷಿ,ವಾಣಿಜ್ಯ,ವೃತ್ತಿಗಳು,ಕಲೆ ಮತ್ತು ಕೈಕೆಲಸ,ವ್ಯಾಸಂಗ,ವಾಸ್ತುಶಿಲ್ಪ,ದಿನಚರಿ ಮತ್ತು ಕ್ರೀಡೆಗಳು ಹಾಗೂ ನೈತಿಕ ಪದ್ಧತಿಗಳು,ಸಂಪ್ರದಾಯಗಳು,ಪಿತೃಗಳಿಗೆ ಮಾಡುವ ಉತ್ತರಕ್ರಿಯೆಗಳು-ಈ ಎಲ್ಲವನ್ನೂ ಈ ಸೂತ್ರಗಳಲ್ಲಿ ವಿಶದವಾಗಿ ನಿಯಮಿಸಲಾಗಿದೆ.ರಾಜನೀತಿಯನ್ನೂ ನಿಬಂಧಿಸಲಾಗಿದೆ.ಇಷ್ಟಲ್ಲದೆ ಈ ಸೂತ್ರಗಳು ಖಗೋಳಶಾಸ್ತ್ರ.ಜ್ಯೋತಿಶಾಸ್ತ್ರ ಮತ್ತು ಆರೋಗ್ಯಶಾಸ್ತ್ರದ ನಿಯಮ ನಿಬಂಧನೆಗಳನ್ನೂ ಒಳಗೊಂಡಿವೆ.ಅದರಿಂದಾಗಿ ಪ್ರಾಚೀನ ಹಿಂದೂ ಸಮಾಜದ ಚಿತ್ರವನ್ನುಇವು ಸ್ಪಷ್ಟವಾಗಿ ರೂಪಿಸುತ್ತವೆ. ವರ್ಣಗಳು: ಬ್ರಾಹ್ಮಣ,ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ಎಂದು ವರ್ಣಗಳು ನಾಲ್ಕು.ಇವು ಭಿನ್ನಭಿನ್ನವಾದ ಸಾಮಾಜಿಕ ಜೀವನವನ್ನು ಸೂಚಿಸುವಂಥವು.ಒಂದೊಂದು ವರ್ಣಕ್ಕೂ ಪ್ರತ್ಯೇಕ ನಿಬಂಧನೆಗಳುಂಟು.ಚೂಡಾಕರ್ಮ,ಉಪನಯನ,ವಿವಾಹ ಮುಂತಾದ ಸಂಸ್ಕಾರಗಳಿಗೆ ವರ್ಣಭೇದದ ಪ್ರಕಾರ ಬೇರೆ ಬೇರೆ ವಯಸ್ಸುಗಳನ್ನು,ಕಾಲಕ್ರಮಗಳನ್ನು ನಿಬಂಧಿಸಲಾಗಿದೆ.ಆ ಸಂಸ್ಕಾರ ಕಾಲಗಳಲ್ಲಿ ಧರಿಸಬೇಕಾದ ಉಡಿಗೆತೊಡಿಗೆಗಳು ಉಚ್ಚರಿಸುವ ಮಂತ್ರಗಳು ಬೇರೆಬೇರೆಯಗಿವೆ.ಬ್ರಾಹ್ಮಣ,ಕ್ಷತ್ರಿಯ ಮತ್ತು ವೈಶ್ಯರನ್ನು ದ್ವಿಜರೆಂದೂ ಶೂದ್ರವರ್ಣದವರನ್ನು ಉಪನಯವಿಲ್ಲದವರೆಂದೂ ಹೇಳಲಾಗಿದೆ.ಇಲ್ಲಿ ಸಂಕರವಾದ ವರ್ಣಗಳು ನಿರೂಪಣೆಯೂ ಇದೆ.ಗೃಹ್ಯಸೂತ್ರಗಳಲ್ಲಿ ವರ್ಣಗಳನ್ನು ಮೇಲುಕೀಳೆಂದಾಗಲೀ,ಅಸ್ಪೃಶ್ಯರೆಂದು ಕೆಲವರನ್ನು ಸಮಾಜ ಬಹಿಷ್ಕರಿಸಬೇಕೆಂದಾಗಲೀ ಹೇಳಿಲ್ಲ. ವಿವಾಹ ಪದ್ಧತಿ: ಧರ್ಮಸೂತ್ರಗಳಲ್ಲಿಯೂ ಮನು ಮತ್ತು ಯಾಘ್ನವಲ್ಕ್ಯ ಸ್ಮೃತಿಗಳಲ್ಲಿಯೂ ನಿರೂಪಿಸಲಾಗಿರುವ ಎಂಟು ವಿವಾಹ ಪದ್ಧತಿಗಳನ್ನು ಆಶ್ವಲಾಯನ ಗೃಹ್ಯಸೂತ್ರ ನಿರೂಪಿಸುತ್ತಿದೆ.ಬ್ರಾಹ್ಮ,ದೈವ,ಪ್ರಾಜಾಪತ್ಯ,ಆರ್ಷ,ಅಸುರ,ಗಾಂಧರ್ವ,ಪೈಶಾಚ,ರಾಕ್ಷಸ ಎಂಬ ಎಂಟು ಬಗೆಯ ವಿವಾಹ ಪದ್ಧತಿಗಳಲ್ಲಿ ಮೊದಲನೆಯ ನಾಲ್ಕು ಪದ್ಧತಿಗಳನ್ನು ಸಮಾಜ ಪುರಸ್ಕರಿಸುತ್ತಿತ್ತು.ಇವು ಆರ್ಯರ ಸಾಮಾಜಿಕ ಪ್ರಗತಿಯನ್ನು ಸೂಚಿಸುತ್ತದೆ.ಉಳಿದ ನಾಲ್ಕು ಪದ್ಧತಿಗಳು ಆರ್ಯರಲ್ಲಿದವರಲ್ಲಿ ಆಚರಣೆಯಲ್ಲಿದ್ದ ಪದ್ಧತಿಗಳು.ಕ್ರಮೇಣ ಆರ್ಯರು ರಾಕ್ಷಸ ಮತ್ತು ಗಾಂಧರ್ವ ಪದ್ಧತಿಗಳನ್ನು ಕ್ಷತ್ರಿಯರಿಗೆ ಮಾತ್ರ ಸಮ್ಮತವೆಂದು ಅನುಮೋದಿಸಿದರು.ಸಮಾಜ ಸಮ್ಮತವಾದ ವಿವಾಹ ಪದ್ಧತಿಗಳಲ್ಲಿ ವಧೂವರರನ್ನು ಹಿರಿಯರು ಪರೀಕ್ಷಿಸುವ ಅಂಗ ಮೊದಲನೆಯದು.ವಧುವಿಗೆ ಕೆಲವು ಲಕ್ಷಣಗಳಿರಬೇಕೆಂದು ನಿಬಂಧಿಸಲಾಗಿದೆ.ಅಂತೆಯೇ ವರನಿಗೂ ಕೆಲವು ಯೋಗ್ಯಲಕ್ಷಣಗಳಿರ ಬೇಕು.ಇವು ಮುಖ್ಯವಾಗಿ ದೃಢಕಾಯ,ಯೌವನ,ಬೌದ್ಧಿಕ ವಿಕಾಸ ಮತ್ತು ಮಂಗಳ ಸೂಚಕ ಚಿಹ್ನೆಗಳು.ಎಲ್ಲಕ್ಕೂ ಶ್ರೇಷ್ಠವಾದುದು ಸೌಶೀಲ್ಯ.ಕೆಲವು ಗೃಹ್ಯಸೂತ್ರಗಳಲ್ಲಿ ಬಾಲ್ಯವಿವಾಹ ಪದ್ಧತಿಗೆ ಪ್ರಾಶಸ್ತ್ಯ ಕೊಡಲಾಗಿದೆ.ಆದರೆ ಗರ್ಭಾದಾನ ಸಂಸ್ಕಾರವನ್ನು ವಿವಾಹದ ಕೊನೆಯ ಅಂಗವಾಗಿ ಸೇರಿಸಿರುವುದರಿಂದ ಕನ್ಯೆಗೆ ಸುಮಾರು ಹದಿಮೂರಕ್ಕೆ ಮೀರಿದ ವಯಸ್ಸನ್ನು ನಿಬಂಧಿಸಲಾಗಿತ್ತೆಂದು ಹೇಳಬಹುದು.ಪಾರಸ್ಕರ ಗೃಹ್ಯಸೂತ್ರ ಬ್ರಾಹ್ಮಣನಿಗೆ ಬ್ರಾಹ್ಮಣ,ಕ್ಷತ್ರಿಯ,ವೈಶ್ಯ ಈ ಮೂರು ವರ್ಣಗಳ ಕನ್ಯೆಯರನ್ನು ವಿವಾಹವಾಗುವ ಅರ್ಹತೆಯನ್ನು ಕೊಟ್ಟಿದೆ.ಅಂತೆಯೇ ಕ್ಷತ್ರಿಯ ತನ್ನ ಮತ್ತು ವೈಶ್ಯವರ್ಣಗಳ ಇಬ್ಬರನ್ನೂ ವೈಶ್ಯ ತನ್ನ ಮತ್ತು ಶೂದ್ರವರ್ಣಗಳ ಇಬ್ಬರನ್ನೂ ವಿವಾಹವಾಗಲು ಅನುಮತಿ ಇದೆ.ಆದರೆ ಏಕಪತ್ನೀವ್ರತಸ್ಥನಿಗೆ ಹೆಚ್ಚು ಗೌರವವಿತ್ತು.ಆರ್ಷ ವಿವಾಹ ಪದ್ಧತಿಯಲ್ಲಿ ಕನ್ಯಾಶುಲ್ಕದ ಸೂಚನೆಯೂ ಬ್ರಾಹ್ಮ,ದೈವ,ಪ್ರಾಜಾಪತ್ಯ ಪದ್ಧತಿಗಳಲ್ಲಿ ವರದಕ್ಷಿಣೆಯ ಸೂಚನೆಯೂ