ಪುಟ:Mysore-University-Encyclopaedia-Vol-6-Part-10.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೆರಾರ್ಡ, ಕ್ರಿಮೊನಾದ - ಗೆರಾರ್ಡ್ ಡೊಮಾಕ್ ಹಿಕ್ಕೆಗಳನ್ನು ಗೂಡುಗಳಲ್ಲಿ ಸಂಗ್ರಹಿಸಿ ಅವುಗಳ ಮೇಲೆ ಶಿಲೀಂದ್ರ ತಂತುಜಾಲವನ್ನು ಬೆಳಸಿ ತಮ್ಮ ಲಾಲಾರಸದಿಂದ ಸ್ಪಂಜಿನಂತಹ ಮೆತ್ತನೆಯ ಶಿಲೀಂದ್ರ ತೋಟಗಳನ್ನು ನಿರ್ಮಿಸುತ್ತವೆ.ಇವುಗಳನ್ನೇ ಗೂಗೆಗಳೆಂದು ಕರೆಯುವ ವಾಡಿಕೆ. ಶಿಲೀಂದ್ರ ತೋಟಗಳ ಮಲೆ ಬಿಳುಪಾದ ಶಿಲೀಂದ್ರ ಬೀಜಾಣು ಸೂಕ್ಷ್ಮಜೀವಿಗಳು ಬೆಳೆಯುತ್ತವೆ.ಇದನ್ನು ಗೆದ್ದಲು ಆಹಾರವಾಗಿ ಉಪಯೋಗಿಸುತ್ತದೆ.

    ಈ ಸಹಜೀವಿ ಶಿಲೀಂದ್ರತೋಟಗಳಿಂದ ಗೆದ್ದಲು ಅನೇಕ ಅನುಕೂಲಗಳನ್ನು ಪಡೆಯುತ್ತದೆ.
    ೧. ವಸಾಹತುವಿನ ಗೆದ್ದಲಿನ ಬೆಳವಣಿಗೆಗೆ ಬೇಕಾದ ಜೀವಸತ್ವಗಳು ಮತ್ತು ಪೋಷಕಾಂಶಗಳು ಶಿಲೀಂದ್ರ ತೋಗಳಲ್ಲಿರುವುದರಿಂದ ಮರಿಗಳ ಆಹಾರವಾಗಿ ಉಪಯೋಗಿಸುತ್ತವೆ.
    ೨. ಮೊಟ್ಟೆಗಳ ಕಾವಿಗೆ ಹಾಗೂ ಮರಿಗಳನ್ನು ಶಿಲೀಂದ್ರ ತೋಟದ ಸಣ್ಣ ಸಣ್ಣ ಗುಣಗಳಲ್ಲಿಟ್ಟು ಸಾಕಲು ಸಹಾಯಕವಾಗಿವೆ.
    ೩. ಶಿಲೀಂದ್ರ ತೋಟಗಳು ಸ್ಪಂಜಿನಂತಿರುವುದರಿಂದ ಗೂಡಿನಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಂಡಿದ್ದು, ಹೆಚ್ಚಿನ ಸಂಖ್ಯೆಯ ಉಸಿರಾಟದಿಂದಾಗಿ ಇಂಗಾಲದ ಡೈ ಆಕ್ಸೈಡ್ ನಿರ್ಮಾಣಗೊಂಡು ವಸಾಹತುವಿಗೆ ಬೇಕಾಗಿರುವ ಒಂದು ನಿರ್ದಿಷ್ಟ ಉಷ್ಣಾಂಶ ಮತ್ತು ಶೈತ್ಯಾಂಶದ ಹವಾನಿಯಂತ್ರಣದ ವ್ಯವಸ್ಥೆಯಾಗುತ್ತದೆ.
    ಕೆಲವು ಶಿಲೀಂದ್ರಗಳನ್ನು ಬೆಳೆಸದೇ ಇರುವ ಹುತ್ತಗಳನ್ನು ನಿರ್ಮಾಣ ಮಾಡುವ ಗೆದ್ದಲುಗಳು ಆಹಾರದ ಚೂರುಗಳನ್ನೇ ಗೂಡುಗಳಲ್ಲಿಟ್ಟು ಅನೇಕ ಅನುಕೂಲಗಳನ್ನು ಪಡೆಯುತ್ತವೆ.  ನಾಸುಟಿಟರ್ಮೈಟಿನಿ ಉಪಕುಟುಂಬಕ್ಕೆ ಸೇರಿರುವ ಗೆದ್ದಲಿನ ಪ್ರಬೇಧಗಳು ಸಹ ಭೂಮಿಯೊಳಗೆ ಮತ್ತು ಮರಗಳ ಮೇಲೆ ವಿಶೇಷವಾದ ಗೂಡುಗಳನ್ನು ಕಟ್ಟುತ್ತವೆ.  ಆಫ್ರಿಕಾದ ಟ್ರೈನರ್ವಿ ಟರ್ಮಿಸ ಜಾತಿಯ ಪ್ರಬೇಧಗಳು ಸಣ್ಣ ಸಣ್ಣ ಹುತ್ತಗಳನ್ನು ನಿರ್ಮಿಸಿ ಗೂಡುಗಳಲ್ಲಿ ಹುಲ್ಲನ್ನು ಶೇಖರಿಸಿ ವಸಾಹತುವಿಗೆ ಬೇಕಾಗಿರುವ ಎಲ್ಲಾ ಅನುಕೂಲತೆಗಳನ್ನು ಪಡೆಯುತ್ತದೆ.  ಭಾರತದಲ್ಲಿರುವ ನಾಸುಟಿಟರ್ಮಿಸ ಜಾತಿಯ ಪ್ರಬೇಧಗಳು ತಮ್ಮ ಹಿಕ್ಕೆಗಳನ್ನು ಸಂಗ್ರಹಿಸಿ ಲಾಲಾರಸವನ್ನು ಬೆರೆಸಿ ಎಲ್ಲಾ ಗೆದ್ದಲುಗಳಿಗೆ ಸ್ಥಳಾವಕಾಶವನ್ನು ಒದಗಿಸುವಂತಹ ಗೋಳಾಕಾರದ ಸಾಮಾನ್ಯ ಗಾತ್ರದ ಗೂಡುಗಳನ್ನು ಕಾಡುಮರಗಳ ಮೇಲೆ ಕಟ್ಟಿ ಕೊಳವೆಯಂತಹ ಸುರಂಗಮಾರ್ಗಗಳನ್ನು ಮಾಡಿ ಆಹಾರವನ್ನು ಸತತವಾಗಿ ಗೂಡಿಗೆ ಸಾಗಿಸುತ್ತದೆ.
    ವಿಶ್ವದಲ್ಲಿ ವಿಸ್ತಾರವಾಗಿರುವ ಅನೇಕ ಗೆದ್ದಲಿನ ಜಾತಿಗಳಲ್ಲಿ ಭಾರತದ ಒಡೊಂಟೋಟರ್ಮಿಸ ಆಫ್ರಿಕಾದ ಮ್ಯಾಕ್ರೊಟರ್ಮಿಸ್, ಟ್ರೈನರ್ವಿಟರ್ಮಿಸ್, ಕ್ಯೂಬಿಟರ್ಮಿಸ್ ಮತ್ತು ಏಪಿಕೊಟರ್ಮಿಸ್, ಆಸ್ಟ್ರೇಲಿಯಾದ ಏಮಿಟರ್ಮಿಸ್ ನಾಸುಟಿ ಟರ್ಮಿಸ್ ಮತ್ತು ಕೋಪ್ಟೊ ಟರ್ಮಿಸ್ ಮತ್ತು ದಕ್ಷಣ ಅಮೆರಿಕಾದ ಅನೊಪ್ಲೊಟರ್ಮಿಸ್ ಮತ್ತು ಸೈನಟರ್ಮಿಸ್ ಮುಖ್ಯವಾದವು.
    ಗೆದ್ದಲಿನ ಹಾನಿಯಿಂದ ಪ್ರತಿವರ್ಷ ಭಾರತದಲ್ಲಿ ೨೮೦ ದಶಲಕ್ಷ ರೂಪಾಯಿಗಳು ನಷ್ಟವಾಗುತ್ತದೆಂದು ಹಿಂದಿನ ಶತಮಾನದ ಆದಿಭಾಗದಲ್ಲೇ ಅಂದಾಜು ಮಾಡಲಾಗಿತ್ತು.  ಈ ಅಂದಾಜಿನ ನಷ್ಟದ ೧೦ ಪಟ್ಟಾದರೂ ಇಂದು ಭಾರತದಲ್ಲಿ ನಷ್ಟವಾಗುತ್ತದಂದು ತಿಳಿಯಬಹುದು.  ಇತರೆ ರಾಷ್ಟ್ರಗಳಿಂದಲೂ ಸಾವಿರಾರು ದಶಲಕ್ಷ ರೂಪಾಯಿಗಳ ನಷ್ಟವಾಗುತ್ತದೆಂದು ತಿಳಿಸಿದ್ದಾರೆ.  ಭಾರತದಲ್ಲಿ ಗುರ್ತಿಸಿರುವ ಒಟ್ಟು ೩೦೦ ಗೆದ್ದಲಿನ ಪ್ರಬೇಧಗಳಲ್ಲಿ ೫೦ ಪ್ರಬೇಧಗಳನ್ನು ಬೆಳೆಗಳಲ್ಲಿ ಕಟ್ಟಡಗಳಲ್ಲಿ ನಷ್ಟಪಡಿಸುವ ಪೀಡೆಗಳೆಂದು ಗುರ್ತಿಸಿದ್ದಾರೆ.
    ಸತತ ನೀರಾವರಿ ಬೆಳೆಗಳಲ್ಲಿ ಗೆದ್ದಲಿನ ಹಾವಳಿ ಇರುವುದಿಲ್ಲ.  ಆದರೆ, ಒಣಬೇಸಾಯದಲ್ಲಿ ಬೆಳೆಯುವ ಎಲ್ಲಾ ಬೆಳೆಗಳಲ್ಲಿ ಸಸಿಗಳಿಂದ ಬೆಳೆಯುವ ಎಲ್ಲಾ ಹಂತಗಳಲ್ಲಿ ಗೆದ್ದಲಿನ ಹಾವಳಿ ಇರುತ್ತದೆ.  ಆಳವಾದ ಕಪ್ಪು ಮಣ್ನಿನಲ್ಲಿ ಗೆದ್ದಲಿನ ಹಾವಳಿ ಇರುವುದಿಲ್ಲ.  ಕೆಂಪು ಮರುಳು ಮಿಶ್ರಿತ ಗೂಡು, ಜೆಂಬಿಟ್ಟಿಗೆ ಮಣ್ಣುಗಳಲ್ಲಿ ಗೆದ್ದಲಿನ ಹಾವಳಿ ಅಧಿಕವೆಂದು ಸಂಶೋಧನೆಯಿಂದ ತಿಳಿಯಲ್ಪಟ್ಟಿದೆ.  
    ಧಾನ್ಯ ಬೆಳೆಗಳಲ್ಲಿ ಗೋಧಿ, ಭತ್ತ, ಮುಸುಕಿನ ಜೋಳ, ಬಾರ್ಲಿ, ಸಜ್ಜೆ, ನವಣೆ, ಮುಂತಾದವು ಎಲ್ಲಾ ಬಗೆಯ ದ್ವಿದಳ ಧಾನ್ಯಗಳು, ಎಣ್ನೆ ಕಾಳುಗಳು, ತರಕಾರಿ, ಹಣ್ಣಿನ ಬೆಳೆಗಳು ಇವುಗಳಲ್ಲದೆ ಅನೇಕ ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ತೆಂಗು, ಅಡಿಕೆ, ರಬ್ಬರ್, ಟೀ, ಕಾಫಿ, ಕೋಕೋ, ಏಲಕ್ಕಿ ಮುಂತಾದವು.  ಎಲ್ಲಾ ಬಗೆಯ ಅರಣ್ಯ ಮರಗಳು, ಹುಲ್ಲಿಣ ಜಾತಿಯ ಬೆಳೆಗಳು, ಉಗ್ರಾಣದಲ್ಲಿ ಶೇಖರಿಸುವ ಮರಮುಟ್ಟು, ಪುಸ್ತಕ,ಬಟ್ಟೆ, ಕಟ್ಟಡಗಳಲ್ಲಿನ ಮರದ ಸಾಮಾನುಗಳು, ಅಡ್ಡೆ ತರಾಯಿ, ಬಾಗಿಲು, ಕಿಟಕಿ, ಪೀಠೋಪಕರಣಗಳು, ಸಾವಯವ ಗೊಬ್ಬರ, ಸಗಣಿ, ತರಗೆಲೆ, ಬೇರಿನ ಕೊಳೆ, ಒಣಹುಲ್ಲು, ಗರಿ ಮುಂತಾದವು ಗೆದ್ದಲಿನ ಹಾವಳಿಗೆ ತುತ್ತಾಗುತ್ತವೆ.
    ಗೆರಾರ್ಡ್,ಕ್ರಿಮೊನಾದ: ಸು.೧೧೧೪-೮೭, ಇಟಲಿಯ ಲೊಂಬಾರ್ಡಿಯಲ್ಲಿ ಹುಟ್ಟಿ, ಅರಬ್ಬೀ ಮತ್ತು ಗ್ರೀಕ್ ಗ್ರಂಥಗಳನ್ನು ಲ್ಯಾಟೀನಿಗೆ ತಂದ ಅನುವಾದಕ.  ಟಾಲೆಮಿಯ ಅಲ್ಮಾಜೆಸ್ಟ್ ಗ್ರಂಥವನ್ನು ಓದಲೋಸ್ಕರ ಅರಬ್ಬಿ ನುಡಿ ಕಲಿಯಲೆಂದು ಟೋಲಿಡೋಗೆ ಹೋಗಿ ಅಲ್ಲೆ ನೆಲೆಸಿದ.  ಸುಮಾರು ೯೨ ಗ್ರಂಥಗಳನ್ನು ಈತ ಅನುವಾದಿಸಿರುವನೆಂದು ಹೇಳಿಕೆ.  ಇವನು ಕೇವಲ ಅನುವಾದಕ ತಂಡದ ನಾಯಕನಾಗಿದ್ದು ಎನ್ನುವ ಶಂಕೆ ಸಹ ಉಂಟು.  ಈ ಅನುವಾದಗಳಲ್ಲಿ ೨೧ ವೈದ್ಯಶಾಸ್ತ್ರದವು.  ಇವನು ೧೧೭೫ರಲ್ಲಿ ಬರೆದು ಮುಗಿಸಿದ ಅಲ್ಮಾಜೆಸ್ಟ್ ಅನುವಾದವನ್ನು ೧೫೧೫ರಲ್ಲಿ ಅಚ್ಚಾಗಿ ಗ್ರೀಕ್ ಮೂಲದ ಅನುವಾದಕ್ಕಿಂತ ಹೆಚ್ಚು ಜನಪ್ರಿಯವಾಯಿತು.  ಟಾಲೆಮಿಯದೇ ಅಲ್ಲದೆ ಅರಿಸ್ಟಾಟಲ್,ಯೂಕ್ಲಿಡ್, ಗೇಲೆನರ ಅರಬ್ಬೀ ಅನುವಾದಗಳನ್ನು ಈತ ಲ್ಯಾಟೀನಿಗೆ ತಂದ.  ಇವನು ಅನುವಾದಿಸಿದ ಮೂಲ ಅರಬ್ಬೀ ಗ್ರಂಥಗಳಲ್ಲಿ ಅವಿಸೆನ್ನನ ವೈದ್ಯಗ್ರಂಥಗಳು, ಗಣಿತ, ಖಗೋಳ ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ರಸತಂತ್ರದ ಗ್ರಂಥಗಳೂ ಇದ್ದವು.  
    ಗೆರಾರ್ಡ್ ಡೊಮಾಕ್:  ೧೮೯೫-೧೯೬೪ ಜರ್ಮನಿಯ ಜೀವರಸಾಯನ ಮತ್ತು ಸೂಕ್ಷ್ಮವಿಜ್ಞಾನಿ, ಈಗ ಪೋಲಾಂಡಿನಲ್ಲಿರುವ ಬ್ರಾಂಡೆನ್ ಬರ್ಗಿನ ಲ್ಯಾಗೋನಲ್ಲಿ ೧೮೯೫ರ ಅಕ್ಟೋಬರ್ ೩೦ ರಂದು ಜನಿಸಿದರು.  ಸಲ್ಫೋನಮೈಡ್ ಔಷಧಗಳ ಪೈಕಿ ಮೊದಲನೇದಾದ ಪ್ರೋಂಟೋಸಿಲ್ಲಿನ ಸೂಕ್ಷ್ಮಜೀವಿ ವಿರುದ್ಧ (ಆಂಟಿಬ್ಯಾಕ್ಟೀರಿಯಲ್) ಗುಣಗಳನ್ನು ಶೋಧಿಸಿದ್ದಕ್ಕಾಗಿ ೧೯೩೬ರಲ್ಲಿ ಈತನಿಗೆ ವೈದ್ಯ ಹಾಗೂ ಶರೀರಕ್ರಿಯಾ ವಿಜ್ಞಾನ ವಿಭಾಗದ ನೋಬೆಲ್ ಪಾರಿತೋಷಕ ಲಭಿಸಿತು.  ಆದರೆ, ಹಿಟ್ಲರ್ ಪ್ರಭಾವದಲ್ಲಿದ್ದ ಜರ್ಮನಿಯ ಪೌರನಿಗೆ ಅದನ್ನು ಸ್ವೀಕರಿಸಲು ಅನುಮತಿ ದೊರೆಯಲಿಲ್ಲ.  ಹಿಟ್ಲರ್ ಮರಣಾನಂತರ ೧೯೪೭ರಲ್ಲಿ ಡೊಮಾಕ್ ಸ್ವೀಡನ್ನಿಗೆ ತೆರಳಿ ನೋಬೆಲ್ ಪಾರಿತೋಷಕ ಪಡೆದ.  ಆದರೆ, ಬಹುಮಾನದ ಹಣ ಮಾತ್ರ ದೊರೆಯಲಿಲ್ಲ.
    ಡೊಮಾಕನ ವಿದ್ಯಾರಂಭದ ವೇಳೆ ಒಂದನೆಯ ಮಹಾಯುದ್ಧ ನಡೆಯುತ್ತಿದ್ದುದರಿಂದ ಈತನ ಅಧ್ಯಯನಕ್ಕೆ ತೊಂದರೆ ಉಂಟಾಯಿತು.  ಸಮರಾನಂತರ ವಿದ್ಯಾಭ್ಯಾಸವನ್ನು ಮುಂದುವರಿಸಿ ಆಮೇಲೆ ೧೯೨೧ರಲ್ಲಿ ವೈದ್ಯಶಾಸ್ತ್ರದಲ್ಲಿ ತರಬೇತಿ ಹೊಂದಿ ಪದವಿ ಪಡೆದ.  ೧೯೨೪ರಲ್ಲಿ ಇವನು ಗ್ರೀಫ್ಸ್ ಪಾಲ್ಡ್ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರಿದ.  ಕೆಲವು ವರ್ಷಗಳ ಬಳಿಕ ಮುನ್ಸಟರ್ ರೋಗವಿಜ್ಞಾನ ಸಂಸ್ಥೆಯಲ್ಲಿ ಹುದ್ದೆ ಸಿಕ್ಕಿತು.  ಈ ಸಂಸ್ಥೆಯಲ್ಲಿಯೇ ೧೯೨೮ರಲ್ಲಿ ಸಾಮಾನ್ಯ ರೋಗ ವಿಜ್ಞಾನ ಶಾಸ್ತ್ರದ (ಜನರಲ್ ಪ್ಯಾಥಾಲಜಿ) ಮತ್ತು ರೋಗಶಾಸ್ತ್ರೀಯ ಅಂಗರಚನಾ ವಿಜ್ಞಾನದ (ಪ್ಯಥಾಲಜಿಕಲ್ ಅನಾಟಮಿ) ಪ್ರಾಧ್ಯಾಪಕನಾಗಿ ನೇಮಕಗೊಂಡ.  ಉಪ್ಪೆರ್ಟಾಲ್-ಎಲ್ಬರ್ಫೆಲ್ಡ್ ನಲ್ಲಿ ಬೇಯರ್ ಕಂಪನಿಯ ಬಣ್ಣದ ಕೈಗಾರಿಕೆಯ ಪ್ರಯೋಗಶಾಲೆಯಲ್ಲಿ ಸಂಶೋಧನೆಯ ನಿರ್ದೇಶಕನಾಗಿರಲು ಆಹ್ವಾನ ಬಂದಾಗ(೧೯೨೭) ಒಪ್ಪಿಕೊಂಡ.  ಇಲ್ಲಿ ಡೊಮಾಕನು ಸಹೋದ್ಯೋಗಿಗಳಾದ ಫ್ರಿಟ್ಜ್ ಮಿಶ್ಚ್ ಮತ್ತು ಜೋಸೆಫ್ ಕ್ಲಾರರ್ ಎಂಬವರ ಜೊತೆಯಲ್ಲಿ ಹೊಸ ಬಣ್ಣಗಳ ತಯಾರಿಕೆಗೆ ಕ್ರಮಬದ್ಧವಾಗಿ ಸಂಶೋಧನೆ ಮಾಡಿ ಹಲವಾರು ನೂತನ ಅಜೋಸಂಯುಕ್ತಗಳನ್ನು ಸಂಶ್ಲೇಷಿಸಿದ.  ಇವುಗಳ ವೈದ್ಯಕೀಯ ಗುಣಗಳನ್ನು ಕೂಡ ಪರಿಶೀಲಿಸಲಾಯಿತು.  ಈ ಅನ್ವೇಷಣೆಯಲ್ಲಿದ್ದಾಗಲೇ ಪ್ರೊಂಟೋಸಿಲ್ ರೆಡ್ ಎನ್ನುವ ಬಣ್ಣವೊಂದು (ಸಲ್ಪೋನೋಮೈಡ್ ಗುಂಪಿಗೆ ಸೇರಿದ್ದು) ಇಲಿಗಳಲ್ಲಿರುವ ಸೋಂಕುಗಳ ಮೇಲೆ ನಿರ್ದಿಷ್ಟವಾದ ಪರಿಣಾಮವನ್ನು ಉಂಟುಮಾಡುತ್ತದೆಂದು ಆತ ಕಂಡುಹಿಡಿದ.  ಆಮೇಲೆ ಇದನ್ನು ವೈದ್ಯಕೀಯ ವೃತ್ತಿಯಲ್ಲಿಯೂ ಬಳಸಲಾಯಿತು.  ಅದೇ ವೇಳೆ ಸ್ವತ: ಡೊಮಾಕನ ಮಗಳು ಚುಚ್ಚುಮದ್ದಿನ ಪರಿಣಾಮವಾಗಿ ಸ್ಟ್ರೆಪ್ಟೊಕಾಕಸ್ ಸೋಂಕಿನಿಂದ ನರಳುತ್ತಿದ್ದಳು.  ಡೊಮಾಕ್ ಈ ಹೊಸ ಔಷಧಿಯನ್ನು ಆಕೆಯ ಮೇಲೆ ಪ್ರಯೋಗಿಸಿ ಅವಳನ್ನು ಗುಣಮುಖ ಮಾಡಿದ.  ಔಷಧಿಯ ಈ ವಿನೂತನ ಗುಣವನ್ನು ಅವನು ೧೯೩೨ರಲ್ಲಿ ಪ್ರಕಟಿಸಿದ.  ಅಂದಿನಿಂದಲೇ ವೈದ್ಯಶಾಸ್ತ್ರದಲ್ಲಿ ರಸಚಿಕಿತ್ಸಾ (ಕೆಮೊತೆರಪ್ಯಾಟಿಕ್) ವಸ್ತುಗಳ ಬಳಕೆಯ ಯುಗ ಪ್ರಾರಂಭವಾಯಿತೆನ್ನಬಹುದು.