ಪುಟ:Mysore-University-Encyclopaedia-Vol-6-Part-12.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋವಿಂದರಾಜ-ಗೋವಿನ ಹಾಡು

ಪೈಗಳ ಜೀವನ ಮತ್ತು ಸಾಹಿತ್ಯದ ವಿವರಗಳನ್ನು ತಿಳಿಯಲು ದೀವಿಗೆ( ಭಂಡಾರ್ಕರ್ಸ್ ಕಾಲೇಜು, ಕುಂದಾಪುರ), ಗೋವಿಂದ ಪೈ ವಾಜ್ಮಯ ದರ್ಶನ (ಮಹತ್ಮಗಾಂಧಿ ಮೆಮೋರಿಯಲ್ ಕಾಲೇಜು, ಉಡುಪಿ)-ಈ ಗ್ರಂಥಗಳು ನೆರವಾಗುತ್ತವೆ.

ಗೋವಿಂದರಾಜ: ಕಾಲ ೧೨ನೇಸತಮಾನ. ಮೂರನೆಯ ಪೃಥ್ವೀರಾಜ ಚೌಹಾಣನಿಂದ ದೆಹಲಿ ಪ್ರದೇಶದ ಆಡಳಿತಮುಖ್ಯನಾಗಿ ನೇಮಕವಾಗಿದ್ದವ. ಈತ ಸ್ವಾಮಿಭಕ್ತ, ಸ್ವಾತಂತ್ರ್ಯ ಪ್ರೇಮಿ, ಉಜ್ವಲ ರಾಷ್ಟ್ರಭಕ್ತ, ಅಸಾಧಾರಣ ಪರಾಕ್ರಮಿ. ಮಹಮ್ಮದ್ ಫ಼ೋರಿ ತನ್ನ ಮೊದಲನೆಯ ದಂಡಯಾತ್ರೆಯಲ್ಲಿ ಪಂಜಾಬ್ ಪ್ರದೇಶವನ್ನು ಗೆದ್ದು ಮುಲ್ತಾನ್ ನಗರದಲ್ಲಿ ತನ್ನ ಪ್ರತಿನಿಧಿಯಾಗಿ ಮಲ್ಲಿಕ್ ಜಿಯಾವುದ್ದೀನನನ್ನು ನೇಮಿಸಿದ್ದ. ಆ ಪ್ರದೇಶದಲ್ಲಿ ಹಿಂದೂಗಳಿಗಾಗುತ್ತಿದ್ದ ಕಿರುಕುಳವನ್ನು ಗಮನಿಸಿದ ಗೋವಿಂದರಾಜ ಪೃಥ್ವೀರಾಜನ ಬಳಿಗೆ ಹೋಗಿ ಮಹಮ್ಮದೀಯರ ಆಡಳಿತವನ್ನು ಕೊನೆಗಾಣಿಸಿ ಅಲ್ಲಿಯ ಜನ ನೆಮ್ಮದಿಯಿಂದ ಬಾಳುವಂತೆ ಏರ್ಪಾಡು ಮಾಡಬೇಕೆಂದು ವಿನಂತಿಸಿದೆ. ಪೃಥ್ವೀರಾಜನಿಗೂ ಮಹಮ್ಮದ್ ಘೋರಿಗೂ ೧೧೯೦-೯೧ರಲ್ಲಿ ತರೈನ್ ಮೈದಾನದಲ್ಲಿ ಘೋರಯುದ್ಧ ಸಂಭವಿಸಿತು. ಗೋವಿಂದರಾಜ ಆನೆಯ ಮೇಲೆ ಕುಳಿತು ಹೋರಾಡುತ್ತ ನೇರವಾಗಿ ಸುಲ್ತಾನನನ್ನು ಎದುರಿಸಿದ. ದಿಗ್ಬ್ರಮೆಗೊಂಡ ಸುಲ್ತಾನ ಒಂದು ಭರ್ಜಿಯನ್ನು ತೆಗೆದಕೊಂಡು ಗೋವಿಂದರಾಜನ ಮುಖಕ್ಕೆ ಎಸೆದ. ಗೋವಿಂದರಾಜನ ಎರೆಡು ಹಲ್ಲುಗಳು ಮುರಿದುಹೋದವು. ಆದರೂ ಇವನು ಧೃತಿಗೆಡದೆ ಪ್ರತಿಯಾಗಿ ಪ್ರಯೋಗಿಸಿದ ಭರ್ಜಿಯಿಂದ ಸುಲ್ತಾನ ಅತೀವವಾಗಿ ಪೆಟ್ಟುತಿಂದು ಕುದುರೆಯ ಮೇಲಿಂದ ಬಿದ್ದು ತನ್ನ ಅಂಗರಕ್ಷಣೆನೊಬ್ಬನ ಸಹಯದಿಂದ ರಣರಂಗದಿಂದ ಪಲಾಯನ ಮಾಡಿದ.ಅವನ ಸೈನ್ಯ ಕಂಗೆಟ್ಟು ಓಡಿಹೋಯಿತು. ಗೋವಿಂದರಾಜನ ಧೈರ್ಯ ಪರಾಕ್ರಮಗಳಿಂದ ಪೃಥ್ವೀರಾಜ ಜಯಗಳಿಸಿದ. ಮರವರ್ಷ ಮಹಮ್ಮದ್ ಘೋರಿಗೂ ಪೃಥ್ವೀರಾಜನಿಗೂ ಪುನಃ ತರೈನ್ ಮೈದಾನದಲ್ಲಿ ಘೋರಯುದ್ಧ ನಡೆಯಿತು. ಗೋವಿಂದರಾಜ ಸುಲ್ತಾನನ ಭಾರಿ ಸೈನ್ಯವನ್ನು ಎದುರಿಸಿ ಜೀವಭಯವನ್ನು ತೊರೆದು ವೀರಾವೇಶದಿಂದ ಹೋರಾಡಿ ರಣರಂಗದಲ್ಲಿ ಸಾವಿಗೆ ಈಡಾದ. ಇವನ ಮರಣದಿಂದ ಪೃಥ್ವೀರಾಜನ ಬಲ ಕುಗ್ಗಿತು. ಅಂತಿಮವಾಗಿ ಅವನು ಸೋತ.

ಗೋವಿಂದ ವೈದ್ಯ: ಕಂಠೀರವ ನರಸರಾಜ ವಿಜಯವೆಂಬ ಕಾವ್ಯದ ಕರ್ತೃ. ಕಂಠೀರವ ನರಸರಾಜ ಒಡೆಯರ ಆಸ್ಥಾನಕವಿಯಾಗಿದ್ದ. ಈತ ೧೬೪೮ರಲ್ಲಿ ಈ ಕೃತಿಯನ್ನು ರಚಿಸಿದ. ದಳವಾಯಿ ನಂಜರಾಜೇಂದ್ರ ತನ್ನಿಂದ ಕಾವ್ಯ ಬರೆಯಿಸಿದನೆಂದು ಕವಿ ಹೇಳಿಕೊಂಡಿದ್ದಾನೆ. ಕಂಠೀರವನರಸರಾಜ ವಿಜಯದ ಕಡೆಯಲ್ಲಿ ಬರುವ ಗದ್ಯಭಾಗದಲ್ಲಿ 'ರಂಗನಾಥಸ್ವಾಮಿಯ ಕೃಪೆಯಿಂದ ಶ್ರೀನಿವಾಸ ಪಂಡಿತರ ಮಗ ಗೋವಿಂದ ವೈದ್ಯನು ಕಂಠೀರವ ನರಸರಾಜ ವಿಜಯನನ್ನು ವಿರಚಿಸಿ, ಆಚಂದ್ರಾರ್ಕವಾಗಿ ಭೂಮಿಯೊಳಿರಲಿ ಎಂದು ಭಾರತಿನಂಜನ ಮುಖದಿಂದ ವಾಚಿಸಿ ರಾಜಾಸ್ಥಾನದಲ್ಲಿ ವಿಸ್ತಾರಪಡಿಸಿದನು' ಎಂದು ಉಕ್ತವಾಗಿದೆ. ಗೋವಿಂದ ವೈದ್ಯ ಬರೆದ ಕಾವ್ಯವನ್ನು ಭಾರತೆನೆಂಜನೆಂಬಾತ ವಾಚಿಸದೆನೆಂದು ಕೆಲವರು ಊಹಿಸಿದ್ದರೆ.

ಕಂಠೀರವ ನರಸರಾಜ ವಿಜಯ ೨೬ ಸಂಧಿಗಳನ್ನೂ ೨೮೭೦ ಪದ್ಯಗಳನ್ನೂ ಒಳಗೊಂಡ ಸಾಂಗತ್ಯಕಾವ್ಯ. ಇದರಲ್ಲಿ ಕಥೆಯಿಲ್ಲ; ಕಂಠೀರವ ನರಸರಾಜ ಒಡೆಯರ ವಿಜಯಪರಂಪರೆಯ ಸವಿಸ್ತಾರ ವರ್ಣನೆಯಿದೆ. ಇದೊಂದು. ಶುದ್ಧ ಐತಿಹಾಸಿಕ ಕಾವ್ಯವಾಗಿದ್ದು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ನಂಜುಂಡನ ಕುಮಾರರಾಮ ಸಾಂಗತ್ಯ ಗೋವಿಂದ ವೈದ್ಯನ ಮೇಲೆ ಪ್ರಭಾವ ಬೀರಿದ್ದರೂ ಕಂಠೀರವ ನರಸರಾಜ ವಿಜಯವೊಂದು ಅಪೂರ್ವವಾದ ವೀರಕಾವ್ಯವಾಗಿ ಪರಿಣಮಿಸಿದೆ. ಕರ್ನಾಟಕದ ಬಗ್ಗೆ ಗೋವಿಂದ ವೈದ್ಯನಿಗಿರುವ ಅಭಿಮಾನ ಇದರಲ್ಲಿ ಎದ್ದು ಕಾಣುತ್ತಿದೆ. ಕನ್ನಡಿಗರ ಶೌರ್ಯ ಸಾಹಸಗಳನ್ನು ಈತ ಉಜ್ವಲವಾಗಿ ಚಿತ್ರಿಸಿ ತನ್ನ ಕೃತಿಗೆ ರಾಷ್ಟ್ರೀಯ ಕಾವ್ಯದ ಮಹತ್ತ್ವವನ್ನು ತಂದುಕೊಂಡಿದ್ದಾನೆ.

ಕಂಠೀರವ ನರಸರಾಜ ಒಡೆಯರನ್ನು ಕಲಿಯುಗದ ನದಸಿಂಹಾವತಾರವೆಂದೂ ಮುಸಲ್ಮಾನರನ್ನು ದನುಜರೆಂದೂ ಕಲ್ಪಿಸಿಕೊಂಡಿರುವ ಕವಿ ಆ ದೊರೆಯ ವಂಶ, ಜೀವನ, ಸಾಧನೆಗಳನ್ನು ಸವಿವರವಾಗಿ ನಿಊಪಿಸಿದ್ದಾನೆ. ರಣದುಲ್ಲಖಾನನ ದಆಳಿ ಹಾಗೂ ಕಂಠೀರವ ನರಸರಾಜ ಒಡೆಯರು ಅವನನ್ನು ಸೋಲಿಸಿದ್ದು ಸ್ವಾರಸ್ಯಪೂರ್ಣವಾಗಿ ಚಿತ್ರಿತವಾಗಿದೆ. ತನ್ನ ಕಾಲದ ಜನಜೀವನವನ್ನೂ ರಾಜಕೀಯವನ್ನೂ ಕವಿ ವಿಸ್ತಾರವಾಗಿ ಹಿಡಿದಿಟ್ಟಿರುವುದರಿಂದ ಈ ಕಾವ್ಯ ಚರಿತ್ರೆಗೆ ಪೂರಕವಾಗುತ್ತದೆ. ಅಂದಿನ ಯುದ್ಧ ತಂತ್ರಗಳು, ಆಯುಧಗಳು, ಉಡುಗೆ ತೊಡುಗೆಗಳು, ತಿಂಡಿತಿನಿಸುಗಳು ಮುಂತಾದುವನ್ನೆಲ್ಲ ಈ ಕೃತಿಯಲ್ಲಿ ನೋಡಬಹುದು; ಅಂದಿನ ಕಲೆ ಸಂಸ್ಕೇತಿಗಳನ್ನರಿಯಬಹುದು. ಸಮಕಾಲೀನ ಜೀವನದ ಲೌಕಿಕ, ಧಾರ್ಮಿಕ ಮುಖಗಳೆರಡೂ ಇಲ್ಲಿ ಬಿಂಬಿತವಾಗಿವೆ. ಆಗ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದ ಒಂದು ಸಮಗ್ರ ಚಿತ್ರವನ್ನು ಕವಿ ಕೊಟ್ಟಿದ್ದಾನೆ. ಇದು ವೀರಕಾವ್ಯವಾದರೂ, ಮದನಮೋಹಿನೀ ಪ್ರಸಂಗವನ್ನು ಅನಗತ್ಯವಾಗಿ ಸೇರಿಸಿ ಶೃಂಗಾರಕ್ಕೂ ಕವಿ ಅವಕಾಶ ಕಲ್ಪಿಸಿದ್ದಾನೆ.

ಚಾರಿತ್ರಿಕ ಕೃತಿಯಾಗಿ ಪ್ರಾಮುಖ್ಯ ಪಡೆದುಕೊಂಡಿರುವುದು ಮಾತ್ರವಲ್ಲದೆ ಕಾವ್ಯವಾಗಿಯೂ ಕಂಠೀರವ ನರಸರಾಜ ವಿಜಯ ತಕ್ಕಮಟ್ಟಿಗೆ ಗಮನಾರ್ಹವಾಗಿದೆ. ವಿದ್ವಾಂಸರೊಬ್ಬರು ಗೋವಿಂದ ವೈದ್ಯನನ್ನು ಚಾರಣ ಕವಿಯೊಂದು ಅವನ ಕೃತಿಯನ್ನು ಚಾರಣ ಕಾವ್ಯವೆಂದೂ ಕರೆದಿದ್ದಾರೆ. ನಂಜುಂಡನ ಕಾವ್ಯವನ್ನು ಬಿಟ್ಟರೆ ಇಂಥ ಕೃತಿ ಕನ್ನಡದಲ್ಲಿ ಮತ್ತೊಂದಿಲ್ಲ ಎನ್ನಬಹುದು.

ಗೋವಿಂದ ಸಖಾರಾಮ್ ಸರ್ದೇಸಾಯಿ: ೧೮೬೫-೧೯೫೯. ಭಾರತೀಯ ಇತಿಹಾಸಕಾರ. ಮಹಾರಾಷ್ಟ್ರದ ರತ್ನಗೊರೊಯಲ್ಲಿ ೧೮೬೫ರ ಮೇ ೧೭ರಂದು ಜನಿಸಿದರು. ಪುಣೆಹಾಗೂ ಮುಂಬಯಿಯಲ್ಲಿ ಪದವಿ ಶಿಕ್ಷಣ ಪಡೆದು ೧೮೮೯ರಲ್ಲಿ ಬರೋಡ ಸಂಸ್ಥಾನದಲ್ಲಿ ವೃತ್ತಿಜೀವನ ಆರಂಭಿಸಿದರು. ಜೊತೆಗೆ ಮಹಾರಾಜ ೩ನೆಯ ಸಯಾಜಿರಾವ್ ಗಾಯಕವಾಡ ಖಾಸಗಿ ಬೋಧಕರಾಗಿ ನೇಮಿಸಲ್ಪಟ್ಟರು. ಇತಿಹಾಸದಲ್ಲಿ ಇವರಿಗೆ ಆಸಕ್ತಿ ಬೆಳೆಯಲು ಕಾರಣ ಮಕ್ಕಳಿಗೆ ಇವರು ಹೇಳುತ್ತಿದ್ದ ಮನೆಪಾಠ. ಮುಂದೆ ಮಹಾರಾಜರ ಪ್ರೋತ್ಸಾಹದಿಂದ ಹಾಗೂ ರಾಜಗ್ರಂಥಾಯಲದಲ್ಲಿ ಲಭ್ಯವಿದ್ದನೂರಾರು ಚಾರಿತ್ರಿಕ ಪುಸ್ತಕಗಳ ನೆರೆವಿನಿಂದ ಮರಾಠಿಯಲ್ಲಿ ಹಲವು ಕೃತಿಗಳನ್ನು ರಚಿಸಿದರು. ಮರಾಠಿ ರಿಯಾಸತ್(೮ ಸಂಪುಟ) ಹಾಗೂ ಬ್ರಿಟಿಷ್ ರಿಯಾಸತ್(೨ ಸಂಪುಟ) ಸಂಪುಟಗಳಲ್ಲಿ ಭಾರತದ ೧೦೦೦ ವರ್ಷಗಳ ಇತಿಹಾಸವನ್ನುನಿರೂಪಿಸಿರುವುದು ಇವರ ಸಾಧನೆ. ೧೯೨೫ರಲ್ಲಿ ನಿವೃತ್ತರಾದ ಅನಂತರ ಮುಂಬಯಿ ಸರ್ಕಾರದ ಕೋರಿಕೆಯ ಮೇರೆಗೆ ರಾಜ್ಯ ದಾಖಳೆಗಳ್ನ್ನು ಸಂಪಾದಿಸುವ ಕಾರ್ಯ ಕೈಗೊಂಡರು. ಮೋಡಿ, ಮರಾಠಿ, ಇಂಗ್ಲೀಷ್, ಪಾರ್ಸಿ ಹಾಗೂ ಗುಜರಾತಿ ಭಾಷೆಗಳಲ್ಲಿರುವ ಸು. ೩೪೯೭೨ ದಾಖಲೆಗಳನ್ನು ಸಂಪಾದಿಸಿ ಈ ಪೈಕಿ ೮೬೫೦ ದಾಖಲೆಗಳನ್ನು ಪೇಶ್ವ ದಫ಼್ತಾರ್ ಎಂಬ ಶೀರ್ಷಿಕೆಯಲ್ಲಿ ೪೫ ಸಂಪುಟಗಳಲ್ಲಿ ಪ್ರಕಟಿಸಿದರು. ಮತ್ತಷ್ಟು ದಾಖಲೆಗಳನ್ನು ಸರ್ಕಾರ್ರೊಂದಿಗೆ ಪೂನಾ ರೆಸಿಡೆಂನ್ಸಿ ಕರೆಸ್ಪಾಂಡೆನ್ಸ್ ಎಂಬ ಶೀರ್ಷಿಕೆಯಲ್ಲಿ ಸಂಪಾದಿಸಿದರು. ೮೦ರ ಇಳಿವಯಸ್ಸಿನಲ್ಲಿ ಇವರು ಪ್ರಕಟಿಸಿದ ದಿ ನ್ಯೂ ಹಿಸ್ಟರಿ ಆಫ಼್ ಮರಾಠಾಸ್ನ ೩ ಸಂಪುತಗಳು ಮರಾಠ ಇತಿಹಾಸದ ಆಕರಗ್ರಂಥಗಳಾಗಿವೆ. ಇವರಿಗೆ ರಾವ್ ಬಹಾದ್ದೂರ್ (೧೯೩೭) ಹಾಗೂ ಇತಿಹಾಸ ಮಾರ್ತಾಂಡ್ (೧೯೪೬) ಎಂಬ ಬಿರುದುಗಳು ಪ್ರಾಪ್ತವಾಗಿದ್ದವು. ಪೂಣೆ ವಿಶ್ವವಿದ್ಯಾಲಯ ಇವರಿಗೆ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿತ್ತು (೧೯೫೧). ಭಾರತ ಸರ್ಕಾರ ೧೯೫೭ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು. ಇವರು ೧೯೫೯ರ ನವೆಂಬರ್ ೨೯ರಂದು ನಿಧನರಾದರು.

ಗೋವಿನ ಹಾಡು: ಕನ್ನಡ ನಾಡಿನ ಆಬಾಲವೃದ್ಧಿರಿಗೆಲ್ಲ ಪರಿಚಿತವೂ ಪ್ರಿಯವೂ ಆಗಿರುವ ಕಥನಕವನ. ಇದರಲ್ಲಿ ಒಟ್ಟು ೧೩೭ ಪದ್ಯಗಳಿದ್ದು. ಅವುಗಳಲ್ಲಿ ೧೧೪ ಮಾತ್ರ ಮೂಲವೆಂದೂ ಉಳಿದವು ಪ್ರಕ್ಷಿಪ್ತವೆಂದೂ ವಿದ್ವಾಂಸರ ಮತ. ಈ ಹಾಡನ್ನು ರಚಿಸಿದ ಕವಿಯಾಗಲೀ ಅವನ ಕಾಲವಾಗಲೀ ತಿಳಿದಿಲ್ಲ. ಹಾಡಿನ ಅಂತ್ಯದಲ್ಲಿ ಮದ್ದೂರಿನ ನರಸಿಂಹ ದೇವರ ಹೆಸರಿರುವುದರಿಂದ, ಇದನ್ನು ಕಟ್ಟಿದ ಕವಿ ಆ ಊರಿನವನೋ ಅಥವಾ ಆದೇವರ ಒಕ್ಕಲಿನವನೋ ಆಗಿರಬೇಕೆಂದು ಸು. ೧೮೦೦ ಕ್ಕಿಂತ ಹಿಂದೆ ಇದು ಹುಟ್ಟಿರಲಾರದೆಂದೂ ಊಹಿಸಲಾಗಿದೆ. ಈ ಹಾಡಿನ ಛಂದಸ್ಸು ಗೋವಿನ ಹಾಡಿನ ಮಟ್ಟು ಎಂದು ಪ್ರಚುರವಾಗಿದೆ. ಇದು ನಾಲ್ಕು ಸಾಲಿನ ಪದ್ಯಗಳಿಂದ ಕೂಡಿದ್ದು ಪ್ರತಿ ಪದ್ಯವನ್ನೂ ಹಾಡಿನ ಲಯಕ್ಕೆ ಹೊಂದಿದಂತೆ ಬ್ರಹ್ಮ, ವಿಷ್ಣು ಮೊದಲಾಗಿಅಂಶಗಣಗಳಾಗಿ ವಿಭಾಗಿಸಬಹುದು. ಗೋವಿನ ಹಾಡಿನ ಭಾಷೆ ಒಟ್ಟಿನಲ್ಲಿ ಸರಳವಾಗಿದ್ದರೂ ಅದನ್ನು ಜಾನಪದವೆಂದು ಕರೆಯಲಾಗುವುದಿಲ್ಲ. ಇಡೀ ಗೀತೆ ಏಕ ಕವಿ ಕೃತವೇ ಹೊರೆತು ಡುದ್ಧ ಜನಪದ ರಚನೆಯಲ್ಲ. ಆದರೂ ಜನಪದ ಅದನ್ನು ಎತ್ತಿಕೊಂಡಿದೆ, ಎದೆಗೊತ್ತಿಕೊಂಡಿದೆ. ಇದಕ್ಕೆ ಕಾರಣ ಹಾಡಿನ ಸ್ವಾರಸ್ಯ.