ಪುಟ:Mysore-University-Encyclopaedia-Vol-6-Part-12.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋರಿಕಾಯಿ-ಗೋರ್ಗಸ್ ವಿಲಿಯಂ ಕ್ರಾಫರ್ಡ್ ಗೋರಿಕಾಯಿ ; ಲೆಗ್ಯೂಮಿನೋಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪಕುಟುಂಬಕ್ಕೆ ಸೇರಿದ ತರಕಾರಿ ಸಸ್ಯ ಚವಲಳೀಕಾಯಿ ಪರ್ಯಾಯನಾಮ. ಸಯಮಾಪ್ಸಿಸ್ ಟೆಟ್ರಗೋನೊಲೋಬ ಇದರ ಶಾಸ್ತ್ರೀಯ ಹೆಸರು. ಇಂಗ್ಲಿಷಿನಲ್ಲಿ ಕ್ಲಸ್ಟರ್ ಬೀನ್ಸ್ ಎಂದು ಕರೆಯಲಾಗುತ್ತದೆ. ಗೋರಿಕಾಯಿ ಭಾರತದ ಮೂಲವಾಸಿ ಎಂದು ಹೆಳಲಾಗಿದೆ. ಕಾಡುಗಿಡವಾಗಿ ಇದು ಎಲ್ಲೂ ಬೆಳೆಯದು.ಭಾರತಾದ್ಯಂತ ಇದನ್ನು ಕಾಯಿಗಳಿಗಾಗಿ ಬೀಜಕ್ಕಾಗಿ ಬೆಳೆಸಲಾಗುತ್ತಿದೆ. ಗೋರಿಕಾಯಿ ಗಿಡದಲ್ಲಿ ಕುಳ್ಳ ಮತ್ತು ದೈತ್ಯ ಎಂಬ ಎರಡು ಬಗೆಗಳಿವೆ. ಎರಡೂ ನೆಟ್ಟಗೆ ಬೆಳೆಯುವ ಏಕವಾರ್ಷಿಕ ಸಸ್ಯಗಳು. ಕುಳ್ಳ ಬಗೆಯದು ೬೦-೯೦ ಸೆಂಮೀ ಎತ್ತರಕ್ಕೆ ಬೆಳೆದರೆ ದೈತ್ಯ ಬಗೆಯದು ೨.೫-೩ಮೀ ಎತ್ತರಕ್ಕೆ ಬೆಳೆಯುತ್ತದೆ. ಕಾಂಡ ಮತ್ತು ಎಲೆಗಳ ಮೇಲೆ ನಸು ಉದಾಬಣ್ಣದ ಕೂದಲುಗಳಿವೆ. ಗಿಡವನ್ನು ಮುಟ್ಟಿದರೆ ನವೆ ಉಂಟಾಗುವುದಕ್ಕೆ ಕಾರಣ ಈ ಕೂದಲುಗಳು. ಎಲೆಗಳು ಸಂಯುಕ್ತ ಬಗೆಯವು; ಇವು ಪರ್ಯಾಯ ಮಾದರಿಯಲ್ಲಿ ಜೊಡಣೆಗೊಂಡಿವೆ; ಪ್ರತಿ ಎಲೆಯಲ್ಲಿ ೩ ಕಿರುಎಲೆಗಳಿವೆ. ಹೂಗಳು ಎಲೆಗಳ ಕಂಕುಳುಗಳಲ್ಲಿರುವ ಅಂತ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಕಾಯಿಗಳು ಪಾಡ್ ಮಾದರಿಯವು. ಗಿಡವನ್ನು ಸಾಮಾನ್ಯವಾಗಿ ಎಲ್ಲ ಬಗೆಯ ಮಣ್ಣುಗಳಲ್ಲೂ ಬೆಳೆಸಬಹುದಾದರೂ ಚೆನ್ನಾಗಿ ನೀರು ಬಸಿದು ಹೊಗುವಂಥ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮವಾದದ್ದು.ಜೂನ್-ಜುಲೈ ಇಲ್ಲವೆ ಜನವರಿ-ಫೆಬ್ರುವರಿ ತಿಂಗಳುಗಳು ಬೇಸಾಯಕ್ಕೆ ಸೂಕ್ತ. ಎಕರೆಗೆ ೧೫-೨೦ ಗಾಡಿ ಕೊಟ್ಟಿಗೆ ಗೊಬ್ಬರ, ೧೨೫ ಕಿಗ್ರಾಂ ಅಮೋನಿಯಂ ಸಲ್ಪೇಟ್, ೨೫೦ಕಿಗ್ರಾಂ ಸೂಪಫಾಸ್ಫೇಟ್, ೬೦ ಕಿಗ್ರಾಂ ಮ್ಯೂರಿಯೇಟ್ ಆಫ್ ಪೊಟ್ಯಾಷ್ಗಳನ್ನು ಹಾಕಿ, ೫-೭ದಿವಸಗಳಿಗೊಮ್ಮೆ ನೀರನ್ನು ಹಾಯಿಸುತ್ತಿರಬೇಕು. ಬೀಜ ಬಿತ್ತಿದ ೨.೫ ತಿಂಗಳ ಅನಂತರ ಕಾಯಿಗಳು ಕೊಯ್ಲಿಗೆ ಸಿದ್ದವಾಗುತ್ತದೆ. ಇಳುವರಿ ಎಕರೆಗೆ ೨,೫೦೦ ರಿಂದ ೩,೫೦೦ ಕಿಗ್ರಾಂಗಳಷ್ಟು ಇರುತ್ತದೆ. ಗಿಡಕ್ಕೆ ತಗಲುವ ರೋಗಗಳಲ್ಲಿ ಬ್ಯಾಕ್ಟೀರಿಯಲ್ ಬ್ಲೈಟ್ ಎಂಬುದು ಬಹಳ ಮಖ್ಯವಾದದ್ದು. ಮೊದಲು ಎಲೆಗಳ ಮೇಲೆ ಬಹಳ ಸಣ್ಣ, ಪಾರದರ್ಶಕ, ನೀರುಗೂಡಿದ ಚುಕ್ಕೆಗಳು ಕಾಣಿಸಿಕೊಳ್ಳುತ್ತದೆ. ಅನಂತರ ನಾಳದ ಒಳಗಿರುವ ಕಣ ಸಮೂಹ ಹಳದಿ ಬಣ್ಣಕ್ಕೆ ತಿರುಗಿ ಎಲೆ ಸತ್ತುಹೋಗುತ್ತದೆ. ಕ್ರಮೇಣ ರೊಗ ಮುಂದುವರಿದು ಕಾಂಡಕ್ಕೂ ಅಂಟುತ್ತದೆ. ಕೊನೆಗೆ ಪೂರ್ತಿ ಗಿಡವೇ ಸತ್ತುಹೋಗುತ್ತದೆ. ಈ ರೋಗ ಬೀಜ ಮತ್ತು ಮಣ್ಣಿನಿಂದ ಪ್ರಸಾರವಾಗುತ್ತದೆ. ರೋಗರಹಿತ ಬೀಜಗಳನ್ನು ಉಪಯೋಗಿಸುವುದು, ಸೀರಸಾನ್ ಅಥವಾ ಆಗ್ರಸಾನ್ ಎಂಬ ಔಷಧಿಗಳಿಂದ ಬೀಜಗಳನ್ನು ತೊಳೆಯುವುದು ಮತ್ತು ರೋಗ ನಿರೋಧಕ ಜಾತಿಗಳನ್ನೇ ಬಿತ್ತಲು ಉಪಯೋಗಿಸುವುದು-ಇವು ರೋಗನಿಯಂತ್ರಣ ಕೆಲವು ಕ್ರಮಗಳು. ಗೋರಿಕಾಯಿ ತರಕಾರಿ ಮಾತ್ರವಾಗಿ ಅಲ್ಲದೆ ಇನ್ನಿತರ ಕಾರಣಗಳಿಂದಾಗಿಯೂ ಉಪಯುಕ್ತವೆನಿಸಿದೆ. ಇದು ದನಗಳಿಗೆ ಮತ್ತು ಕುದುರೆಗಳಿಗೆ ಒಳ್ಳೆಯ ಮೇವು. ಬೀಜಗಳನ್ನು ಬೇಯಿಸಿ, ಕೊಂಚ ಸಾಸಿವೆ ಎಣ್ಣೆಯೊಂದಿಗೆ ಸೇರಿಸಿ ದನಗಳಿಗೆ ತಿನ್ನಿಸುವುದುಂಟು. ಅಲ್ಲದೆ ಬೀಜಗಳಿಂದ ಒಂದು ರೀತಿಯ ಗೋಂದನ್ನು ತಯಾರಿಸಿ ಕಾಗದ ಮತ್ತು ಬಟ್ಟೆ ಕೈಗಾರಿಕೆಗಳಲ್ಲಿ ಉತ್ಪನ್ನಗಳಿಗೆ ಬಲವನ್ನು ಕೊಡುವ ವಸ್ತುವಾಗಿ ಬಳಸುತ್ತಾರೆ. ಹದವಾಗಿ ಬೆಳೆದ ಕಾಯಿಗಳನ್ನು ಸುಗ್ಗಿಯಲ್ಲಿ ಕಿತ್ತು ಒಣಗಿಸಿಟ್ಟುಕೊಂಡು ಬೇಕಾದಾಗ ತರಕಾರಿಯಾಗಿ ಬಳಸುತ್ತಾರಲ್ಲದೆ ಕರಿದು ಬಾಳಕ ಮಾಡುವುದೂ ಉಂಟು. ಗೋರ್ಗಸ್ ವಿಲಿಯಂ ಕ್ರಾಫರ್ಡ್ : ೧೮೫೪-೧೯೨೦. ಆಮೇರಿಕ ಸಂಯುಕ್ತ ಸಂಸ್ಥಾನಗಳ ಸೈನ್ಯದಲ್ಲಿ ಶಸ್ತ್ರವೈದ್ಯ. ಪನಾಮ ಕಾಲುವೆಯ ಕೆಲಸಗಾರರು ಮಲೇರಿಯ ಮತ್ತು ಹಳದಿಜ್ವರಗಳಿಂದ ಪೀಡಿತರಾಗಿ ಆ ಕಾಲುವೆ ನಿರ್ಮಾಣಕಾರ್ಯ ಸ್ಥಗಿತವಾಗಿದ್ದಾಗ ಈ ರೋಗಗಳನ್ನು ಹರಡುವ ಸೊಳ್ಳೆಗಳ ನಿಯಂತ್ರಣದಿಂದ ನಿರ್ಮಾಣಕಾರ್ಯ ಮುಂದುವರಿಯುವಂತೆ ಮಾಡಿದವನೀತ. ಗೋರ್ಗಸ್ ೧೮೫೪ರ ಅಕ್ಟೋಬರ್ ೩ರಂದು ಅಲಬಾಮ ರಾಜ್ಯದ ಮೊಬೈಲ್ ಎಂಬಲ್ಲಿ ಜನಿಸಿದ. ದಕ್ಷಿಣ ವಿಶ್ವವಿದ್ಯಾಲಯ ಸೆವಾನಿ-ಟೆನಿಸಿಯಲ್ಲಿ ವ್ಯಾಸಂಗ ಮುಗಿಸಿ ನ್ಯೂಯಾರ್ಕಿನ ಬೆಲ್ವ್ಯೂ ಆಸ್ಪತ್ರೆ ಪ್ರೌಢ ವಿದ್ಯಾಶಾಲೆಯ ಎಂ.ಡಿ ಪದವೀಧರನಾದ(೧೮೭೯). ಮರುವರ್ಷ ಆಮೇರಿಕ ಸಂಯುಕ್ತಸಂಸ್ಥಾನ ಸೈನ್ಯದ ವೈದ್ಯಕೀಯ ಪಡೆಗೆ ಸೇರಿ ಸ್ಪೇನ್ ಮತ್ತು ಅಮೇರಿಕ ಸಂಯುಕ್ತಸಂಸ್ಥಾನಗಳ ಸೈನ್ಯದ ವೈದ್ಯಕೀಯ ಪಡೆಗೆ ಸೇರಿ ಸ್ಪೇನ್ ಮತ್ತು ಅಮೇರಿಕ ನಡುವಣ ಯುದ್ಧದಲ್ಲಿ ಭಾಗವಹಿಸಿ ಮೇಜರ್ ಹುದ್ದೆಗೆ ಬಡ್ತಿ ಪಡೆದ. ಸ್ಯಾನ್ಟಿಯಾಗೋ ದಂಡಯಾತ್ರೆಯ ತರುವಾಯ ಈತನನ್ನು ಹವಾನದಲ್ಲಿ ಹಳದಿಜ್ವರ ಪೀಡಿತರಾದವರನ್ನು ನೋಡಿಕೊಳ್ಳಲು ಕಳುಹಿಸಿದರು. ೧೮೯೮ರಿಂದ ೧೯೦೨ರ ವರೆಗೆ ಹವಾನ ದಲ್ಲಿ ಬಾಹ್ಯ ಪರಿಸರ ನಿರ್ಮಲೀಕರಣ ಕಾರ್ಯ ಕ್ರಮದ ಅಧಿಕಾರಿ ಯಾಗಿದ್ದು ಸೊಳ್ಳಗಳು ಹಳದಿಜ್ವರವನ್ನು ಒಬ್ಬನಿಂದ ಇನೊಬ್ಬನಿಗೆ ಹರಡುವ ವಿಧಾನದ ವಿಚಾರವಾಗಿ ಅನೇಕ ಸಂಶೋಧನೆಗಳನ್ನೂ ಅಧ್ಯಯನಗಳನ್ನು ನಡೆಸಿದ. ತತ್ಪರಿಣಾಮವಾಗಿ ಹವಾನದಲ್ಲಿ ನೆಲೆಗೊಂಡಿದ್ದ ಹಳದಿಜ್ವರದ ಮೂಲೋಚ್ಚಾಟನೆ ಸಾದ್ಯವಾಯಿತು ಇದನ್ನು ಸರ್ಕಾರ ಮೆಚ್ಚಿ ೧೯೦೩ರಲ್ಲಿ ಗೋರ್ಗನಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸೈನ್ಯದಲ್ಲಿ ಸಹಾಯಕ ಸರ್ಜನ್ ಜನರಲ್ ಆಗಿ ನೇಮಿಸಿ ಕರ್ನಲ್ ಪದವಿಗೆ ಬಡ್ತಿ ನೀಡಿತು ಅನಂತರ ಈತ ಪನಾಮ ಕಾಲುವೆ ನಿರ್ಮಾಣಕ್ಷೇತ್ರದ ನಿರ್ಮಲೀಕರಣ ಮುಖ್ಯಾಧಿಕಾರಿಯಾಗಿ ೧೯೦೪ರಲ್ಲಿ ನೇಮಿಸಲ್ಪಟ್ಟ. ಕಾಲುವೆಯ ನಿರ್ಮಾಣ ಕ್ಕೆ ಮಲೀರಿಯಾ ಹಾಗು ಹಳದಿಜ್ವರ ಮುಖ್ಯ ಅಡಚಣೆಗಳಾಗಿದ್ದವು. ಅವನ್ನು ನಿರ್ಮೂಲನೆ ಮಾಡಿ,ಕಾಲುವೆ ಕೆಲಸ ಆವಿಚ್ಛೆನ್ನವಾಗಿ ಮುಂದುವರಿಯುವಂತೆ ಮಾಡಿದ್ದು ಗೋರ್ಗಸನ ಪರಮಸಿದ್ದಿ. ೧೯೦೭ರಲ್ಲಿ ಈತ ಪನಾಮ ಭೂಸಂಧಿ ಕಾಲುವೆ ನಿಯೋಜಿತ ಮಂಡಳಿಯ ಸದಸ್ಯನಾಗಿ ನೇಮಕಗೊಂಡ. ೧೯೦೮ರಲ್ಲಿ ಮೊತ್ತಮೊದಲು ಕೂಡಿದ ಅಖಿಲ ಅಮೆರಿಕದ ವೈದ್ಯರ ಸಮ್ಮೇಳನದಲ್ಲಿ ಸಂಯುಕ್ತಸಂಸ್ಥಾನಗಳ ಪ್ರತಿನಿಧಿಯಾಗಿ ಭಾಗವಹಿಸಿ. ೧೯೦೮-೧೯೦೯ರಲ್ಲಿ ಅಮೆರಿಕ ವೈದ್ಯರ ಸಂಘಕ್ಕೆ ಅಧ್ಯಕ್ಷನಾದ.