ಪುಟ:Mysore-University-Encyclopaedia-Vol-6-Part-13.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗ್ಯಾಸ್ಟ್ರಾಪೊಡ ೬೪೩

ಕೈಟಿನಿನಿಂದ ಕೂಡಿದ ದವಡೆಯಿದೆ. ಬಹುಪಾಲು ಪ್ರಭೇದಗಳಲ್ಲಿ ಅನ್ನನಾಳ ಅಗಲವಾದ ಮೇತೆಯಂತೆ ಹಿಗ್ಗಿದೆ. ಇದನ್ನು ಜಠರದ ಮುಂಭಾಗದಲ್ಲಿ ಕಾಣಬಹುದು. ಮೇತೆಯಲ್ಲಿ ಆಹಾರ ತಾತ್ಕಾಲಿಕವಾಗಿ ಸಂಗ್ರಹವಾಗುತ್ತದೆ. ಜೀರ್ಣಗ್ರಂಥಿ ಹಾಗೂ ಜೊಲ್ಲು ಗ್ರಂಥಿಗಳಲ್ಲಿ ಉತ್ಪತ್ತಿಯಾದಿ ಕಿಣ್ವಗಳು ಇದರೊಳಕ್ಕೆ ಬರುತ್ತದೆ. ಆಪ್ಲೀಸೆಯದಲ್ಲಿ ಮೇತೆಯ ಗೋಡೆಯ ಮೇಲೆ ಕೈಟಿನ್ ತಟ್ಟೆಗಳಿವೆ. ಇದು ಗಿಜರ್ಡಿನಂತೆ ಕಾರ್ಯ ನಿರ್ವಹಿಸುತ್ತದೆ.

ಮಾಂಸಾಹಾರಿಗಳಾದ ಕೆಲವು ಪ್ರೋಸೋಬ್ರ್ಯಾಂಕ್, ಒಫಿಸ್ತೊಬ್ರ್ಯಾನ್ಕ್ ಮತ್ತು ಪಲ್ಮನೇಟಗಳ ರಾಡ್ಯುಲದಲ್ಲಿ ಅತಿದೊಡ್ಡ ಹಲ್ಲುಗಳು ಇವೆ. ಹಲ್ಲುಗಳ ಸಂಖ್ಯೆ ಕಡಿಮೆ.ಪ್ರೋಸೋಬ್ರ್ಯಾಂಕ್ ಗಳಲ್ಲಿ ದವಡೆಗಳಿಲ್ಲ. ಬಾಯಂಗುಳ ಮಡಿಸಿಕೊಂಡಂತಾಗಿ ಸೊಂಡಿಲಿನಂಥ ರಚನೆಯಾಗಿ ರೂಪುಗೊಂಡಿದೆ. ಈ ಸೊಂಡಿಲಿನ ಒಳಾವರಣದಲ್ಲಿ ಅನ್ನನಾಳದವರೆಗೂ ಹರಡಿರುವ ರಾಡ್ಯುಲಗಳಿವೆ. ಆಹಾರ ಸೇವನೆಯ ಕಾಲದಲ್ಲಿ ರಾಡ್ಯುಲಗಳು ಸೊಂಡಿಲಿನ ತುದಿಯಿಂದ ಹೊರಚಾಚಿಕೊಳ್ಳುತ್ತವೆ. ಆಹಾರ ಸೇವನೆ ಮುಗಿದ ಅನಂತರ ಸೊಂಡಿಲು ಒಳಗೆಳೆಯಲ್ಪಡುತ್ತದೆ. ಸೊಂಡಿಲನ್ನು ಇಟ್ಟುಕೊಳ್ಳುವುದಕ್ಕಾಗಿಯೇ ಬಾಯಲ್ಲಿ ಒಂದು ಪ್ರತ್ಯೇಕ ಅವಕಾಶವಿದೆ. ಕೆಲವು ಪ್ರೋಸೋಬ್ರ್ಯಾಂಕ್ ಕುಟುಂಬಗಳಲ್ಲಿ, ಮುಖ್ಯವಾಗಿ ಮ್ಯೂರಿಸಿಡೀ ಕುಟುಂಬದಲ್ಲಿ ಕಪ್ಪೆ ಚಿಪ್ಪಿನ ಹುಳುಗಳನ್ನು ತಿನ್ನಬಲ್ಲಂಥ ಜೀವಿಗಳಿವೆ. ಇವು ಆಹಾರ ಜೀವಿಯ ಚಿಪ್ಪನ್ನು ತಮ್ಮ ರಾಡ್ಯುಲದಿಂದ ಕೊರೆದು ಚಿಪ್ಪಿನ ಒಳಗಿರುವ ಮೃದು ಶರೀರವನ್ನು ಹೀರುತ್ತವೆ. ಉದಾ: ಯೂರೊಸ್ಯಾಲ್ಪಿಂಕ್ಸ್, ಮ್ಯೂರೆಕ್ಸ್, ಯೂಪ್ಲ್ಯೂರ ಇತ್ಯಾದಿ.

ಕಡಲಿನಲ್ಲಿ ವಾಸಿಸುವ ಪ್ರೋಸೋಬ್ರ್ಯಾಂಕ್ ಗಳ ಒಂದು ಜಾತಿಯಾದ ಕೋನಸ್ ಎಂಬುದು ಜೀವಂತ ಮೀನುಗಳನ್ನು ಕಡಲ ಆನೆಲಿಡಗಳನ್ನೂ ತಿನ್ನುತ್ತದೆ. ಇದು ತನ್ನ ಹರಿತವಾದ ರಾಡ್ಯುಲಗಳಿಂದ ಆಹಾರಜೀವಿಗಳನ್ನು ತಿವಿದು ಅದರೊಳಕ್ಕೆ ತೀಕ್ಷ್ಣ ಬಗೆಯ ವಿಷವನ್ನು ಹೊಗಿಸಿ ಕೊಲ್ಲುತ್ತದೆ.

ಶಿಲಕೆಗಳ ಸಹಾಯದಿಂದ ಆಹಾರ ಸೇವನೆ: ಕೆಲವು ಗ್ಯಾಸ್ಟ್ರಾಪೊಡಗಳು ತಮ್ಮ ಶಿಲಕೆಗಳ ಸಹಾಯದಿಂದ ನೀರಿನಲ್ಲಿರುವ ಪ್ಲಾಂಕ್ಟನ್ ಮುಂತಾದ ಆಹಾರವನ್ನು ಶೋಧಿಸಿ ಸೇವಿಸುತ್ತವೆ. ಉದಾ: ಕ್ರೆಪಿಡ್ಯುಲ, ಸ್ಟ್ರಾಂಬಸ್ ಮತ್ತು ವರ್ಮಿಟಸ್. ಇಂಥ ಪ್ರಾಣಿಗಳಲ್ಲಿ ಪ್ರೋಟೀನ್ ವಸ್ತುವಿನಿಂದ ರಚಿತವಾದ ಸಲಾಕೆಯಂಥ ಸ್ಟೈಲ್ ಇರುತ್ತದೆ. ಜಠರದ ಹಿಂತುದಿಯ ಸ್ಟೈಲ್ ಚೀಲದಿಂದ ಉತ್ಪತ್ತಿಯಾಗುವ ಇದು ಜಠರದ ಕರುಳು ಭಾಗದಲ್ಲಿ ಹುದುಗಿರುತ್ತದೆ. ಆಹಾರ ಜೀರ್ಣವಾಗುವ ಕಾಲದಲ್ಲಿ ಶಿಲಕೆಗಳ ಸಹಾಯದಿಂದ ಇದು ತಿರುಗುತ್ತಿದ್ದು ಆಹಾರ ಬೆರೆಯುವುದಕ್ಕು ಜೀರ್ಣವಾಗುವುದಕ್ಕೂ ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿ ಪಿಷ್ಟ ಪದಾರ್ಥಗಳನ್ನು ಜೀರ್ಣಿಸಬಲ್ಲ ಕಿಣ್ವಗಳಿವೆ.

ಕೆಲವು ಗ್ಯಾಸ್ಟ್ರಾಪೊಡಗಳು ಪರಾವಲಂಬಿಗಳಾಗಿವೆ. ಉದಾ: ಪಿರಾಮಿಡಿಲೇಸಿಯ. ಪೈರಾಮ್ ಶಂಭುಕಗಳು ಪಾಲಿಕೀಟ ಮತ್ತು ಕಪ್ಪೆಚಿಪ್ಪಿನ ಹುಳುಗಳ ಮೇಲೆ ಬಾಹ್ಯಾ ಪರಾವಲಂಬಿಗಳಾಗಿ ಜೀವನ ಸಾಗಿಸಿದರೆ ಸ್ಟೈಲಿಫರ್ ಎಂಬುದು ನಕ್ಷತ್ರ ಮೀನುಗಳ ದೇಹದೊಳಗೂ ಎಂಟೋಕಾಂಕ ಎಂಬುದು ಕಡಲಸೌತೆಗಳ ಅಂಗಾಗಗಳ ಒಳಗೂ ಇದ್ದು ಅಂತರ್ ಪರಾವಲಂಬಿಗಳಾಗಿ ಜೀವನ ನಡೆಸುತ್ತವೆ.

ನರಮಂಡಲ:ಗ್ಯಾಸ್ಟ್ರಾಪೊಡಗಳ ನರಮಂಡಲ ಸಂಕೀರ್ಣ ಮಾದರಿಯದು. ಇದರಲ್ಲಿ ನಿರ್ದಿಷ್ಟವಾದ ನರಮುಡಿಗಳನ್ನು ಕಾಣಬಹುದು. ನುಲಿಗೆ ಪೂರ್ವ ಸ್ಥಿತಿಯಲ್ಲಿ ಇದು ಹೇಗಿತ್ತು ಎಂಬುದನ್ನು ತಿಳಿದುಕೊಂಡರೆ ನುಲಿಗೆಗೊಳಗಾದ ಮೇಲೆ ಇದರಲ್ಲಿ ಉಂಟಾದ ವ್ಯತ್ಯಾಸಗಳೇನು ಎಂಬುದನ್ನು ಅರಿಯುವುದು ಸುಲಭ. ಅನ್ನನಾಳದ ಹಿಂತುದಿಯಲ್ಲಿ ಒಂದು ಜೊತೆ ಸೆರಬ್ರಲ್ ನರಮುಡಿಗಳು ಇವೆ. ಇವುಗಳಿಂದ ಹೊರಡುವ ನರಗಳು ಕಣ್ಣು, ಕರಬಳ್ಳಿಗಳು ಮುಂತಾದ ಅಂಗಗಳಿಗೆ ಹೋಗುತ್ತವೆ ಸೆರಬ್ರಲ್ ನರಮುಡಿಗಳ ಮುಂಭಾಗದಲ್ಲಿ ಬಾಯ ಇಕ್ಕೆಲದಲ್ಲಿ ಒಂದು ಜೊತೆ ಬಕಲ್ ನರಮುಡಿಗಳು ಇವೆ. ಇವಕ್ಕೂ ಸೆರಬ್ರಲ್ ನರಮುಡಿಗಳೂ ನರತಂತುಗಳ ಸಂಪರ್ಕ ಇದೆ. ಬಕಲ್ ನರಮುಡಿಗಳಿಂದ ರಾಡ್ಯುಲದ ಸ್ನಾಯುಗಳಿಗೂ ಬಾಯಂಗಳಕ್ಕೂ ನರಗಳು ಹೋಗುತ್ತವೆ. ಪ್ರತಿಯೊಂದು ಸೆರಬ್ರಲ್ ನರಮುಡಿಯಿಂದ ಅನ್ನನಾಳದ ಇಕ್ಕೆಲದಲ್ಲಿ ತಳಭಾಗಕ್ಕೆ ಒಂದು ನರಹುರಿ ಹೊರಡುತ್ತದೆ. ಇವಕ್ಕೆ ಪಾದದ ನರಹುರಿಗಳು ಎಂದು ಹೆಸರು. ಇವು ಪಾದ ಮಧ್ಯಭಾಗದಲ್ಲಿರುವ ಪಾದದ ನರಮುಡಿಗಳಿಗೆ ತಲಪುತ್ತವೆ. ಪಾದದ ನರಮುಡಿಗಳಿಂದ ನರತಂತುಗಳು ಹೊರಟು ಪಾದದ ಸ್ನಾಯುಗಳನ್ನು ತಲಪುತ್ತವೆ. ಸೆರಬ್ರಲ್ ನರಮುಡಿಗಳಿಂದ ಮತ್ತೊಂದು ಜೊತೆ ನರಹುರಿಗಳು ಹೊರಡುತ್ತವೆ. ಇವಕ್ಕೆ ಅಂಗಸದ ನರಹುರಿಗಳೆಂದು ಹೆಸರು. ಇವು ಶಿರದ ಭಾಗದಿಂದ ಹೊರಟು ಹಿಂದಕ್ಕೆ ಸಾಗಿ ಅಂಗಸರಾಶಿಯಲ್ಲಿ ಹುದುಗಿರುವ ಅಂಗಸದ ನರಮುಡಿಗಳಿಗೆ ಬಂದು ಕೊನೆಗೊಳ್ಳುತ್ತವೆ. ಅಂಗಸದ ನರಹುರಿಗಳು ಅಂಗಸರಾಶಿಯ ನರಮುಡಿಗಳನ್ನು ತಲಪುವುದಕ್ಕಿಂತ ಮುಂಚೆ ಎರಡು ಜೊತೆ ನರಮುಡಿಗಳು ಹೊರಡುತ್ತವೆ. ಮೊದಲನೆಯ ಜೊತೆ ನರಮುಡಿಗಳಿಗೆ ಪ್ಲ್ಯೂರಲ್ ನರಮುಡಿಗಳೆಂದು ಹೆಸರು. ಇವು ದೇಹದ ಮುಂತುದಿಯಲ್ಲಿವೆ. ಇವುಗಳ ನರಗಳು