ಪುಟ:Mysore-University-Encyclopaedia-Vol-6-Part-13.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪೬ ಗ್ಯಾಸ್ಟ್ರಾಪೊಡ ನಡೆಯುತ್ತದೆ. ಮೊದಲನೆಯದು ಶೀಘ್ರಗತಿಯಲ್ಲೂ ಎರಡನೆಯದು ನಿಧಾನವಾಗಿಯೂ ನಡೆಯುತ್ತವೆ. ನುಲಿಗೆಯಿಂದಾಗಿ ಪಾದ ಹೊರಚಾಚಿಕೊಳ್ಳುತ್ತದೆ. ಈಗ ಡಿಂಭ ವೀಲಮಿನಿಂದ ಈಜಲು, ಪಾದದಿಂದ ತೆವಳಲು ಉಪಕ್ರಮಿಸುತ್ತದೆ. ಡಿಂಭ ಬೆಳೆದಂತೆ ವೀಲಮ್ ಕ್ಷೀಣವಾಗುತ್ತ ಬಂದು ಕೊನೆಗೆ ಮಾಯಾವಾಗುತ್ತದೆ. ಮರಿಯನ್ನೇ ಈಯುವ ಕೆಲವು ಗ್ಯಾಸ್ಡ್ರಾಪೊಡಗಳಲ್ಲಿ ಡಿಂಭಾವಸ್ಥೆಗಳು ತಾಯಿಯ ದೇಹದೊಳಗೇ ನಡೆಯುತ್ತವೆ. ಉದಾ: ಲಿಟ್ಟೊರೈನದ ಕೆಲವು ಪ್ರಭೇದಗಳು.

ಆರ್ಥಿಕ ಪ್ರಾಮುಖ್ಯ : ಗ್ಯಾಸ್ಡ್ರಾಪೊಡಗಳು ಇತರ ಜೀವಿಗಳಿಗೆ ಆಹಾರವೆನಿಸಿವೆ. ಕ್ಯಾಲಿಫೋರ್ನಿಯದಲ್ಲಿ ಜನ ಗ್ಯಾಲಿಯೋಟಿಸನ್ನು ತಿನ್ನುತ್ತಾರೆ. ಯುರೋಪಿನಲ್ಲಿ ಹೆಲಿಕ್ಸ್ ಪೋಮೇಟಿಯ ಎಂಬ ಬಸವನಹುಳು ರಸಭಕ್ಷ್ಯವೆನಿಸಿದೆ. ಆದರೂ ಗ್ಯಾಸ್ಟ್ರಾಪೊಡಗಳಿಂದ ಮನುಷ್ಯನಿಗೆ ಸಾಕಷ್ಟು ಹಾನಿಯೂ ಉಂಟು. ಕೆಲವು ಬಸವನಹುಳುಗಳು ಅನೇಕ ಬಗೆಯ ರೋಗಗಳನ್ನು ಹರಡುವ ಮಧ್ಯವರ್ತಿ ಆತಿಥೇಯ ಜೀವಗಳಾಗಿವೆ. ಇನ್ನು ಕೆಲವು ಬಗೆಗಳು ಸಸ್ಯ ಪಿಡುಗುಗಳೆನಿಸಿಕೊಂಡಿವೆ.

ವರ್ಗೀಕರಣ : ಗ್ಯಾಸ್ಡ್ರಾಪೊಡ ವರ್ಗವನ್ನು ಕಿವಿರು ಮತ್ತು ನರಮಂಡಲದ ಲಕ್ಷಣಗಳ ಆಧಾರದ ಮೇಲೆ ಪ್ರೋಸೋಬ್ರ್ಯಾಂಕಿಯ, ಒಫಿಸ್ತೊಬ್ರ್ಯಾಂಕಿಯ ಮತ್ತು ಪಲ್ಮನೇಟ ಎಂಬ ಮೂರು ಉಪವರ್ಗಗಳನ್ನಾಗಿ ವಿಂಗಡಿಸಲಾಗಿದೆ.

ಉಪವರ್ಗ I ಪ್ರೋಸೋಬ್ರ್ಯಾಂಕಿಯ(ಸ್ಟ್ರೆಪ್ಟನ್ಯೂರ) : ಇದಕ್ಕೆ ಸೇರಿದ ಶಂಭುಕಗಳು ಸಿಹಿನೀರು ಹಾಗೂ ಸಮುದ್ರಗಳೆರಡರಲ್ಲಿಯೂ ವಾಸಿಸುತ್ತವೆ. ಇವುಗಳಲ್ಲಿ ಉಸಿರಾಡಲು ಕಿವಿರುಗಳಿವೆ. ಇವುಗಳ ಮ್ಯಾಂಟಲ್ ಕುಹರ ಹಾಗೂ ಅದರೊಳಗಿನ ಅಂಗಗಳು ದೇಹದ ಮುಂಭಾಗಕ್ಕೆ ಸೀಮಿತಗೊಂಡಿವೆ. ಈ ಉಪವರ್ಗದ ಜೀವಿಗಳಲ್ಲಿ ಚಿಪ್ಪು ಇದೆ. ಇದರಲ್ಲಿ ಆರ್ಕಿಗ್ಯಾಸ್ಟ್ರಾಪೊಡ, ಮಿಸೊಗ್ಯಾಸ್ಟ್ರಾಪೊಡ, ನಿಯೋಗ್ಯಾಸ್ಟ್ರಾಪೊಡಗಳೆಂಬ ಮೂರು ಗಣಗಳಿವೆ.

ಗಣ ೧ ಆರ್ಕಿಗ್ಯಾಸ್ಟ್ರಾಪೊಡ (ಆಸ್ಪಿಡೋಬ್ರ್ಯಾಂಕಿಯ) : ಈ ಗಣದ ಜೀವಿಗಳು ಆದಿಮಸ್ಥಿತಿಯವು. ಇವುಗಳಲ್ಲಿ ಎರಡು ಕಿವಿರುಗಳು, ಎರಡು ಹೃತ್ಕರ್ಣಗಳು ಮತ್ತು ಎರಡು ಮೂತ್ರಕೋಶಗಳು ಇವೆ. ನರಮಂಡಲ ಕೇಂದ್ರೀಕೃತಗೊಂಡಿಲ್ಲ. ಚಿಪ್ಪು ನುಲಿಗೆಗೊಳಗಾಗಿದೆ. ಚಿಪ್ಪಿನಲ್ಲಿ ರಂಧ್ರಗಳಿವೆ. ಉದಾಹರಣೆಗೆ ಸಿಸ್ಸುರೆಲ, ಹ್ಯಾಲಿಯೋಟಿಸ್, ಪಂಕ್ ಟ್ಯುರೆಲ, ಡಯೊಡೋರ, ಪಟೆಲ, ನೆರೀಟ ಮುಂತಾದವು.

ಗಣ ೨ ಮೀಸೊಗ್ಯಾಸ್ಟ್ರಾಪೊಡ (ಪೆಕ್ಟಿನಿಬ್ರ್ಯಾಂಕಿಯ) : ಈ ಗಣದ ಜೀವಿಗಳಲ್ಲಿ ಕೇವಲ ಇಂದು ಕಿವಿರು, ಒಂದು ಹೃತ್ಕರ್ಣ ಮತ್ತು ಒಂದು ಮೂತ್ರಕೋಶ ಇವೆ. ಬಲಭಾಗದ ಕಿವಿರು, ಹೃತ್ಕರ್ಣ ಮತ್ತು ಮೂತ್ರಕೋಶಗಳು ಮಾಯಾಗಿವೆ. ಒಪರ್ಕ್ಯುಲಮ್ ಇರಬಹುದು. ಸೊಂಡಲು ಇದೆ. ಇವೆಲ್ಲ ಪ್ರಮುಖವಾಗಿ ಸಮುದ್ರ ಜೀವಿಗಳು. ಸಿಹಿನೀರಿನ ಜಾತಿಗಳು ಇಲ್ಲದಿಲ್ಲ. ಗ್ಯಾಸ್ಟ್ರಾಪೊಡ ವರ್ಗದಲ್ಲಿಯೇ ಈ ಗಣ ಅತಿ ದೊಡ್ಡದು. ಉದಾಹರಣೆಗೆ ಲಿಟ್ಟೊರೈನ, ಜಾಂತಿನ, ಕ್ರೆಪಿಡ್ಯುಲ, ಸ್ಟ್ರಾಂಬಸ್, ಲ್ಯಾಂಬಿಸ್, ಕೊರೆಯುವ ನಾಟಿಸಿಡುಗಳಾದ ನಾಟಿಕ, ಸೈನಮ್ ಮುಂತಾದವು. ಈಜುವ ಹೆಟರಾಪೊಡಗಳಾದ ಆಟ್ಲಾಂಟ, ಕ್ಯಾರಿನೇರಿಯ ಜಂತು ಕಂಬಗಳಾದ ವರ್ಮಿಟಸ್ ಹಾಗೂ ಸಿಹಿನೀರಿನಲ್ಲಿ ಕಾನಸಿಗುವ ವೈವಿಪ್ಯಾರಸ್, ಹೈಡ್ರೋಬಿಯ, ಗೋನಿಯೋಬೇಸಿಸ್ ಮುಂತಾದವು.

ಗಣ ೩ ನಿಯೋಗ್ಯಾಸ್ಟ್ರಾಪೊಡ (ಸ್ಟೀನೊಗ್ಲಾಸ) : ಈ ಗಣದ ಜೀವಿಗಳಲ್ಲಿ ಮೀಸೊಗ್ಯಾಸ್ಟ್ರಾಪೊಡಗಳಲ್ಲಿಲ್ಲದ ಕೆಲವು ಗುಣಗಳನ್ನು ಕಾಣಬಹುದು. ಇವುಗಳಲ್ಲಿ ಆಸ್ಟ್ರಾಡಿಯಮ್ ಬೈಪೆಕ್ಟಿನೇಟ್ ಸ್ಥಿತಿಯಲ್ಲಿದೆ. ನರಮಂಡಲ ಕೇಂದ್ರೀಕೃತವಾಗಿದೆ. ಚಿಪ್ಪಿನಲ್ಲಿ ಸಾಮಾನ್ಯವಾಗಿ ಸೈಫನ್ ಕಾಲುವೆ ಇದೆ. ಮಾಂಸಾಹಾರಿಗಳಲ್ಲಿ ಸೊಂಡಿಲು ಇದೆ. ರ‍್ಯಾಡ್ಯುಲದಲ್ಲಿ ಎರಡು ಅಥವಾ ಮೂರು ಬಲು ಅಗಲವಾದ ಹಲ್ಲುಗಳಿರುವ ಸಾಲಿದೆ. ಕೆಲವು ಜೀವಿಗಳಲ್ಲಿ ವಿಷಗ್ರಂಥಗಳಿವೆ. ಸಾಮಾನ್ಯವಾಗಿ ಎಲ್ಲ ಜೀವಿಗಳಲ್ಲೂ ಒಪರ್ಕ್ಯುಲಮ್ ಇದೆ. ಇದಕ್ಕೆ ಸೇರಿದ ಎಲ್ಲ ಪ್ರಭೇದಗಳೂ ಕಡಲಜೀವಿಗಳು. ಉದಾಹರಣೆಗೆ, ಕೊರೆಯುವ ಮ್ಯೂರಿಸಿಡುಗಳಾದ ಮ್ಯೂರೆಕ್ಸ್, ಯೂರೊಸ್ಯಾಲ್ಪಿಂಕ್ಸ್ ಮತ್ತು ಪರಪ್ಯುರ, ಬ್ಯೂಸಿಕಾನ್, ಒಳಿವ, ಮಿಟ್ರ, ಕೋನಸ್ ಮುಂತಾದವು.

ಉಪವರ್ಗ II ಒಫಿಸ್ತೊಬ್ರ್ಯಾಂಕಿಯ (ಯೂಥಿನ್ಯೂರ): ಇವುಗಳಲ್ಲಿ ಒಂದು ಹೃತ್ಕರ್ಣ ಹಾಗೂ ಮೂತ್ರಕೋಶ ಇವೆ. ಈ ಉಪವರ್ಗದ ಜೀವಿಗಳಲ್ಲಿ ವಿನುಲಿಗೆ ಕ್ರಿಯರ ನಾನಾ ಹಂತದಲ್ಲಿರುವುದು ಕಂಡುಬರುತ್ತದೆ. ಜೊತೆಗೆ ಚಿಪ್ಪಿನ ಹಾಗೂ ಮ್ಯಾಂಟಲ್ ಕುಹರದ ಕ್ಷೀಣತೆಗಳೂ ಈ ಜೀವಿಗಳಲ್ಲಿ ನಾನಾ ಹಂತಗಳಲ್ಲಿ ಕಂಡುಬರುತ್ತವೆ. ಎಲ್ಲ ಪ್ರಭೇದಗಳೂ ಸಮುದ್ರಜೀವಿಗಳು. ಇದರಲ್ಲಿ ಟೆಕ್ಟಿಬ್ರ್ಯಾಂಕಿಯ, ಟೀರಾಪೊಡ, ನ್ಯೂಡಿಬ್ರ್ಯಾಂಕಿಯಗಳೆಂಬ ಮೂರು ಗಣಗಳಿವೆ.

ಗಣ ೧ ಟೆಕ್ಟಿಬ್ರ್ಯಾಂಕಿಯ : ಚಿಪ್ಪು ಇದೆ. ಇದು ಕ್ಷೀಣಿಸಿರಬಹುದು ಮತ್ತು ಇದರ ಮೇಲೆ ಮ್ಯಾಂಟಲ್ ಬೆಳೆದಿದ್ದು ಮುಚ್ಚಿಕೊಡಿರಬಹುದು. ನಿಜವಾದ ಒಂದೇ ಕಿವಿರಿದೆ. ಕೆಲವು ಜೀವಿಗಳಲ್ಲಿ ದ್ವಿತೀಯಕ ಸಮಪಾರ್ಶ್ವ ಸ್ಥಿತಿಯನ್ನು ಕಾಣಬಹುದು. ಉದಾಹರಣೆಗೆ, ಬುಲ, ಆಪ್ಲೀಸಿಯ, ಪರತಂತ್ರ ಜೀವಿಗಳಾದ ಪಿರಮಿಡೆಲ,ಸ್ಟೈಲಿಫೆರ ಮುಂತಾದವು.

ಗಣ ೨ ಟೀರಾಪೊಡ : ಈ ಗಣದ ಜೀವಿಗಳನ್ನು ಕಡಲ ಚಿಟ್ಟೆಗಳೆಂದು ಕರೆಯುತ್ತಾರೆ. ಚಿಪ್ಪು ಇರಬಹುದು ಅಥವಾ ಇಲ್ಲದಿರಬಹುದು. ಪಾದದ ಮುಂದಿನ ಭಾಗ ಬಹಳ ಆಗಲವಾಗಿದ್ದು ಈಜುರೆಕ್ಕೆಗಳಾಗಿ ಮಾರ್ಪಟ್ಟಿದೆ. ಈ ಗಣದ ಉಪಗಣವಾದ ಥೀಕೊಸೊಮ್ಯಾಟದ ಪ್ರಭೇದಗಳಲ್ಲಿ ಚಿಪ್ಪಿಲ್ಲ. ಉದಾ : ಸ್ಟೈರಟಿಲ, ಕ್ಲಿಯೋ, ಲಿಮಾಸೈನ ಇತ್ಯಾದಿ. ಉಪಗಣ ಜಿಮ್ನೊಸೊಮ್ಯಾಟದ ಜೀವಿಗಳಲ್ಲಿ ಚಿಪ್ಪು ಇಲ್ಲ. ಉದಾ : ನ್ಯೂಮೊಡರ್ಮ, ಕ್ಲೈಯೊಪ್ಸಿಸ್ ಮತ್ತು ನೋಟೊಬ್ರ್ಯಾಂಕಿಯ.

ಗಣ ೩ ನೋಡಿಬ್ರ್ಯಾಂಕಿಯ : ಇವನ್ನು ಕಡಲಗೊಂಡೆ ಹುಳುಗಳೆಂದು ಕರೆಯುತ್ತಾರೆ. ಇವುಗಳಲ್ಲಿ ಚಿಪ್ಪು ಇಲ್ಲ. ದೆಹ ದ್ವಿತೀಯಕ ಸಮಪಾರ್ಶ್ವ ಸ್ಥಿತಿಯನ್ನು ಗಳಿಸಿಕೊಂಡಿದೆ. ಮ್ಯಾಂಟಲ್ ಕುಹರವಾಗಲೀ ನಿಜವಾದ ಕಿವಿರುಗಳಾಗಲೀ ಇಲ್ಲ. ಉಸಿರಾಟ ದೇಹದ ಭಿತ್ತಿಯ ಸಹಾಯದಿಂದ ನಡೆಯುತ್ತದೆ. ಗುದದ್ವಾರದ ಸುತ್ತಲೂ ಸೆರೇಟಗಳು (ದ್ವಿತೀಯಕ ಕಿವಿರುಗಳು) ಬೆಳೆದಿವೆ. ಜೀರ್ಣಗ್ರಂಥಿ ವಿಪುಲವಾಗಿ ಕವಲೊಡೆದಿದ್ದು ದೇಹದ ಅವಕಾಶದೋಳಗೆಲ್ಲ ತುಂಬಿಕೊಂಡಿದೆ. ನರಮಂಡಲ ಕೇಂದ್ರೀಕೃತಗೊಂಡಿವೆ. ಉದಾ : ಡೋರಿಸ್, ಡೆಂಡ್ರೋನೋಟಸ್, ಎಲೀಸಿಯ ಮತ್ಉ ಇಯೋಲಿಡಿಯ.

ಉಪವರ್ಗ III ಪಲ್ಮನೇಟ : ಇವುಗಳಲ್ಲಿ ಒಂದು ಹೃತ್ಕರ್ಣ ಹಾಗೂ ಒಂದು ಮೂತ್ರಕೋಶ ಇವೆ. ಕಿವಿರುಗಳು ಇಲ್ಲ. ಮ್ಯಾಂಟಲ್ ಕುಹರದ ಮುಂಭಾಗ ಅನೇಕ