ಪುಟ:Mysore-University-Encyclopaedia-Vol-6-Part-14.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೆಳವಣಿಗೆಯ ಬಗ್ಗೆ ವಿಶೇಷ ಗಮನಕೊಟ್ಟಿತು. ಗ್ರಂಥಾಲಯಗಳಲ್ಲಿ ದುಡಿಯುವ ಸಿಬ್ಬಂದಿಯ ವೇತನಶ್ರೇಣಿಯನ್ನು ಸುಧಾರಿಸಲು, ಕಾಲೇಜು ಗ್ರಂಥಾಲಯಗಳಿಗಾಗಿ ಗ್ರಂಥಾಗಳನ್ನುಕೊಳ್ಳಲು, ಪಠ್ಯಪುಸ್ತಕಗಳ ವಿಭಾಗವನ್ನಾರಂಭಿಸಲು, ಗ್ರಂಥಾಲಯ ಕಟ್ಟಡಗಳನ್ನು ಕಟ್ಟಲು ಧಾರಾಳವಾದ ಧನ ಸಹಾಯವನ್ನು ನೀಡಲು ಮುಂದೆ ಬಂದ ಸಂಗತಿ ಗ್ರಂಥಾಲಯ ಅಭಿವೃದ್ಧಿಯ ಮಾರ್ಗದಲ್ಲಿ ಮೈಲುಗಲ್ಲಾಗಿದೆ. ಕಾಲೇಜುಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ, ಗ್ರಂಥಾಲಯಗಳನ್ನು ಕಡೆಗಣಿಸುವುದು ಶೈಕ್ಷಣಿಕ ಮೌಲ್ಯಗಳ ಮೂಲವನ್ನೇ ಮೊಟಕುಗೊಳಿಸಿದಂತೆ-ಎಂದು 1964ರಲ್ಲಿ ನೇಮಕಗೊಂಡ ಕೊಠಾರಿ ಆಯೋಗ ಒತ್ತಿ ಹೇಳಿದುದು ಸ್ತುತ್ಯವಾಗಿದೆ. ಪಠ್ಯಗ್ರಂಥಗಳೇ ಇರಲಿ ಪಠ್ಯೇತರ ಗ್ರಂಥಾಗಳೇ ಇರಲಿ ಅವು ಗುರುಶಿಷ್ಯರ ನಡುವೆ ಜ್ಞಾನವಾಹಿನಿಯ ಸೇತುವೆಯಂತೆ ಸಹಾಯ ಮಾಡುತ್ತವೆ. ಕಾಲೇಜು ಗ್ರಂಥಾಲಯಗಳು ಶೈಕ್ಷಣಿಕ ವಿಶೇಷ ಗ್ರಂಥಾಲಯಗಳಾಗಿರುತ್ತವೆ. ಅಲ್ಲಿಯ ಓದುಗರೂ ಅವರ ಅಭಿರುಚಿಗಳೂ ವಿಶಿಷ್ಟವಾಗಿರುತ್ತವೆ.

ಕಾಲೇಜು ಗ್ರಂಥಾಲಯಗಳಲ್ಲಿ ಇನ್ನಿತರ ಗ್ರಂಥಾಲಯಗಳಂತೆ ಉತ್ತಮ ಗ್ರಂಥಗಳನ್ನು ಸಂಗ್ರಹಿಸುವುದರಿಂದ ಜೊತೆಗೆ, ಪಠ್ಯಪುಸ್ತಕಗಳನ್ನೂ ಆಯಾ ವಿಷಯ ನಿರೂಪಣೆಯ ಆಧಾರ ಗ್ರಂಥಗಳನ್ನೂ ಟೀಕೆ, ವಿಮರ್ಶೆಗಳನ್ನೂ ಹೆಚ್ಚಾಗಿ ಸಂಗ್ರಹಿಸಬೇಕಾಗುತ್ತದೆ. ಕಾಲೇಜು ಗ್ರಂಥಾಲಯಗಳನ್ನು ವೃದ್ಧಿಸುವಾಗ ವಿಶೇಷವಾಗಿ ಅವು ಇರಿಸಿಕೊಂಡ ಪ್ರಮುಖ ದೃಷ್ಠಿಕೋನಕ್ಕೆ ಪೂರಕವಾಗುವಾಗ ಹಾಗೆ ಪಠ್ಯಕ್ರಮ, ಬೋಧನಭಾಷೆ, ಓದುಗರು- ಈ ಅಂಶಗಳನ್ನು ಲಕ್ಷ್ಯದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಗ್ರಂಥಗಳನ್ನು ಮತ್ತು ಇತರ ಓದುವ ಸಾಮಾಗ್ರಿಗಳನ್ನು ಕೊಳ್ಳುವಾಗ ಅಯಾ ಕಾಲೇಜುಗಳಿಲ್ಲಿರುವ ಪಠ್ಯಕ್ರಮವನ್ನು ಸಂಪೂರ್ಣವಾಗಿ ಲಕ್ಷದಲ್ಲಿಟ್ಟುಕೊಳ್ಳಬೇಕು. ಇದು ಶೈಕ್ಷಣಿಕ ಗ್ರಂಥಾಲಯವಾದುದರಿಂದ ವಿದ್ಯಾರ್ಥಿಗಳು ಅರಿತುಕೊಳ್ಳಬೇಕಾದ ವಿಷಯಗಳಿಗೆ ಸಂಬಂಧಪಟ್ಟ ಪಠ್ಯಗ್ರಂಥಾಗಳನ್ನು ಅತ್ಯವಶ್ಯವಾಗಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡುಕೊಳ್ಳಬೇಕಾಗುತ್ತದೆ. ಪಠ್ಯಗ್ರಂಥಾಗಳಿಗೆ ಪೂರಕವಾದ ಇನ್ನಿತರ ಗ್ರಂಥಾಗಳನ್ನೂ ಸಂಗ್ರಹಿಸಬೇಕಾಗುತ್ತದೆ. ಜೊತೆಗೆ ಕೆಲವು ಮಹತ್ತ್ವದ ಪರಾಮರ್ಶನ ಗ್ರಂಥಗಳ ಸಂಗ್ರಹವೂ ಇರುವುದು ಉಚಿತ.

ಕಾಲೇಜಿನಲ್ಲಿ ಕಲಿಸತಕ್ಕ ವಿಷಯಗಳನ್ನು ಸಾಮಾನ್ಯವಾಗಿ ಇಂಗ್ಲಿಷ್ ಮಾಧ್ಯಮದಿಂದ ಬೋಧಿಸಲಾಗುತ್ತದೆ. ಸ್ವಾತಂತ್ರ್ಯಾನಂತರ ಮಾತೃಭಾಷೆ ಶಿಕ್ಷಣದ ಮಾಧ್ಯಮವಾಗಬೇಕೆಂಬ ಅಭಿಪ್ರಾಯ ಶಿಕ್ಷಣತಜ್ಞರಲ್ಲಿ ಹೆಚ್ಚಿದ್ದರಿಂದ ಭಾರತೀಯ ಕಾಲೇಜುಗಳಲ್ಲಿ ಆಯಾ ಪ್ರಾದೇಶಿಕ ಭಾಷೆ ಬೋಧನ ಭಾಷೆಯಾಗುತ್ತಿದೆ. ಈ ಸಂಕ್ರಮಣ ಕಾಲದಲ್ಲಿ ಗ್ರಂಥಾಲಯಗಳು ಬೋಧನ ಭಾಷೆಯಲ್ಲಿನ ಪಠ್ಯಪುಸ್ತಕಗಳನ್ನು ಕೊಳ್ಳಲು ಹೆಚ್ಚಾಗಿ ಹಣವನ್ನು ಮುಡಿಪಿಡಬೇಕಾಗುತ್ತದೆ. ಕಾಲೇಜಿನಲ್ಲಿ ಕಲಿಸುವ ವಿಷಯಗಳಲ್ಲಿ ಹೆಚ್ಚು ವೈವಿಧ್ಯವಿರುವುದರಿಂದ ಆಯಾ ವಿಷಯಗಳನ್ನು ಕುರಿತಾದ ಗ್ರಂಥಗಳನ್ನು ಸಹ ಕೊಳ್ಳಬೇಕಾಗುತ್ತದೆ. ಇಷ್ಟಾದರೂ ಇಂಗ್ಲಿಷ್ ಗ್ರಂಥಗಳ ಅಗತ್ಯ ಇದ್ದೇ ಇದೆ. ಅವನ್ನು ಕೈಬಿಡಲಾಗದು.

ಕಾಲೇಜು ಗ್ರಂಥಾಲಯದ ಓದುಗರು ಮುಖ್ಯವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು. ಇವರ ಓದು ಹೆಚ್ಚಾಗಿ ಪಠ್ಯಗ್ರಂಥಗಳನ್ನು ಅವಲಂಬಿಸಿರುತ್ತದೆ. ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದೇ ವಿದ್ಯಾರ್ಥಿಗಳ ಅಂತಿಮ ಉದ್ದೇಶವಾದುದರಿಂದ ಪಠ್ಯ ಗ್ರಂಥಗಳನ್ನು ಹೊರತುಪಡಿಸಿ ಇತರ ವಿಷಯಗಳ ಮೇಲಿನ ಗ್ರಂಥಗಳ ಮತ್ತು ನಿಯತಕಾಲಿಕೆಗಳ ಅವಲೋಕನದಲ್ಲಿ ಅವರ ಮನಸ್ಸು ಹೋಗುವುದು ಕಡಿಮೆ. ಇಂದು ಪಠ್ಯಗ್ರಂಥಗಳನ್ನಾಧರಿಸಿದ ಬೋದನೆಯೇ ಹೆಚ್ಚು. ಹೀಗಾಗಿ ಕಾಲೇಜು ಗ್ರಂಥಾಲಯಗಳಲ್ಲಿ ಸಂಶೋಧನಕಾರ್ಯ ನಡೆಸುವವರು ವಿರಳ. ಇದಕ್ಕೆ ಅಪವಾದವಾಗಿ ಕೆಲವು ಉತ್ತಮ ಮಟ್ಟದ ಕಾಲೇಜು ಗ್ರಂಥಾಲಯಗಳು ಸಕಲ ವಿಧದಲ್ಲಿ ಸಹಾಯ ಮಾಡಲು ಅರ್ಹವಾಗಿರುತ್ತವೆ. ಅಲ್ಲಿ ಅವಶ್ಯ ಗ್ರಂಥಗಳು ಹಾಗೂ ನಿಯತಕಾಲಿಕೆಗಳೂ ಇರುತ್ತವೆ. ವಿದ್ಯಾರ್ಥಿಗಳಿಗೆ, ಉಪಾಧ್ಯಾಯರಿಗೆ ಅಗತ್ಯವೆನಿಸುವ ಪಠ್ಯ ಹಾಗೂ ಪಠ್ಯಸಹಾಯಕ ಗ್ರಂಥಗಳ ಪ್ರತಿಗಳು ಸಾಕಷ್ಟಿರುವುದು ಒಳ್ಳೆಯದು.

ಭಾರತೀಯ ವಿದ್ಯಾರ್ಥಿಗಳ ಶಿಕ್ಷಣದ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶ್ವವಿದ್ಯಾಲಯ ಧನಸಹಾಯ ಆಯೋಗದವರು ಕಾಲೇಜು ಗ್ರಂಥಾಲಯಗಳಿಗೆ ಬಡ ಮತ್ತು ಜಾಣ ವಿದ್ಯಾರ್ಥಿಗಳಿಗೆ ಸಹಾಯಮಾಡುವ ಉದ್ದೇಶದ ಜೊತೆಗೆ ಕಾಲೇಜು ಗ್ರಂಥಾಲಯದ ಬೆಳವಣಿಗೆಗಾಗಿ ಪಠ್ಯಗ್ರಂಥಗಳನ್ನು ಕೊಳ್ಳಲು ತಗಲುವ ವೆಚ್ಚದ ಶೇ. 50ರಷ್ಟು ಹಣವನ್ನು ಸಹಾಯಧನವಾಗಿ ಒದಗಿಸುತ್ತಿರುವರು. ಅದಲ್ಲದೆ ಪ್ರತಿಯೊಂದು ಕಾಲೇಜಿನ ಗ್ರಂಥಾಲಯದಲ್ಲಿ ಪಠ್ಯಗ್ರಂಥಗಳ ಪ್ರತ್ಯೇಕ ವಿಭಾಗ ತೆರೆಯಲು 5,000 ರೂ.ಗಳಿಗೆ ಕಡಿಮೆಯಿಲ್ಲದಷ್ಟು ಧನಸಹಾಯವನ್ನು ಕೆಲವು ನಿಯಮಗಳಿಗಳಿಗನುಸಾರ ಕೊಡುತ್ತಿರುವರು. ಇದರಿಂದಾಗಿ ಕೆಲವು ಕಾಲೇಜುಗಳು ಉತ್ತಮ ಪಠ್ಯಗ್ರಂಥ ವಿಭಾಗಗಳನ್ನು ಬೆಳೆಸಿವೆ.

ಕೆಲವು ಸಂಸ್ಥೆಗಳು ಹಣಕಾಸಿನ ವಿನಿಮಯದಿಂದ ಓದುಗರ ಬೇಡಿಕೆಗಳಿಗನುಗುಣಸಾರವಾಗಿ ಬುಕ್ ಬ್ಯಾಂಕ್‍ಗಳಿಂದ ಕೆಲವು ಅವಧಿಯವರೆಗೆ ಗ್ರಂಥಗಳನ್ನು ಎರವಲು ನೀಡುತ್ತದೆ. ಇದರಿಂದ ಆರ್ಥಿಕವಾಗಿ ಅಸಮರ್ಥರಾದ ಓದುಗರಿಗೆ ಅನುಕೂಲವಾಗಿದೆ. ಕಾಲೇಜು ಗ್ರಂಥಾಲಯದಲ್ಲಿ ಇಂಥ ಬುಕ್ ಬ್ಯಾಂಕ್‍ಗಳನ್ನು ಸ್ಥಾಪಿಸಿದರೆ ಜಾಣ, ಬಡ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತದೆ. ಉದಾಹರಣೆಗಾಗಿ ಬೆಂಗಳೂರಿನ ರೋಟರಿ ಕ್ಲಬ್ ಮತ್ತು ರಾಮನಾರಾಯಣ ಚೆಲ್ಲಾರಾಮ್ ಅಂಡ್ ಸನ್ಸ್ ಚಾರಿಟೇಬಲ್ ಟ್ರಸ್ಟ್- ಈ ಎರಡು ಸಂಘಗಳು ಒಂದಾಗಿ 1959ರಲ್ಲಿ ವಿದ್ಯಾರ್ಥಿಗಳಿಗೆ ಸಹಾಯಮಾಡುವ ಉದ್ದೇಶದಿಂದ ವಿದ್ಯಾರ್ಥಿ ಸಹಾಯಕ ಸಂಘವೊಂದನ್ನು ಸ್ಥಾಪಿಸಿವೆ. ಇದರ ಮುಖಾಂತರ ಕರ್ನಾಟಕ ರಾಜ್ಯದ ಕಾಲೇಜು ಗ್ರಂಥಾಲಯಗಳಲ್ಲಿ ಬುಕ್ ಬ್ಯಾಂಕ್‍ಗಳ ವಿಭಾಗಗಳನ್ನು ತೆರೆಯಲು ಸಾಧ್ಯವಾಗಿದೆ. ಇದರ ಲಾಭ ಪಡೆದು ಅನೇಕ ಕಾಲೇಜು ಗ್ರಂಥಾಲಯಗಳು ಪಠ್ಯಗ್ರಂಥ ವಿಭಾಗಗಳನ್ನು ಚೆನ್ನಾಗಿ ಬಿಳೆಸಿವೆ.

ಬ್ರಿಟಿಷ್ ಕೌನ್ಸಿಲಿನವರು ಭಾರತದಲ್ಲಿನ ಕಾಲೇಜು ಗ್ರಂಥಗಳಿಗೆ ಬ್ರಿಟನ್ನಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿರುವ ಅಮೂಲ್ಯ ಪಠ್ಯಗ್ರಂಥಗಳನ್ನು ಒಂದು ವರ್ಷದವರೆಗೆ ಎರವಲಾಗಿ ಕೊಡುತ್ತಿದ್ದುದುಂಟು. ಈ ಸಂಚಾರಿ ಪಠ್ಯಗ್ರಂಥಾಲಯ ಸಹಾಯ ಪಡೆಯಬಯಸುವ ಕಾಲೇಜು ಗ್ರಂಥಾಲಯ ಪ್ರತಿವರ್ಷ 20 ರೂ. ವಂತಿಗೆಯನ್ನು ಕೊಡಬೆಕಾಗುತ್ತಿದ್ದಿತು. ಈ ಯೋಜನೆಯ ಲಾಭವನ್ನು ರಾಜ್ಯದ ಅನೇಕ ಕಾಲೇಜು ಗ್ರಂಥಾಲಯಗಳು ಪಡೆದವು.

ಕಾಲೇಜು ಗ್ರಂಥಾಲಯದ ಮಹತ್ತ್ವ‍ವನ್ನರಿತು ಆಯಾ ಕಾಲೇಜಿನ ಆಡಳಿತ ವರ್ಗದವರು ತರಬೇತಿ ಪಡೆದ ನುರಿತ ಗ್ರಂಥಪಾಲರನ್ನು ಹಾಗೂ ಸರಿಯಾದ ಸಿಬ್ಬಂದಿವರ್ಗವನ್ನು ನೇಮಿಸಿದರೆ ಕಾಲೇಜು ಗ್ರಂಥಾಲಯಗಳು ತಮ್ಮ ಪಾಲಿನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದು.

ಅನೇಕ ಕಾಲೇಜುಗಳಲ್ಲಿ ಗ್ರಂಥಾಲಯಗಳು ಮುಖ್ಯ ಶೈಕ್ಷಣಿಕ ಕಟ್ಟಡದ ಒಂದು ಕೋಣೆಯಲ್ಲಿರುತ್ತವೆ. ಪ್ರತ್ಯೇಕ ಗ್ರಂಥಾಲಯ ಕಟ್ಟಡಗಳಿರುವ ಕಾಲೇಜುಗಳ ಸಂಖೈ ತೀರ ಕಡಿಮೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಪ್ರೇರಣೆ ಹಾಗೂ ಪ್ರೋತ್ಸಾಹದಿಂದ ಅನೇಕ ಕಾಲೇಜುಗಳು ಸ್ವತಂತ್ರ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿವೆ.

ಗ್ರಂಥಾಲಯ ಸೇವೆ ಸಮರ್ಪಕವಾಗಿ ಸಲ್ಲಬೇಕಾದರೆ ಈ ಕೆಲವು ಅಂಶಗಳನ್ನು ಗಮನಿಸುವುದು ಒಳ್ಳೆಯದು. 1. ಕಾಲೇಜು ಕೆಲಸ ಮಾಡುವ ವೇಳೆಯಲ್ಲದೆ ಉಳಿದ ಬಿಡುವಿನ ವೇಳೆಗಳಲ್ಲೂ ಅಂದರೆ ಬೆಳಗಿನ ಎಂಟರಿಂದ ರಾತ್ರಿ ಎಂಟರವರೆಗೂ ತೆರೆದಿಡಬೇಕು. 2. ವಿದ್ಯಾರ್ಥಿ ಕೇಳಿದ ಪುಸ್ತಕ ಕೂಡಲೆ ಅವನಿಗೆ ಸಿಗುವಂತಾಗಬೇಕು. 3. ಅಲ್ಲೇ ಕೂತು ಓದುವ, ಟಿಪ್ಪಣಿ ತೆಗೆದುಕೊಳ್ಳುವ ವಿದ್ಯಾರ್ಥಿಗೆ ಸಾಕಷ್ಟು ಸ್ಥಳ ಹಾಗೂ ಅಸನಾವಕಾಶವಿರಬೇಕು. 4. ಪರಾಮರ್ಶನ ಸೇವೆ ಸುಲಭವಾಗಿ ಸಿಗುವಂತಿರಬೇಕು. 5. ಪಠ್ಯವಲ್ಲದ ಇತರ ವಿಷಯಿಕ ಗ್ರಂಥಗಳು ಯಾವ ವಿದ್ಯಾರ್ಥಿಗೂ- ಆತ ಬಯಸಿದಲ್ಲಿ ನೇರವಾಗಿ ದೊರೆಯುವಂತಿರಬೇಕು. 6. ಆಗಾಗ ಬರುವ ಹೊಸ ಪುಸ್ತಕಗಳನ್ನು ಪ್ರತ್ಯೇಕ ಸ್ಥಳದಲ್ಲಿಟ್ಟು ಅವಕ್ಕೆ ಸಾಕಷ್ಟು ಪ್ರಚಾರ ಕೊಡುವುದು ಉತ್ತಮ. (ಎನ್.ಆರ್.ಜಿಯು;ಪಿ ಎನ್.ಎಂ.ಡಿ.ವಿ.ಎಚ್.)

3. ವಿಶ್ವವಿದ್ಯಾಲಯ ಗ್ರಂಥಾಲಯಗಳು: ಪ್ರತಿಯೊಂದು ವಿಶ್ವವಿದ್ಯಾಲಯಕ್ಕೂ ಸುಸಜ್ಜಿತವಾದ ಗ್ರಂಥಾಲಯದ ಅವಶ್ಯಕತೆ ಇದೆ ಎಂಬುದನ್ನು ಅನೇಕ ಶಿಕ್ಷಣತಜ್ಞರು ಒತ್ತಿ ಹೇಳಿದಾರೆ. ಪಾಲ್ ಬುಕ್ ಎಂಬುವರು ಹೀಗೆ ಅಭಿಪ್ರಾಯಪಡುತ್ತಾರೆ: 'ಗ್ರಂಥಾಲಯ ಶೈಕ್ಷಣಿಕ ಕಾರ್ಯಗಳ ಹೃದಯ ಅದು ಮಾನವನ ಪ್ರಕಟಿತ ಜಿಜ್ಞಾಸೆ ಮತ್ತು ಅಭಿಪ್ರಾಯಗಳ ಉಗ್ರಾಣ. ಉತ್ಕೃಷ್ಟ ಗ್ರಂಥಾಲಯಗಳಿಲ್ಲದೆ ಶಿಕ್ಷಣದಲ್ಲಿ ಗುಣಮಟ್ಟದ ಸಾಧನೆ ಅಸಾಧ್ಯ. ಶ್ರೇಷ್ಠ ಗ್ರಂಥಾಲಯಗಳಿಲ್ಲದ ಕಡೆ ಶ್ರೇಷ್ಠ ಅಧ್ಯಾಪಕರೂ ಇರುವುದು ಸಾಧ್ಯವಿಲ್ಲ; ಜ್ಞಾನವಾಹಿನಿಯ ಮುಕ್ತ ದರ್ಶನಕ್ಕೆ ಗ್ರಂಥಾಲಯವೇ ಹೆಬ್ಬಾಗಿಲು'. 1917ರಲ್ಲಿ ಭಾರತ ಸರ್ಕಾರದಿಂದ ನೇಮಕಗೊಂಡ ಮೈಕೇಲ್ ಸ್ಯಾಡ್ಲರ್ ಸಮಿತಿ ತನ್ನ ವರದಿಯಲ್ಲಿ ಸುಸಜ್ಜಿತ ಗ್ರಂಥಾಲಯ ಮತ್ತು ಪ್ರಯೋಗ ಮಂದಿರಗಳ ಸ್ಥಾಪನೆ ಮತ್ತು ವ್ಯವಸ್ಥೆ ವಿಶ್ವವಿದ್ಯಾಲಯದ ಆದ್ಯಕರ್ತವ್ಯಗಳಲ್ಲೊಂದು ಎಂದು ಹೇಳಿದೆ. ಉತ್ತಮ ಬೋಧನೆ ಮತ್ತು ಸಂಶೋಧನೆಗೆ ಸಾಧನ ಸೌಲಭ್ಯಗಳನ್ನು ಅಧ್ಯಾಪಕರು ಸದುಪಯೋಗಪಡಿಸಿಕೊಳ್ಳಬೇಕೆಂದು ವಿಶ್ವವಿದ್ಯಾಲಯಗಳು ನಿರೀಕ್ಷಿಸಬೇಕು. ಸುಸಜ್ಜಿತ ಗ್ರಂಥಾಲಯ ಮತ್ತು ಸಂಶೋಧನ ಕೇಂದ್ರಗಳನ್ನು ಸ್ಥಾಪಿಸುವುದು ವಿಶ್ವವಿದ್ಯಾಲಯಗಳಿಗೆ ಸಮಂಜಸವೂ ಅನಿವಾರ್ಯವೂ ಆಗಿರುತ್ತದೆ. ಇವು ಆ ಸಮಿತಿಯ ಇತರ ಸಲಹೆಗಳು. ಭಾರತ ಸರ್ಕಾರದಿಂದ 1948ರಲ್ಲಿ