ಪುಟ:Mysore-University-Encyclopaedia-Vol-6-Part-16.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಾಮದೇವತೆ

ತನಗೆ ಕೊಡಲಾಗುವ ಭೂ ಹಿಡುವಳಿಯನ್ನು ಕೃಷಿ ಮಾಡಿ, ಗಳಿಸಿದ ಉತ್ಪಾದನೆಯನ್ನು ಭೋಗಿಸಬಹುದು. ಆದರೆ ಹಿಡುವಳಿಯನ್ನು ಮಾರಾಟ ಮಾಡುವ ಅಥವಾ ಇನ್ನಾವ ರೀತಿಯಲ್ಲಾದರೂ ಪರಭಾರೆ ಮಾಡುವ ಅವಕಾಶ ಇರುವುದಿಲ್ಲ. ವ್ಯವಸಾಯದ ಮತ್ತು ಇತರ ಉದ್ಯಮಗಳ ಪ್ರಗತಿಯ ಕಾರ್ಯದಲ್ಲಿ ಅಂಥ ಹಳ್ಳಿಯಲ್ಲಿ ಸಹಕಾರ ಸಂಸ್ಥೆಗಳು ಪ್ರಧಾನ ಪಾತ್ರ ವಹಿಸುತ್ತವೆ. ಸಾಲದ ಪೂರೈಕೆ, ಮಾರಾಟ, ಇಂಥ ಎಲ್ಲ ಕಾರ್ಯಗಳೂ ಸಹಕಾರ ಸಂಸ್ಥೆಗಳಿಂದ ಆಗುತ್ತವೆ. ಗ್ರಾಮಸಮುದಾಯದ ಸರ್ವತೋಮುಖವಾದ ಪ್ರಗತಿಯನ್ನು ಸಾಧಿಸಲೂ ಗ್ರಾಮದ ಅನುದಿನದ ಆಡಳಿತವನ್ನು ನಿರ್ವಹಿಸಲೂ ಗ್ರಾಮಸಭೆ ಇರುತ್ತದೆ. ಗ್ರಾಮಸಭೆಯ ನಿರ್ಣಯಗಳೆಲ್ಲ ಆದಷ್ಟು ಮಟ್ಟಿಗೆ ಸರ್ವಾನುಮತದಿಂದಾಗುತ್ತದೆ. ಸರ್ಕಾರದೊಡನೆ ಗ್ರಾಮದ ವ್ಯವಹಾರ ಗ್ರಾಮಸಭೆಯ ಮೂಲಕ ನಡೆಯುತ್ತದೆ. ಭೂಮಿಯ ವಿತರಣೆ ಮತ್ತು ಅಭಿವೃದ್ಧಿ, ವಿದ್ಯಾಭ್ಯಾಸ, ಗೃಹಕೈಗಾರಿಕೆಗಳ ಬೆಳವಣಿಗೆ, ಗ್ರಾಮನೈರ್ಮಲ್ಯ ಸಾಧನೆ, ಗ್ರಾಮಾಡಳಿತ- ಇವೆಲ್ಲ ಗ್ರಾಮಸಭೆಯ ಜವಾಬ್ದಾರಿಯಾಗುತ್ತದೆ.

ಪರಸ್ಪರ ಪ್ರೇಮ, ಸಹಕಾರ, ಹಂಹಿಕೊಂಡು ಬಾಳಬೇಕೆಂಬ ಭಾವನೆ- ಇವೇ ಮುಂತಾದ ಕೌಟುಂಬಿಕ ಭಾವನೆಗಳನ್ನು ಗ್ರಾಮಸಮುದಾಯಕ್ಕೆ ವಿಸ್ತರಿಸಿ ಶಾಂತಿ, ಸಮತೆ ಹಾಗೂ ಸ್ವಾವಲಂಬನೆಯ ಆಧಾರದ ಮೇಲೆ ಗ್ರಾಮಸಮುದಾಯಗಳನ್ನು ನಿರ್ಮಿಸಿ, ತನ್ಮೂಲಕ ಸರ್ವೋದಯ ಸಮಾಜವನ್ನು ರೂಪಿಸುವುದೇ ಗ್ರಾಮದಾನ ಚಳವಳಿಯ ಉದ್ದೇಶ.

ಭಾರತದ ಗ್ರಾಮಸಮಾಜದ ಜಟಿಲವಾದ ಸಮಸ್ಯೆಗಳ ನಿವಾರಣೆಗೆ ಹಾಗೂ ಆದರ ಪುನಾರಚನೆಗೆ ಗ್ರಾಮದಾನ ಅಹಿಂಸಾತ್ಮಕ ಹಾಗೂ ಪ್ರಭಾವಯುತ ವಿಧಾನವೊಂದೆಂದು ಮನವರಿಕೆಯಾಗಿದೆ. ೧೯೫೭ರ ಸೆಪ್ಟಂಬರಿನಲ್ಲಿ ಮೈಸೂರಿನ ಬಳಿ ಇಲವಾಲದಲ್ಲಿ ಸೇರಿದ್ದ ಅಖಿಲ ಭಾರತ ರಾಜಕೀಯ ಪರಿಷತ್ತಿನಲ್ಲಿ ಗ್ರಾಮದಾನ ಚಳವಳಿಗೆ ಸರ್ವಾನುಮತ ಬೆಂಬಲ ದೊರಕಿತು. ಪಂಚವಾರ್ಷಿಕ ಯೋಜನೆಯಲ್ಲಿ ಭೂದಾನ ಮತ್ತು ಗ್ರಾಮದಾಗಳಿಗೆ ಮನ್ನಣೆ ಕೊಡಲಾಗಿದೆ. ಈ ಕಾರ್ಯಕ್ರಮಗಳಿಗೆ ಸೂಕ್ತ ನೆರವನ್ನು ನೀಡುವ ವ್ಯವಸ್ಥೆಯಿದೆ. ಸರ್ಕಾರದ ಸಮುದಾಯ ಅಭಿವೃದ್ಧಿ ಯೋಜನೆ ಮತ್ತು ಗ್ರಾಮದಾನ ಚಳವಳಿಗಳನ್ನು ಸಮನ್ವಯಗೊಳಿಸಿ ಗ್ರಾಮಭಾರತದ ಪುನರ್ನಿರ್ಮಾಣಕ್ಕೆ ಮಹಾಪ್ರಯತ್ನ ಮಾಡಲಾಗತ್ತಿದೆ.

ಗ್ರಾಮದೇವತೆ: ಗ್ರಾಮದ ಆಧಿಷ್ಠಾತ್ರಿ ದೈವ. ಈ ದೈವವನ್ನು ಪ್ರತಿಯೊಂದು ಗ್ರಾಮದವರು ತಮ್ಮ ಗ್ರಾಮಕ್ಕಾಗಿ ಸೃಷ್ಟಿಸಿ ಸ್ಥಾಪಿಸಿ ಪೂಜಿಸಲು ಪ್ರಾರಂಭ ಮಾಡಿದುದರಿಂದ ಇದಕ್ಕೆ ಗ್ರಾಮದೇವತೆಯೆಂದು ಹೆಸರಾಯಿತು. ಭಾರತದಲ್ಲಿ ಸಾಮಾನ್ಯವಾಗಿ ಪ್ರತಿಯೊಂದು ಗ್ರಾಮಕ್ಕೂ ಒಂದು ಗ್ರಾಮ ದೇವತೆಯೂ ದೇವಸ್ಥಾನವೂ ಇವೆ. ಹಳ್ಳಿಗಳು ಅತಿ ಚಿಕ್ಕವೂ ಹತ್ತಿರದಲ್ಲಿರುವವೂ ಆದಾಗ, ಎರಡು ಮೂರು ಹಳ್ಳಿಗಳಿಗೆ ಮಧ್ಯಸ್ಥವಾಗಿ ಎಲ್ಲರಿಗೂ ಹತ್ತಿರವಾಗುವ ಸ್ಥಳದಲ್ಲಿ ಒಂದು ಗ್ರಾಮದೇವತೆಯ ದೇವಾಲಯ ಸ್ಥಾಪಿತವಾಗಿರುತ್ತದೆ. ಬಹುಮಟ್ಟಿಗೆ ದೇವಾಲಯಗಳು ಊರ ಹೊರಗಿರುತ್ತವೆ.

ಈ ದೇವಾಲಯಗಳು ಸ್ಥಾಪಿತವಾದ ಕಾಲ ಯಾವುದು ಎಂಬುದಕ್ಕೆ ಐತಿಹಾಸಿಕ ಆಧಾರಗಳು ದೊರೆತಿರುವುದು ಅತಿ ಸ್ವಲ್ಪ. ಆದರೆ ಜನಪದದಲ್ಲಿ ರೂಢಿಯಲ್ಲಿರುವ ಮತ್ತು ಕೆಲವು ಗ್ರಾಮದೇವತೆಗಳ ದೇವಾಲಯಗಳನ್ನು ಕುರಿತ ಐತಿಹ್ಯಗಳಿಂದ ಸಂಗ್ರಹಿತವಾದ ಅಂಶಗಳು ಹೀಗಿವೆ: ಆದಿಮಾನವನಿಗೆ ತಾನು ಕಂಡ ಜಗತ್ತಿನ ಬಗ್ಗೆ ಒಂದು ಬಗೆಯ ವಿಸ್ಮಯವೂ ಭಯವೂ ಮೊದಲ ಉಂಟುಗಿರಬೇಕು. ಕ್ರಮೇಣ ಅವನು ಅಂಥ ಸೃಷ್ಟಿವೈಚಿತ್ರ್ಯಕ್ಕೆ ಕಾರಣಕರ್ತನಾದ ದೈವ ಒಂದಿರಬೇಕು ಎಂಬ ಭಾವನೆಯನ್ನು ಬೆಳೆಸಿಕೊಂಡನೆಂದು ಕಾಣುತ್ತದೆ. ಗ್ರಾಮದೇವತೆ ಮತ್ತು ಇತರ ಉಪದೇವತೆಗಳ ಕಲ್ಪನೆ ಅನಂತರ ಮೂಡಿದ್ದು. ದೇವರು ಪ್ರಪಂಚಕ್ಕೆ ಹೊಣೆಗಾರ; ಅವನಿಗೆ ಕೈತುಂಬ ಕೆಲಸವಾದ್ದರಿಂದ ಆತ ಯಾವ ಕಡೆ ಅಂತ ನೋಡುತ್ತನೆ? ತಮ್ಮ ಕಡೆ ಗಮನಿಸುವುದಕ್ಕೆ ಅವನಿಗೆ ಹೊತ್ತು ಎಲ್ಲಿದೆ? ಆದ್ದರಿಂದ ತಾವು ದೇವರಿಗೂ ತಮಗೂ ನಡುವೆ ಒಬ್ಬ(ಸಣ್ಣ ದೇವರನ್ನು) ಏರ್ಪಡಿಸುಕೊಂಡು ಅವನನ್ನು ತೃಪ್ತಿಪಡಿಸಿ, ಅವನ ಮೂಲಕ ಜಗತ್ಕರ್ತನನ್ನು ಒಲಿಸಿಕೊಳ್ಳುವುದು ಸುಲಭ ಎಂಬ ಭಾವನೆ ಬಲತಂತೆಲ್ಲ ಊರಿಗೊಂದು ಗ್ರಾಮದೇವತೆ ಸೃಷ್ಟಿಯಾಗಿರಬೇಕು. ಗ್ರಾಮಘಟಕಗಳು ಪ್ರಾರಂಭವಾದಂದಿನಿಂದಲೇ ಗ್ರಾಮದೇವತೆಯೂ ಅಸ್ತಿತ್ವಕ್ಕೆ ಬಂತು ಎಂದು ಹೇಳಬಹುದು. ಅದ್ದರಿಂದ ಗ್ರಾಮದೇವತೆಯ ಕಲ್ಪನೆ ಅತ್ಯಂತ ಪ್ರಾಚೀನವಾದುದೆಂದು ಹೇಳಬಹುದು. ರಾಮಾಯಣ ಕಾಲಕ್ಕೂ ಹಿಂದಿನಿಂದಲೇ ಈ ದೇವತೆ ಇದ್ದಿರಬೇಕು. ಸೀತೆ ಗಂಗೆಯನ್ನು ದಾಟುವಾಗ ಗಂಗೆಯನ್ನು ಹೀಗೆ ಪ್ರಾರ್ಥಿಸುತ್ತಾಳೆ: 'ನಿನ್ನ ತೀರದಲ್ಲಿರುವ ದೇವತೆಗಳಿಗೆ ಅನೇಕ ನೈವೇದ್ಯಗಳನ್ನು ಮಾಡಿಸುವೆನು. ನಿನಗೆ ಸಂತೋಷವಾಗುವ ಮರ್ಯಾದೆಯಲ್ಲಿ ಸಾವಿರ ಸುರಾಘಟಗಳನ್ನೂ ಅನೇಕ ಮಾಂಸೋಪಹಾರಗಳನ್ನೂ ಬಲಿಯಾಗಿ ಕೊಡವೆನು.' ಸೀತೆ ಹೇಳಿರುವ ದೇವತೆಗಳು ಗಂಗಾತೀರದ ಗ್ರಾಮದೇವತೆಗಳೆಂದು ಊಹಿಸಲು ಅವಕಾಶವಿದೆ.

ಹಳ್ಳಿಯ ರೈತರು ವಿವಾಹಗಳಲ್ಲಿ ಗ್ರಾಮದೇವತೆಗಳಿಗೆ ಮೊದಲ ವೀಳ್ಯ ಎತ್ತುತ್ತಾರೆ. ಆರ್ಯರು ದ್ರಾವಿಡರಿಂದ ವೀಳ್ಯ ಅಂಗೀಕರಿಸಿದುದರ ಉಲ್ಲೇಖಗಳಿವೆ. ಚಾರಿತ್ರಿಕ ಕಾಲದಲ್ಲಿ ಇದು ಎಷ್ಟರಮಟ್ಟಿಗೆ ಗ್ರಾಮದ ಅವಿಭಾಜ್ಯ ಅಂಗವಾಗಯಿತೆಂದರೆ. ಸರ್ಕಾರದವರು ಪ್ರತಿಯೊಂದು ಗ್ರಾಮಕ್ಕೂ ಗ್ರಾಮದೇವತೆಗೂ ಉಂಬಳಿ ಜಮೀನನ್ನು ಕಡ್ಡಾಯವಾಗಿ ಬಿಟ್ಟು ಅದನ್ನು ಗ್ರಾಮದ ಬಾರಾಬಲೂತಿ ಲೆಕ್ಕದಲ್ಲಿ ಸೇರಿಸಿದ್ದಾರೆ. ಹೀಗೆ ಪ್ರಾಚೀನ ಕಾಲದಿಂದ ಹಿಡಿದು ಅರ್ವಾಚೀನ ಕಾಲದವರೆಗೆ ಗ್ರಾಮದೇವತೆ ಜನಪದ ಜೀವನದಲ್ಲಿ ಅವಿಭಾಜ್ಯವಾಗಿ ಸೇರಿಕೊಂಡು ಬಂದಿದೆ.

ಜನತೆಯ ದೃಷ್ಟಿಯಲ್ಲಿ ಗ್ರಾಮದೇವತೆಯ ಮಟ್ಟ ಅತಿ ಹೆಚ್ಚಿನದೂ ಅಲ್ಲ, ಅತಿ ಕಡಿಮೆಯದೂ ಅಲ್ಲ. ಅದರ ಕಾರ್ಯ, ಪ್ರಭಾವ, ದೃಷ್ಟಿ ಒಂದು ಗ್ರಾಮಕ್ಕೆ ಮಾತ್ರ ಸೀಮಿತವಾದ್ದು.