ಪುಟ:Mysore-University-Encyclopaedia-Vol-6-Part-16.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರೀಕ್ ನಾಟಕಗಳು

IV ಗ್ರೀಕ್ ಮತದ ನಾಲ್ಕನೆಯ ಅವಧಿ; ಪ್ರ.ಶ.ಪೂ. ೩೫೦ ರಲ್ಲಿ ಮ್ಯಾಸಿಡೋನಿಯ ಸಾಮ್ರಾಜ್ಯ ಸ್ಥಾಪನೆಯಾದಾಗ ಗ್ರೀಕ್ ಮತದಲ್ಲಿ ಮಹತ್ತರ ಬದಲಾವಣೆಗಳು ಉಂಟಾದವು. ಗ್ರೀಕರ ಸಾಂಪ್ರದಾಯಿಕ ಮತ ಕ್ಷೀಣಗೊಂಡಿತು. ಅಥೆನ್ಸಿನಲ್ಲಿ ಅಥಿನಳ ಪ್ರಾಬಲ್ಯ ಕುಗ್ಗಿತು. ಪರಕೀಯರ ಮತಭಾವನೆಗಳು ಗ್ರೀಸಿಗೆ ಪ್ರವೇಶಿಸಿದವು. ಈ ಕಾಲದಲ್ಲಿ ಮತಭಾವನೆ ರಾಜಕೀಯ ಎಲ್ಲೆಗಳನ್ನು ಮೀರಿ ವಿಶ್ವವ್ಯಾಪಕವಾದ ದೈವದೊಡನೆ ಆಂತರಿಕವಾಗಿ ಮಿಳನವಾಗಬೇಕೆಂಬ ಆಕಾಂಕ್ಷೆ ಬಲವಾಯಿತು. ಗ್ರೀಕರ ಮೇಲೆ ಪೂರ್ವಪಶ್ಮಿಮಗಳ ಮಿಳನವನ್ನೇರ್ಪಡಿಸಬೇಕೆಂಬುದು ಅಲೆಗ್ಸಾಂಡರನ ಮಹಾದಾಶಯವಾಗಿತ್ತು. ಪರಕೀಯರನ್ನು ಆಹ್ವಾನಿಸಿ ಅವರ ನೇತೃತ್ವದಲ್ಲಿ ದೈವದೊಡನೆ ಆತ್ಮೀಯ ಸಂಪರ್ಕ ಬೆಳೆಸಿಕೊಳ್ಳಲು ಗೂಢ ಭ್ರಾತೃ ವೃಂದಗಳು ಹುಟ್ಟಿಕೊಂಡುವು.

1. ಮಿನಾಂಡರನ ಕವಿತೆಗಳ ಸಂಪುಟದಲ್ಲಿ ಮಾನವನ ವಿಚಾರವಾಗಿ ಉದಾರ ಭಾವನೆ ಕಂಡುಬರುತ್ತದೆ. ಒಳ್ಳೆಯವನಾದ ಮನುಷ್ಯ ಎಲ್ಲಿಯವನಾಗಲ್ಲಿ ಅವನು ಪರಕೀಯನೆಂಬ ಭಾವನೆ ನನಗೆ ಇಲ್ಲ; ಎಲ್ಲರ ನೈಜಸ್ವಭಾವ ಒಂದೇ ಎಂಬುದು ಅವನ ವಾಕ್ಯಗಳಲ್ಲಿ ಒಂದು. ಅವನ ಕವಿತೆಗಳಲ್ಲಿ ಕ್ರೈಸ್ತರ ಹೊಸ ಒಡಂಬಡಿಕೆಯ ಕೆಲವು ಭಾವನೆಗಳು ಕ್ರೈಸ್ತಮತ ಹುಟ್ಟುವುದಕ್ಕೆ ಮುಂಚೆಯೇ ಮೂಡಿಬಂದಿದೆ. ಅರ್ಪಣೆ ನಾವು ದೇವರ ಅನುಗ್ರಹ ಪಡೆಯಲು ಕೊಟ್ಟ ಲಂಚವಲ್ಲ, ಅದು ನಮ್ಮ ಪ್ರೀತಿಯ ಕಾಣೆಕೆ ಎಂಬುದು ಅವನ ಇನ್ನೊಂದು ವಾಕ್ಯ. ದೈವ ಚೇತನ ಸ್ವರೂಪ ಅದನ್ನು ಧ್ಯಾನದಿಂದ ಸಾಕ್ಷಾತ್ಕಾರಮಾಡಿಕೊಳ್ಳಬೇಕಾದ ವಿಷಯ; ದೈವ ಪ್ರತಿಯೊಬ್ಬನ ಅಂತರಂಗದಲ್ಲೂ ಅವನು ಹುಟ್ಟಿದಂದಿನಿಂದ ಅವನ ಮಾರ್ಗದರ್ಶಕನಾಗಿ ಇರುತ್ತದೆ ಎಂಬುದು ಅವನ ಕೃತಿಗಳ ಉಳಿಕೆಯಲ್ಲಿ ಕಂಡುಬರುವ ಭಾವನೆಗಳು.

2.ವಿವಿಧ ಮತಗಳ ಸಮನ್ವಯ ಈ ಕಾಲದ ಮತದ ಒಂದು ಅಂಶ. ಈಜಿಪ್ಟ್, ಸಿರಿಯ ಮತ್ತು ಗ್ರೀಕ್ ದೇವತೆಗಳು ಒಂದೇ ಎಂದು ಭಾವಿಸಿ ಅವರೆಲ್ಲರ ಹೆಸರಿನಲ್ಲೂ ಪೂಜೆಯನ್ನು ಅರ್ಪಿಸುವುದು ಮೊದಲಾಯಿತು.ಪೂರ್ವ ದೇಶಗಳ ದೇವತೆಗಳನ್ನು ಜ್ಯೂಸ್ ಎಂದು ಕರೆಯುವುದು ವಾಡಿಕೆಯಾಯಿತು. ಜ್ಯೂಸ್ ಎಂಬ ಪದವನ್ನು ಆಂಶಿಕ ನಾಮವಾಗಿ ಬಳಸುವುದು ತಪ್ಪಿ ಸರ್ವನಾಮವಾಗಿ ಬಳಸುವುದು ಸಾಮಾನ್ಯವಾಯಿತು. ದೈವದ ಸ್ವರೂಪ ಒಂದೇ ಆದುದರಿಂದ ನಾಮಭೇದಗಳಿಗೆ ಎಡೆ ಇಲ್ಲ ಎಂಬುದು ವಾರ್ರೊ ಎಂಬುವನ ಮುಖ್ಯ ಭಾವನೆ. ಪ್ರ.ಶ.ಪೂ. 3 ನೆಯ ಶತಮಾನದ ಅರೋಟಾಸಿನ ಈ ವಾಕ್ಯ ಗಮನಾರ್ಹವಾದದ್ದು- ಎಲ್ಲ ಪಂಥಗಳೂ ದೈವಭಾವನೆಯಿಂದ ತುಂಬಿವೆ. ಜನ ಸೇರುವ ಎಲ್ಲ ಸ್ಥಳಗಳಲ್ಲೂ ಬಂದರುಗಳಲ್ಲೂ ನಮಗೆ ದೇವರ ಕೃಪೆ ಅಗತ್ಯ. ಎಲ್ಲ ಕಾಲಗಳಲ್ಲೂ ನಾವೆಲ್ಲರೂ ದೈವದ ಬಳಗ.

3. ಮುಕ್ತಾತ್ಮ ದೈವಿಕವಾದದ್ದು ಎಂಬ ಭಾವನೆ ಮಾತ್ರ ಮೊದಲಿಗೆ ಗ್ರೀಕ್ ಮತದ ನಾಲ್ಕನೆಯ ಅವಧಿಯಲ್ಲಿ ಕಾಣಿಸಿಕೊಂಡಿತು.ಅಥೆನ್ಸಿನ ಜನ ಅಲೆಗ್ಸಾಂಡರನನ್ನು ದೈವದ ಅಂತಸ್ತಗೆ ಏರಿಸಿದರು. ಟಾಲಮಿ ವಂಶದ ದೊರೆಗಳಿಗೆ ಅವರ ಮರಣಾನಂತರ ಪೂಜೆ ಸಲ್ಲುತ್ತಿತ್ತು. ರೊಸೆಟ್ಟ ಶಿಲಾಶಾಸನ ಟಾಲಮಿ ಸಶರೀರ ದೇವರು ಎಂದು ಘೋಷಿಸುತ್ತದೆ.

4. ಗ್ರೀಕ್ ದೇವತೆಗಳನ್ನು ರಾಷ್ಟ್ರಗೌರವಿಸಬೇಕೆಂದು ಅರಿಸ್ಟಾಟಲ್ ಹೇಳಿರುತ್ತಾನಾದರೂ ತಾತ್ತ್ವಿಕ ನಿಟ್ಟಿನಿಂದ ಅವನು ಅವರಿಗೆ ಬೆಲೆ ಕೊಡಲಿಲ್ಲ. ತಾತ್ತ್ವಿಕ ದೃಷ್ಟಿಯಿಂದ ಪರಿಪೂರ್ಣವಾದ ದೈವ ಒಂದೇ. ಅದು ಆರಾಧನೆಯ ವಿಷಯವಲ್ಲ; ತತ್ತ್ವಾವಲೋಕನ ವಿಷಯ. ಇವನ ಏಕೀಶ್ವರ ಭಾವನೆ ಗ್ರೀಕರ ಮೇಲೆ ಪ್ರಭಾವ ಬೀರಲಿಲ್ಲ. ಆದರೆ ಯುರೋಪಿನ ಮಧ್ಯಯುಗದಲ್ಲಿ ಸೇಂಟ್ ಥಾಮ್ಸನ್ ಅರಿಸ್ಟಾಟಲನ ತತ್ತ್ವವನ್ನು ಕ್ರೈಸ್ತಮತತತ್ತ್ವಕ್ಕೆ ಒಂದು ಪ್ರಬಲ ಆಧಾರವಾಗಿ ಮಾಡಿಕೊಂಡ.

5. ಗ್ರೀಕ್ ಮತ ಕ್ಷೀಣಗೊಳ್ಳುವುದಕ್ಕೆ ಕಾರಣರಾದ ತಾತ್ತ್ವಿಕರಲ್ಲಿ ಸಿನಿಕರು ಮುಖ್ಯರು. ಇವರು ಗ್ರೀಕ್ ಮತದ ತೀವ್ರ ವಿರೋಧಿಗಳು. ಇವರ ಮುಖಂಡರಾದ ಡಯೋಜನೀಸ್ ಮತ್ತು ಆಂಟಿಸ್ ಥೆನೀಸರು ಗ್ರೀಕ್ ದೇವತೆಗಳನ್ನು ಕುರಿತು ತಿರಸ್ಕಾರದ ಮಾತುಗಳನ್ನಾಡಿರುತ್ತಾರೆ. ಪ್ರ.ಶ.ಪೂ. 3 ನೆಯ ಶತಮಾನದ ಸಿನಿಕ್ ತಾತ್ತ್ವಿಕ ಕೆರ್ಕಿಡಾಸ್ ದೇವತೆಗಳನ್ನು ವಿಧಿಯ ಕೈಗೊಂಬೆಗಳೆಂದು ಕರೆದಿರುತ್ತಾನೆ.

ಎಪಿಕ್ಯೂರಸ್ ಮತ್ತು ಅವನ ಅನುಯಾಯಿಗಳು ನಿರೀಶ್ವರವಾದಿಗಳು. ಅದಕ್ಕಿಂತ ಹೆಚ್ಚಾಗಿ ಇದರು ಇಂದ್ರಿಯಸುಖವೇ ಜೀವನದ ಪರಮಗುರಿಯೆಂದು ವಾದಿಸಿದವರು. ದೇವತೆಗಳು ಮಾನವರ ಸುಖದುಃಖಗಳ ಕಡೆಗೆ ಬೆನ್ನು ತಿರುಗಿಸಿ ಉದಾಸೀನರಾಗಿರುತ್ತಾರೆಂದು ಅವರನ್ನು ಇವರು ಆಕ್ಷೇಪಿಸಿರುತ್ತಾರೆ.

ಮತದೃಷ್ಟಿಯಿಂದ ಗ್ರೀಕರ ಮತ್ತು ರೋಮನರ ಮೇಲೆ ಸ್ಟೋಯಿಕ್ಕರ ಪ್ರಭಾವ ಅತಿಶಯವಾದದ್ದು. ಈ ಪಂಥದ ಮೂಲಪುರುಷ ಜೀನೊ (ಪ್ರ.ಶ.ಪೂ. 366-264). ತರುವಾಯ ಅದನ್ನು ಬೆಳೆಸಿದವ ಕ್ರಿಸಿಪಸ್. ಅಥೆನ್ಸಿನಲ್ಲಿ ಇವರ ಪ್ರಚಾರ ಕೇಂದ್ರಕ್ಕೆ ಸ್ಟೋವಾ ಎಂದು ಹೆಸರು. ಹುಟ್ಟಿದ ಪ್ರಥಮ ಅವಧಿಯಲ್ಲಿ ಆ ಪಂಥ ವಿಶ್ವದೇವೈಕ್ಯವಾದವಾಗಿತ್ತು. ಅನಂತರ ಅದು ಏಕೀಶ್ವರ ಭಾವನೆಯಲ್ಲಿ ಕೊನೆಗೊಂಡಿತು. ದೈವ ಅಂತರ್ಯಾಮಿ ಮತ್ತು ಅತೀತ ಎಂಬ ಭಾವನೆ ಕ್ಲಿಯಾಂಥೀಸನ (331-232) ಸ್ತೋತ್ರದಲ್ಲಿ ಎದ್ದು ಕಾಣುತ್ತದೆ. ಸ್ಟೋಯಿಕ್ ಮತದಲ್ಲಿ ಮೊಟ್ಟಮೊದಲಿಗೆ ವಿಶ್ವ ಮತ ಭಾವನೆ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಮಾನವರೆಲ್ಲ ಸೋದರರು ಎಂಬುದು ಈ ಮತದ ಮೂಲಭಾವನೆ, ಮಾನವನಲ್ಲಿ ದೈವಾಂಶವಿದೆಯಾದ್ದರಿಂದ ಆತ್ಮಕ್ಕೆ ಮರಣವಿಲ್ಲ. ಇಂದ್ರಿಯಗಳ ಮೋಹಪಾಶದಿಂದ ಬಿಡುಗಡೆ ಹೊಂದಿ ಸಹಜಪ್ರಜ್ಞೆಯ ನಿಯಮಾನುಸಾರವಾಗಿ ಬಾಳುವುದೇ ವಿವೇಕದ ದಾರಿ.

ಸ್ಟೋಯಿಕ್ ಮತತತ್ತ್ವ ಸ್ವಲ್ಪ ಕಾಲದಲ್ಲಿ ಗ್ರೀಸಿನಿಂದ ರೋಮಿಗೆ ಹಬ್ಬಿತು. ಅದರ ಮುಖ್ಯತತ್ತ್ವಗಳಲ್ಲಿ ಕ್ರೈಸ್ತಸಂತರು ಸ್ಟೋಯಿಕ್ ತತ್ತ್ವವನ್ನು ತಮ್ಮ ಮತಬೋಧೆಗೂ ಉಪಯೋಗಿಸಿಕೊಂಡರು. ಸಿಸಿರೋ ಎಂಬ ರೋಮನ್ ತಾತ್ತ್ವಕ ಸ್ಟೋಯಿಕ್ ಮತವನ್ನು ಡಿ ಅಫಿಸೈಸ್ ಎಂಬ ಗ್ರಂಥದಲ್ಲಿ ಸಾರಮತ್ತಾಗಿ ವರ್ಣಿಸಿರುತ್ತಾನೆ. ಸೇಂಟ್ ಆಂಬ್ರೋಸ್ ಅದೇ ಹೆಸರಿನ ಗ್ರಂಥದಲ್ಲಿ ಸ್ಟೋಯಿಕ್ ಮತದ ಅಂಶಗಳನ್ನು ಕ್ರೈಸ್ತಮತ ಪ್ರಚಾರಕ್ಕೆ ಬಳಸಿಕೊಂಡಿರುತ್ತಾನೆ. ಸ್ಟೋಯಿಕ್ ತತ್ತ್ವ ಪ್ರತಿಪಾದಕರಲ್ಲಿ ಮಾರ್ಕಸ್ ಆರಿಲಿಯಸ್ ಸುಪ್ರಸಿದ್ಧನಾದವ. ಸ್ಟೋಯಿಕ್ ಮತಕ್ಕೂ ಕ್ರೈಸ್ತಮತಕ್ಕೂ ಇರುವ ಸಾಮ್ಯವನ್ನು ಪ್ರ.ಶ.65 ರಲ್ಲಿ ಸಿನಿಕ ಬರೆದ ಈ ವಾಕ್ಯಗಳು ಸ್ಪಷ್ಟಪಡಿಸುತ್ತವೆ.

ದೈವಿಕ ಭಾವನೆ ಇಲ್ಲದ ಜೀವನ ಮಂಗಳಕರವಾಗಲಾರದು. ದೇವರು ಮಂಗಳಕರನಾದವನಾದುದರಿಂದ ಈ ವಿಶ್ವವನ್ನು ಸೃಷ್ಟಿಸಿದ. ಮಂಗಳಕರವಾದ ದೈವ ಒಳ್ಳೆಯವರಿಗೆ ಹಿತವಾದುದನ್ನು ಕೊಡಲು ಹಿಂಜರಿಯುವುದಿಲ್ಲ. ಅದ್ದರಿಂದ ಎಲ್ಲವನ್ನೂ ಅತ್ಯುತ್ತಮವಾಗಿ ಮಾಡಿದ ದೇವರು ಒಳ್ಳೆಯವರನ್ನು ತಂದೆಯಂತೆ ಪ್ರೀತಿಸುತ್ತಾನೆ. ಅವರಿಗೆ ಕಷ್ಟ ಸನ್ನಿವೇಶಗಳನ್ನು ಅವನು ಕಲ್ಪಿಸುವುದು ಅವರ ಬಲ ಬೆಳೆಯಲೆಂದು. ನಮ್ಮೆಲ್ಲರೊಳಗೆ ನಮ್ಮ ಹೃದಯಭಾವನೆಗಳ ಪ್ರೇಕ್ಷಕನಾಗಿ ರಕ್ಷಕ ಅಂತರ್ಯಾಮಿಯಾಗಿ ಪವಿತ್ರಾತ್ಮನಿರುತ್ತಾನೆ.

ಪ್ರ.ಶ.75 ರಲ್ಲಿ ಎಪಿಕ್ಟಿಟಸ್ ಆಡಿದ ಮಾತುಗಳೂ ಕ್ರೈಸ್ತರ ಹೊಸ ಒಡಂಬಡಿಕೆಯ ಮಾತುಗಳಂತಿವೆ. ಒಬ್ಬ ದೇವರಿದ್ದಾನೆ. ಅವನ ಚೇತನ ಈ ವಿಶ್ವವನ್ನು ವ್ಯಾಪಿಸಿದೆ. ಅದು ನಮ್ಮ ಕಾರ್ಯಗಳಲ್ಲಲ್ಲದೆ ನಮ್ಮ ಆಲೋಚನೆಗಳಲ್ಲೂ ಭಾವಗಳಲ್ಲೂ ವಿಕಾಸವಾಗುತ್ತದೆ. ದೇವರು ನಮ್ಮ ಸೃಷ್ಟಿಕರ್ತನೂ ರಕ್ಷಕನೂ ಆಗಿರುವುದರಿಂದ ಅವನು ನಮ್ಮನ್ನು ಭಯದಿಂದ ವ್ಯಸನದಿಂದ ಬಿಡುಗಡೆ ಮಾಡುವುದಿಲ್ಲವೇ? ನೀನು ನಿನ್ನ ಕೋಣೆಯ ಬಾಗಿಲನ್ನು ಮುಚ್ಚಿ ಕತ್ತೆಲೆಯಲ್ಲಿ ಕುಳಿತಿರುವಾಗ ನೀನೊಬ್ಬನೇ ಏಕಾಕಿಯಾಗಿರುವುದಾಗಿ ಭಾವಿಸಬೇಡ. ದೇವರು ನಿನ್ನ ಕೋಣೆಯಲ್ಲಿರುತ್ತಾನೆ. ನಿನ್ನ ರಕ್ಷಕನಾಗಿ ಕಾದಿರುತ್ತಾನೆ. ನೀನು ಏನು ಮಾಡುತ್ತಿರುವೆಯೆಂಬುದನ್ನು ನೋಡಲು ಅವನಿಗೆ ದೀವಟಿಗೆಯ ಅಗತ್ಯವಿಲ್ಲ.

ಹೀಗೆ ಕ್ರೈಸ್ತಧರ್ಮಕ್ಕೂ ಸ್ಟೋಯಿಕ್ ಮತಕ್ಕೂ ಸಾಮ್ಯವಿದ್ದರೂ ಕ್ರೈಸ್ತರು ಪ್ರಶಂಸಿಸುವ ಸದ್ಗುಣಗಳಿಗೂ ಸ್ಟೋಯಿಕ್ ಮತದವರು ಪ್ರಶಂಸಿಸುವ ಸದ್ಗುಣಗಳಿಗೂ ಭೇದವಿದೆ. ಕಾರುಣ್ಯ ನಮ್ರತೆಗಳಿಗೆ ಕ್ರೈಸ್ತರು ಹೆಚ್ಚು ಪ್ರಾಧಾನ್ಯ ಕೊಡುತ್ತಾರೆ. ಸ್ಟೋಯಿಕರು ಕಾರುಣ್ಯವನ್ನೂ ನಮ್ರತೆಯನ್ನೂ ಹೃದಯ ದೌರ್ಬಲ್ಯವೆಂದು ಪರಿಗಣಿಸಿರಿತ್ತಾರೆ. ಸ್ಟೋಯಿಕರು ಕಷ್ಟಸಹಿಷ್ಣುತೆಗೂ ಧೃತಿಗೂ ಹೆಚ್ಚು ಪ್ರಾಶಸ್ತ್ಯ ಕೊಟ್ಟಿರುತ್ತಾರೆ. ಆಧುನಿಕ ತಾತ್ತ್ವಿಕರಲ್ಲಿ ಡಾ.ಲಿಪ್ ಮನ್ ಸ್ಟೋಯಿಕರ ತತ್ತ್ವವನ್ನು ಎತ್ತಿ ಹಿಡಿದಿರುತ್ತಾನೆ.

ಕ್ರೈಸ್ತಮತ ಹುಟ್ಟಿದ ಹೊತ್ತಿಗೆ ಗ್ರೀಕರ ಸಾಂಪ್ರದಾಯಿಕ ಮತ ನಾಮಾವಶೇಷವಾಯಿತು. ಅವರ ಸ್ಟೋಯಿಕ್ ಮತ ಕ್ರೈಸ್ತಮತದಲ್ಲಿ ಲೀನವಾಯಿತು. ಕ್ರೈಸ್ತ ಮತದ ಆರಂಭ ಕಾಲದಲ್ಲಿ ಅದು ವಿಶೇಷವಾಗಿ ಹರಡಿದ್ದು ಗ್ರೀಕರಲ್ಲಿ. ಕ್ರೈಸ್ತರ ಹೊಸ ಒಡಂಬಡಿಕೆಯನ್ನು ಗ್ರೀಕ್ ಭಾಷೆಯಲ್ಲಿ ಬರೆದಿಟ್ಟರು. ಕ್ರೈಸ್ತ ಮೂರ್ತಿಗಳಲ್ಲಿ ಎರಡನೆಯವನಾದ ಯೇಸುಕ್ರಿಸ್ತನನ್ನು ಗ್ರೀಕರು ಲಾಗಸ್ ಎಂದು ಕರೆದರು. ನಾಲ್ಕನೆಯ ಶತಮಾನದಲ್ಲಿ ಕ್ರೈಸ್ತಮತವನ್ನು ಗ್ರೀಕರು ರಾಷ್ಟ್ರಮತವಾಗಿ ಅಂಗೀಕರಿಸಿದರು. ಆದಿಯಲ್ಲಿ ಗ್ರೀಸಿನಲ್ಲಿ ಸ್ಥಾಪನೆಯಾದ ಕ್ರೈಸ್ತ ಮಂಡಲವೇ ಸಾಂಪ್ರದಾಯಿಕವಾದದ್ದು. ಪಾಶ್ಚಾತ್ಯ ಸುಧಾರಿತ ಕ್ರೈಸ್ತಮಂಡಲಿ ಈ ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂಬ ಭಾವನೆ 9ನೆಯ ಶತಮಾನದಲ್ಲಿ ಪ್ರಬಲಗೊಂಡು ಗ್ರೀಕರ ಕ್ರೈಸ್ತ ಮಂಡಳಿ ಪಾಶ್ಚಾತ್ಯ ಕ್ರೈಸ್ತ ಮಂಡಲಿಯಿಂದ ಬೇರ್ಪಟ್ಟಿತು. ಅದರು ಮುಂದಿನ ಮತುಚರಿತ್ರೆ ಸಂಪೂರ್ಣವಾಗಿ ಕ್ರೈಸ್ತರ ಮತ ಚರಿತ್ರೆಗೆ ಸೇರಿದುದಾಗಿದೆ.(ಜಿ.ಎಚ್.)

ಗ್ರೀಕ್ ನಾಟಕಗಳು (ಪ್ರಾಚೀನ): ಪ್ರಾಚೀನ ಗ್ರೀಕ್ ನಾಟಕಾಲಯದ ಮತ್ತು ನಾಟಕಗಳ ಅಭಿಮಾನದೇವತೆ ಡಯೊನೈಸಸ್. ಕೆಲವು ಮುಖ್ಯ ಗ್ರಾಮಗಳಲ್ಲೂ ಅಥನ್ಸ್ ಮುಂತಾದ ನಗರಗಳಲ್ಲೂ ಆತನ ಹೆಸರಿನಲ್ಲಿ ಚಳಿಗಾಲದಿಂದ ವಸಂತ ಸಮಯದ ತನಕ ಹಲವು ಸಣ್ಣ ದೊಡ್ಡ ಉತ್ಸವಗಳು ಜರುಗುತ್ತಿದ್ದವು. ಆರಾಧನಾ ಪ್ರಕ್ರಿಯೆಯ ಜೊತೆಗೆ ನರ್ತನಸಹಿತ ಗೀತ ಹಾಡುವುದೇ ಉತ್ಸವಕ್ಕೆ ಸಾರ್ವಜನಿಕರ ಕಾಣಿಕೆ.ನೃತ್ಯಮೇಳಕ್ಕೆ