ಪುಟ:Mysore-University-Encyclopaedia-Vol-6-Part-17.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೊರೆಯನ್ನು ಪೂರ್ತಿ ಕೊಡವಿಕೊಳ್ಳಲಿಲ್ಲ. ಪ್ರ ಶ. ಸು ೨ನೆಯ ಶತಮಾನದ ವಿಮರ್ಶಕ ಶ್ರೇಷ್ಠ ಲಾ೦ಜೈನಸ್ ಕೂಡ ಅದನ್ನೆಸಗಿ ಸ್ವತ೦ತ್ರನಾಗಲು ಅಶಕ್ತನಾದ. ಪ್ರ. ಶ ಪೂ ೪ನೆಯ ಶತಮಾನದಲ್ಲಿ ವಿಮರ್ಶೆ ನೆರೆವೇರಿಸಿದ ಕಾರ್ಯದ ವಿವರ ಹೀಗಿದೆ : ಪದ್ಯಶೈಲಿ ಗದ್ಯಶೈಲಿಗಳ ವರ್ಗೀಕರಣ, ೨ ಕವಿಗಳು ಪ್ರಯೋಗಕ್ಕೆ ತ೦ದ ಸಾಹಿತ್ಯಪ್ರಭೇದಗಳ ಅ೦ಗಿಕ ರಚನೆಯ ತಾತ್ತ್ವಿಕ ವ್ಯಾಖ್ಯಾನ, ೩ ಕವಿಗೆ ನಿಸರ್ಗದತ್ತವಾದ ಶಕ್ತಿ ಮತ್ತು ಕವಿಯ ಅಧ್ಯವಸಾಯಗಳು ಪರಸ್ಪರ ಸಂಬಂಧ, ೪ ಸಾಹಿತ್ಯದ ಉದ್ದೇಶದ ಲಕ್ಷಣ ನಿರೂಪಣೆ, ೫ ಚರಿತ್ರೆಯ ಆವಶ್ಯಕತೆ. ಗ್ರೀಕ್ ರಾಷ್ಟ್ರಗಳು ಅಲೆಗ್ಸಾಂಡರನ ಸಾರ್ವಭೌಮತ್ವಕ್ಕೆ ಒಳಗಾದ ಮೇಲೆ ಸಾಹಿತ್ಯ ವಾಸ್ತವ ಬಾಳಿನ ಸೊಗಡನ್ನು ಬಿಟ್ಟುಕೊಟ್ಟು ಗ್ರಾಂಥಿಕವೂ ಕೃತಕವೂ ಆಯಿತು. ಸ್ವಾತಂತ್ರ್ಯ ನಾಶಗೊಂಡಾಗ ಸ್ವಂತಿಕೆಗೆ ಪ್ರಚೋದನೆ ಮತ್ತಾವುದರಿಂದಲೂ ಬಾರದು. ಹಳೆಯ ಗಂಭೀರನಾಟಕಗಳು ಪುನರುತ್ಥಾನ ಇಲ್ಲವೆ ಅನುಕರನಣ; ಯೂರಿಪಿಡೀಸನ ನಾಟಕಗಳಿಂದ ಸ್ಪೂರ್ತಿ ಪಡೆದು ವಿರಚಿಸಿದ ಹೊಸ ವಿನೋದನಾಟಕ; ವಿದ್ಯಾಶಾಲೆಗಳಲ್ಲಿ ಅಭ್ಯಾಸಕ್ಕಾಗಿ ಬರೆದ ಭಾಷಣಗಳು - ಇವೇ ಆ ಕಾಲದ ಸಾಹಿತ್ಯ. ಬುದ್ದಿಚಾತುರ್ಯಕ್ಕೆ ಆಸ್ಪದ ಕೊಡುವ ನಾಟುನುಡಿ ಮಾತ್ರ ಸಮೃದ್ದವಾಗಿ ಬೆಳೆಯಿತು. ಪಂಡಿತಸಂದೋಹ ಬಹುವಾಗಿಯೇ ಇತ್ತು. ಅವರ ಕಾಲವಿನಿಯೋಗಕ್ಕೆ ತಕ್ಕ ಉದ್ಯೋಗವೂ ಸಿದ್ದಿವಾಗಿತ್ತು. ಅಲೆಗ್ಸಾಂಡ್ರಿಯದ ಬೃಹತ್ ಗ್ರಂಥಾಲಯದ ವಿದ್ವಾಂಸರೂ ಇತರರೂ ದಿಟವಾಗಿ ಲೋಕೋಪಯುಕ್ತವಾದ ಜವಾಬ್ದರಿ ಕೆಲಸವನ್ನೇ ಮಾಡಿ ಕೃತಕೃತ್ಯರಾದರು. ಹಿಂದಣ ಗ್ರಂಥಗಳ ಪಾಠನಿರ್ಣಯ, ಟೀಕು ಟಿಪ್ಪಣಿ ವ್ಯಾಖ್ಯಾನಗಳ ರಚನೆ, ವ್ಯಾಕರಣ ಅಲಂಕಾರ ಶಾಸ್ತ್ರಗಳ ಸುವ್ಯವಸ್ಥೆ. ನಾನಾ ವಿಧದ ವರ್ಗೀಕರಣ-ಎಲ್ಲವನ್ನೂ ಅತ್ಯಂತ ಶ್ರದ್ದೆಯಿಂದ ಅವರು ಮಾಡಿದರು. ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೆ ಬಿಡದೆ ಅಂಟಿಕೊಂಡಿರುವ ವಿವಾದಗ್ರಸ್ತ ಪ್ರಶ್ನೆಗಳ ಕೂಲಂಕಷ ಚರ್ಚೆಯೂ ಅವರಿಂದ ಆಯಿತು. ಕಾವ್ಯದಲ್ಲಿ ಮುಖ್ಯಸ್ಥಾನ ವಿಷಯಕ್ಕೋ ವಿಷಯ ನಿರೂಪಣ ರೀತಿಗೋ? ಶಿಷ್ಟ ಶೈಲಿಗೋ ಇರುವ ವ್ಯತ್ಯಾಸವೇನು? ಎರಡಕ್ಕೂ ನಡುವಣ ಮಧ್ಯಶೈಲಿ ಎಂಬುದಿಲ್ಲವೇ? ಕಾವ್ಯ ಬೋಧಪ್ರದವಾಗಿರಬೇಕೊ ಆಹ್ಲಾದಕರವಾಗಿರಬೇಕೊ? ಯಾವುದು ಪ್ರಮಾಣಸಾಹಿತ್ಯ? ಅದರ ಅಧಿಕಾರವಿಧಿಗಳಿಗೆ ಮಣಿಯುವುದು ಒಳ್ಳೆಯದೊ ಮಣಿಯದೆ ಕವಿ ತನ್ನತನವನ್ನು ಪ್ರಕಟಿಸುವುದು ಒಳ್ಳೆಯದೊ? ಕಾವ್ಯ ಹೆಚ್ಚೋ ತತ್ತ್ವಶಾಸ್ತ್ರ ಹೆಚ್ಚೋ? ಪದ್ಯದ ಛಂದಸ್ಸಿಗೂ ಗದ್ಯದ ಲಯಕ್ಕೂ ಸಾಮ್ಯವುಂಟೆ? ಇಂಥ ಸಮಸೈಗಳನ್ನು ವಿದ್ವಜ್ಜನರು ಬರೀ ವಿನೋದಕ್ಕಾಗಿ ಅಲ್ಲ. ಶಾಸ್ತ್ರೀಯ ಪರಾಮರ್ಶೆಗಾಗಿ ಎತ್ತಿಕೊಂಡರು. ವಿಮರ್ಶಾ ಪ್ರಬಂಧಗಳು ಪುಷ್ಕಳವಾಗಿ ಹುಟ್ಟಿದುವು. ಆದರೆ ಎಲ್ಲೋ ಕೆಲವು ಚೂರುಪಾರನ್ನು ಬಿಟ್ಟರೆ ಮಿಕ್ಕುದೇನೂ ಉಪಲಬ್ಧವಾಗಿಲ್ಲದಿರುವುದು ವಿಷಾದಕರ. ವಾಗ್ಮಿಕಲೆ ಅವರ ಪ್ರಯತ್ನದ ಫಲವಾಗಿ ಒಂದು ಪರಿಷ್ಕಾರವಾದ ಶಾಸ್ತ್ರವಾಯಿತು. ಪಾರಿಭಾಷಿಕ ಪದಗಳ ಸಂಖ್ಯೆ ಹುಲುಸಾಗಿ ಬೆಳೆಯಿತು. ಪ್ರಾಸದ ನಾನಾ ಬಗೆಗೂ ಪುನರುಕ್ತಿ ಅಲಂಕಾರದ ನಾನಾವಿಧಕ್ಕೂ ಬೇರೆಬೇರೆ ಹೆಸರು ಬಂತು. ಹಾಗೆಯೇ ಸಾಹಿತ್ಯಕ್ಕೂ ಅದರ ವಿಮರ್ಶೆಗೂ ಸಂಬಂಧಪಡದೆ ಬರೀ ಕುತೂಹಲ ಕೆರಳಿಸುವ ವಿಚತ್ರಿ ವಿಚಾರಗಳ ಚರ್ಚೆ ಸತತವಾಗಿ ನಡೆಯಿತು. ಪೆನಿಲಪಿ ಸಹಾಯ ಕೋರಿ ತನ್ನ ತಂದೆಗೆ ಏತಕ್ಕೆ ಹೇಳಿಕಳಿಸಲಿಲ್ಲ, ಮೆನಸನ ಬಳಿಗೆ ಏತಕ್ಕೆ ಮಗನನ್ನು ಕಳಿಸಿದಳು? ಮನುಷ್ಯರು ಊಟಕ್ಕೆ ಮುನ್ನ ಕೈತೊಳೆದುಕೊಳ್ಳುತ್ತಾರೆ, ದೇವತೆಗಳು ಏತಕ್ಕೆ ಹಾಗೆ ಮಾಡುವುದಿಲ್ಲ? ಇಂಥ ಕೆಲವು ಅಸಂಗತ ಟೀಕೆಗಳನ್ನೆತ್ತಿಕೊಂಡು ಹೋಮರ್ ಕವಿಯನ್ನು ವಿಮರ್ಶೆಸಿದೆವೆಂದು ಕೊಂಡರು. ಅಲೆಗ್ಸಾಂಡರನ ಅವಧಿ ಮೂಗಿದ ತರುವಾಯ ಗ್ರೀಕ್ ರಾಷ್ಟ್ರಗಳು ರೋಮನ್ ಚಕ್ರಾಧಿಪತ್ಯಕ್ಕೆ ಅಧಿನವಾದುವು. ರೋಮನರಿಗಾದರೊ ಗ್ರೀಕ್ ಭಾಷೆ ಸಾಹಿತ್ಯ ಸಂಸ್ಕೃತಿಗಳನ್ನು ಕಂಡು ಆಶ್ಚರ್ಯಗೂಡಿದ ಪ್ರೀತಿ. ಆದ್ದರಿಂದ ಅವೆಲ್ಲವನ್ನೂ ಉಲ್ಲಾಸದಿಂದ ಅವರು ತಮ್ಮದನ್ನಾಗಿಸಿಕೊಂಡರು. ಕೊನೆಗೆ ಗ್ರೀಕರ ದೇವವರ್ಗವೇ ಹೆಸರು ಬದಲಾಯಿಸಿಕೊಂಡು ರೋಮನರದಾಯಿತು. ಹಲವು ಗ್ರೀಕ್ ವಿದ್ವಾಂಸರು ರೊಮನರಿಂದ ಮನ್ನಣೆಯನ್ನೂ ಸಂಭಾವನೆಯನ್ನೂ ಪಡೆದುಕೊಂಡರು. ಸೃಜನಕಾವ್ಯ ಕ್ಷೇತ್ರದಲ್ಲಿ ಒಂದು ಬಗೆಯ ಗದ್ಯಕಥೆ, ಕಲ್ಪನೆ ವಾಸ್ತವತೆ ಎರಡೂ ಸೇರಿಕೊಂಡ ಜೇವನಚರಿತ್ರೆ-ಎರಡೇ ನೂತನವಾಗಿ ಎದ್ದು ಬಂದ ಸಾಹಿತ್ಯಪ್ರಕಾರಗಳು.ಆ ಕಾಲದ ಗ್ರೀಕರಿಗೆ ಪ್ರ.ಶ.ಪೂ. ೮ರಿಂದ ೫ನೇಯ ಶತಮಾನದ ವರೆಗಿನ ಗ್ರೀಕ್ ಕಾವ್ಯ ಪ್ರಾಚೀನವಾಗಿಯೇ ತೋರಿಬಂದು, ಅದರ ವಿಚಾರದಲ್ಲಿ ಅವರ ಭಕ್ತಿ ಶ್ರದ್ಧೆಯನ್ನು ಕುದುರಿಸಿತು. ಅದನ್ನು ಪಠಿಸಿ ಆದರಿಂದ ಸ್ಪೂರ್ತಿ ಪಡೆದು ಅದರ ಮಾದರಿಯನ್ನು ಅನುಕರಿಸುವುದೇ ಅರ್ವಾಚೀನ ಕವಿಗೆ ಶ್ರೇಯಸ್ಸಿನ ಮಾರ್ಗವೆಂದು ಅವರು ಮನಗಂಡರು.ಅಲ್ಲಿ ಇಲ್ಲಿ ದೂರ ದೂರ ಅವರು ಇದ್ದುದರಿಂದ ಯಾವೊಂದು ಸಾಹಿತ್ಯಕೂಟ ಏರ್ಪಡಿಸಿಕೊಳ್ಳುವುದಕ್ಕೂ ಅವರಿಗೆ ಸಾಧ್ಯವಾಗಲಿಲ್ಲ. ಆದರೂ ಉಚ್ಚಮಟ್ಟದ ವಿಮರ್ಶೆಯೂ ಸಾಹಿತ್ಯ ವ್ಯಾಖ್ಯಾನವೂ ಅವರಿಂದ ಆಯಿತು: ೧ ಪ್ರಾಚೀನ ಸಾಹಿತ್ಯದ ಸಕ್ರಮ ವಿಂಗಡಣೆ, ಅದರ ಅಧ್ಯಯನಕ್ಕೆ ಬೇಕಾದ ನಿರ್ದುಷ್ಟ ರೀತಿನೀತಿಯ ರೂಪುರೇಖೆ; ೨ ಭಾವಗೀತೆ ಪ್ರಗಾಥಗಳಿಗೆ ಯೋಗ್ಯ ಮರ್ಯಾದೆ ( ಅರ್ಕಿಲೋಕಸ್, ಸ್ಯಾಫೊ, ಅಲ್ಕಿಯಸ್ ಮೊದಲಾದ ದೊಡ್ಡ ಕವಿಗಳನ್ನು ಪ್ಲೇಟೊ, ಅರಿಸ್ಟಾಟಲ್ ಕೂಡ ನಿರ್ಲಕ್ಷಿಸಿದ್ದರು); ೩ ಪದ್ಯವಾಗಲಿ ಭಾವಾತ್ಮಕವಾಗಿದ್ದರೇ ಅದು ಕಾವ್ಯ-ಎಂಬ ನಿಜಾಂಶದ ಗ್ರಹಿಕೆ; ೪ ಆಟಿಕೆ-ಏಷ್ಯನ್ ವಿವಾದದ ಸಮಜಾಯಿಷಿ; ಒಂದರ ಸಣಕಲು ತನಕ್ಕೂ ಇನ್ನೊಂದರ ಬೊಜ್ಜಿಗೂ ಮಧ್ಯವಾದ ಸೂಕ್ತ ಮಾಂಸಲಶೈಲಿ ಉಂಟೆಂದು ಘೋಷಣೆ; ೫ ಕಾವ್ಯಕ್ಕೆ ಸತ್ತ್ವವನ್ನೂ ಸೌಂದರ್ಯವನ್ನು ಎರೆಯುವ ಯಾವುದೊ ಕವಿಶಕ್ತಿ ಆಯ್ದ ಕವಿಗಳಿಗೆ ದತ್ತವಾಗಿದೆ, ಅದರ ಮೂಲವನ್ನು ಕಾರ್ಯವಿಧಾವನ್ನೂ ಬುದ್ಧಿಬಲದಿಂದ ಕಂಡುಹಿಡಿಯಲಾಗುವುದಿಲ್ಲ ( ಇದೊಂದು ಅಮೂಲ್ಯ ಅಭಿಪ್ರಾಯ). ಆ ಕಾಲದ ಕೆಲವು ವಿಮರ್ಶಕರ ಒಪ್ಪತಕ್ಕೆ ಸೂಕ್ತಿಗಳನ್ನು ಇಲ್ಲಿ ಉದಾಹರಿಸಿದೆ: ಹೆಲಿಕಾರ್ನಸ್ಸಿನ ಡಯೊನೀಸಸ್; 'ಶುದ್ಧವೂ ಸ್ವಾಭಾವಿಕವೂ ಆದ ಶಬ್ದಗಳನ್ನು ಆರಿಸಿಕೊಂಡು ಅವನ್ನು ಘನತೆ, ಇಂಪು ಎರಡೂ ಕೂಡಿಬರುವಂತೆ ಪೋಣಿಸತಕ್ಕದ್ದು. ಒಟ್ಟಿನಲ್ಲಿ ರಮ್ಯತೆ ಹುಟ್ಟುವುದು ಎಲ್ಲ ಬಿಡಿ ಅಂಶಗಳ ಬಿಡಿ ರಮ್ಯತೆಯಿಂದ. ಲಯಬದ್ಧ ವಾಕ್ಯಕ್ಕೆ ವಿವಿಧ ತೆರನುಂಟು; ಎಲ್ಲವನ್ನೂ ಬಳಸಿಕೊಂಡು ಸಮಷ್ಟಿಲಾವಣ್ಯವನ್ನು ಉತ್ಪತ್ತಿ ಮಾಡಬೇಕು. ವೈವಿಧ್ಯವನ್ನೇ ಕಾಣದ ಬರವಣಿಗೆ ನೀರಸ. ಫಿಲೊಸ್ಟ್ರಾಟಸ್; 'ಅನುಕರಣೆಗಿಂತ ವಿಭಾವಣೆ ಹೆಚ್ಚು ಜಾಣೆ; ಕಂಡದ್ದನ್ನು ಮಾತ್ರ ಅವಳು ಬಣ್ನಿಸಲ್ಲಳು. ಇವಳಾದರೊ ಕಣ್ಣಿಗೆ ಕಾಣದ್ದನ್ನು ಕಂಡದ್ದರ ಹೋಲಿಕೆಯ ಮೇಲೆ, ಬಣ್ಣಿಸಬಲ್ಲಳು'. ಲ್ಯೂಸಿಯನ್; 'ನೀನು ಸಾಹಿತಿ ಎನ್ನಿಸಿಕೊಳ್ಳಬೇಕೆ? ಆಧುನಿಕ ಕುತಾರ್ಕಿಕರ ಕೆಟ್ಟ ಯುಕ್ತಿಗಳನ್ನು ಬಳಸದಿರು; ಅವರ ಕೃತಕ ನಾಜೂಕಿಗೆ ಒಲಿಯಬೇಡ. ಅಂದಚಂದವನ್ನೂ ಸುಸ್ಪಷ್ಟತೆಯನ್ನೂ ಆರಾಧಿಸು. ಅರ್ಥವನ್ನು ಮೊದಲು ನೆನೆದು ಆಮೇಲೆ ಉಚಿತ ಪದಗಳನ್ನು ಕಂಡುಹಿಡಿ; ವಿಜಾತೀಯ ಪದದಿಂದ ಮೋಹಿತನಾಗಿ ಅದಕ್ಕೆ ತಕ್ಕ ಅರ್ಥವನ್ನು ಹೊಂದಿಸಹೋಗಬೇಡ'. ಪ್ರ. ಶ ೩ನೆಯ ಶತಮಾನದ ಲಾಂಜೈನಸ್ ನಿಜವಾಗಿ ಮೇಲ್ಮಟ್ಟದ ವಿಮರ್ಶಕ. ಅರಿಸ್ಟಾಟಲ್ ಒಬ್ಬನೇ ಅವನನ್ನು ಮೀರಿಸಿದಾತ. ಅವನ ಕೃತಿ ಚಿಕ್ಕದು; ಅದನ್ನು 'ಮಹೋನ್ನತಿಯನ್ನು ಕುರಿತು' ಎಂದು ಕರೆಯುವುದು ರೂಢಿ. ಸರಿಸುಮಾರಾಗಿ ಅದರ ಪ್ರತಿಯೊಂದು ವಾಕ್ಯವೂ ಎಲ್ಲ ಕಾಲದ ಶ್ರೇಷ್ಠ ಸಾಹಿತ್ಯಕ್ಕೂ ಸರಿಯಾಗಿ ಅನ್ವಯಿಸಬಲ್ಲ ಅರ್ಥಪುಷ್ಪವಾದ ಹೇಳಿಕೆ. ಸಾರಸ್ವತ ವಿಷಯಗಳ ಆಳಕ್ಕೆ ಇಳಿದು ಶಾಶ್ವತ ತತ್ವಗಳನ್ನು ಕಂಡುಕೊಳ್ಳುವುದರಲ್ಲಿ ಅವನು ನಿಸ್ಸೀಮ. ಇವು ಅವನ ಕೆಲವು ಆಣೆಮುತ್ತುಗಳು: ಪದಗುಚ್ಛಗಳ ಸರ್ವೋತ್ಕೃಷ್ಟತೆ ಮತ್ತು ಪರಿಪೂರ್ಣ ಹೊಂದಾಣಿಕೆಯೇ ಮಹೋನ್ನತಿ. ಆ ಗುಟ್ಟನ್ನು ಉದ್ಭ, ಕವಿಗಳು ಅರಿತಿದ್ದಾರೆ.ಯಾವುದು ಅಸಾಮಾನ್ಯವೊ ಅದು ಶ್ರೋತೃಗಳನ್ನು ಬರಿ ಮನವೊಪ್ಪಿಸಿ ಸುಮ್ಮನಾಗದು. ಆನಂದ ಪರವಶತೆಗೆ ಅವರನ್ನು ಒಯ್ಯುತ್ತದೆ. ಕಾವ್ಯರಚನೆಯಲ್ಲಿ ಪ್ರಕೃತಿಯ ಭಾಗವೆಷ್ಟು, ನಿಯಮಾವಳಿಯ ಭಾಗವೆಷ್ಟು ಎಂಬ ಪ್ರಶ್ನೆಗಳಿಗೆ ಅವನ ಉತ್ತರ-ಪ್ರಕೃತಿಯಿಂದ ದ್ರವ್ಯಗಳ ಸರಬರಾಜು, ನಿಯಮಾವಳಿಯಿಂದ ಅವುಗಳು ಒಪ್ಪಓರಣ. ಭಾವೋದ್ರೇಕದ ವಾಗ್ಮಿತೆಯನ್ನು ಮತ್ತಾವುದೂ ಸರಿಗಟ್ಟದು. ಉಚಿತ ಜಾಗದಲ್ಲಿ ಅದು ಬಂದರೆ ಅದರ ಉನ್ಮಾದಾವೇಶ ಉಕ್ತಿಯಲ್ಲಿ ತುಂಬಿಕೊಂಡು ದೈವಪ್ರೇರಣೆಯ ಕಣೆವಚನದಂತಾಗುತ್ತದೆ. ಒಡಿಸ್ಸಿ ಕಾವ್ಯದಲ್ಲಿ ಹೋಮರ್ ಸಂಜೆಯ ಸೂರ್ಯನಾಗಿದ್ದಾನೆ; ಮಹತ್ವವುಂಟು, ಆದರೆ ಅದು ಹೋಮರನ ಮುಪ್ಪು.ಅಲಂಕಾರವೆಂದು ತೋರದಿರುವುದೇ ಉತ್ತಮ ಕಾವ್ಯಲಂಕಾರ. ಸುಂದರ ಶಬ್ದಗಳು ಮನಸ್ಸಿನ ನೈಜ ವಿಶಿಷ್ಟ ಪ್ರಭೆ. ಯಾರ ಮನೋಧರ್ಮ ಅತಿ ಶ್ರೇಷ್ಠವೊ ಅವರಲ್ಲಿ ದೋಷರಾಹಿತ್ಯ ಕಡಿಮೆ. ಮಹೋನ್ನತಿ ಅದರ ಲೇಖಕರನ್ನು ಭಗವಂತನ ಸರ್ವಶಕ್ತಚಿತ್ತದ ಹತ್ತಿರಕ್ಕೆ ಕೊಂಡೊಯ್ಯುತ್ತದೆ. ಸಾಹಿತ್ಯದ ಮೇಲೆ ಸರಿಯಾದ ತೀರ್ಪನ್ನೀಯುವುದು ಬಲು ಪ್ರಯತ್ನದ ಕೊನೆಯಲ್ಲಿ ಎದ್ದು ಬರುವ ಬೆಳೆ. ಬೇಕಾದಷ್ಟು ತಕ್ಕ ನಿದರ್ಶನವನ್ನು ಕೊಡದೆ ಲಾಂಜೈನಸ್ ಒಂದು ಕಡೆಯೂ ಮಾತಾಡಿಲ್ಲ; ಅದೂ ಅವನ ಒಂದು ಹಿರಿಮೆ.(ಎಸ್.ವಿ.ಆರ್) ಗ್ರೀಕ್ ಸಾಹಿತ್ಯ : ಗ್ರೀಕ್ ಸಾಹಿತ್ಯ ಇಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯಗಳಿಂದಲೇ ಪ್ರಾರಂಭವಾಯಿತೆನ್ನಬಹುದಾದರೂ ಮಹಾಕಾವ್ಯಗಳಿಗಿಂತ ಪೂರ್ವದಲ್ಲಿ ಕಾವ್ಯದ ಒಂದು ಜೀವಂತ ಮೌಖಿಕ ( ಓರಲ್ ) ಪರಂಪರೆ ಪುರಾತನ ಗ್ರೀಸಿನಲ್ಲಿತ್ತೆಂಬುದು ಖಚಿತ. ಆ ಪರಂಪರೆ ಎಷ್ಟು ಪುರಾತನವೆಂದು ನಿಷ್ಕೃಷ್ಟವಾಗಿ ಹೇಳಲಾಗುವುದಿಲ್ಲ. ಆದರೆ ಪ್ರ.ಶ.ಪೂ. ೧೬ನೆಯ ಶತಮಾನದ ಜನಜೀವನಕ್ಕೆ ಸಂಬಂಧಿಸಿದ ವಿವರಗಳೂ ಮಹಾಕಾವ್ಯಗಳಲ್ಲಿ ಬಂದಿರುವುದರಿಂದ ಮೌಖಿಕಕಾವ್ಯದ ಪರಂಪರೆ ಆ ಕಾಲಕ್ಕೂ ಹಿಂದಿನದೆನ್ನಬಹುದು. ರಾಜಾಧಿರಾಜರು ನಡೆಸಿದ ಯುದ್ಧಗಳ ವರ್ಣನೆಗಳು, ಮದುವೆಯ ಹಾಡುಗಳು, ಸುಗ್ಗಿಯ ಪದಗಳು, ಪ್ರಾರ್ಥನಾಗೀತಗಳು ಪುರಾತನ ಗ್ರೀಕ್ ಕಾವ್ಯರಾಶಿಯಲ್ಲಿ ಸೇರಿವೆ. ಅವು ಮಹಾಕಾವ್ಯದ ಸೃಷ್ಟಿಗೆ ಸಾಮಗ್ರಿ ಒದಗಿರಿಸಬೇಕು. ಈಚಿನ ವಿದ್ವಾಂಸರ ಅಭಿಪ್ರಾಯದಂತೆ