ಪುಟ:Mysore-University-Encyclopaedia-Vol-6-Part-17.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರೀಕ್ ಸಾಹಿತ್ಯ

ವಿನೋದ ನಾಟಕಕಾರರು ಐದು ವೈನೋದಿಕಗಳನ್ನು ಬರೆಯುತ್ತಿದ್ದರಂತೆ. ಒಟ್ಟಿನಲ್ಲಿ ಗಂಭೀರ ನಾಟಕಕಾರರು ಗ್ರೀಕ್ ಸಾಹಿತ್ಯಕ್ಕೆ ಮಹೌನ್ನತ್ಯವನ್ನು ತಂದುಕೊಟ್ಟರು. ಕೇವಲ ಧಾರ್ಮಿಕ ಜಿಜ್ಞಾಸೆ, ಮತಪ್ರಕ್ರಿಯೆಗಳನ್ನು ವಸ್ತುವಾಗುಳ್ಳ ಅನಾದಿಯುಗದ ಗೀತನೃತ್ಯವನ್ನು ಗ್ರೀಕ್ ನಾಟಕಕಾರರು ಸಂಕೀರ್ಣಾನುಭವವನ್ನು ಒಳಗೊಂಡ ಸಮಸ್ಯಾತ್ಮಕವಾದ, ಮಾನವೀಯವಾದ ದುರಂತ ನಾಟಕವನ್ನಾಗಿ ಮಾರ್ಪಡಿಸಿದುದು ಅವರ ಸಾಧನೆ. ಈಸ್ಕಿಲಸ್ ತನ್ನ ನಾಟಕಚಕ್ರದಲ್ಲಿ ಪಾತ್ರಗಳು ಮತ್ತು ಕಥಾವಸ್ತುವಿನ ವಿಭಿನ್ನ ಮುಖಗಳು ಒಂದು ನಾಟಕದಿಂದ ಇನ್ನೊಂದಕ್ಕೆ ಹೇಗೆ ಬೆಳೆಯುತ್ತ ಹೋಗುತ್ತವೆಂದು ಚಿತ್ರಿಸುತ್ತಾನೆ. ಅವನು ಕಣ್ಣು ಕೋರೈಸುವಂಥ ದೃಷ್ಯಾವಳಿಗಳನ್ನೂ ಭವ್ಯವಾದ ಸಂಗೀತವನ್ನೂ ಉನ್ನತವಾದ ಕಾವ್ಯ ಶೈಲಿಯನ್ನೂ ಬೇಕಾದಂತೆ ಬಳಸಿಕೊಂಡ. ಉದಾತ್ತವೂ ಘನಗಂಭೀರವೂ ಆದ ಮನುಷ್ಯನ ಬದುಕು ಧರ್ಮತತ್ತ್ವಗಳ ನೀತಿನೇತಿಗಳ ನೆಲೆಗಟ್ಟಿನ ಮೇಲೆ ರಚಿತವಾಗಬೇಕೆನ್ನುವ ವಿಚಾರ ಪರಂಪರೆ ಒರೆಸ್ಟಿಯಾ ನಾಟಕ ಚಕ್ರದಲ್ಲಿ ರೂಪಿತವಾಗಿದೆ. ಈಸ್ಕಿಲಸನ ನಾಟಕದ ಮೇಳ ಪಾತ್ರಗಳು ಯಾರೇ ಆಗಲಿ, ಯಾವುದೇ ಸಾಮಾಜಿಕ ವರ್ಗವನ್ನು ಪ್ರತಿನಿಧಿಸಲಿ, ಅವನ ಚಿಂತನೆ ಒಂದೇ ಗುರಿಯತ್ತ ಸಾಗುವಂಥದು. ಪ್ರತಿಮಾಪೂರ್ಣ ಮೇಲಗೀತಗಳ ಪ್ರಗಾಥಗಳ ಮೂಲಕ ಇಡೀ ನಾಟಕ ಜೀವಾಳವನ್ನು ಅರ್ಥವಿಸುತ್ತ ನಾಟಕಕಾರ ತನ್ನ ಜೀವನದರ್ಶನಕ್ಕೆ ಆಕಾರ ನೀಡುತ್ತಾನೆ. ಸಾಫೊಕ್ಲೀಸ್ ತನ್ನ ನಾಟಕಗಳಲ್ಲಿ ಮೇಳ ಪ್ರಗಾಥಗಳ ವ್ಯಾಪ್ತಿಯನ್ನು ಕಡಿಮೆ ಮಾಡಿ ಸಂಭಾಷಣೆಯನ್ನು ಹೆಚ್ಚು ಜೀವಂತಗೊಳಿಸುತ್ತಾನೆ. ಆದರೆ ನಡುವೆ ಅಲ್ಲಲ್ಲಿ ಸಣ್ಣ ಸಣ್ಣ ಪ್ರಗಾಥಗಳನ್ನು ಹೆಣೆದು ಅವುಗಳಲ್ಲಿ ಮನುಷ್ಯ ಹಾಗೂ ಅವನ ಜೀವನದ ನೀತಿ ನಿಯಮಗಳ ನಡುವಣ ಸಂಘರ್ಷ ಕುರಿತು ವ್ಯಾಖ್ಯಾನ ಮಾಡುತ್ತಾನೆ. ಈಸ್ಕಿಲಸ್, ಸಾಫೊಕೀಸರ ತಾತ್ತ್ವಿಕ ವಿಚಾರಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ದುರಂತಮಯವಾದ ಮನುಷ್ಯನ ಬಾಳು ಅಧೋಗತಿಗೆ ಇಳಿಯಲು ದೈವೀಶಕ್ತಿಗಳು ಎಷ್ಟು ಕಾರಣವೋಅವನ ಕ್ಷುದ್ರ ಮನೋವೈಕಲ್ಯ, ದೌರ್ಬಲ್ಯಗಳು ಅಷ್ಟೇ ಕಾರಣ ಎನ್ನುವ ಮಾತಿನ ಮೇಲೆ ಸಾಫೊಕ್ಲೀಸ್ ಹೆಚ್ಚು ಒತ್ತು ಹಾಕುತ್ತಾನೆ. ಅವನು ಮಾನವೀಯವಾದ ಒಂದೋ ಎರಡೋ ಮುಖ್ಯ ಪಾತ್ರಗಳನ್ನು ಸೃಷ್ಟಿಸಿ ಅವುಗಳ ಮೋಲಕ ಕಥೆಯ ಹಲವಾರು ಮುಖಗಳು ಹೇಗೆ ವಿಕಾಸವಾಗುತ್ತಾನೆಂದು ತೋರಿಸುತ್ತಾನೆ. ಗಂಭೀರ ನಾಟಕಕಾರರಲ್ಲಿ ಮೂರನೆಯವನಾದ ಯೂರಿಪಿಡೀಸ್ ಅನನ್ಯ ಪ್ರತಿಭಾವಂತ. ಅವನದು ಅತ್ಯಂತ ಆಧುನಿಕ ಪ್ರಜ್ಞೆ ಎನ್ನುವುದುಂಟು. ಆತ ಅತ್ಯಂತ ಸಮಸ್ಯಾತ್ಮಕ ಪಾತ್ರಗಳನ್ನು ಸೃಷ್ಟಿಸಿದ್ದಾನೆ. ಅವನ ನಾಟಕದಲ್ಲಿ ಮೇಳ, ನಾಟಕದ ವಸ್ತುವಿನಿಂದ ಪ್ರತ್ಯೇಕವಾಗಿ ಉಳಿದು ತೀರ ಗೌಣವಾದ ಅಂಶವಾಗುತ್ತದೆ. ಪ್ರಕೃತಿಯ ಚೈತನ್ಯ ಶಕ್ತಿಗಳನ್ನು ಪ್ರತೀಕಿಸುತ್ತವೆ ಎನ್ನುವ ಅರ್ಥದಲ್ಲಿ ಮಾತ್ರ ಅವನ ದೇವತೆಗಳು ವಾಸ್ತವಿಕ ಪಾತ್ರಗಳು. ಕಟ್ಟಕಡೆಯ ಅವನ ನಾಟಕಗಳಲ್ಲಿ ರೋಮಾಂಚ ಘಟನೆಗಳೂ ವೀರಸಾಹಸಗಳು ತುಂಬಿವೆ. ಇವು ಅವನ ಕಾಲಾನಂತರದ ಗದ್ಯ ನಾಟಕಗಳು ಮತ್ತು ವಿನೋದ ನಾಟಕಗಳ ಮೇಲೆ ತುಂಬ ಪ್ರಭಾವ ಬೀರಿದವನೆನ್ನಬಹುದು.

ಪ್ರಶ.ಪೂ. ೫ನೆಯ ಶತಮಾನದ ಹರ್ಷ ನಾಟಕದಲ್ಲಿ ಒರಟಾದ ಅಶ್ಲೀಲ ಹಾಸ್ಯ, ಅತ್ಯಂತ ವಿಭಾವನಾತ್ಮಕವಾದ ಕಾವ್ಯಶೈಲಿ, ರಾಜಕೀಯ ವಿಡಂಬನೆ, ಪೌರಾಣಿಕ ವ್ಯಕ್ತಿಗಳನ್ನು ಕುರಿತ ಲೇವಡಿ- ಎಲ್ಲವೂ ಬೆರೆತು ಹೋಗಿವೆ. ಅರಿಸ್ಟಾಫನೀಸನ ಕೆಲವು ಪೂರ್ಣ ಕೃತಿಗಳು ಮಾತ್ರ ಈಗ ಸಿಕ್ಕಿರುವುದರಿಂದ ಪುರಾತನ ಗ್ರೀಕ್ ವಿನೋದ ನಾಟಕದ ಕಲ್ಪನೆಯನ್ನು ನಾವು ಅವನ ಕೃತಿಗಳಿಂದ ಮಾತ್ರ ಗ್ರಹಿಸಬೇಕಾಗಿದೆ. ಪುರಾತನ ಸ್ಯಾಟಿರ್ ನಾಟಕದ ಅಂಶಗಳೂ ಈ ನಾಟಕಗಳಲ್ಲಿ ಸೇರಿಕೊಂಡು ಇವು ಒಂದೇ ರೀತಿಯ ಕಲ್ಪನೆ ಹಾಗೂ ರಚನಾ ವಿಧಾನಕ್ಕೆ ಅನುಗುಣವಾಗಿ ಸೃಷ್ಟಿಯಾಗಿವೆ. ಒಂದು ಹುಚ್ಚು ಆದರ್ಶವನ್ನು ಕಾರ್ಯೋನ್ಮುಖಗೊಳಿಸಲು ಹೊರಟಾಗ ಅದು ವಾಸ್ತವಿಕ ಬದುಕಿನ ಹಿನ್ನಲೆಯಲ್ಲಿ ಎಷ್ಟೊಂದು ಹಾಸ್ಯಾಸ್ಪದವಾಗುತ್ತದೆಂದು ತೋರಿಸುವುದು ಅರಿಸ್ಟಾಫನೀಸ್ ರೀತಿ. ಅವನ ಮೇಳಗೀತಗಳು ಅತ್ಯಂತ ಕಾವ್ಯಾತ್ಮಕತೆಯಿಂದ ತುಂಬಿ ನಾಟಕಕ್ಕೆ ಬೇಕಾದ ಪರಿಸರವನ್ನು ಸೃಜಿಸಲು ಪ್ರೇರಕವಾಗುತ್ತವೆ.

ಗದ್ಯ: ತಮ್ಮ ಕಾಲದ ಲೌಕಿಕ ಹಾಗೂ ಧಾರ್ಮಿಕ ಚಿಂತನೆಗಳನ್ನು ಕಾವ್ಯಾತ್ಮಕವಾಗಿ ಅಭಿವ್ಯಕ್ತಿಗೊಳಿಸಿದ ಮಹಾ ನಾಟಕಕಾರ-ಕವಿಗಳ ಅನಂತರ ಗ್ರೀಕ್ ಸಾಹಿತ್ಯದ ಗದ್ಯಯುಗ ಪ್ರಾರಂಭವಾಯಿತು. ಪ್ರಶ.ಪೂ. ೫ನೆಯ ಶತಮಾನದವರೆಗೆ ಸೃಷ್ಟ್ಯಾತ್ಮಕ ಚಿಂತನೆಗಳ ಅಭಿವ್ಯಕ್ತಿಗಾಗಿ ಕಾವ್ಯ ಹಾಗೂ ಗದ್ಯ ಮಾಧ್ಯಮಗಳೆರಡನ್ನೂ ಪ್ರಯೋಗಿಸುತ್ತಿದ್ದರು. ಸೋಲನ್, ಕ್ಸಿನೋಫೇನಸ್, ಫಾರ್ಮೆನೈಡಿಸ್, ಎಂಪಿಡಾಕ್ಲಿಸ್-ಮುಂತಾದವರೆಲ್ಲರೂ ಕಾವ್ಯ ಮಾಧ್ಯಮವನ್ನು ಬಳಸಿದರು. ಅವರು ಪ್ರಥಮತಃ ಪ್ರಚಾರಕರಾಗಿದ್ದುದರಿಂದ ತಮ್ಮ ಭಾವನೆಗಳು, ವಿಚಾರಗಳು ಹೆಚ್ಚು ಸ್ಮರಣೀಯವಾಗುವಂತೆ ಕಾವ್ಯ ಶೈಲಿಯನ್ನು ಉಪಯೋಗಿಸಿದರು. ಆದರೆ ಕಾಲಕ್ರಮೇಣ ಗದ್ಯದ ಬಳಕೆ ಅನಿವಾರ್ಯವಾಯಿತು. ಅಕ್ಷರಸ್ಥರಾದ, ಹೆಚ್ಚು ತಿಳಿವಳಿಕೆ ಇರುವ ಜನರಿಗಾಗಿ ಬರೆಯಬೇಕಾಗಿ ಬಂದಾಗ ಅಭಿವ್ಯಕ್ತಿಯ ಮಾಧ್ಯಮ ಹೆಚ್ಚು ಪರಿಷ್ಕಾರಗೊಂಡಿತು-ಜಾನಪದ ಕಥೆಗಳು ಕಾವ್ಯಮಯ ವಾದ ಗಂಭೀರ, ಉನ್ನತ ಶೈಲಿಯನ್ನು ಬಿಟ್ಟು ಗದ್ಯದತ್ತ ಹೊರಳಿದುವು. ಕಾನೂನುಸೂತ್ರಗಳು, ಉದಂತಗಳು, ತಾತ್ತ್ವಿಕ ಚಿಂತನೆಗಳು-ಇವನ್ನು ಸಾಧ್ಯವಾದಷ್ಟು ಸಹಜವಾಗಿ, ಆಡುಮಾತಿನ ಗತಿಲಯಗಳಿಗೆ ಹತ್ತಿರವಾಗುವಂತೆ ಹಿಡಿದಿಡಲು ಗದ್ಯವೇ ಹೆಚ್ಚು ಉಚಿತವೆನಿಸಿರಬೇಕು. ಕಾವ್ಯದ ಛಂದೋನಿಯಮಗಳಿಗೆ ಅಳವಡಿಸಲಾರದ, ಸಂಕೀರ್ಣ ಆಲೋಚನೆಗಳನ್ನು ಗದ್ಯವಾಕ್ಯಗಳಲ್ಲೇ ಹೇಳಬೇಕೆಂದು ಕಾರ್ಯದೃಷ್ಟಿಯುಳ್ಳ ಪುರಾತನ ಗ್ರೀಕರಿಗೆ ಹೊಳಿದಿರಬೇಕು. ಪ್ರವಾಸಿ ಹೆಕ್‍ಟಾಯಿಸ್, ವೈದ್ಯಶಾಸ್ತ್ರಜ್ಞ ಹಿಪಾಕ್ರಟಿಸ್ ಮತ್ತು ತಮ್ಮ ವಿಚಾರಗಳನ್ನು ಸರಳ ನೇರ ಶೈಲಿಯಲ್ಲಿ ಹೇಳಬೇಕೆಂದು ಉದ್ದೇಶಿಸಿದ ಇತರ ತಾತ್ತ್ವಿಕರು, ವಿಜ್ಞಾನಿಗಳು, ವಿಚಾರಶೀಲರು ಗದ್ಯವನ್ನೇ ಬಳಸಿದರು. ಕಾವ್ಯಾಭ್ಯಾಸಪಂಡಿತರಾಗಿದ್ದ ಓದುಗರ ಸಲುವಾಗಿ ಬರೆಯುವಾಗ, ಗದ್ಯಶೈಲಿಯನ್ನು ಹೆಚ್ಚು ಪರಿಷ್ಕಾರವಾಗಿ, ನಯಗಾರಿಕೆಯಿಂದ ಬಳಸಬೇಕಾಯಿತು. ಹೋಮರ್ ಕಾವ್ಯದ ಪರಿಚಯವುಳ್ಳ ಸುಸಂಸ್ಕೃತರಿಗಾಗಿ ಹೆರಾಕ್ಲಿಟಿಸ್ ದರ್ಶನಶಾಸ್ತ್ರವನ್ನು ಈಸ್ಕಿಲಸ್ ಕವಿಯ ಸುಭಗ ಮೇಳಗೀತಗಳೋಪಾದಿಯಲ್ಲಿ ಬರೆದ. ಇತಿಹಾಸಕಾರ ಹೀರಡಾಟಸ್ ಪರ್ಷಿಯನ್ ಯುದ್ಧದ ಚರಿತ್ರೆ ನಿರೂಪಿಸಲು ಹೋಮರನ ಭವ್ಯಕಾವ್ಯದ ಶೈಲಿಯನ್ನೂ ಕಥಾನಕ ರೀತಿಯನ್ನೂ ಅನುಕರಿಸಿದ. ಹೀರಡಾಟಸನ ಚಿತ್ರಯುಕ್ತವಾದ ಪದಪುಂಜಗಳು, ಸಮತೋಲವಿರುವ ವಾಕ್ಯಾಂಶಗಳು, ಅಂತ್ಯಪ್ರಾಸಬದ್ಧವಾದ ವಾಕ್ಯಗಳು ಗದ್ಯಕ್ಕೆ ಕಾವ್ಯದ ಚೆಲುವನ್ನು ತಂದುಕೊಟ್ಟವು. ಪ್ರಕಾಂಡ ಪಂಡಿತರೆನಿಸಿಕೊಂಡಿದ್ದ ಆ ಕಾಲದ ಸಾಫಿಸ್ ಪಂಥದ ಲೇಖಕರು, ಎಲ್ಲ ವೈಚಾರಿಕ ಸಾಹಿತ್ಯವನ್ನೂ ಚೆನ್ನಾಗಿ ಅಧ್ಯಯನ ಮಾಡಿ, ತಮ್ಮ ಗದ್ಯಶೈಲಿಯನ್ನು ಅಚ್ಚುಕಟ್ಟಗಿ ರೂಢಿಸಿಕೊಂಡರು. ಸಾಮ್ರಾಜ್ಯಶಾಹಿ ಅಥೆನ್ಸ್ ನಗರದಲ್ಲಿನ ನ್ಯಾಯಾಲಯಗಳು ಮುಂತಾದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಚರ್ಚೆ, ವಾದ, ವಾಗ್ಮಿತೆಗಳಲ್ಲಿ ಆಸ್ಥೆ ಅಭಿರಿಚಿ ತಳೆದ ಆ ನಗರದ ಸುಶಿಕ್ಷಿತ ಜನಸಮುದಾಯ-ಇವು ಉತ್ತಮ ಗದ್ಯಶೈಲಿಯ ವಿಕಾಸಕ್ಕೆ ಅಗತ್ಯವಾದ ಪರಿಸರ ಒದಗಿಸಿದುವು. ಪರ್ಷಿಯ ದೇಶ ಏಷ್ಯ ಮೈನರ್ ಪ್ರದೇಶದ ನಗರ ರಾಜ್ಯಗಳ ಮೇಲೆ ಆಕ್ರಮಣ ನಡೆಸಿದಾಗ ಹಲವು ವಿಚಾರವಂತರು, ಪಂಡಿತ ಪರಿಣತರು ದೇಶ ಬಿಟ್ಟು ಓಡಿಬಂದು ಅಥೆನ್ಸ್, ಸಿಸಿಲಿ, ದಕ್ಷಿಣ ಇಟಲಿ ಮುಂತಾದ ಕಡೆ ನೆಲೆಸಿದರು. ದಕ್ಷಿಣ ಇಟಲಿ ಪೈಥಾಗೊರಾಸ್ ಪಂಥಕ್ಕೆ ಸೇರಿದ ಗಣಿತಶಾಸ್ತ್ರದ ನೆಲೆವೀಡಾಯಿತು. ವಾಗ್ಮಿ ಕಲೆ, ಭಾಷಾ ವಿಜ್ಞಾನಗಳಲ್ಲಿ ಪರಿಣತರಾದವರು ಸಿಸಿಲಿಯಲ್ಲಿ ನೆಲೆಸಿದರು. ಇತಿಹಾಸ ರಚನೆಯಂತೂ ಸಾಫಿಸ್ಟ್ ಚಳವಳಿಯ ಅಂಗವಾಗಿಯೇ ಹುಟ್ಟಿತೆನ್ನಬಹುದು. ಕಟಾಯಿಸ್ ಎಂಬವನ ಪ್ರವಾಸಿ ಕಥೆಗಳನ್ನು ಓದಿ ಪ್ರಭಾವಿತನಾಗಿದ್ದ ಹೀರಡಾಟಸ್ ಪ್ರವಾಸಕಥನವನ್ನೇ ಪರ್ಷಿಯನ್ ಯುದ್ಧದ ಚರಿತ್ರೆಯನ್ನಾಗಿ ಬರೆದ. ಅವನ ಗ್ರಂಥದಲ್ಲಿ ಸಾಫಿಸ್ಟ್ ಪಂಥದವರ ವಿಚಾರಗಳು, ಹೋಮರನ ಹಾಗೂ ಗ್ರೀಕ್ ಗಂಭೀರನಾಟಕಕಾರರನ್ನು ಕುರಿತ ನೆನೆಪುಗಳು, ಸವಿವರವಾಗಿ ಬಂದಿವೆ. ಆ ಕಾಲದ ಇನ್ನೊಬ್ಬ ಖ್ಯಾತ ಇತಿಹಾಸಕಾರ ತ್ಯೂಸಿಡಿಡೀಸ್-ಪೆಲೊಪೊನೀಷಿಯನ್ ಯುದ್ಧ ಚರಿತ್ರೆಯನ್ನು ಸಂಗ್ರಹಿಸಿದ. ಆ ಮಹಾಯುದ್ಧ ಒಂದು ಭಯಂಕರ ವ್ಯಾಧಿಯಂತೆ ಹಬ್ಬಿ ಗ್ರೀಕ್ ನಗರರಾಜ್ಯಗಳನ್ನು ಪೀಡಿಸಿತೆಂದು ವರ್ಣಿಸಿ ಅಧಿಕಾರಲಾಲಸೆ-ಅಧಿಕಾರ