ಪುಟ:Mysore-University-Encyclopaedia-Vol-6-Part-18.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ಲಾಕ್ಸಿನಿಯ : ಜೆಸ್ನೀರಿಯೇಸೀ ಕುಟುಂಬಕ್ಕೆ ಸೇರಿದ ಸಿನಿಂಜಿಯ ಸ್ಪೀಶಿಯೋಸ ಪ್ರಭೇದದ ಹಲವಾರು ಅಲಂಕಾರ ಸಸ್ಯಗಳಿಗಿರುವ ಸಾಮಾನ್ಯ ಹೆಸರು. ಎಲ್ಲವೂ ಬ್ರೆಜಿಲಿನ ಮೂಲನಿವಾಸಿಗಳು. ಮೃದುವಾದ ಮಖಮಲಿನಂಥ ಎಲೆಗಳನ್ನೂ ಅಪಾರವಾದ ವರ್ಣ ವೈವಿಧ್ಯವುಳ್ಳ ಹೂಗಳನ್ನೂ ಪಡೆದಿರುವುದರಿಂದ ಇವನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಕುಂಡ ಸಸ್ಯಗಳನ್ನಾಗಿ ಬೆಳೆಸುತ್ತಾರೆ.

ಗ್ಲಾಕ್ಸಿನಿಯಲ್ಲಿ ಸುಮಾರು 25 ಬಗೆಗಳಿವೆ. ಎಲ್ಲವೂ ಚಿಕ್ಕಗಾತ್ರದ ಬಹುವಾಷಿಕ ಮೂಲಿಕೆಗಳು. ಇವುಗಳಲ್ಲೆಲ್ಲ ನೆಲದೊಳಗೇ ಹುದುಗಿ ಬೆಳೆಯುವ ಟ್ಯೂಬರ್ ಮಾದರಿಯ ಪ್ರಕಂದವಿದೆ. ಇದರಿಂದ ಕವಲೊಡೆಯದ ಇಲ್ಲವೆ ಕಲವಲೊಡೆದ ಅನೇಕ ಕಾಂಡಗಳು ಹುಟ್ಟಿ ನೆಲದಿಂದ ಮೇಲಕ್ಕೆ ಬೆಳೆಯುತ್ತವೆ (ಕೆಲವು ಬಗೆಗಳಲ್ಲಿ ಈ ತೆರನ ಕಾಂಡವಿರುವುದಿಲ್ಲ). ಎಲೆಗಳು ಕಾಂಡಗಳ ಮೇಲೆ ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಗಳಿಗೆ ಉದ್ದನೆಯ ತೊಟ್ಟಿದೆ. ಹೂಗಳು ಒಂಟೊಂಟಿಯಾಗಿ ಇಲ್ಲವೆ ಹೂಗೊಂಚಲುಗಳನ್ನು ಅರಳುತ್ತವೆ. ಹೂಗಳ ಬಣ್ಣ ಬಿಳಿ, ನಸುಗೆಂಪು, ಕಡುಗೆಂಪು, ನೀಲಿ, ಊದಾ - ಹೀಗೆ ವೈವಿಧ್ಯಮಯ. ಜೊತೆಗೆ ದಳಸಮೂಹದ ಗಂಟಲಿನ ಬಳಿ ಚೆಲುವಾದ ಚುಕ್ಕಿಗಳಿದ್ದು ಹೂವಿನ ಅಂದವನ್ನು ಹೆಚ್ಚಿಸುತ್ತವೆ. ಪ್ರತಿ ಹೂವಿನಲ್ಲಿ 5 ದಳಗಳಿಂದ ಕೂಡಿದ ಸಂಯುಕ್ತ ಮಾದರಿಯ ಹಾಗೂ ಗಂಟೆಯಾಕಾರದ ದಳ ಸಮೂಹ, 4 ಕೇಸರಗಳು ಮತ್ತು ಎರಡು ಕರ್ಪೆಲುಗಳ ಉಚ್ಚಸ್ಥಾನದ ಅಂಡಾಶಯ ಇವೆ. ಕೇಸರಗಳ ಪರಾಗಕೋಶಗಳು ಜೊತೆ ಜೊತೆಯಾಗಿ ಸೆರಿಕೊಂಡುಬಿಟ್ಟಿದೆ. ಬಹುಪಾಲ ಬಗೆಗಳಲ್ಲಿ ದಳ ಸಮೂಹ ಒಂಟಿ ಸುತ್ತಿನದಾದರೂ ಕೆಲವಲ್ಲಿ ಎರಡು ಸುತ್ತಿನದಾಗಿರುವುದುಂಟು.

ಗ್ಲಾಕ್ಸಿನಿಯದ ವಿವಿಧ ಬಗೆಗಳಲ್ಲಿ ಸ್ಪೀಶಿಯೋಸ, ಡೈವರ್ಸಿಫೋಲಿಯ, ಜೆಸ್ನೆರಾಯ್ಡಿಸ್, ಗ್ಲಾಬ್ರ, ಮ್ಯಾಕ್ಯುಲೇಟ ಮತ್ತು ಮಲ್ಪಿಫ್ಲೋರಗಳು ಬಲು ಮುಖ್ಯವಾದವು.

ಗ್ಲಾಕ್ಸಿನಿಯದ ವೃದ್ಧಿಗೆ ಉಷ್ಣ ಹವಾಗುಣ ಉತ್ತಮ. ಎಲ್ಲ ಬಗೆಗಳನ್ನೂ ಬೀಜಗಳಿಂದ, ಪ್ರಕಂದದ ತುಂಡುಗಳಿಂದ ಇಲ್ಲವೆ ಎಲೆಗಳಿಂದ ವೃದ್ಧಿಸಬಹುದು.

ಗ್ಲಾಬರ್ ಲವಣ : ಸೋಡಿಯಮ್ ಸಲ್ಫೇಟ್ ಲವಣದ ಹರಳುಗಳು: ರಾಸಾಯನಿಕ ಅಣುಸೂತ್ರ Na2SO410H2O. ಸೋಡಿಯಮ್ ಕ್ಲೋರೈಡಿನಿಂದ ಹೈಡ್ರೊಕ್ಲೋರಿಕ್ ಅಮ್ಲವನ್ನು ತಯಾರಿಸುವ ವಿಧಾನದಲ್ಲಿ ದೊರೆಯುವ ಉಪೋತ್ಪನ್ನವಿದು. ನೈಸರ್ಗಿಕವಾಗಿ ದೊರೆಯುವ ಇದೇ ಲವಣಕ್ಕೆ ಮಿರಾಬಲೈಟ್ ಎಂದು ಹೆಸರು. ಗ್ಲಾಬರ್ ಲವಣ ಪಾರದರ್ಶಕಗಳಾದ ದೊಡ್ಡ ಹರಳುಗಳ ರೂಪದಲ್ಲಿ ದೊರೆಯುತ್ತದೆ. ಸಣ್ಣ ಸಣ್ಣ ಸೂಜಿರೂಪದಲ್ಲಿ ಅಥವ ಚೂರ್ಣದ ರೂಪದಲ್ಲಿ ದೊರೆಯುವುದೂ ಉಂಟು. 33 ಸೆ.ನಲ್ಲಿ ದ್ರವಿಸುತ್ತದೆ. 100 ಸೆಂ.ನಲ್ಲಿ ಸ್ಫಟಿಕಜಲವನ್ನು (ವಾಟರ್ ಆಫ್ ಹೈಡೇಷನ್) ಕಳೆದುಕೊಳ್ಳುತ್ತದೆ. ನೀರು ಮತ್ತು ಗ್ಲಿಸರಿನ್ನಿನಲ್ಲಿ ವಿಲೀನವಾದರೂ ಆಲ್ಕೊಹಾಲಿನಲ್ಲಿ (ಈಥೈಲ್ ಆಲ್ಕೊಹಾಲ್) ವಿಲೀನವಾಗುವುದಿಲ್ಲ. ಸಾರ ಆಮ್ಲ ಮತ್ತು ಸಾರ ಪ್ರತ್ಯಾಮ್ಲಗಳ ಸಂಯೋಗದಿಂದ ಉತ್ಪತ್ತಿಯಾಗುವ ಲವಣವಾದ್ದರಿಂದ ಜಲೀಯ ದ್ರಾವಣ ಲಿಟ್ಮಸ್ಸಿಗೆ ತಟಸ್ಥವಾಗಿರುತ್ತದೆ. ಈ ಲವಣವನ್ನು ಮುಖ್ಯವಾಗಿ ಬಟ್ಟೆಗಳಿಗೆ ಬಣ್ಣಹಾಕುವ ಉದ್ಯಮದಲ್ಲಿ ಬಳಸುತ್ತಾರೆ. ಕ್ರಾಫ್ಟ್ ಕಾಗದ, ಕಾಗದದ ರಟ್ಟು ಮತ್ತು ಗಾಜಿನ ತಯಾರಿಕೆಯಲ್ಲಿ, ಚಲುವೆಕಾರಿಗಳ ಉತ್ಪಾದನೆಯಲ್ಲಿ ಸೆರಾಮಿಕ್ (ಮೃಣ್ಮಯ) ಪಾತ್ರೆಗಳಿಗೆ ಹೊಳಪು ಕೊಡುವುದರಲ್ಲಿ, ಚರ್ಮವನ್ನು ಹದಮಾಡುವುದರಲ್ಲಿ, ಔಷಧಿಗಳ ತಯಾರಿಕೆಯಲ್ಲಿ, ಮತ್ತು ಘನೀಕರಣ ಮಿಶ್ರಣಗಳಲ್ಲಿ (ಫ್ರೀ ಜಿಂಗ್ ಮಿಕ್ಸ್ ಚರ್ಸ್) ಈ ಲವಣದ ಬಳಕೆ ಉಂಟು.

ಗ್ಲಾಬ್ಯುಲಿನ್ : ರಕ್ತದ ವಸೆಯಲ್ಲೂ ಹಾಲೊಡಕಿನಲ್ಲೊ (ಮಸ್ತಿ) ಇರುವ ಒಂದು ಬಗೆಯ ಪ್ರೋಟೀನು ಸಂಯುಕ್ತ. ಹಾಲಿನಲ್ಲಿರುವ ಗ್ಲಾಬ್ಯುಲಿನ್ನಿಗೆ ಲ್ಯಾಕ್ಟೊಗ್ಲಾಬ್ಯುಲಿನ್ ಎಂಬ ಹೆಸರೊ ಇದೆ. ಹಾಲೊಡಕಿನಲ್ಲಿ ಇದರ ಮೊತ್ತ ಶೇ. 0.1ನ್ನು ಮೀರುವುದಿಲ್ಲ. ಆದರೆ ಅದೇ ತಾನೆ ಕರುಹಾಕಿದ ಹಸುವಿನ ಹಾಲಿನಲ್ಲಿ ಮಾತ್ರ ಇದರ ಮೊತ್ತ ಗಣನೀಯವಾಗಿರುತ್ತದೆ (ಇನ್ನೊಂದು ಬಗೆಯ ಪ್ರೋಟೀನಾದ ಆಲ್ಬ್ಯುಮಿನ್ನೂ ಸೇರಿ ಇದರ ಮೊತ್ತ ಶೇ. 11-12 ರಷ್ಟಿರಬಹುದು). 24 ಗಂಟೆಗಳ ಅನಂತರ ಈ ಪರಿಮಾಣ ಶೀಘ್ರವಾಗಿ ಇಳಿದುಹೋಗುತ್ತದೆ. ಅನೇಕ ಬಗೆಯ ರೋಗಗಳ ವಿರುದ್ಧ ಪ್ರತಿವಸ್ತುಗಳ (ಆಂಟಿಬಾಡೀಸ್) ತಯಾರಿಕೆಯಲ್ಲಿ ಗ್ಲಾಬ್ಯುಲಿನ್ ಪ್ರಮುಖ ಪಾತ್ರ ವಹಿಸುತ್ತದೆ. ಇಂಥ ಪ್ರತಿವಸ್ತುಗಳು ಹೆಚ್ಚು ಮೊತ್ತದಲ್ಲಿರುವ ತಾಯಿಯ ಹಾಲನ್ನು ಕರುಗಳು ಕುಡಿದಾಗ ಅವಕ್ಕೂ ತಾತ್ಕಾಲಿಕ ಬಗೆಯ ರೊಗನಿರೋಧಕಗಳ ಸಾಮರ್ಥ್ಯ ಬರುತ್ತದೆ.

ಗ್ಲಾಬ್ಯುಲಿನ್ನಿನಲ್ಲಿ ಆಲ್ಫ, ಬೀಟ, ಗ್ಯಾಮ ಎಂಬ ಮೂರು ಮುಖ್ಯ ಬಗೆಗಳಿವೆ. ಇವನ್ನು ವಿದ್ಯುತ್ ಕ್ಷೇತ್ರ ಚಲನದಿಂದ (ಎಲೆಕ್ಟ್ರೋಫೋರೆಸಿಸ್) ಬೇರ್ಪಡಿಸಿ ಗುರುತಿಸಲಾಗಿದೆ. ಇವುಗಳ ಒಂದೊಂದು ಬಗೆಯಲ್ಲೂ ಅನೇಕ ರೀತಿಯ ಪ್ರೋಟೀನುಗಳಿವೆ. ಉದಾಹರಣೆಗೆ ಆಲ್ಫ ಬಗೆಯಲ್ಲಿ ಹ್ಯಾಪ್ಟೊಗ್ಲಾಬಿನ್, ಸೆರುಲೋಪ್ಲಾಸ್ಮಿನ್, a2 ಮ್ಯಾಕ್ರೊಗ್ಲಾಬ್ಯುಲಿನುಗಳೂ ಗ್ಯಾಮ ಗ್ಲಾಬ್ಯುಲಿನುಗಳಲ್ಲಿ 5 ರೀತಿಯ ಇಮ್ಯೂನೋ ಗ್ಲಾಬ್ಯುಲಿನುಗಳೂ ಇವೆ.

ಗ್ಲಾಸಾಪ್ಟರಿಸ್ : ಟೆರಿಡೋಸ್ಟರ್ಮ್ ಸಸ್ಯಕುಲಕ್ಕೆ ಸೇರಿದ ಅತಿ ಮುಖ್ಯವಾದ ಒಂದು ಗತವಂಶೀಯ ಸಸ್ಯಜಾತಿ . ಇದು ಪೆಲಿಯೋಜೋಯಿಕ್ ಯುಗದ ಉತ್ತರಾರ್ಧ ಮತ್ತು ಮಿಸೋಜೋಯಿಕ್ ಯುಗದ ಪೂರ್ವಾರ್ಧದಲ್ಲಿ ಗೋಂಡ್ವಾನ ಖಂಡದ ಸಸ್ಯ ವೈಶಿಷ್ಟ್ಯವಾಗಿತ್ತು. ಈ ಸಸ್ಯದೊಡನೆ ಕಂಡುಬರುವ ಗಂಗಮಪ್ಟರಿಸ್, ವರ್ಟಿಬ್ರೇರಿಯ ಮುಂತಾದ ಸಸ್ಯಜಾತಿಗಳನ್ನೆಲ್ಲ ಕೂಡಿಸಿ ಗ್ಲಾಸಾಪ್ಟರಿಸ್ ಸಸ್ಯ ಸಮೂಹ ಎಂದು ಕರೆಯಲಾಗಿದೆ. ಇದು ಗೋಂಡ್ವಾನ ಯುಗದ ಮೊದಲಲ್ಲಿ ಹಿಮಯುಗದ ಸನ್ನಿವೇಶಗಳಲ್ಲಿ ಕಾಣಿಸಿಕೊಂಡು ಪೂರ್ವಾರ್ಧದಲ್ಲಿ ವಿಶೇಷವಾಗಿತ್ತು. ಇದರ ಅವಶೇಷಗಳು ಭಾರತದಲ್ಲೇ ಅಲ್ಲದೆ ಗೋಂಡ್ವಾನ ಖಂಡದ ಭಾಗಗಳಾಗಿದ್ದ ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ಆಸ್ಟ್ರೇಲಿಯಗಳಲ್ಲೂ ಕಂಡುಬಂದಿವೆ.

ಗ್ಲಾಸಾಪ್ಟರಿಸ್ ಸಸ್ಯದ ಎಲೆಗಳು ಸರಳ, ಅಂಚು ನೀಳ. ಪರ್ಣಭಾಗದಲ್ಲಿ ಮಧ್ಯನಾಳ ಉಂಟು. ಕಮಾನಿನಾಕಾರದ ಕಿರುನಾಳ ವಿನ್ಯಾಸವನ್ನು ಕಾಣಬಹುದು. ಗ್ಲಾಸಾಪ್ಟರಿಸ್ ಎಲೆಯಲ್ಲಿ ಪುನರುತ್ಪತ್ತಿ ಅಂಗಗಳ ಇರುವಿಕೆ ನಿರ್ದಿಷ್ಟವಾಗಿಲ್ಲ. ಗಂಗಮಾಪ್ಟರಿಸ್ ಎಲೆ ಗ್ಲಾಸಾಪ್ಟರಿಸ್ ಎಲೆಯಂತೆಯೇ ಇದೆ. ಆದರೆ ಅದರಲ್ಲಿ ಮಧ್ಯನಾಳ ಇಲ್ಲ. ಗ್ಲಾಸಾಪ್ಟರಿಸ್ ಸಸ್ಯದ ಅವಶೆಷಗಳು ಭಾರತದ ಗೋಂಡ್ವಾನ ಸ್ತರಗಳ ಕೆಳವಿಭಾಗಕ್ಕೆ ಸೇರಿದ ತಾಲಚೇರ್, ಬರಕಾರ್ ಮತ್ತು ರಾಣಿಗಂಚ್ ಹಂತಗಳಲ್ಲಿ ಕಂಡುಬಂದಿವೆ.

ಗ್ಲಾಸಿನ ನೊಣ : ಡಿಪ್ಟರ ಗಣದ ಮಸ್ಕಿಡೀ ಕುಟುಂಬಕ್ಕೆ ಸೇರಿದ ಒಂದು ನೊಣ. ಟ್ಸೆಟ್ಸೀನೊಣ ಪರ್ಯಾಯನಾಮ. ಇದರಲ್ಲಿ ಸುಮಾರು 21 ಪ್ರಭೇದಗಳು ಇವೆ. ಅರೇಬಿಯದ ನೈರುತ್ಯ ಭಾಗದಲ್ಲಿ ಕಾಣಸಿಗುವ ಒಂದು ಪ್ರಭೇದವನ್ನು ಬಿಟ್ಟರೆ ಉಳಿದೆಲ್ಲವೂ ಆಫ್ರಿಕದಲ್ಲಿ ಮಾತ್ರ ಜೀವಿಸುತ್ತವೆ. ಗ್ಯಾಂಬಿಯ, ನೈಜೀರಿಯ, ಅಬಿಸೀನಿಯ, ಕೀನ್ಯ, ಉಗಾಂಡ, ಕಾಂಗೊ, ಅಂಗೋಲ ಮುಂತಾದೆಡೆಗಳಲ್ಲಿ ದಟ್ಟ ಕಾಡುಗಳಲ್ಲಿ ನೀರಿನ ಆಸರೆಯಿರುವಂಥಲ್ಲಿ ಇವುಗಳ ವಾಸ. ಇವು ದನ, ಕುದುರೆ ಮುಂತಾದ ಪ್ರಾಣಿಗಳ ಹಾಗೂ ಮಾನವನ ರಕ್ತವನ್ನು ಹೀರಿ ಬದುಕುತ್ತವೆ. ಇವುಗಳಲ್ಲಿ ಕೆಲವು ಬಗೆಯವು ಮನುಷ್ಯನಲ್ಲೂ ಪ್ರಾಣಿಗಳಲ್ಲೂ ನಿದ್ರಾವಾತರೋಗವನ್ನು (ಸ್ಲೀಪಿಂಗ್ ಸಿಕ್ ನೆಸ್) ಉಂಟುಮಾಡುವ ರೋಗಾಣುಗಳ ವಾಹಕಗಳು. ಇಂಥ ರೋಹವಾಹಕ ನೊಣಗಳಲ್ಲಿ ಮುಖ್ಯವಾದವು ಪಶ್ಚಿಮ ಮತ್ತು ಮಧ್ಯ ಆಫ್ರಿಕದಲ್ಲಿ ಕಾಣಸಿಗುವ ಗ್ಲಾ. ಪಾಲ್ಪಾಲಿಸ್ ಮತ್ತು ಪೂರ್ವ ಆಫ್ರಿಕದಲ್ಲಿ ಜೀವಿಸುವ ಗ್ಲಾ. ಮಾರ್ಸಿಟಾನ್ಸ್.

ಎಲ್ಲ ಬಗೆಯ ಗ್ಲಾಸಿನ ನೊಣಗಳೂ ದೃಢಕಾಯದ ಕೀಟಗಳು. ಇವುಗಳ ಗಾತ್ರ ಸಾಮಾನ್ಯ ನೊಣಕ್ಕಿಂತ ಹೆಚ್ಚು. ದೇಹದ ಬಣ್ಣ ಹಳದಿಯಿಂದ ಕಗ್ಗಂದಿನವರೆಗೆ ವ್ಯತ್ಯಾಸವಾಗುತ್ತದೆ. ಉದರ ಭಾಗದ ಮೇಲೆ ಪಟ್ಟಿಗಳಿವೆ. ಬಾಯ ವಿವಿಧ ಭಾಗಗಳು ಅತಿಥೀಯ ಪ್ರಾಣಿಯ ದೇಹವನ್ನು ಚುಚ್ಚಿ ರಕ್ತಹೀರಲು ಅನುಕೂಲವಾಗಿವೆ. ರಕ್ತ ಹೀರುವಾಗ