ಪುಟ:Mysore-University-Encyclopaedia-Vol-6-Part-18.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ಲೈಡಿನ್ಲಿ-ಗ್ಲೋರಿಯೋಸ ಹಾಳೆಗಳು ಮತ್ತು ಗಾಜಿನ ಎಳೆಗಳಿಂದ ಬಲಪಡಿಸಿದ ಪ್ಲಾಸ್ಟಿಕ್ ರೀತಿಯ ವಸ್ತುಗಳಿಂದ ಎರಕ ಹೊಯ್ದ (ಮೋಲ್ಡೆಡ್ ಫ಼ೈಬರ್ ಗ್ಲಾಸ್) ಗ್ಲೈಡರುಗಳನ್ನು ರೂಪಿಸುವ ವಿಧಾನಗಳು ಈಗ ಬಳಕೆಯಲ್ಲಿವೆ. ಗ್ಲೈಡರುಗಳಲ್ಲಿ ಬಹಳ ಎತ್ತರ, ಬಹಳ ಹೊತ್ತು ಯಶಸ್ವಿಯಾಗಿ ಹಾರಬೇಕಾದರೆ ಕೆಲವು ಉಪಕರಣಗಳ ಸಹಾಯ ಬೇಕಾಗುತ್ತದೆ. ಇವುಗಳಲ್ಲಿ ಮುಖ್ಯವಾದವು ಎತ್ತರ ಮತ್ತು ವೇಗವನ್ನು ಸೂಚಿಸುವ ಮಾಪಕಗಳು, ಗ್ಲೈಡರಿನ ತಿರುವು ಮತ್ತು ಸುತ್ತುಗಳನ್ನು ಸೂಚಿಸುವ ಸಾಧನಗಳು, ಹತ್ತುವ ಇಳಿಯುವ ವೇಗ ಪ್ರಮಾಣ ಸೂಚಕಗಳು, ಜಿ.ಪಿ.ಎಸ್, ಮತ್ತು ವಾಯುಪ್ರವಾಹವನ್ನು ಗುರುತಿಸಿ ಅದರ ಲಕ್ಷಣಗಳನ್ನು ತಿಳಿಸುವ ಮಾಪಕಗಳು. ಇವೆಲ್ಲವನ್ನು ಈಗ ಕಾಕ್ ಪಿಟ್ ನಲ್ಲಿ ಅಳವಡಿಸಲಾಗುತ್ತದೆ. ಪ್ರಾರಂಭದಲ್ಲಿ ಗ್ಲೈಡರ್ ಮೇಲಕ್ಕೆ ಹತ್ತುವಂತೆ ಮಾಡಲು ನೆಲದ ಮೇಲೆ ಅದನ್ನು ಸ್ವಲ್ಪ ದೂರ ಬಹಳ ವೇಗವಾಗಿ ಓಡಿಸಬೇಕಾಗುತ್ತದೆ. ಇದಕ್ಕೋಸ್ಕರ ಹಿಂದೆ ಗ್ಲೈಡರಿಗೆ ನೈಲನ್ ಹಗ್ಗವನ್ನು ಕಟ್ಟಿ ಜೀಪುಗಳಿಂದ ವೇಗವಾಗಿ ಎಳೆಸುತ್ತಿದ್ದರು. ಈಗ ವಿಂಚ್ ಎಂಬ ದೊಡ್ದರಾಟೆಯುಳ್ಳ ಯಂತ್ರದಿಂದಲೂ ಗ್ಲೈಡರುಗಳನ್ನು ಎಳೆಯಲಾಗುತ್ತದೆ. ಇದಲ್ಲದೆ ವಾಯುವಿಮಾನಗಳನ್ನು (ಏರೋಪ್ಲೇನ್ಸ್) ಉಪಯೋಗಿಸಿ ಗ್ಲೈಡರುಗಳನ್ನು ಆಕಾಶದಲ್ಲಿ ತೇಲಿಬಿಡುವ ಪದ್ಧತಿಯೂ ಬಹುವಾಗಿ ಬಳಕೆಯಲ್ಲಿದೆ. ಈಗ ಯಂತ್ರಚಾಲಿತ ಗ್ಲೈಡರುಗಳೂ ಲಭ್ಯವಿವೆ. ಪ್ಯಾರಾಗ್ಲೈಡರ್, ಹ್ಯಾಂಗ್ ಗ್ಲೈಡರ್ ಇವು ಗ್ಲೈಡರಿನ ಇತರ ಪ್ರಕಾರಗಳು. ಗ್ಲೈಡಿನ್ಲಿ- ಕಚ್ಚಾನಾಗಾ ಜನರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ. ಈಕೆ ೧೯೧೫ ರಲ್ಲಿ ಜನಿಸಿದಳು. ಮಣಿಪುರ, ಕಾಚಾರ್ ಹಾಗೂ ನಾಗಾ ಜಿಲ್ಲೆಗಳಲ್ಲಿ ಹಂಚಿಹೋಗಿದ್ದ ಕಚ್ಚಾನಾಗಾ ಜನರನ್ನು ಸಂಘಟಿಸಿದಳು (೧೯೩೧-೩೨). ೧೯೨೫ರ ವೇಳೆಗೆ ಕಚ್ಚಾನಾಗಾ ಜನರಲ್ಲಿ ಹರಿದು ಹಂಚಿಹೋಗಿದ್ದ ತಮ್ಮನೆಲ್ಲ ಒಂದುಗೂಡಿಸಲು ಹೊಸ ನಾಗರಾಜನೆಂಬ ದೈವ ಪುರುಷನೊಬ್ಬ ಬರುತ್ತಾನೆಂದೂ ಅವನು ಬ್ರಿಟಿಷರನ್ನು ಓಡಿಸುತ್ತಾನೆಂದೂ ನಂಬಿಕೆ ಮನೆಮಾಡಿತ್ತು. ಜಾಡೋನಾಂಗ್ ಎಂಬುವವನು ಕಚ್ಚಾನಾಗಾಗಳ ರಕ್ಷಕನೆಂದು ಹೇಳಿಕೊಂಡು ಅವರನ್ನು ಸಂಘಟಿಸಿದ (೧೯೨೯). ಅಲ್ಲದೆ ಅವರಲ್ಲಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದುಹಾಕಿ ಎಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿದ. ಹಾಗಾಗಿ ಕಚ್ಚಾನಾಗಾಗಳು ತಮ್ಮದೇ ಆದ ಸ್ವತಂತ್ರ ನಾಗಾರಾಜ್ಯವನ್ನು ರೂಪಿಸಿ ಕೊಂಡರು. ಇದರಿಂದ ಕಳವಳಗೊಂಡ ಬ್ರಿಟಿಷ್ ಸರ್ಕಾರ ಜಾಡೋನಾಂಗ್ ನನ್ನು ಬಂಧಿಸಿ ನೇಣು ಹಾಕಿತ್ತು (೧೯೩೧). ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ ಜಾಡೋನಾಂಗ್ ನ ದೂರದ ಸಂಬಂಧಿಯಾದ ಗ್ಲೈಡಿನ್ಲಿಯು ಕಚ್ಚಾನಾಗಾ ಜನರ ನೆರವಿಗೆ ಬಂದಳು. ಇವಳು ಕಚ್ಚಾನಾಗಾ ಜನ ವಾಸಮಾಡುತ್ತಿದ್ದ ಪ್ರದೇಶಗಳಲ್ಲೆಲ್ಲ ಸುತ್ತಾಡಿ, ಅವರನೆಲ್ಲ ಸಂಘಟಿಸಿ ಹೋರಾಟದ ಮನೋಭಾವನೆ ಮೂಡಿಸಿದಳು. ಈಕೆ ಅಸ್ಸಾಮಿನ ಕ್ರಾಂತಿಕಾರಿಗಳ ಸಂಪರ್ಕ ಪಡೆದು ಕ್ರಾಂತಿಕಾರಿ ಚಳವಳಿಗಳನ್ನು ಸಮನ್ವಯಗೊಳಿಸಲು ಪ್ರಯತ್ನಿಸಿದಳು. ಅಂತಿಮವಾಗಿ ಸರ್ಕಾರದ ವಿರುದ್ಧ ದಂಗೆಯೇಳುವಂತೆ ಪ್ರಚೋದಿಸಿ, ಸರ್ಕಾರಕ್ಕೆ ಕಂದಾಯ ಸಲ್ಲಿಸದಂತೆ, ಬಲವಂತ ದುಡಿಮೆ ಮಾಡದಂತೆ ಕರೆನೀಡಿದಳು. ಬ್ರಿಟಿಷ್ ಸರ್ಕಾರ ಇವಳನ್ನು ಬಂಧಿಸಲು ಪ್ರಯತ್ನಿಸಿದಾಗ ತಪ್ಪಿಸಿಕೊಂಡಳು. ಆಗ ಇವಳ ಹೆಸರಿನ ಎಲ್ಲಾ ತರುಣಿಯರನ್ನು ಬಂಧಿಸಿ ಪ್ರಶ್ನಿಸಲಾರಂಭಿಸಿದರು. ೧೯೩೨ ರ ಫ಼ೆಬ್ರವರಿ-ಮಾರ್ಚ್ ತಿಂಗಳಲ್ಲಿ ಗ್ಲೈಡನ್ಲಿಯ ಅನುಯಾಯಿಗಳಿಗೂ ಬ್ರಿಟಿಷ್ ಸರ್ಕಾರಿ ಪಡೆಗಳಿಗೂ ನಡುವೆ ಕದನ ನಡೆಯಿತು. ಈಕೆಯ ಬೆಂಬಲಿಗರ ಹಳ್ಳಿಗಳಿಗೆ ಬೆಂಕಿ ಹಚ್ಚಲಾಯಿತು. ಈಕೆ ತನ್ನ ಬೆಂಬಲಿಗರ ರಕ್ಷಣೆಗಾಗಿ ಪುಲೋಮಿ ಎಂಬ ಗ್ರಾಮದಲ್ಲಿ ಬಿದಿರು ಕೋಟೆಯೊಂದನ್ನು ನಿರ್ಮಿಸಿದಳು. ಇದು ೪೦೦೦ ಮಂದಿಗೆ ಆಶ್ರಯ ಕೊಡುವಂತಿತ್ತು. ಈ ನೆಲೆಯಿಂದ ಸರ್ಕಾರದ ವಿರುದ್ಧ ಕ್ರಾಂತಿಕಾರಕ ಚಟುವಟಿಕೆಗಳನ್ನು ರೂಪಿಸತೊಡಗಿದಳು. ಆದರೇ ಅನಿರೀಕ್ಷಿತವಾಗಿ ನಾಗಾ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ತನ್ನ ಸೈನಿಕ ಪಡೆಯೊಂದಿಗೆ ಧಾಳಿ ಮಾಡಿ ಗ್ಲೈಡಿನ್ಲಿಯನ್ನೂ ಇವಳ ಅನುಯಾಯಿಗಳನ್ನೂ ಬಂಧಿಸಿದ. ಈಕೆಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆದರೆ ೧೯೪೭ರಲ್ಲಿ ಭಾರತ ಸ್ವತಂತ್ರವಾದ ಮೇಲೆ ಬಿಡುಗಡೆಯಾದಳು. ಜವಾಹರಲಾಲ್ ನೆಹರೂ ಈಕೆಯನ್ನು ನಾಗಾರಾಣಿ ಎಂದು ಕರೆದ ಕಾರಣ ಈಕೆ ರಾಣಿಗ್ಲೈಡಿನ್ಲಿ ಎಂದೇ ಪ್ರಸಿದ್ಧಳಾಗಿದ್ದಳು. ಗ್ಲೋರಿಯೋಸ : ಲಿಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಲಶುನ ಸಸ್ಯಜಾತಿ. ಇದರಲ್ಲಿ ಹಲವಾರು ಪ್ರಭೇದಗಳಿವೆ. ಭಾರತದಲ್ಲಿ ಸುಪರ್ಬ ಎಂಬ ಒಂದು ಪ್ರಭೇದ ಬೆಳೆಯುತ್ತದೆ. ಇದಕ್ಕೆ ಇಂಗ್ಲಿಷಿನಲ್ಲಿ ಗ್ಲೋರಿ ಲಿಲಿ, ಸರ್ಪೆಂಟ್ಸ್ ಟಂಗ್, ಮಲಬಾರ್ ಗ್ಲೋರಿ, ಟೈಗರ್ಸ್ ಕ್ಲಾ ಮುಂತಾದ ಹೆಸರುಗಳೂ ಕನ್ನಡದಲ್ಲಿ ಕರಡಿಕಣ್ಣಿನಗೆಡ್ದೆ, ಕೋಳಿಕುಟುಮನ ಗೆಡ್ದೆ, ಅಗ್ನಿಶಿಖೆ, ಶಿವಶಕ್ತಿ ಬಳ್ಳಿ ಮುಂತಾದ ಹೆಸರುಗಳೂ ಇವೆ. ಕಾಡುಸಸ್ಯವಾಗಿ ಬೆಳೆಯುವ ಇದನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಬೆಳೆಸುವುದುಂಟು. ಅಲ್ಲದೆ ಇದಕ್ಕೆ ಔಷಧೀಯ ಪ್ರಾಮುಖ್ಯವೂ ಇದೆ. ಗೋರಿಯೋಸ ಇತರ ಆಸರೆಗಳ ಮೇಲೆ ಹಬ್ಬಿಕೊಂಡು ಬೆಳೆಯುವ ದುರ್ಬಲಕಾಂಡದ ಒಂದು ಬಳ್ಳಿ. ಇದರಲ್ಲಿ ಭೂಗತವಾಗಿರುವ ಪ್ರಕಂದವಿದೆ. ಎಳೆಗಳು ಸರಳ; ಪರ್ಯಾಯ, ಅಭಿಮುಖ ಇಲ್ಲವೆ ವರ್ತುಲ ಮಾದರಿಗಳಲ್ಲಿ ಜೋಡಣೆಗೊಂಡಿವೆ. ಎಲೆಗಳಿಗೆ ತೊಟ್ಟು ಇಲ್ಲ. ಎಲೆಯ ತುದಿಗಳು ತುಂಬ ಉದ್ದವಾಗಿ ಸುರುಳಿ ಸುತ್ತಿಕೊಂಡಿರುವವು. ಇವು ಒಂದು ರೀತಿಯ ಕುಡಿತಂತುಗಳಾಗಿ (ಟೆಂಡ್ರಿಲ್ಸ್)