ಪುಟ:Mysore-University-Encyclopaedia-Vol-6-Part-3.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ಗಮಕ ಕಲೆ

ರಸ-ಧ್ವನಿಗಳಿಗೆ ಸಂಬಂಧಿಸಿದಂತೆ ಆಯಾ ರಾಗಗಳಲ್ಲಿ ವಾಚಿಸುವುದರಿಂದ ಅದ್ಭುತ ಪರಿಣಾಮ ಮನದ ಮೇಲಾಗುವುದೆಂಬುವ ಅಂಶ ಕೇಳುವ ಸಹೃದಯರಿಗೆ ಸುವಿದಿತ.

ಗಮಕ ವಿದ್ಯೆಯ ಪ್ರಾಚೀನತೆಯನ್ನು ಸಾರುವ ಮತ್ತಷ್ಟು ವಿಚಾರಗಳಿವು: ಪ್ರಶ.ಪೂ. 1ನೆಯ ಶತಕದ ಲಲಿತ ವಿಸ್ತರ ಎಂಬ ಗ್ರಂಥದಲ್ಲಿ 64 (ಚತುಶ್ಯಷ್ಟಿ)ಕಲೆಗಳನ್ನು ಬಲ್ಲವನಾಗಿದ್ದ ಗೌತಮ ಬುದ್ಧನು 38ನೆಯ ಕಲೆಯಾಗಿ ಗಮಕ ಕಲೆಯನ್ನು ಸೂಚಿಸಿರುವುದು ಗಮನಾ‍ರ್ಹ. ಹಾಗೆಯೇ 1ನೆಯ ಶತಮಾನದ ಸುಮಾರಿನಲ್ಲಿದ್ದ ಕೃತಿಯಲ್ಲಿ ಗಮಕವೆಂದರೆ "ಪುಸ್ತಕ ವಾಚನ"ವೆಂದು ತಿಳಿಸಿರುವುದು ಉಲ್ಲೇಖನೀಯ. ಇವೆಲ್ಲವೂ ಗಮಕಕಲೆಯ ಪ್ರಾಚೀನತೆಯನ್ನು ಕುರಿತ ಮಾಹಿತಿಯನ್ನು ನಾವು ಗಮನಿಸಬಹುದಾಗಿದೆ. ಒಡೆಯರ ಕಾಲದ ಗೋವಿಂದ ವೈದ್ಯನೆಂಬುವ ಕವಿ ತನ್ನ ಚಂಪೂಕೃತಿ ಕಂಠೀರವ ನರಸರರಾಜವಿಜಯದಲ್ಲಿ ಭಾರತಿಗಳು ರಂಜಿಸಿದರು ಎನ್ನುತ್ತಾನೆ. ಅಂದರೆ, ಅವನ ಕಾಲಕ್ಕೆ ಹಾಡುವ ಗಮಕಿಗಳಿದ್ದರು ಎಂಬುದು ಇದರ ಸೂಚನೆ. ಭಾರತಿನಂಜನ ಮೂಲಕ ರಾಜ ಇಡೀ ಕಾವ್ಯವನ್ನೆ ಹಾಡಿಸಿದನಂತೆ. ಹೀಗೆಯೇ ರತ್ನಾಕರವಣಿ‍ಯ ಭರತೇಶ ವೈಭವದಲ್ಲಿಯೂ ದಂಡಿಗೆ ಮಿಡಿಯುತ್ತ ಗಮಕಿ ಹಾಡಿದಳೆಂಬುವ ಅಂಶವು ಧ್ವನಿತಗೊಂಡಿದೆ. ಬತ್ತೀಸರಾಗದೊಳೋದಿಭೂಪಾಲನ ಚಿತ್ತಕೆ ಬಂದವಳೇವೇಳ್ವೆ ಎಂಬುವ ಪ್ರಶಂಸೆಯೂ ಇದ್ದು, ಬಸವೇಶ್ವರಾದಿ ವಚನಕಾರರಲ್ಲಿಯೂ ಗಮಕ ಕಲೆಯ ಪ್ರಸ್ತಾಪವಿರುವುದು ಗಮನೀಯ.

ತಾಳಮಾನಸರಿಸವ ನಾನರಿಯೆ,

ಓಜೆ ಬಜಾವಣೆ ಲೆಕ್ಕವನರಿಯೆ,

ಅಮೃತಗಣ ದೇವಗಣವನರಿಯೆ,

ಕೂಡಲಸಂಗಮದೇವ, ನಿನಗೆ ಕೇಡಿಲ್ಲವಾಗಿ

ಆನು ಒಲಿದಂತೆ ಹಾಡುವೆ-(ಬಸವಣ್ಣ)


ಪ್ರಮುಖವಾಗಿ ಗಮಕವೆಂದರೆ ಕಾವ್ಯವಾಚನ, ಸಾಹಿತ್ಯ ಸಾರವನ್ನು ಬದುಕಿನ ಮೌಲ್ಯಗಳನ್ನು ಜನತೆಗೆ ಮುಟ್ಟಿಸುವ ಸುಲಭ ಮಾಧ್ಯಮ. ಅಂದರೆ, ಕೇಳುಗರಿಗೆ ರಸಾನುಭವ-ಬದುಕಿನ ಬಗ್ಗೆ ಉತ್ತಮಿಕೆಯನ್ನು ಒಡಮೂಡಿಸುವ ಹಾಗೆ ಕಾವ್ಯಗಳನ್ನು ವಾಚಿಸುವ (ಹಾಡುವ)ವರನ್ನು ಗಮಕಿ ಎನ್ನುವುದು ರೂಢಿ. ಹಾಗೆಯೇ ಕಾವ್ಯದ ಅಂತರಾಥ‍ದ ಸೊಗಸು-ಸೊಬಗು-ಸೊಗಡನ್ನು ಅರ್ಥೈಸಿ ಬಿತ್ತರಿಸುವವರು ವ್ಯಾಖ್ಯಾತರು ಯಾ ವ್ಯಾಖ್ಯಾನಕಾರರು (ಕಾಮೆಂಟೇಟರ್) ಎಂದು ಕರೆಯಿಸಿಕೊಳ್ಳುತ್ತಾರೆ. ಬಹು ಹಿಂದೆ ರಾಜರ ಆಸ್ಥಾನಗಳಲ್ಲಿ ಕವಿಗಳು,ಸಂಗೀತಗಾರರು, ನೃತ್ಯಕಲಾವಿದರು-ಇಂತಹವರಿಗೆ ಮಾನ್ಯತೆಗಳಿದ್ದಂತೆಯೇ ಗಮಕಿಗಳಿಗೂ ಅತ್ಯುತ್ತಮ ಸ್ಥಾನಗಳಿದ್ದವು.

ಕನ್ನಡ, ತಮಿಳು, ತೆಲುಗು ಮೊದಲಾದ ಅನೇಕ ಭಾಷಾ ಸಾಹಿತ್ಯ ಇತಿಹಾಸದಲ್ಲಿ ಕವಿ, ಗಮಕಿ, ವಾದಿ ಹಾಗೂ ವಾಗ್ಮಿ- ಇಂತಹ ನಾಲ್ಕು ವಿಭಾಗಗಳಲ್ಲಿ ಪಾಂಡಿತ್ಯವನ್ನು ಗುರುತಿಸಿರುವುದನ್ನು ಗಮನಿಸಬಹುದು. ಇದರಿಂದ, ಗಮಕದ ವಿಶೇಷತೆ, ಇದೊಂದು ಸರ್ವಮಾನ್ಯತೆ ಗಳಿಸಿದ್ದ ಕಲೆ ಎಂಬ ಅಂಶ ಮನವರಿಕೆಯಾಗುತ್ತದೆ. ಈ ವಿಚಾರಗಳಿಗೆ ಘೋಷಕವಾಗಿ ಪ್ರಾಚೀನ ಕಾವ್ಯಶಾಸ್ತ್ರಾದಿ ಕೃತಿಗಳಲ್ಲಿ ಈ ಕಲೆಯನ್ನು ಕುರಿತಂತೆ ಕಂಡುಬರುವ ಕೆಲವು ವಿಷಯಗಳನ್ನು ಉಲ್ಲೇಖೀಸಬಹುದು:

ವಾಲ್ಮೀಕಿ ಈ ಕಲೆಯನ್ನು ಲಯ ಸಮನ್ವಿತಾಂ... ಎಂದೂ ಮಂಗರಾಜ ನಿಘಂಟುಕಾರ ವಾಚಕ, ಲಿಪಿಯನೋದುವಂ.. (ಪದ್ಯ 360) ಎಂದೂ ನಿಜಗುಣಶಿವಯೋಗಿ ತನ್ನ ವಿವೇಕ ಚಿಂತಾಮಣೀ ಕೃತಿಯಲ್ಲಿ ತಾನಮಾನಂದೋಚೆ ವಿಶ್ರಮಣನನಱೆದು ವ್ಯಕ್ತಿಗೈದು ಕೇಳ್ವರ ಕಿವಿಗೊಳಿಸಿ ಮೃದುಮಧುರ ವರ್ಣೋಚ್ಚಾರಣಂ ಮಾಳ್ಪರ್ ಗಮಕಿಗಳ್ ಎಂದೂ ತಮಿಳಲ್ಲಿ ಆರುಂಬೊರುಳೈಚೆಂಬೊರುಳ್ ನಡೈಯಾಯ್ ಕ್ಕಾಟ್ಟಿಪಾಡುವೋನ್ ಗಮಕನ್ (ಗೂಢವಾದ ಅರ್ಥಗಳನ್ನು ಸ್ಫುಟವಾಗಿ ಗೊತ್ತಾಗುವ ಹಾಗೆ ಬಿಡಿಬಿಡಿಸಿ ಹಾಡುವಾತ ಗಮಕಿ) ಎಂದೂ ನೀತಿಪಾಠದಲ್ಲಿ-

ಎಡರದೆ ತಡೆಯದೆ ತಲೆಯಂ

ಕೊಡಹದೆ ಕಡುವಹಿಲ ಜಾಡ್ಯವೆನಿಸದೆ ರಸಮಂ

ಕೆಡಿಸದೆ ಸರ್ವರ ಚಿತ್ತ

ಕ್ಕೊಡಬಡಮೊದುವನೆಗಮಕಿ ಕನ್ನಡ ಜಾಣಾ

ಎಂದರೆ, ಕಾವ್ಯವೋದುದಲ್ಲಿ (ಹಾಡುವಲ್ಲಿ) ಎಡವದಂತೆ, ತೊಡರಿಸದಂತೆ, ಸಲಿಲದಂತೆ ನಿರರ್ಗಳವಾಗಿ ಸಾಗುವಂತೆ ತಲೆಕೊಡವದಂತೆ, ರಸ ಕೆಡಿಸದಂತೆ, ಎಲ್ಲರ ಮನರಂಜಿಸುವಂತೆ ವಾಚಿಸಬಲ್ಲವ-ಗಮಕಿ ಎಂದೂ ಹೇಳಿದೆ.

ಕಲೆ


ಕನ್ನಡದ ಆದಿಕವಿ ಪಂಪನ ವಿಕ್ರಮಾಜು‍ನವಿಜಯ (ಪಂಪಭಾರತ) ಕಾವ್ಯದಲ್ಲಿ:

ಕವಿ ಗಮಕಿ ವಾದಿ ವಾಗ್ಮಿ

ಪ್ರವರರ ಪಂಡಿತರ ನೆಗೞ್ದ ಮಾತಱೆವರ ಸ

ಬ್ಬವದವರೊಡನಂತೆಸೆದ

ನ್ನವಾಸದೊಲಗದೊಳಿರ್ಪನಾಗಳ್ ಹರಿಗಂ

ಎಂದು ಹೇಳಿದೆ.

ಪೊನ್ನ ತನ್ನ ಶಾಂತಿಪುರಾಣ ಕಾವ್ಯದಲ್ಲಿ ತನ್ನನ್ನು ಪ್ರಶಂಸೆ ಮಾಡಿಕೊಂಡಿರುವ ಸಂದಭ‍ದ ಪದ್ಯವೊಂದರಲ್ಲಿ ಗಮಕಿಯ ವಿಚಾರ ಹೀಗೆ ನಿರೂಪಣೆಗೊಂಡಿದೆ:

ಇದಿರ್ಗೆ ಬರೆ ಪೊನ್ನಿಗಂ ಕಿಡಿ

ಸದಿರಂ ಕವಿ ಗಮಕಿ ವಾದಿ ವಾಗ್ಮಿಗಳ ಕವಿ

ತ್ವದ ಗಮಕಿತ್ವದ ವಾದಿ

ತ್ವದ ವಾಗ್ಮಿತ್ವದ ಪೊಡರ್ಪುಮಂದರ್ಪಮುಮಂ


ಹರಿಹರ ತನ್ನ ನಂಬಿಯಣ್ಣನ ರಗಳೆಯಲ್ಲಿ ಗೇಯಗೋಷ್ಠಿ, ಗಮಕಿತ್ವದ ವಾಗ್ಮಿವೃಂದದೊಳ್ ನಂಬಿಯಣ್ಣನು ಕವಿಗಮಕಿ ವಾದಿ ವಾಗ್ಮಿಗಳನ್ನು ಉಪಚರಿಸಿ, ಗೌರವಿಸುತ್ತಿದ್ದ ಪರಿ ತಿಳಿಯಬರುತ್ತದೆ. ಇನ್ನು ಲಕ್ಷ್ಮೀಶನಲ್ಲಿ ಸ್ಪಷ್ಟವಾಗಿ ಕವಿಗಮಕಿಗಳ ಕುರಿತ ಚಿತ್ರಣ ನಮಗೆ ದೊರೆಯುತ್ತದೆ. ದುರ್ಗಸಿಂಹ ತನ್ನ ಕನ್ನಡ ಪಂಚತಂತ್ರದಲ್ಲಿಯೂ ಶ್ರೀಮಾದಿರಾಜ ಎಂಬುವ ಮುನಿಯ ಕವಿಗಮಕಿವಾದಿ ವಾಗ್ಮಿ ಪ್ರವರನೆಂದಿದ್ದಾನೆ. ಕಬ್ಬದ ಸೃಜನೆಯಲ್ಲಿ ವಿಶಿಷ್ಟರೆನಿಸುವ ಕನಕದಾಸರಂತೂ ತಮ್ಮ ಮೋಹನ ತರಂಗಿಣಿ ಹಾಡುಗಬ್ಬದಲ್ಲಿ (3-40) ಶ್ರೀಕೃಷ್ಣನಿದ್ದ ದ್ವಾರಕೆಯನ್ನು ಬಣ್ಣಿಸುವಲ್ಲಿ ಹೀಗೆ ಹಾಡಿದ್ದಾರೆ:


ರವಿ ಸಿದ್ಧಾನ್ತ ಪಾಠಕರಷ್ಟಭಾಷಾ

ಕವಿ ಗಮಕಿಗಳು ತಾರ್ಕಿಕರು

ವಿವಿಧ ವಿದ್ವತ್ಸಭೆ ನೆೞೆದುದು ಲಲಿತಾ ಭಾಗ‍ವಿ..ಯ

ಕಾಂತನ ಪುರದೊಳಗೆ ಎನ್ನುವಲ್ಲಿ ಜ್ಯೋತಿಷಿಗಳ ಕುರಿತ ಅಂಶವೂ ಬಿತ್ತರಗೊಂಡಿದೆ.

ಶಿವ ಪಾರಮ್ಯವನ್ನು ಮೆರೆದ ಭೀಮಕವಿಯ ಬಸವಪುರಾಣದಲ್ಲಿ ಕವಿಗಮಕಿವಾದಿ ವಾಗ್ಮಿಗಳ ಸಂಪೂರ್ಣ ಚಿತ್ರಣ ದೊರೆಯುತ್ತದೆ.

ಗಮಕ ಕಲೆಯ ವಿಷಯವಾಗಿ ಪುರಂದರದಾಸರ ಒಂದು ಕೀರ್ತನೆ ಬಹಳ ಮುಖ್ಯವಾದ ಕೆಲಸವು ವಿಷಯಗಳನ್ನು ತಿಳಿಸುತ್ತದೆ.

ತಾಳ ಬೇಕು ತಕ್ಕ ಮೇಳ ಬೇಕು

ಶಾಂತ ವೇಳೆ ಬೇಕು-ಗಾನವ ಕೇಳಬೇಕೆನ್ನುವಗೆ ಪ


ಚ ಯತಿಪ್ರಾಸವಿರಬೇಕು ಗತಿಗೆ ನಿಲ್ಲಿಸಬೇಕು

ರತಿಪಿತನೊಳು ಅತಿಪ್ರೇಮವಿರಬೇಕು


ಗಳ ಶುದ್ಧವಿರಬೇಕು-ತಿಳಿದು ಪೇಳಲಿ ಬೇಕು

ಕಳವಳ ಬಿಡಬೇಕು-ಕಳೇ ಮುಖವಿರಬೇಕು ೨


ಅರಿತವರಿರಬೇಕು-ಹರುಷ ಹೆಚ್ಚಲಿ ಬೇಕು

ಪುರಂದರ ವಿಠಲನ-ಪರದೈವವೆನಬೇಕು ೩


ಈ ಎಲ್ಲಾ ಅಂಶಗಳನ್ನೂ ಗಮನಿಸಿ, ಶ್ರದ್ಧಾಭಕ್ತಿಯಿಂದ ಕವಿಕೃತಿಯನ್ನು ಚೆನ್ನಾಗಿ ಅಭ್ಯಾಸ ಮಾಡಿ ಅದರ ಸಂಪೂರ್ಣ ರಸಭಾವಗಳು ಶ್ರೋತೃಗಳಲ್ಲಿ ಉದ್ಬೋಧವಾಗುವಂತೆ ಮಾಡುವ ಗಮಕಿ ನಿಜವಾಗಿ ಆ ಹೆಸರಿಗೆ ತಕ್ಕವನಾಗುತ್ತಾನೆ. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತವೇ ಮೊದಲಾದ ನವರಸಗಳೂ ಮೂಡಿಬರುವಂತೆ ಮಾಡುವುದು ನಿಜವಾದ ವಾಚನ ವೈಖರಿಯ ಅಗ್ಗಳಿಕೆ. ಯತಿ, ಗಣ, ಪ್ರಾಸ ಇತ್ಯಾದಿಗಳನ್ನೂ ಷಟ್ಪದಿ, ಸಾಂಗತ್ಯ, ರಗಳೆ, ಶತಕ, ತ್ರಿಪದಿ, ಕಂದ ಮೊದಲಾದ ಛಂದೋವೈವಿಧ್ಯವನ್ನೂ ಗಮಕಿ ಅರಿತಿರಬೇಕು.

ಸುಶ್ರಾವ್ಯವಾಗಿ ವಾಚನ ಮಾಡಲು ಶ್ರುತಿ, ಗತಿಗಳನ್ನು ಅನುಸರಿಸಬೇಕು. ಸುಕಂಠದಿಂದ ಸ್ಫುಟವಾಗಿ ಕಾವ್ಯದ ನುಡಿಯನ್ನು ನಾಲಗೆಯಲ್ಲಿ ಕುಣಿಸಬೇಕು. ತಾನು ಆನಂದಪಟ್ಟು ವಾಚಿಸಿದಲ್ಲಿ ಕೇಳುವವರಿಗೂ ಆನಂದವಾಗುವುದು. ಅವರ ಹೃದಯವೂ ಮಿಡಿಯುವುದು. ಶ್ರುತಿಭೇದ, ರಾಗಭೇದ, ಸಂಗೀತದ ಸ್ವರಸ್ಥಾಯಿ, ಗಮಕ, ವರ್ಣ ಸಂಸ್ಕೃತಿಯ ಜೀವಾಳ- ಇದನ್ನು ತಿಳಿದುಕೊಳ್ಳದಿದ್ದರೆ ಗಮಕ ಹಿತವಾಗಿರುವುದಿಲ್ಲ. ಇನ್ನು ತಾಳದ ವಿಷಯ. ಪದ್ಯದ ಸಹಜವಾದ ಗತಿ, ಲಯ, ಏರಿಳೀತಗಳ ಕಡೆ ಗಮನವಿರಬೇಕು. ಎಲ್ಲಿ ಮುರಿಯಬೇಕು, ಎಲ್ಲಿ ನಿಲ್ಲಿಸಬೇಕು, ಎಲ್ಲಿ ನೆರವಲು ಮಾಡಬೇಕು ಎಂಬುದನ್ನು ಅಥ‍ವಾಗುವಂತೆ ಜಾಗೃತಿಯಿಂದ ಪದಗಳ ಜಾಡು ಹಿಡಿಯಬೇಕು. ವಾಚಿಸುವಾಗಲೇ ಅರ್ಥ ಮೂಡಬೇಕು. ಅಭಿನಯದ ಮುದ್ರೆಗಳ ಪರಿಚಯ ಪಡೆದುಕೊಂಡು ಸಮಯವರಿತು ಅವನ್ನು ಪ್ರಯೋಗ ಮಾಡುವುದು ಲೇಸು.