ಪುಟ:Mysore-University-Encyclopaedia-Vol-6-Part-3.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ್ಯಾಸೋವಿನ ಜೀವನಚರಿತ್ರೆಗೆ ಸಂಬಂಧಿಸಿದ ನಾಟಕ. ಇಫಿಜೆನಿ ನಾಟಕದಲ್ಲಿ ಬರುವ ಮಿಂಚಿನಂಥ ಘಟನೆಗಳಾಗಲಿ ಮಾತಿನ ಚಮತ್ಕಾರವಾಗಲಿ ಇಲ್ಲಿಲ್ಲ. ಇದರಲ್ಲಿ ಭಾವಗೀತೆಯ ಸಾಂಧ್ರತೆಯೇ ಹೆಚ್ಚು. ಕ್ರಿಯೆ,ಸಂಘರ್ಷಗಳು ಇಲ್ಲವೆಂದರೂ ಇದೊಂದು ಮನೋವಿಶ್ಲೇಷಣಾತ್ಮಕ ನಾಟಕ. ಕೇವಲ ಐದೇ ಪಾತ್ರಗಳಿರುವ ಈ ನಾಟಕದ ಕಥೆಯೆಲ್ಲವೂ ಫೆರ್ರರ ನಗರದ ಡ್ಯೂಕ್ ಎರಡನೆಯ ಆಲ್ ಫ್ಯಾನ್ಸೋವಿನ ಆಸ್ಥಾನದಲ್ಲಿ ನಡೆಯುತ್ತದೆ. ಆತ್ಮ ಸಂಯಮವನ್ನು ಪರಿಪೂರ್ಣತೆಯನ್ನು ಪಡೆಯಲಾರದೆ ತೊಳಲುವ ಟ್ಯಾಸೋ ಕವಿಯ ವ್ಯಗ್ರ ಅಂತರಂಗದ ಚಿತ್ರಣ ಇಲ್ಲಿದೆ. ನಾಟಕ ಪ್ರಾರಂಭವಾಗುವಾಗ ಕವಿ ತನ್ನ ಮೇರು ಕೃತಿ ಜೆರೂಸಲೆಂ ಲಿಬರ್ಯಾಟ ಎಂಬ ಭವ್ಯ ಕಾವ್ಯವನ್ನು ಬರೆದು ಅಪೂರ್ವ ಮನ್ನಣೆಗೆ ಪಾತ್ರನಾಗಿದ್ದಾನೆ. ತನ್ನ ಆಶ್ರಯದಾತ ಡ್ಯೂಕ್ ಆಲ್ ಫಾನ್ಸೋವಿನ ಸೋದರಿ ಲಿಯೋನೋರ್ ದ ಎಸ್ತ ಕವಿಯನ್ನು ಬಹುವಾಗಿ ಮೆಚ್ಚಿ ಅವನಿಗೆ ಜಯಮಾಲೆ ಅರ್ಪಿಸಿದ್ದಾಳೆ. ಇದರಿಂದ ಆಗತಾನೆ ರೋಮಿನಿಂದ ಹಿಂದಿರುಗಿರುವ, ಡ್ಯೂಕನ ಕಾರ್ಯದರ್ಶಿ ಆಂಟೋನಿಯೋ ಮಾಂಟಿಕ್ಯಾಟಿನೋವಿಗೆ ಕವಿ ಟ್ಯಾಸೋವಿನ ವಿಷಯದಲ್ಲಿ ಅಸೂಯೆ ಅನಾದರಗಳು ಹುಟ್ಟಿವೆ. ಕವಿ ತನ್ನ ಯಶಸ್ಸಿನ ಬಗ್ಗೆ ಇಲ್ಲ ಸಲ್ಲದ ಪ್ರಚಾರ ಮಾಡಿಕೊಂಡು, ತಾನು ವರ್ಜಿಲ್, ಆರಿಯೋಸ್ಟೊ ಮುಂತಾದ ಮಹಾಕವಿಗಳ ಸಾಲಿಗೆ ಸೇರಿದವನೆಂದು ಹೇಳಿಕೊಳ್ಳುತ್ತಿದ್ದಾನೆಂದು ಭಾವಿಸಿ ಆಂಟೋನಿಯೋವಿಗೆ ಸಿಟ್ಟು ಬರುತ್ತದೆ. ಕವಿ ರಾಜಕಾರಣಿಗಳಿಬ್ಬರ ನಡುವೆ ಬಿರುಕು ಹುಟ್ಟುತ್ತದೆ. ಟ್ಯಾಸೋವಿನ ಮೇಲೆ ದೇಶದ್ರೋಹದ ಅಪಾದನೆ ಬರುತ್ತದೆ. ಅವನನ್ನು ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಅನಂತರ ಡ್ಯೂಕನ ಆಜ್ಞೆಯಂತೆ ಆಂಟೋನಿಯೋ ಭಗ್ನ ಹೃದಯದ ಕವಿಯನ್ನು ಬಿಡುಗಡೆ ಮಾಡುತ್ತಾನೆ. ಟ್ಯಾಸೋ ಫೆರ್ರರ ನಗರವನ್ನು ಬಿಟ್ಟು ಹೊರಡಲು ತನಗೆ ಡ್ಯೂಕನ ಅಪ್ಪಣೆ ದೊರಕುವಂತೆ ಮಾಡಬೇಕೆಂದು ಆಂಟೋನಿಯೋನನ್ನು ಪ್ರಾರ್ಥಿಸುತ್ತಾನೆ. ಕೊನೆಯ ಗಳಿಗೆಯಲ್ಲಿ ನತದೃಷ್ಟ ಟ್ಯಾಸೋ ರಾಜಕುಮಾರಿ ಲಿಯೋನಾರಳಲ್ಲಿ ತನಗಿರುವ ಗಾಢ ರಹಸ್ಯಪ್ರೇಮವನ್ನು ತೋಡಿಕೊಂಡು ಅವನಿಂದ ತಿರಸ್ಕೃತನಾಗುತ್ತಾನೆ. ಎಲ್ಲಾ ಕಡೆಯೂ ನಿರಾಶೆಯನ್ನು ಕಾಣುತ್ತಿರುವ ಕವಿಗೆ ರಾಜಕಾರಣಿ ಆಂಟೋನಿಯೊವಿನ ಗೆಳೆತನವೆ ಅಮೃತಸೇಚನವಾಗುತ್ತದೆ. ಹೀಗೆ ಇದ್ದಕ್ಕಿದ್ದಹಾಗೆ ಮುಗಿಯುವ ಈ ನಾಟಕ ಅಪೂರ್ಣವೆನಿಸಿದರೂ ಅಲ್ಲಲ್ಲಿ ಕಾವ್ಯಾತ್ಮಕವಾದ ಹೊಳಪಿನಿಂದ ಕೂಡಿದೆ. ಆದರೆ ಆಂಟೋನಿಯೋ ಪಾತ್ರ ವಿನ್ಯಾಸ ಸಹಜವೆನಿಸುವಷ್ಟು ವಿರೋಧಾಭಾಸಗಳಿಂದ ತುಂಬಿದೆ. ಕುಟೀಲ ರಾಜಕಾರಣಿ ಇದ್ದಕ್ಕಿದ್ದಹಾಗೆ ಕವಿಯ ಆತ್ಮೀಯ ಗೆಳೆಯನಾಗುವ ಸಂಗತಿಯಲ್ಲಿ ನಾಟ್ಯಾಂಶವೇ ಇಲ್ಲ. ಆದರೆ ಕವಿಯ ಅಂತರಂಗದ ತುಮುಲವನ್ನೂ ಆಸೆ ನಿರಾಸೆಗಳ ಏರಿಳಿತಗಳನ್ನೂ ಗಯಟೆ ಅತ್ಯಂತ ಹೃದಯಸ್ಪರ್ಶಿಯಾಗಿ ವಿಶ್ಲೇಷಿಸಿದ್ದಾನೆ. ಇಂಗ್ಲಿಷ್ ಕವಿ ಕೀಟ್ಸ್, ಟ್ಯಾಸೋನ ಅಂತರಂಗದ ಸ್ವರೂಪವನ್ನು ವಿವರಿಸುತ್ತ ಆತ ಗೋಸುಂಬೆಯಂಥವನು, ಅವನಿಗೆ ವಿಶಿಷ್ಟ ವ್ಯಕ್ತಿತ್ವವಿಲ್ಲದ, ಆದರೆ ಮಾನವ ಕೋಟಿಯನ್ನೇ ಪ್ರತೀಕಿಸುವಂಥ ಸ್ವರೂಪವುಳ್ಳ ಕವಿಯ ಸಂಕೀರ್ಣ ಅಂತರಂಗವನ್ನು ಗಯಟೆ ಈ ನಾಟದದಲ್ಲಿ ತುಂಬ ಅರ್ಥವತ್ತಾಗಿ ಪ್ರತಿರೂಪಿಸಿದ್ದಾನೆ.

ವಿಲ್ ಹೆಲ್ಮ್ ಮೈಸ್ಟರ್ಸ್ ಅಪ್ರೆಂಟಿಸ್ ಷಿಪ್ (೧೭೯೫-೯೬): ಇಟಲಿಯ ಪ್ರವಾಸದಿಂದ ಗಯಟೆ ವೈಮರ್ ಗೆ ಹಿಂದುರುಗಿದ ಮೇಲೆ ಸುಮಾರು ೩೫ ವರ್ಷ ವೈಮರ್ ಥಿಯೇಟರಿನ ನಿರ್ದೇಷಣಕ್ಕಾಗಿ ಕೆಲಸ ಮಾಡಿದ. ಥಿಯೇಟರಿನ ಆಡಳಿತದಲ್ಲಿ ತನಗೆ ಲಭಿಸಿದ ಗಾಢ ಅನುಭವಗಳನ್ನು ಈ ಕಾದಂಬರಿಯಲ್ಲಿ ರೂಪಿಸಿದ್ದಾನೆ.ಕವಿ ಇದರಲ್ಲಿ ಇಂಗ್ಲಿಷ್ ಕಾದಂಬಿಕಾರ ರಿಚರ್ಡ್ಸನ್ನನ ಪ್ರಭಾವದಿಂದ ತಪ್ಪಿಸಿಕೊಂಡು ಹೊಸ ಸಂವೇದನೆಯನ್ನೊಳಗೊಂಡ, ಆತ್ಮಕಥನೀಯ ಕಾದಂಬರಿ ಎನ್ನ ಬಹುದಾದ ಒಂದು ಹೊಸ ಪ್ರಕಾರವನ್ನೇ ಸೃಷ್ಟಿಸಿದ್ದಾನೆ. ಈ ಕಾದಂಬರಿಯ ರಚನೆ ತೀರ ಶಿಥಿಲವಾಗಿದ್ದು, ಕಥಾವಸ್ತು ಹಾಗು ಪಾತ್ರಗಳು ಕೇವಲ ಒಂದು ನೀತಿ ಪಾಠದ ಅಥವಾ ತತ್ವನಿರೂಪಣೆಯ ಸಾದನವಾಗಿವೆಯೆಂದು ತೋರುತ್ತದೆ.ಒಬ್ಬ ಯುವಕನ ವ್ಯಕ್ತಿತ್ವ ಸಂಪೂರ್ಣವಾಗಿ ವಿಕಾಸವಾಗುವುದಕ್ಕೆ ಮುಂಚೆ ಅವನಿಗೆ ಎಂಥ ಅನುಭವಗಳು ಲಭಿಸಬಹುದೆಂಬುದನ್ನು ಇಲ್ಲಿ ಕಾಣಬಹುದು. ವಿಲ್ ಹೆಲ್ಮ್ ಪ್ರೀತಿಸುವ ಮಾರಿಯಾನಿ, ಮೇನಾ, ನಟಾಲಿ, ತೆರೆಸಾ, ಮುಂತಾದ ಹೆಣ್ಣುಗಳು, ವಿಲ್ ಹೆಲ್ಮ್ ನ ಸಾಕುಮಗಳು ಮಿಗ್ನಾನ್, ಚಿತ್ರವಿಚಿತ್ರ ಅಲೌಕಿಕ ಅದ್ಭುತ ವ್ಯಕ್ತಿ ಹಾರ್ಪರ್-ಇವರು ಕಾದಂಬರಿಯ ಹಾಸು ಹೊಕ್ಕಾಗಿ ಬರುತ್ತಾರೆ. ಕಥೆ ಎಂಟು ಘಟ್ಟಗಳಾಗಿ ವಿನ್ಯಾಸಗೊಂಡು ಒಂದಕ್ಕೊಂದು ಸಂಬಂದವಿಲ್ಲದಂತೆ ಬೆಳೆಯುತ್ತದೆ. ವ್ಯಾಪಾರಿಯಾಗಿದ್ದ ವಿಲ್ ಹೆಲ್ಮ್ ನ ಅನುಭವಗಳು, ರಂಗಭೂಮಿಯ ಜೀವನದ ವಾಸ್ತವ ಘಟನೆಗಳು, ಲೋಥಾರಿಯೋವಿನ ದುರ್ಗದಲ್ಲಿ ನಡೆಯುವ ಅದ್ಭುತ ಪ್ರಸಂಗಗಳು- ಇವು ಕಾದಂಬರಿಯ ಮುಖ್ಯಾಂಶಗಳು. ವ್ಯಕ್ತಿ ಸಮಾಜದ ಅಂಗವಾಗಿ ಬದುಕುವುದರ ಜೊತೆಗೆ ಬದುಕಿನ ನಾನಾ ಅನುಭವಗಳ ಸಾರವನ್ನು ರಕ್ತಗತ ಮಾಡಿಕೊಳ್ಳಬೇಕು, ತನ್ನ ಅರಿಯನ್ನು ಕಲ್ಪನೆಯ ಕಣ್ಣನ್ನು ನಕ್ಷತ್ರ ಲೋಕದಿಂದಾಚೆಗೆ ಕೊಂಡೆಯ್ಯಲೆತ್ನಿಸಬೇಕು-ಎಂಬ ಮಾತು ಇಲ್ಲಿ ಮುಖ್ಯವೆಂದು ತೋರುತ್ತದೆ. ಕಾದಂಬರಿಯ ಕೊನೆಯಲ್ಲಿ ವಿಲ್ ಹೆಲ್ಮ್ ನ ಸಾಕು ಮಗಳು ಮಿಗ್ನಾನ್ ಸತ್ತಾಗ ಅವಳ ಶವದ ಬಳಿ ನಾಲ್ವರು ತರುಣರು ಶೋಕಗೀತೆ ಹಾಡುತ್ತಾರೆ. ಈ ಗೀತೆಯಲ್ಲಿ ಇಡೀ ಕಾದಂಬರಿಯ ತತ್ವವೇ ಅಡಗಿದೆ ಎನ್ನುವುದುಂಟು.'ನಿನ್ನ ಜೀವನದಲ್ಲಿ ಯಾವುದು ನಿನ್ನಪಾಲಿಗೆ ಒದಗುತ್ತದೆಯೋ ಅದನ್ನು ನಿಷ್ಟೆಯಿಂದ, ನಿನ್ನ ಶಕ್ತಿ ಮೀರಿ ನೆರೆವೇರಿಸು' ಎನ್ನುವುದು ಗಯಟೆಗೆ ಪ್ರಿಯವಾಗಿದ್ದ ಆದರ್ಶ. ಕಾದಂಬರಿಯ ಪಾತ್ರ ಘಟನೆಗಳೆಲ್ಲವೂ ಈ ಅದರ್ಶಕ್ಕೆ ವಸ್ತುಪ್ರತಿರೂಪಗಳಾಗಿ ಬಂದಿವೆ ಎನ್ನುವುದು ವಿಮರ್ಶಕರ ಅಭಿಪ್ರಾಯ.

ಹರ್ಮನ್ ಮತ್ತು ಡೊರೋತಿಯ (೧೭೯೮) : ಈ ನೀಳ್ಗವನದಲ್ಲಿ ಗಯಟೆ ಗ್ರೀಕ್ ಕಲೆಯನ್ನು ಆಧುನಿಕ ಕಲ್ಪನೆಯೊಂದಿಗೆ ಹೀಗೆ ಸಮನ್ವಯಗೊಳಿಸಬಹುದೆಂದು ತೋರಿಸಿದ್ದಾನೆ. ಅತಿ ಸಾಮಾನ್ಯ ಹಳ್ಳಿಗಾಡಿನ ಪ್ರೇಮಕಥೆಯನ್ನು ಹೋಮರನ ಭವ್ಯ ಕಾವ್ಯದ ಶೈಲಿಯಲ್ಲಿ (ಹೆಕ್ಸಾಮೀಟರ್) ನಿರೂಪಿಸುತ್ತಾನಾದರೂ ಕವನ ದೋಷರಹಿತವಾಗಿದೆ. ಅದರಲ್ಲಿ ಒಂದಿಷ್ಟೂ ಅತಿಭಾವುಕತೆ ಕಂಡುಬರುವುದಿಲ್ಲ. ಇಲ್ಲಿ ಬರುವ ಪ್ರೇಮಿಗಳು, ತರುಣ , ತರುಣಿಯರು, ತಂದೆ-ತಾಯಂದಿರು, ಗ್ರಾಮ ವಾಸಿಗಳು ಮೊದಲಾದ ಎಲ್ಲ ಪಾತ್ರಗಳು ಅಚ್ಚಿನಲ್ಲಿ ಎರಕ ಹೊಯ್ದಂತಿದ್ದರು ಕಥೆಯ ನಿರೂಪಣೆಯಲ್ಲಿ ಕವಿ ಸಾಧಿಸಿರುವ ನಿರ್ಲಪ್ತತೆ, ವಸ್ತುನಿಷ್ಟೆ ಬೆರಗುಗೊಳಿಸುವಂಥವು. ತರುಣ ಪ್ಯಾಲೆಸ್ಟೈನಿನಿಂದ ಬಂದ ನಿರಾಶ್ರಿತರಾಗೆ ಅನ್ನ ಬಟ್ಟೆ ಹಂಚಲು ಹೋದಾಗ ಆ ಗುಂಪಿನಲ್ಲಿದ್ದ ಡೋರೋತಿಯ ಎಂಬ ಹುಡುಗಿಯನ್ನು ಕಂಡು ಪ್ರೀತಿಸುತ್ತಾನೆ. ತಾನು ಹಂಚಲು ತಂದಿದ್ದು ವಸ್ತುಗಳನ್ನೆಲ್ಲ ಆ ಹುಡುಗಿಯ ವಶಕ್ಕೆ ಕೊಟ್ಟುಬಿಡುತ್ತಾನೆ. ಶ್ರೀಮಂತ ಕುಟುಂಬದ ಹೆಣ್ಣನ್ನು ತಂದು ಮಗನಿಗೆ ಮದುವೆ ಮಾಡಬೇಕೆಂದಿದ್ದ ಹರ್ಮನನ್ನು ತಂದೆಗೆ ಇದರಿಂದ ನಿರಾಶೆಯಾಗುತ್ತದೆ,ಆದರೆ ಡೋರೋತಿಯಳ ಸಚ್ಚರಿತ್ರೆ, ಸದ್ಗುಣ ಸೌಂದರ್ಯಗಳ ಬಗೆಗೆ ಸಂತೃಪ್ತನಾದ ತಂದೆ ಇಬ್ಬರೂ ಮದುವೆಯಾಗಲು ಅನುಮತಿ ನೀಡುತ್ತಾನೆ. ತನ್ನ ಮನೆ ಕೆಲಸಕ್ಕಾಗಿ ನೇಮಿಸಿದ್ದ ಸೇವಕಿಯನ್ನು ಆ ಮುಗ್ಧ ಹಳ್ಳಿಯ ಹುಡುಗಿಗೆ ಹರ್ಮನ್ ಸುಳ್ಳು ಹೇಳಿ ಮನೆಗೆ ಕರೆತರುತ್ತಾನೆ. ಅವನು ಅವಳಿಗೆ ಅನಿರೀಕ್ಷಿತವಾಗಿ ನಿಜಾಂಶ ತಿಳಿಸಿದ್ದಾಗ ಅವಳ ಸಂತೋಷಕ್ಕೆ ಪಾರವಿಲ್ಲದಂತಾಗುತ್ತದೆ. ಮತ್ತೆಮತ್ತೆ ಹೋಮರನ ಭವ್ಯಪಾತ್ರಗಳನ್ನು ನೆನಪು ಮಾಡುವಂಥ ಈ ಕಥನಾ ಕವನದ ಸರಳ ಪಾತ್ರಗಳು ಗ್ರೀಕ್ ಶಿಲ್ಪಾಕೃತಿಗಳನ್ನು ಹೋಲುತ್ತವೆ. ಕ್ಲಾಸಿಗಲ್ ಸಾಹಿತ್ಯದಲ್ಲಿಇದನ್ನು ಮೀರಿಸಿದ ಪರಿಪೂರ್ಣ ಕವನ ಇನ್ನೊಂದಿಲ್ಲ.

ದಿ ಎಲೆಕ್ಟಿವ್ ಅಫಿನಿಟೀಸ್ (೧೮೦೯): ಈ ಕಾದಂಬರಿಯಲ್ಲಿ ಗಯಟೆ ವ್ಯಕ್ತಿ ವ್ಯಕ್ತಿಗಳ ನಡುವಣ ಸಂಬಂಧ ಎಷ್ಟು ಅವ್ಯಕ್ತವೂ ವಿಚಿತ್ರವೂ ಆದುದೆಂಬುದನ್ನು ಚಿತ್ರಿಸಿದಾನೆ. ಕಥಾನಾಯಕ ಎಡ್ವರ್ಡ್, ಅವನ ಹೆಂಡತಿ ಚಾರ್ಲೆಟ್, ಆಕೆ ಪ್ರೀತಿಸುವ ಕ್ಯಾಪ್ಟನ್, ಎಡ್ವರ್ಡ್ ಪ್ರೀತಿಸುವ ಓಟ್ಟೆಲಿ(ಚಾರ್ಲೆಟಳ ಸಾಕುಮಗಳು) - ಈ ನಾಲ್ವರ ವಿಷಮ ಸಂಬಂದವನ್ನು ಗಯಟೆ ಅತ್ಯಂತ ವಸ್ತುನಿಷ್ಠೆ ಶೈಲಿಯಲ್ಲಿ ನಿರೂಪಿಸಿದ್ದಾನೆ. ಕೆಲವು ಧಾತುಗಳು ಕೆಲವನ್ನು ಬಿಟ್ಟು ಉಳಿದ ಕೆಲವು ಪದಾರ್ಥಗಳೊಡನೆ ಸಂಯೋಗ ಹೊಂದುವ ಪ್ರವೃತಿ ಪಡೆದಿರುತ್ತವೆ. ಇದ ರಸಾಯನಶಾಸ್ತ್ರದಲ್ಲಿನ ಒಂದು ನೈಸರ್ಗಿಕ ವ್ಯಾಪಾರ. ಸಸ್ಯ ಹಾಗೂ ಪ್ರಾಣಿಲೋಕದ ನೈಸರ್ಗಿಕ ವ್ಯಾಪಾರಗಳನ್ನು ಬಿಡುಗಣ್ಣಿನಿಂದ