ಪುಟ:Mysore-University-Encyclopaedia-Vol-6-Part-5.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೨ ಗಾರ್ಗಿ

ಈ ಕೃತಿಯಿಂದ ಸಮಾಜವಾದೀ ವಾಸ್ತವತೆಯ ನಾಂದಿಯಾಯಿತು.

ರಷ್ಯದ ಎರಡು ಸಾಹಿತ್ಯಕ ಯುಗಗಳ ನಡುವಣ ಜೀವಂತ ಸೇತುವೆಯಂತೆ ತೋರುವ ಗಾರ್ಕಿಯ ಪಾತ್ರ 'ತಾಯಿ' ಕಾದಂಬರಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಐತಿಹಾಸಿಕ ಮುನ್ನಡೆಯೆಂದರೆ ಮಾನವನ ಹಿತಸಾಧನೆ ಎಂಬುದನ್ನು ಸ್ಪಷ್ಟಪಡಿಸಿರುವುದೇ ಈ ಕಾದಂಬರಿಯ ಹಿರಿಮೆ. ಇದು ಬರಿಯ ನೊಂದಜೀವಿಗಳ ವಾಸ್ತವಿಕ ಚಿತ್ರಣ ಮಾತ್ರವಲ್ಲ. ಅವರು ತಮ್ಮ ಹೋರಾಟದ ಮೂಲಕ ಪ್ರಪಂಚವನ್ನು ಯಾವ ರೀತಿ ಮಾರ್ಪಡಿಸಲು ಸನ್ನದ್ಧರಾಗಿದ್ದಾರೆ ಎಂಬುದನ್ನು ಇದು ವಿವರಿಸುತ್ತದೆ. ಲೆನಿನ್ ೧೯೦೭ರ ಮೇ ತಿಂಗಳಲ್ಲಿ ಲಂಡನಿನಲ್ಲಿ ನಡೆದ ರಷ್ಯದ ಸೋಷಿಯಲ್ ಡೆಮೋಕ್ರಾಟಿಕ್ ಪಕ್ಷದ ಐದನೆಯ ಅಧಿವೇಶನದಲ್ಲಿ ಗಾರ್ಕಿಯನ್ನು ಸಂಧಿಸಿದಾಗ ಈ ಕಾದಂಬರಿಯನ್ನು ರಚಿಸಿದುದಕ್ಕಾಗಿ, ಸಕಾಲದಲ್ಲಿ ಪ್ರಕಟಿಸುದುದಕ್ಕಾಗಿ ಈತನನ್ನು ಬಹುವಾಗಿ ಅಭಿನಂದಿಸಿದನೆನ್ನಲಾಗಿದೆ. ಗಾರ್ಕಿಯ ಕೃತಿಗಳಲ್ಲಿ ರಷ್ಯದ ಕಾರ್ಖಾನೆಗಳ, ಮಾಲೀಕರ, ವರ್ತಕರ, ಶ್ರೀಮಂತರ ಮತ್ತು ಬುದ್ಧಿಜೀವಿಗಳ ಚಿತ್ರಗಳನ್ನೂ ಕಾಣಬಹುದು. ಈ ವರ್ಗದ ವ್ಯಕ್ತಿಗಳನ್ನು ಚಿತ್ರಿಸುವಾಗ ಗಾರ್ಕಿ ಅವರನ್ನು ಬಂಡವಾಳಗಾರರೆಂಬ ಕಾರಣದಿಂದ ಮಾತ್ರ ಅವಹೇಳನ ಮಾಡುವುದಿಲ್ಲ. ಗಾರ್ಕಿಯ ಇತರ ಕಾದಂಬರಿಗಳಾದ ದಿತ್ರಿ,ಪೋಮಾಗಾರ್ದೇವ್, ದಿ ಲೈಫ್ ಆಫ್ ಮಾತ್ವೆ ಕೋಷ್ಮಿಯಾಕಿನ್ ಮತ್ತು ಆರ್ತ ಮನೋವ್ಸ್ ಗಳು ಕ್ರಾಂತಿಪೂರ್ವ ರಷ್ಯದ ಒಡೆಯರ ಜೀವನವನ್ನು ಕುರಿತವುಗಳು. ಅನೇಕ ವೇಳೆ ಈ ಕಾದಂಬರಿಗಳಲ್ಲಿ ಬರುವ ವ್ಯಕ್ತಿಗಳು ದೃಢನಿಶ್ಚಯದಿಂದ ಕೆಲಸ ಮಾಡತಕ್ಕವರು, ಸಾಹಸಿಗಳು, ಕ್ರಿಯಾಶೀಲರು ಮತ್ತು ಸ್ವಪ್ರಯತ್ನದಿಂದ ಮಹತ್ತರವಾದ ಕೆಲಸಗಳನ್ನು ಸಾಧಿಸಿದವರು. ಈ ವರ್ಗದವರನ್ನು ಚಿತ್ರಿಸುವಾಗ ಅವರನ್ನು ನಿಂದಿಸುವುದಾಗಲೀ ಅವಹೇಳನಕ್ಕೆ ಗುರಿ ಮಾಡುವುದಾಗಲಿ ಗಾರ್ಕಿಯ ಉದ್ದೇಶವಲ್ಲ. ಇಂಥ ಜನರ ಜೀವನವನ್ನು ಬಂಡವಾಳ ಸಮಾಜ ಯಾವ ರೀತಿ ವಿರೂಪಗೊಳಿಸುತ್ತದೆ, ಅವರ ಆತ್ಮವನ್ನು ಯಾವ ರೀತಿ ಕುಂಠಿಸುತ್ತದೆ. ಹಣದ ಗಳಿಕೆಯ ಆಸೆ ಹೇಗೆ ಅವರನ್ನು ಕ್ರೂರಿಗಳನ್ನಾಗಿ ಮಾಡುತ್ತದೆ - ಎಂಬುದನ್ನು ಇವನ ಕೃತಿಗಳು ಸಾಹಿತ್ಯಕವಾಗಿ ಪ್ರತಿಬಿಂಬಿಸುತ್ತವೆ. ಆರ್ತಮನೋವ್ಸ್ ಕಾದಂಬರಿ ರಷ್ಯದ ವರ್ತಕವರ್ಗದ ಮೂರು ಪೀಳಿಗೆಗಳ ಜೀವನವನ್ನು ಒಳಗೊಂಡಿದೆ. ಈ ಕುಟುಂಬದ ಯಜಮಾನ ಇಲ್ಯ ಆರ್ತಮನೋವ್ ತನ್ನ ಸ್ವಂತ ನೆಲದಲ್ಲಿಯೇ ಬೆಳೆದು ಅಚಲವಾಗಿ ನಿಂತಿರುವ ಓಕ್ ಮರದಂತೆ ದೃಢನಾಗಿರುತ್ತನೆ. ಆತ ತನ್ನ ಹಣ, ಕಾಲ ಮತ್ತು ದುಡಿಮೆಗಳನ್ನು ತನ್ನ ಊರನ್ನು ಸಂಪದ್ಯುಕ್ತವಾದ ಪಟ್ಟಣವಾಗಿ ಮಾರ್ಪಡಿಸಲು ಸಂಕಲ್ಪ ಉಳ್ಳವನು. ಆದರೆ ಅವನ ಚಟುವಟಿಕೆಗಳೆಲ್ಲ ಶೋಷಣೆಯ ಆಧಾರದ ಮೇಲೆ ನಿಂತಿರುತ್ತವೆ. ಅವನ ಮಕ್ಕಳು ಮತ್ತು ಮೊಮ್ಮಕ್ಕಳು ಕ್ರಮೇಣ ಸೋಮಾರಿಗಳಾಗಿ, ಧ್ಯೇಯರಹಿತ ಜೀವನದ ಕೆಸರಿನಲ್ಲಿ ಬಿದ್ದು ಅಲ್ಪರಾಗುತ್ತಾರೆ. ವ್ಯಕ್ತಿ ತನಗೆ ತಾನೇ ಎಷ್ಟೇ ಉನ್ನತಸತ್ತ್ಯನಾಗಿದ್ದರೂ ಸಾಮಾಜಿಕ ಅರ್ಥವ್ಯವಸ್ಥೆ ಶೋಷಣಾತ್ಮಕವಾದಾಗ ಅದರಿಂದ ಅವನೂ ಪಾರಾಗಲಾರದೆ ಅವನ ಭಾವೀ ಸಂತಾನವೆಲ್ಲ ವ್ಯರ್ಥಜೀವಿಗಳಾಗಿ ಪತನಗೊಳ್ಳುತ್ತಾರೆಂಬುದನ್ನೂ ಈ ಕಾದಂಬರಿಯಲ್ಲಿ ಸಾಂಕೇತಿಸಲಾಗಿದೆ. ಗಾರ್ಕಿಯ ಕಡೆಯ ಮತ್ತು ಬಹು ದೊಡ್ಡ ಕೃತಿಯಾದ ಕ್ಲಿಂ ಸಾಮ್ ಗಿನ್ನನ ಜೀವನ - ಎಂಬುದು ಒಬ್ಬ ವ್ಯಕ್ತಿ ಹೇಗೆ ತನ್ನ ಸ್ವಪ್ರತಿಷ್ಠೆ ಮತ್ತು ಅಲ್ಪತೆಯಿಂದ ಅರಿವಿಲ್ಲದೆಯೆ ತನ್ನ ಜೀವನವನ್ನು ವಿಷಪೂರಿತವನ್ನಾಗಿ ಮಾಡಿಕೊಳ್ಳುತ್ತಾನೆ ಎಂಬುದನ್ನು ಕುರಿತ್ತದ್ದು ೧೮೮೦ರಿಂದ೧೯೧೭ರ ವರೆಗಿನ ಅವಧಿಯ ರಷ್ಯದ ವಿಸ್ತೃತ ದೃಶ್ಯವನ್ನು ನೀಡುವ ಈ ಕಾದಂಬರಿಯ ನಾಯಕ ಕ್ಲಿಂ ಸಾಮ್ ಗಿನ್, ಇವನೊಬ್ಬ ವಿಷಯ ಲಂಪಟ, ಸ್ವಪ್ರತಿಷ್ಠೆಯಿಂದ ಕೂಡಿದ ವಕೀಲ. ಇವನದು ಬಾಲ್ಯದಿಂದಲೂ ಯಾವ ಮಾತಿಗೂ ಸಿಕ್ಕಿಬೀಳದ, ಯಾವ ತತ್ವಕ್ಕೂ ತೆಕ್ಕೆಬೀಳದ ಯಾವ ಪ್ರಶ್ನೆಗೂ ಖಚಿತ ಉತ್ತರ ನೀಡದ ಪ್ರಕೃತಿ. ಸದಾ ತಾನು ಅನಾಥರಕ್ಷಕನೆಂದು ಬಡಾಯಿ ಕೊಚ್ಚುತ್ತಿರುತ್ತಾನೆ. ಆದರೆ ಇವನ ಜೀವನದ ಆಧಾರ ಶ್ರೀಮಂತರ ನೆರವು. ಇವನು ಹುಟ್ಟು ಗೋಸುಂಬೆ, ಸ್ವಾರ್ಥಿ. ಯಾವಾಗಲೂ ತನ್ನ ಯೋಗಕ್ಷೇಮಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾನೆ. ತಾನು ಎಲ್ಲರ ಪಕ್ಷಪಾತಿಯೆಂದು ನಟಿಸುತ್ತಾನೆ. ಆದರೆ ಯಾರ ಸಹಾಯಕ್ಕೂ ಒಂದು ಹುಲ್ಲುಕಡ್ಡಿಯನ್ನೂ ಎತ್ತುವುದಿಲ್ಲ. ಎಂಥ ಸನ್ನಿವೇಶಕ್ಕಾದರೂ ಹೊಂದಿಕೊಳ್ಳುವ ಚಾತುರ್ಯ ಇವನಲ್ಲಿದೆ. ಆದರೆ ಇವನಲ್ಲಿ ಮಾನವೀಯತೆ ಎಳ್ಳಷ್ಟೂ ಕಾಣುವುದಿಲ್ಲ. ಇವನ ನಿತ್ಯಜೀವನ ಕಪಟ ಮತ್ತು ಮೋಸದಿಂದ ತುಂಬಿದೆ.

ಗಾರ್ಕಿ ಈ ಕಾದಂಬರಿಯ ಮೂಲಕ ಪ್ರತಿಗಾಮಿ ಶಕ್ತಿಗಳ ವಿರುದ್ಧವಾದ ಮಹತ್ತರವಾದ ಹೋರಾಟ ನದೆಸಿದ್ದಾನೆ. ಬಂಡವಾಳ ಅರ್ಥವ್ಯವಸ್ಥೆಯಲ್ಲಿ ಮಾನವ ಎಷ್ಟು ಕೀಳುಮಟ್ಟವನ್ನು ತಲುಪಬಲ್ಲ ಎಂಬುದನ್ನು ಕುರಿತ ಇಂಥ ಇನ್ನೊಂದು ಕಾದಂಬರಿ ಇದುವರೆಗೂ ಪ್ರಯಶ: ರಚಿತವಾಗಿಲ್ಲ.

ಗಾರ್ಕಿ ಕೇವಲ ಸಾಹಿತಿಯಾಗಿಯೇ ಉಳಿಯಲಿಲ್ಲ. ತನ್ನ ಕಾಲದ ರಾಜಕೀಯ ಪ್ರಶ್ನೆಗಳನ್ನು ಕುರಿತು ಅನೇಕ ಉಜ್ವಲ ಲೇಖನಗಳನ್ನು ಪ್ರಾವ್ಡಾ ಮತ್ತು ಇಷ್ ವೆಸ್ತಿಯಾ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾನೆ. ರಾಜಕೀಯ ಹೋರಾಟದಲ್ಲಿ ಭಾಗವಹಿಸಿದ್ದಾನೆ. ೧೯೦೫ರ ಜನವರಿ ಒಂಬತ್ತರಂದು ನಡೆದ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾದ ಗಾರ್ಕಿ ಅದನ್ನು ಖಂಡಿಸಿದ್ದಾನೆ. ಇದಕ್ಕಾಗಿ ಗಾರ್ಕಿಯನ್ನು ಬಂಧಿಸಿ ಗಡೀಪಾರು ಮಾದಿದರು. ಜಾರ್ ಸರ್ಕಾರದ ಈ ಕೃತ್ಯ ಯುರೋಪನ್ನೆಲ್ಲ ಕದಡಿತು. ಯುರೋಪಿನ ಎಲ್ಲ ನಗರಗಳಲ್ಲೂ ಇದರ ವಿರುದ್ಧ ಸಭೆಗಳು ನಡೆದವು. ಫ್ರೆಂಚ್ ಮಹಾ ಸಾಹಿತಿ ಅನತೋಲ್ ಫ್ರಾನ್ಸ್ ಗಾರ್ಕಿಯಂಥ ಮನುಷ್ಯ ಪ್ರಪಂಚಕ್ಕೆ ಸೇರಿದವನು. ಪ್ರಪಂಚವೆಲ್ಲ ಅವನ ಸಹಾಯಕ್ಕಾಗಿ ಏಳಬೇಕು - ಎಂದು ಘೋಷಿಸಿದ. ಗಾರ್ಕಿ ೧೯೦೬-೧೯೧೩ರ ವರೆಗೆ ವಿದೇಶಗಳಲ್ಲಿ ವಾಸಿಸಿದ. ಇವನು ೧೯೨೧ ರಿಂದ ೧೯೨೮ರ ವರೆಗೆ ವಿದೇಶಗಳಲ್ಲಿ ವಾಸಿಸುತ್ತಿದ್ದ. ರಷ್ಯಕ್ಕೆ ಹಿಂತಿರುಗಿದ ಅನಂತರ ರಷ್ಯದ ಲೇಖಕರ ನಿರ್ವಿವಾದ ನಾಯಕನಾದ. ೧೯೩೪ರಲ್ಲಿ ಸೋವಿಯಟ್ ಲೇಖಕರ ಒಕ್ಕೂಟ ಸ್ಥಾಪನೆಯಾದಾಗ ಪ್ರಥಮ ಅಧ್ಯಕ್ಷನಾದ. ಇವನು ೧೯೩೬ರ ಜೂನ್ ೧೪ರಂದು ನಿಷ್ನಿನೊವ್ ಗೊರಾಡ್ ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವಾಗಲೇ ನಿಧನ ಹೊಂದಿದ.

ಗಾರ್ಕಿ ಸಾಮಾಜಿಕ ಕಾದಂಬರಿಗಳನ್ನು ರಚಿಸಿದ ಸಾಹಿತಿ ಮಾತ್ರವಲ್ಲ. ಅವನ ಉದ್ದೇಶ ಸಮಾಜದ ಭವಿಷ್ಯವನ್ನು ರೂಪಿಸುವ ಹಲವಾರು ಕಾರ್ಯವಿಶೇಷಗಳನ್ನೂ ನಿರೂಪಿಸುವುದು. ಈತ ಸಾಹಿತ್ಯರಂಗವನ್ನು ಪ್ರವೇಶಿಸಿದ ಕಾಲದಲ್ಲಿ ಬರಹಗಾರರು ಜನತೆಯನ್ನು ಕರುಣಮಿಶ್ರಿತ ಸಹಾನುಭೂತಿಯಿಂದ ನಿರೂಪಿಸುವುದು ವಾಡಿಕೆಯಾಗಿತ್ತು. ಗಾರ್ಕಿ ಈ ಮಾರ್ಗವನ್ನು ಸಂಪೂರ್ಣವಾಗಿ ತ್ಯಜಿಸಿ ಜನತೆ ತಮ್ಮ ಕತೆಯನ್ನು ತಾವೇ ಹೇಳಿದರೆ ಯಾವ ರೀತಿ ಇರುತ್ತದೋ ಆ ರೀತಿಯಲ್ಲಿ ತನ್ನ ಕೃತಿಗಳನ್ನು ರಚಿಸಿದ. ಶುದ್ಧಕಲೆಯ ತತ್ವಗಳನ್ನು ಗಾರ್ಕಿ ಒಪ್ಪಲಿಲ್ಲ. ಅಂದಿನ ರಷ್ಯದ ಭಯಂಕರ ಅನಾಗರಿಕ ಸಮಾಜವನ್ನು ಕಟುವಾಗಿ ಟೀಕಿಸಿ ತನ್ಮೂಲಕ ರಷ್ಯದ ಜನತೆಯಲ್ಲಿ ತನಗಿದ್ದ ಉಜ್ವಲ ವಿಶ್ವಾಸವನ್ನು ಗಾರ್ಕಿ ಪ್ರಕಟಿಸಿದ್ದಾನೆ. ಕಷ್ಟಕಾರ್ಪಣ್ಯಗಳಿಂದ ತುಂಬಿದ ನೀರಸ ಜೀವನವನ್ನು ಪ್ರತಿಭಟಿಸಿ ನಿರೋಧಿಸುವ ಸಲುವಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಿರುವುದಾಗಿ ಗಾರ್ಕಿ ಹೇಳಿಕೊಂಡಿದ್ದಾನೆ. ಗಾರ್ಕಿಗೆ ಮಾನವನಲ್ಲಿ ಹಾಗೂ ಅವನಲ್ಲಿ ಅಡಗಿರುವ ಅದ್ಭುತ ಕ್ರಿಯಾಶಕ್ತಿಯಲ್ಲಿ ಅಚಲವಾದ ನಂಬಿಕೆಯಿತ್ತು. ತಾನು ಹೇಳಬೇಕಾದುದನ್ನು ಗಾರ್ಕಿ ಎಂದಿಗೂ ಹೇಳದೆ ಇರುತ್ತಿರಲಿಲ್ಲ ಅಥವಾ ಹೇಳುವಾಗ ಅದನ್ನು ಅಸ್ಪಷ್ಟವಾಗಿ ಅನ್ಯೋಕ್ತಿಗಳ ಸಹಾಯದಿಂದ ಮಸುಕುಮಸುಕಾಗಿ ಹೇಳುತ್ತಿರಲಿಲ್ಲ. ಈತನ ಭಾವನೆಗಳು ಸದಾ ಪರಿಶುದ್ಧ ಮತ್ತು ಶಕ್ತಿಯುತವಾಗಿರುತ್ತಿದ್ದವು. ವಿಚಾರಧಾರೆ ಪ್ರಸ್ತುತ ಹಾಗೂ ಭವಿಷ್ಯದ ಇತಿಹಾಸಗಳ ಮೇಲೆ ಆಧಾರಿತವಾಗಿರುತ್ತಿತ್ತು. ಮನ:ಪಟಲದಲ್ಲಿ ಈ ಯುಗದ ಸಮಸ್ಯೆಗಳು ಮತ್ತು ಭಾವನೆಗಳು ತುಂಬಿರುತ್ತಿದ್ದವು.

ಗಾರ್ಕಿ ಒಂದು ಅರ್ಥದಲ್ಲಿ ವಿಶಿಶ್ಟ ರೀತಿಯ ಬರಹಗಾರ. ತನ್ನ ಬರಹಗಳಲ್ಲಿ ಇವನು ರಷ್ಯದ ಸಾಹಿತ್ಯದಲ್ಲಿ ಪರಿಪಕ್ವವಾಗುತ್ತ ಬಂದಿದ್ದ ಎಲ್ಲ ಪ್ರಗತಿಶೀಲ ಭಾವನೆಗಳನ್ನೂ ವಿಚಾರಧಾರೆಯನ್ನೂ ಮೂರ್ತೀಭವಿಸಿಕೊಂಡು ಅದರ ಮುನ್ನಡೆಗೆ ಕಾರಣನಾದ. ಪುಷ್ಠಿನ್ ನಿಂದ ಈಚೆಗೆ ಯಾವ ರಷ್ಯನ್ ಬರಹಗಾರನೂ ಇವನಂತೆ ಜೀವನದಲ್ಲಿ ಆಸಕ್ತಿಯನ್ನು ಪ್ರದರ್ಶಿಸಲಿಲ್ಲ. ಮಾನವನ ಜೀವನವನ್ನು ಸುಖಮಯವನ್ನಾಗಿ ಮಾಡಲು ಅವರನ್ನು ಸಂಘಟಿಸಲು, ಕ್ರಿಯಾಶೀಲರನ್ನಾಗಿ ಮಾಡಲು ಗಾರ್ಕಿ ತನ್ನ ಲೇಖಣಿಯನ್ನು ಉಪಯೋಗಿಸಿದ. ಇದಕ್ಕಿಂತ ಹೆಚ್ಚಾಗಿ ನೇರವಾಗಿ ಜನಗಳಿಂದ, ಕಾರ್ಮಿಕ ಚಳವಳಿಯಿಂದ,ಲೆನಿನ್ನನಿಂದ ಪಡೆದುಕೊಂಡ ನವೀನ ಭಾವನೆಗಳಿಂದ ರಷ್ಯದ ಸಾಹಿತ್ಯವನ್ನು ಸಂಪದ್ಭರಿತವಾಗಿ ಮಾಡಿದುದಲ್ಲದೆ ಜನತೆಯ ಕ್ರಾಂತಿಗರ್ಭದಲ್ಲಿ ಜನ್ಮತಾಳಿದ ಈ ಭಾವನೆಗಳನ್ನು ಲೇಖನಗಳಲ್ಲಿ, ಕಾದಂಬರಿಗಳಲ್ಲಿ, ನಾಟಕಗಳಲ್ಲಿ ಮತ್ತು ಕಥೆಗಳಲ್ಲಿ ಅಭಿವೃದ್ಧಿಗೊಳಿಸಿದ. ಹಿಂದಿನ ಯಾವ ಬರಹಗಾರನೂ ತೋರದಿದ್ದ ರೀತಿಯಲ್ಲಿ ಸಮಾಜವಾದಿ ನವೀಕರಣದ ಅವಶ್ಯಕತೆಯನ್ನು ತೋರಿಸಿಕೊಟ್ಟ.

ಹೀಗೆ ಸಾಹಿತ್ಯದಲ್ಲಿ ಸಮಾಜವಾದಿ ವಾಸ್ತವತೆಯ ನಿರೂಪಣೆಯ ಸ್ಥಾಪಕನಾದ ಗಾರ್ಕಿಯನ್ನು ಹೊಸ ರಷ್ಯನ್ ಸಾಹಿತ್ಯದ ಪಿತನೆಂದು ಗೌರವಿಸುವುದು ಸ್ವಾಭಾವಿಕವೇ ಆಗಿದೆ.

                                     (ಡಿ.ಆರ್.ಕೆ.ಜಿ.ಎಚ್.ಆರ್.)

ಗಾರ್ಗಿ : ಬ್ರಹ್ಮಜಿಜ್ಞಾಸೆಯಲ್ಲಿ ಆಸಕ್ತಳಗಿದ್ದ ಒಬ್ಬ ಮಹಿಳೆ. ಗರ್ಗ ವಂಶದವಳು. ಮಹರ್ಷಿ ಮಿಥಿಲೆಯ ಜನಕಮಹಾರಾಜ ತಾನು ಕೈಕೊಂಡ ಯಜ್ಞ ಪೂರ್ತಿಯಾದ ಅನಂತರ ಸಂತುಷ್ಟಬ್ರಹ್ಮಸಭೆಯನ್ನುದ್ದೇಶಿಸಿ ಬ್ರಹ್ಮಿಷ್ಠಿನಾದವನು ಸುವರ್ಣಾಲಂಕೃತವಾದ ಸಾವಿರ ಆಕಳುಗಳನ್ನು ಕೊಂಡೊಯ್ಯಲಿ ಎಂದಾಗ ಯಾಜ್ಞವಲ್ಕ್ಯ ಋಷಿ ಮುಂದೆ ಬಂದನಷ್ಟೆ. ಆಗ ಯಾಜ್ಞವಲ್ಕ್ಯನ ಬ್ರಹ್ಮಜ್ಞಾನವನ್ನು ಕುರಿತು ಪ್ರಶ್ನಿಸಹೊರಟವರಲ್ಲಿ ೬ನೆಯವಳಾಗಿ ಗಾರ್ಗಿ ಬರುತ್ತಾಳೆ. ಎಲ್ಲವನ್ನೂ ಆವರಿಸಿದ್ದು ಎನ್ನಲಾದ ನೀರು