ಪುಟ:Mysore-University-Encyclopaedia-Vol-6-Part-7.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿಂಹಾಂತಕ, ಖಡ್ಗಮೃಗಾಂತಕ, ಅಶ್ವಮೇಧ, ಕಾರ್ತಿಕೇಯ, ಛತ್ರ, ಅಪ್ರತಿಘ, ವೀಣಾಪಾಠಕ, ರಾಜದಂಪತಿ ಮತ್ತು ಗರುಡ ಬಂಗಾರ ನಾಣ್ಯಗಳು ದೊರೆತಿವೆ. ಒಂದನೆಯ ಕುಮಾರಗುಪ್ತನ ಹಲವು ಬಗೆಯ ಅನೇಕ ಬೆಳ್ಳಿ ನಾಣ್ಯಗಳು ಅಂದಿನ ಗುಪ್ತ ಸಾಮ್ರಾಜ್ಯದ ಎಲ್ಲೆಡೆಗಳಲ್ಲೂ ಬೆಳಕಿಗೆ ಬಂದಿವೆ. ಸಾಮಾನ್ಯವಾಗಿ ಈ ನಾಣ್ಯಗಳು ಮುಂಬದಿಯಲ್ಲಿ ರಾಜನ ಎದೆವರೆಗಿನ ಅಥವಾ ಮುಖಮಾತ್ರದ ಚಿತ್ರವೂ ಗುಪ್ತಶತಕದ ವರ್ಷವೂ ಕೆಲವು ಗ್ರೀಕ್ ಅಕ್ಷರಗಳೂ ಕಂಡುಬರುತ್ತವೆ: ಹಿಂಬದಿಯಲ್ಲಿ ಗರುಡನ ಚಿತ್ರವೂ ಪರಮ ಭಾಗವತ ಮಹಾರಾಜಾಧಿರಾಜ ಶ್ರೀ ಕುಮಾರಗುಪ್ತ ಮಹೇಂದ್ರಾದಿತ್ಯಸ್ಯ, ಭಾಗವತ ರಾಜಾಧಿರಾಜ ಶ್ರೀಕುಮಾರಗುಪ್ತ ಮಹೇಂದ್ರಾದಿತ್ಯ, ವಿಜಿತಾವನಿರವನಿಪತಿ ಕುಮಾರಗುಪ್ತೋದಿವಂ ಜಯತಿ ಎಂಬೀ ಅಲೇಖ್ಯಗಳಲ್ಲೊಂದೂ ಕಂಡುಬರುತ್ತವೆ. ಇವನ ಬೆಳ್ಳಿ ಮುಲಾಮಿನ ತಾಮ್ರನಾಣ್ಯಗಳ ಹಿಂಬದಿಯಲ್ಲಿ ಗರುಡ ಅಥವಾ ನವಿಲಿನ ಚಿತ್ರವಿರುತ್ತದೆ. ತಾಮ್ರಾನಾಣ್ಯಗಳ ಮುಂಬದಿಯಲ್ಲಿ ನಿಂತ ರಾಜನ ಇಲ್ಲವೇ ಯಜ್ಞವೇದಿಕೆಯ ಚಿತ್ರವೂ ಹಿಂಬದಿಯಲ್ಲಿ ಗರುಡನ ಅಥವಾ ದೇವತೆಯೊಬ್ಬಳ ಚಿತ್ರವೂ ಮಹಾರಾಜಶ್ರೀ ಕುಮಾರಗುಪ್ತ:, ಶ್ರೀಕುಮಾರ ಗುಪ್ತಃ ಅಥವಾ ಕುಮಾರಗುಪ್ತಃ ಎಂಬೀ ಅಲೇಖ್ಯಗಳಲ್ಲೊಂದು ಕಂಡುಬರುತ್ತದೆ. ೫. ಸ್ಕಂದಗುಪ್ತ (ಸು. ೪೫೫-೬೮) ಹೊರಡಿಸಿದ ಬಂಗಾರ ನಾಣ್ಯಗಳಲ್ಲಿ ಬಿಲ್ಲುಗಾರ, ರಾಜದಂಪತಿ, ಛತ್ರ ಮತ್ತು ಅಶ್ವಾರೋಹಿ ನಾಣ್ಯಗಳು ದೊರೆತಿವೆ. ಇವುಗಳ ಮುಂಬದಿಯಲ್ಲಿ ನಿಂತ ರಾಜದಂಪತಿಗಳ ಅಥವಾ ರಾಜನ ಚಿತ್ರವೂ ಜಯತಿ ಮಹೀತಲಂ ಸ್ಕಂದಗುಪ್ತಃ ಸುಧನ್ವೀ, ಪರಹಿತಕಾರೀ ಎಂಬ ಅಲೇಖಗಳಲ್ಲೊಂದೂ ಹಿಂಬದಿಯಲ್ಲಿ ಲಕ್ಷ್ಮೀ ಚಿತ್ರವೂ ಶ್ರೀಸ್ಕಂದಗುಪ್ತಃ ಕ್ರಮಾದಿತ್ಯಃ ಎಂಬ ಅಲೇಖ್ಯಗಳಲ್ಲೊಂದೂ ಕಂಡುಬರುತ್ತವೆ.