ಪುಟ:Mysore-University-Encyclopaedia-Vol-6-Part-8.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಪ್ತೋಷ್ಣ-ಗುಫ಼್ ಕ್ರಾಲ್

ಉದಾಹರಣೆಗಾಗಿ ಈ ಸಂಘದ ವಿವರಗಳನ್ನಿಲ್ಲಿ ಕೊಡಲಾಗಿದೆ.ಅನೇಕ ಇತರ ಸಂಘಗಳಲ್ಲೂ ಇಂಥವೇ ಆದ ನಿಯಮಾವಳಿಗಳಿರುವುದನ್ನು ಗಮನಿಸಲಾಗಿದೆ.ಮುಖ್ಯವಾಗಿ ಇಲ್ಲಿನ ನಿಯಮಗಳಲ್ಲಿನ ಸಾಮ್ಯ ಆಶ್ಚರ್ಯಗೊಳಿಸುವಂಥದು.

ಮಾನವಶಾಸ್ತ್ರಜ್ಞರು ಹಾಗೂ ಸಮಾಜಶಾಸ್ತ್ರಜ್ಞರು ಆಸ್ಟ್ರೇಲಿಯ ಮತ್ತು ಆಫ್ರಿಕಗಳ ಅನೇಕ ಆದಿವಾಸಿ ಬುಡಕಟ್ಟುಗಳಲ್ಲಿ,ಅಮೆರಿಕಾದ ರೆಡ್ ಇಂಡಿಯನರಲ್ಲಿ ಇದ್ದ ಗುಪ್ತಸಂಘಗಳ ವಿಷಯವಾಗಿ ಹೆಚ್ಚಿನ ಅಧ್ಯಯನ ಮಾಡಿದ್ದಾರೆ.(ಎಚ್.ಆರ್.ಆರ್.)

ಗುಪ್ತೋಷ್ಣ:ನೋಡಿ-ಉಷ್ಣದ ಪರಿಮಾಣ

ಗುಪ್ಪಟೆ ಗಿಡ:ಸೊಲನೇಸೀ ಕುಟುಂಬಕ್ಕೆ ಸೇರಿದ ಫೈಸೇಲಿಸ್ ಜಾತಿಯ ಕೆಲವು ಪ್ರಭೇದಗಳಿರುವ ಸಾಮಾನ್ಯ ಹೆಸರು.ಗುಡ್ಡೆ ಹಣ್ಣು ಪರ್ಯಾಯನಾಮ.ಉತ್ತರ ಹಾಗೂ ದಕ್ಷಿಣ ಅಮೆರಿಕಗಳ ಮೂಲವಾಸಿಗಳಾದ ಇವನ್ನು ಹಣ್ಣುಗಳಿಗಾಗಿ ಭಾರತವೂ ಸೇರಿದಂತೆ ಪ್ರಪಂಚದ ಹಲವಾರು ಉಷ್ಣದೇಶಗಳಲ್ಲಿ ದೊಡ್ದ ಮೊತ್ತದಲ್ಲಿ ಬೆಳೆಸಲಾಗಿದೆ.ಕೃಷಿಯಲ್ಲಿರುವ ಪ್ರಭೇದಗಳಲ್ಲಿ ಮುಖ್ಯವಾದವು ಪೆರೂವಿಯಾನ ಅಥವಾ ಎಡ್ಯುಲಿಸ್,ಇಕ್ಸೊಕಾರ್ಪ ಮತ್ತು ಮಿನಿಮ ಪ್ರಭೇದಗಳು.ಇವುಗಳಲ್ಲಿ ಪೆರೂವಿಯಾನ ಮತ್ತು ಮಿನಿಮ ಪ್ರಭೇದಗಳು ಕೆಲವೆಡೆ ಕೃಷಿಯಿಂದ ತಪ್ಪಿಸಿಕೊಂಡು ಕಾಡುಗಿಡಗಳಾಗಿ ಬೆಳೆದಿವೆ.

ಏಕವಾರ್ಷಿಕ ಇಲ್ಲವೆ ಬಹುವಾರ್ಷಿಕ ಮೂಲಿಕೆ ಗಿಡಗಳಾಗಿ ಬೆಳೆಯುವ ಇವು ಭಾರತದಲ್ಲಿ ಎಲ್ಲ ಕಡೆಗಳಲ್ಲೂ ಬಯಲು ಭೂಮಿಗಳಲ್ಲಿ,ಗದ್ದೆಗಳ ಬಳಿ,ಸಮುದ್ರ ಮಟ್ಟಕ್ಕಿಂತ ೧೪೦೦ ಮೀ ಎತ್ತರದ ವರೆಗಿನ ಬೆಟ್ಟ ಸೀಮೆಗಳಲ್ಲಿ ಕಾಣದೊರೆಯುತ್ತವೆ.

ಗುಪ್ಪಟೆ ಗಿಡದ ಮೂರು ಮುಖ್ಯ ಪ್ರಭೇದಗಳ ವಿವರಣೆ ಹೀಗಿದೆ:

೧ ಫೈಸೇಲಿಸ್ ಪೆರುವಿಯಾನ ಪ್ರಭೇದ:ಇಂಗ್ಲಿಷಿನಲ್ಲಿ ಇದರ ಹೆಸರು ಕೇಪ್ ಗೂಸ್ ಬೆರಿ.ನೇರವಾಗಿ ಹಾಗೂ ಚೆನ್ನಾಗಿ ಕವಲೊಡೆಯುತ್ತ ಬೆಳೆಯುವ ಗಿಡವಿದು.ಇದೊಂದು ಬಹುವಾರ್ಷಿಕ ಪ್ರಭೇದ.ಕಾಂಡದ ಮೇಲೆ ದಟ್ಟ ಕೂದಲುಗಳ ಹೊದಿಕೆ ಉಂಟು.ಎಲೆಗಳ ಆಕಾರ ಅಂಡದಂತೆ.ಹೂಗಳು ಹಳದಿ ಬಣ್ಣಕ್ಕಿವೆ.ದಳಗಳ ಬುಡದಲ್ಲಿ ಒಳಮುಖದ ಮೇಲೆ ಊದಾ ಬಣ್ಣದ ಮಚ್ಚೆಗಳಿವೆ.ಕಾಯಿ ಬೆರಿ ಮಾದರಿಯದು;ಗುಂಡಗೆ,೨-೩ ಸೆಂ.ಮೀ.ಗಾತ್ರಕ್ಕಿದ್ದು ಗಾಳಿ ತುಂಬಿ ಊದಿಕೊಂಡ ಪುಷ್ಪಪಾತ್ರೆಯಿಂದ ಆವೃತವಾಗಿದೆ.

ಮೂಲತಃ ಅಮೆರಿಕದ ಉಷ್ಣ ಪ್ರದೇಶಗಳ ನಿವಾಸಿಯಿದು.ಭಾರತದ ಉತ್ತರ ಪ್ರದೇಶ,ರಾಜಸ್ತಾನ,ಪಂಜಾಬುಗಳಲ್ಲಿ ಇದರ ವ್ಯವಸಾಯ ಇದೆ.ಪುಣೆಯ ಸುತ್ತಮುತ್ತಲೂ ಪ್ರದೇಶಗಳು,ಕೂನೂರು ಮತ್ತು ಆಂಧ್ರಪ್ರದೇಶದ ಕೆಲವೆಡೆಗಳಲ್ಲೂ ಇದನ್ನು ಬೆಳೆಸಲಾಗುತ್ತದೆ.ಇದು ಕಾಡುಗಿಡವಾಗಿ ಬೆಳೆಯುದೂ ಉಂಟು.ಟೊಮ್ಯಾಟೊ ವ್ಯವಸಾಯಕ್ಕೆ ಬೇಕಾಗುವ ಮಣ್ಣು ಮತ್ತು ಹವಾಗುಣಗಳೇ ಇದರ ವ್ಯವಸಾಯಕ್ಕೂ ಬೇಕು.ಗಿಡಗಳ ಬೆಳವಣಿಗೆಯ ಕಾಲದಲ್ಲಿ ಹೆಚ್ಚು ಉಷ್ಣತೆಯೂ ಮಳೆಯೂ ಬೇಕು.ಆದರೆ ಹಣ್ಣುಗಳು ಮಾಗುವಾಗ ಒಣಹವೆಯಿರಬೇಕು.ಮರಳುಮಿಶ್ರಿತ ಗೋಡು ಮಣ್ಣಿನಿಂದ ಲ್ಯಾಟರೈಟ್ ಮಣ್ಣಿನವರೆಗಿನ ವಿವಿಧ ಬಗೆಯ ನೆಲಗಳಲ್ಲಿ ಇದು ಬೆಳೆಯಬಲ್ಲದು.ಗಿಡಗಳನ್ನು ಬೀಜಬಿತ್ತನೆಯ ಮೂಲಕವೊ,ಒಂದು ವರ್ಷ ವಯಸ್ಸಿನ ಗಿಡಗಳ ಕಾಂಡತುಂಡುಗಳಿಂದಲೊ ವೃದ್ದಿಸುತ್ತಾರೆ.ಬೀಜದ ಮೂಲಕ ವೃದ್ಧಿಸುವುದಾದರೆ ಮೊದಲು ಒಟ್ಲುಪಾತಿಯಲ್ಲಿ ಬೀಜ ಬಿತ್ತಿ ಸಸಿಗಳನ್ನು ಬೆಳೆಸಿ,ಆನಂತರ ಸಸಿಗಳನ್ನು ನಾಟಿ ಮಾಡಲಾಗುತ್ತದೆ.ನಾಟಿ ಮಾಡುವ ಕಾಲ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳು.ಕಾಂಡ ತುಂಡುನಿಂದ ವೃದ್ಧಿಸುವ ಕಾಲ ಮಾರ್ಚ್-ಜುಲೈಗಳಲ್ಲಿ.ಕಾಂಡ ತುಂಡುಗಳಿಂದ ಬೆಳೆಸುವ ಗಿಡಗಳು ಬೇಗ ಹೂ ಬಿಡುತ್ತವೆ.ಮತ್ತು ಇವುಗಳ ಇಳಿವರಿಯೂ ಹೆಚ್ಚು.ಆದರೆ ಬೀಜದಿಂದ ಪಡೆಯಲಾದವುಗಳಂತೆ ಹುಲುಸಾಗಿ ಬೆಳೆಯುವುದಿಲ್ಲ.

ಇದನ್ನು ಶುದ್ಧ ಬೆಳೆಯಾಗಿ ಇಲ್ಲವೆ ಮಿಶ್ರ ಬೆಳೆಯಾಗಿ ಕೃಷಿ ಮಾಡಬಹುದು.ಗಿಡಗಳನ್ನು ನಾಟಿ ಮಾಡುವಾಗ ಒಂದೊಂದಕ್ಕೂ ಸುಮಾರು ೨.೨೫ ಕೆಜಿ ಕಾಂಪೋಸ್ಟ್ ಇಲ್ಲವೆ ಕೊಟ್ಟಿಗೆ ಗೊಬ್ಬರವನ್ನು ಹಾಕಿದರೆ ಹಣ್ಣುಗಳ ಗಾತ್ರವೂ ಇಳುವರಿಯೂ ಗಣನೀಯವಾಗಿ ಹೆಚ್ಚುತ್ತದೆ.ನಾಟಿ ಮಾಡಿದ ೩ ತಿಂಗಳುಗಳಲ್ಲಿ ಕಾಯಿಗಳು ಮಾಗುತ್ತವೆ.ದಕ್ಷಿಣ ಭಾರತದಲ್ಲಿ ಜನವರಿಯಿಂದ ಏಪ್ರಿಲ್ ವರೆಗೆ ಹಣ್ಣುಗಳನ್ನು ಮೊದಲ ಸಲಕ್ಕೆ ಕೀಳಲಾಗುತ್ತದೆ.ಗಿಡಗಳು ಮತ್ತೆ ಮೇ ತಿಂಗಳಲ್ಲಿ ಹೂ ಬಿಟ್ಟು ಜುಲೈ-ಸೆಪ್ಟೆಂಬರ್ ವೇಳೆಗೆ ಮತ್ತೊಮ್ಮೆ ಹಣ್ಣುಗಳು ಕೊಯ್ಲಿಗೆ ಸಿದ್ಧವಾಗುತ್ತವೆ.ಹೀಗೆ ವರ್ಷಕ್ಕೆ ಎರಡು ಬೆಳೆ ತೆಗೆಯಬಹುದು.ಗಿಡವೊಂದಕ್ಕೆ ಸುಮಾರು ೨-೪ ಕೆಜಿ ಹಣ್ಣನ್ನು ಇಳಿಸಬಹುದು.ಮಿಶ್ರಬೆಳೆಯಾಗಿ ಬೆಳೆಸಿದರೆ ಹಣ್ಣಿನ ಇಳುವರಿ ಹೆಕ್ಟೇರಿಗೆ ೧೬೫೦-೨೦೨೫ ಕೆಜಿ ಮಾತ್ರ ಇರುವುದಾದರೂ ಶುದ್ಧ ಬೆಳೆಯಾದರೆ ಇಳುವರಿ ೩೦,೦೦೦ ಕೆಜಿಯಷ್ಟು ಹೆಚ್ಚಾಗಿರುತ್ತದೆ.ಮಿಶ್ರಬೆಳೆಯಾಗಿ ಬೆಳೆಸಿದರೆ ಬೆಳೆ ಒಂದು ವರ್ಷಕ್ಕಿಂತ ಹೆಚ್ಚು ಬಾಳಲಾರದು.ಆದರೆ ಶುದ್ಧ ಬೆಳೆಯಾಗಿ ಬೆಳೆಸಿದರೆ ೩-೪ ವರ್ಷ ಕಾಲ ಹಣ್ಣುಗಳನ್ನು ಪಡೆಯುತ್ತಿರಬಹುದು.

ಗುಪ್ಪಟೆ ಹಣ್ಣುಗಳಿಗೆ ತಮ್ಮದೇ ಆದ ಹುಳಿಮಿಶ್ರಿತ ಸಿಹಿರುಚಿಯಿದೆ.ಅಲ್ಲದೆ ಇವುಗಳಲ್ಲಿ ಅನೇಕ ಬಗೆಯ ಪೌಷ್ಟಿಕಾಂಶಗಳೂ ಇವೆ.ಆಸ್ಕಾರ್ಬಿಕ್ ಆಮ್ಲ ಮತ್ತು ಕ್ಯಾರೊಟೀನ್ ಗಳ ಒಳ್ಳೆಯ ಆಗರ ಎನಿಸಿದೆ ಗುಪ್ಪಟೆ ಹಣ್ಣು.ಇದನ್ನು ಹಾಗೆಯೇ ತಿನ್ನಬಹುದು ಇಲ್ಲವೆ ರಸಪಾಕ(ಜಾಮ್)ಮಾಡಲು ಬಳಸಬಹುದು .ಗುಪ್ಪಟೆ ಹಣ್ಣಿನ ಎಲೆಗಳಿಗೆ ಔಷಧೀಯ ಮಹತ್ತ್ವವೂ ಇದೆ.ಉದರಸಂಬಂಧದ ಹಲವಾರು ಕಾಯಿಲೆಗಳಿಗೆ ಇದರ ಎಲೆಯ ಕಷಾಯವನ್ನು ಔಷಧಿಯಾಗಿ ಕೊಡುತ್ತಾರೆ.

೨ ಫೈಸೇಲಿಸ್ ಇಕ್ಸೊಕಾರ್ಪ:೧-೧.೩ ಮೀ ಎತ್ತರಕ್ಕೆ ಬೆಳೆಯುವ ಇನ್ನೊಂದು ಪ್ರಭೇದ.ಮೆಕ್ಸಿಕೊ ಮತ್ತು ಗ್ವಾಟಿಮಾಲಗಳ ಮೂಲನಿವಾಸಿ.ಇದಕ್ಕೆ ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಟೊಮ್ಯಾಟಿಲ್ಲೊ ಎಂದು ಹೆಸರು.ಇದರ ಎಲೆಗಳು ಈಟಿಯಾಕಾರದವು ಇಲ್ಲವೆ ಆಂಡಾಕಾರದವು.ಇವುಗಳ ಅಂಚು ಗರಗಸದಂತೆ ಇದೆ.ಹೂಗಳ ಬಣ್ಣ ಹಳದಿ.ಕಾಯಿ ಊದಾ ಮಿಶ್ರಿತ ಪಾಟಲ ವರ್ಣದ್ದು;ಪುಷ್ಫಪಾತ್ರೆಯನ್ನೆಲ್ಲ ಆವರಿಸುವಂತೆ ಗುಂಡಿಗೆ,ದಪ್ಪವಾಗಿ ಬೆಳೆಯುತ್ತದೆ.ಈ ಪ್ರಭೇದಗಳನ್ನು ಬೀಜಗಳ ಮೂಲಕ ವೃದ್ಧಿಸಲಾಗುತ್ತದೆ.ಸಸಿಗಳನ್ನು ಪಡೆದು,ನಾಟಿ ಮಾಡಿದ ೧.೫-೨.೫ ತಿಂಗಳ ಆನಂತರ ಹಣ್ಣುಗಳು ಕೊಯ್ಲಿಗೆ ಸಿದ್ಧವಾಗುತ್ತವೆ.ಹಣ್ಣುಗಳ ಇಳುವರಿ ಹೆಕ್ಟೇರಿಗೆ ೧೭,೦೦೦-೨೨,೫೦೦ ಕೆಜಿ.

೩ ಫೈಸೇಲಿಸ್ ಮಿನಿಮ:ಇದೊಂದು ಪುಟ್ಟ ಮೂಲಿಕೆ ಸಸ್ಯ;೧೫-೩೦ ಸೆಂಮೀ ಎತ್ತರಕ್ಕೆ ಬೆಳೆಯುತ್ತದೆ.ಹೂಗಳು ಒಂಟೊಂತಿಯಾಗಿರುತ್ತವೆ.ಬಣ್ಣ ಅಚ್ಚ ಹಳದಿ.ಕಾಯಿ ಗುಂಡಿಗೆ,ಹಸಿರಾಗಿ ಇರುತ್ತದೆ.ಈ ಪ್ರಭೇದ ನೀರಾವರಿ ಗದ್ದೆಗಳ ತೆವರುಗಳ ಮೇಲೆ ಬೆಳೆಯುತ್ತದೆ.ಇದರ ಹಣ್ಣುಗಳು ಉಳಿದ ಪ್ರಭೇದಗಳ ಹಣ್ಣುಗಳಿಗೆ ಹೋಲಿಸಿದರೆ ಅಷ್ಟು ರುಚಿಯಿಲ್ಲ.ಆದರೆ ಇವಕ್ಕೆ ಔಷಧೀಯ ಗುಣಗಳುಂಟು.ಶಕ್ತಿವರ್ದಕವಾಗಿ,ಮೂತ್ರೋತ್ತೇಜಕವಾಗಿ ಮತ್ತು ವಿರೇಚಕವಾಗಿ ಇವನ್ನು ಬಳಸುತ್ತಾರೆ. (ಬಿ.ಪಿ;ಎಂ.ಎಚ್.ಎಂ)

ಗುಫ಼್ ಕ್ರಾಲ್:ಕಾಶ್ಮೀರ ರಾಜ್ಯದ ಪುಲ್ ವಾಮ ಜಿಲ್ಲೆಯ ತ್ರಾಲ್ ತಹಸೀಲ್ ನಲ್ಲಿರುವ ನವಶೀಲಯುಗ ಸಂಸ್ಕೃತಿಯ ನೆಲೆ.ಇದು ಸು.೩೫ಮೀ ದಪ್ಪದ ಕರೇವ ನಿಕ್ಷೇಪದ ಮೇಲಿದೆ.ಭಾರತೀಯ ಪುರಾತತ್ತ್ವ ಸರ್ವೇಕ್ಷ್ಣಣ ಇಲಾಖೆಯ