ಪುಟ:Mysore-University-Encyclopaedia-Vol-6-Part-9.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಹಾ ವಾಸ್ತುಶಿಲ್ಪ ೪೩೧

ಋಷಿ ಗುಹೆ ಎಂದು ಕರೆಯಲಾಗುವ ಇನ್ನೊಂದರ ವಿನ್ಯಾಸ ಸಹ ಇದೇ ರೀತಿಯಲ್ಲೇ ಇದೆ. ಆದರೆ ಒಳ ಹೋಗುವ ದ್ವಾರದ ಮುಂಬದಿಯ ಚೈತ್ಯ ಕಮಾನಿನಾಕೃತಿಯಲ್ಲಿದ್ದು. ಸುಂದರ ಅಲಂಕರಣದಿಂದ ಕೂಡಿದೆ.

ಶಿಲಾಶಿಲ್ಪದ ತಂತ್ರಗಾರಿಕೆ ಪರ್ಷಿಯ ದೇಶದಲ್ಲಿ ಪ್ರಚಲಿತವಾಗಿದ್ದು ಅಲ್ಲಿಂದ ಭಾರತಕ್ಕೆ ಬಂತೆಂಬುದು ಇತಿಹಾಸಜ್ಞರ ಅಭಿಪ್ರಾಯ (ಆದರೆ ಕೇರಳ-ಕರ್ನಾಟಕದ ಕಡಲ ತೀರದ ಪ್ರದೇಶದಲ್ಲಿ ಪ್ರ.ಶ.ಪೂ. ಸು.5-4 ಶತಮಾನಗಳಲ್ಲಿ ಬೃಹತ್ ಶಿಲಾ ಸಂಸ್ಕೃತಿಯ ಜಂಬಿಟ್ಟಿಗೆಯ ಶಿಲಾ ಸಮತಟ್ಟಿನಲ್ಲಿ ಕೊರೆದು ಸೃಷ್ಟಿಸಿದ ಬಾಗಿಲು ಚೌಕಟ್ಟು ಸಹಿತ ಅರ್ಧ ಗೋಲಾಕೃತಿಯ ಹಲವಾರು ನೆಲಮಾಳಿಗೆಗಳಿವೆ. ಕೆಲವು ಎರಡು ನಾಲ್ಕು ಕೋಣೆಗಳಿಂದಲೂ ಕೂಡಿವೆ. ಇದಕ್ಕೂ ಪೂರ್ವದಲ್ಲಿ ಆದಿ ಹರಪ್ಪ ನಾಗರಿಕತೆಯ ನೆಲೆಯಾದ ಧೋಲಾವೀರದಲ್ಲಿ ಮಳೆಯ ನೀರನ್ನು ಸಂಗ್ರಹಿಸಲು ಕೆಂಪು ಮರಳು ಕಲ್ಲಿನ ಸಮತಟ್ಟಿನಲ್ಲಿ ಕೊರೆದು ಮಾಡಿದ ದೊಡ್ದ ದೊಡ್ಡ ತೊಟ್ಟಿಗಳಿದ್ದುದು ಬೆಳಕಿಗೆ ಬಂದಿವೆ. ಈ ತಂತ್ರಜ್ಞಾನ ಪರಂಪರೆ ಮೌರ್ಯ ಚಕ್ರವರ್ತಿ ಅಶೋಕನ ಕಾಲದಲ್ಲಿಯೂ ಸುಧಾರಿತಗೊಂಡು ಮುಂದುವರೆದಿರುವ ಸಾಧ್ಯತೆ ಇದೆ). ಆದರೆ ಪರ್ಷಿಯ ದೇಶ ಹಾಗೂ ಇತರ ಪಶ್ಚಿಮ ಏಷ್ಯ ಪ್ರದೇಶದಲ್ಲಿ ಗುಹಾ ವಾಸ್ತು ಮೃತರಿಗೆ ಸಂಬಂಧಪಟ್ಟಂತೆ ಮಾತ್ರ ಉಪಯೋಗವಾಗುತ್ತಿತ್ತು. ಭಾರತದ ಈ ಮೊದಲ ಗುಹೆಗಳು ಧಾರ್ಮಿಕ ಆಚರಣೆಗೆ ಸಂಬಂಧಿಸಿದವು. ಹೆಚ್ಚಿನವೆಲ್ಲ ಪ್ರ.ಶ.ಪೂ ಕಾಲದಲ್ಲಿ ಪ್ರಚಲಿತವಾಗಿದ್ದ ಚೈತ್ಯಾಲಯದ ಮಾದರಿಯಲ್ಲಿದ್ದು, ಬಹುಶಃ ಇವು ಬೌದ್ಧ ಅಥವಾ ಇನ್ನಾವುದೋ ಧರ್ಮಕ್ಕೆ ಸಂಬಂಧಿಸಿದ ಪೂಜಾಗೃಹವಾಗಿರಬಹುದು. ಸುಧಾಮ ಗುಹೆಯನ್ನು ಅಶೋಕ ಆಜೀವಿಕರಿಗೆ ಮಾಡಿಸಿಕೊಟ್ಟನೆಂದು ಅಲ್ಲಿರುವ ಅವನ ಶಾಸನ ತಿಳಿಸುತ್ತದೆ.

ಮೌರ್ಯ ಸಾಮ್ರಾಜ್ಯದ ಸ್ಥಾಪನೆಯೊಡನೆ ಒದಗಿ ಬಂದ ಶಾಂತ ರಾಜಕೀಯ ಪರಿಸ್ಠಿತಿ, ವ್ಯಾಪಾರಿಗಳ ಅಭಿವೃದ್ಧಿ, ಇವುಗಳ ಜೊತೆಗೆ ಜೈನ-ಬೌದ್ಧ ಧರ್ಮಗಳು ಭಾರತಾದ್ಯಂತ ಹರಡಲಾರಂಭಿಸಿದವು. ಇಅದರ ಜೊತೆಯಲ್ಲೇ ಗುಹಾ ವಾಸ್ತು-ಶಿಲ್ಪ ಸಹ ಭಾರತದ ವಿವಿದೆಡೆಗಳಲ್ಲಿ ಕಾಣಿಸಿಕೊಂಡಿತು. ತಮಿಳುನಾಡಿನ ಮಧುರೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡು ಬರುವ ಚಿಕ್ಕ ಗುಹೆಗಳು ಪ್ರ.ಶ.ಪೂ 2ನೆಯ ಶತಮಾನವಾಗಿದ್ದು. ಪ್ರಾರಂಭಿಕ ಘಟ್ಟವನ್ನು ಸೂಚಿಸುತ್ತವೆ. ಇವುಗಳಲ್ಲಿ ಸಾಮಾನ್ಯವಾಗಿ ಒಂದು ಸ್ವಾಭಾವಿಕ ಗುಹೆಯನ್ನೇ ಉಪಯೋಗಿಸಿಕೊಂಡು ಹಿಂಭಾಗದಲ್ಲಿ ಒಬ್ಬರು ಮಲಗಬಹುದಾದ ಒಂದು ಶೈಯ್ಯಾಸನವನ್ನು ನಿರ್ಮಿಸಿ ತೆರೆದ ಮುಂಭಾಗದಲ್ಲಿ ಛತ್ತಿನ ಮೇಲೆ ಸ್ವಲ್ಪ ಮಟ್ಟ ಮಾಡಿರಲಾಗುತ್ತದೆ. ಇವುಗಳ ಜೊತೆಯಲ್ಲಿ ದೊರಕಿರುವ ಕೆಲವು ಶಾಸನಗಳಿಂದ ಇವು ಜೈನ ಸಂನ್ಯಾಸಿಗಳ ವಸತಿಗಾಗಿ ಮಾಡಿದವು ಎಂದು ತಿಳಿಯುತ್ತದೆ. ಹಾಗೆಯೇ ಒರಿಸ್ಸದ ಭುವನೇಶ್ವರದ ಸಮೀಪದಲ್ಲೇ ಇರುವ ಉದಯಗಿರಿ-ಖಂಡಗಿರಿ ಬೆಟ್ಟಗಳಲ್ಲಿ ಕೆಲವು ಗುಹೆಗಳನ್ನು ನಿರ್ಮಿಸಲಾಗಿದ್ದು. ಇವುಗಳ ಮುಂಭಾಗದಲ್ಲಿ ಒಂದು ತೆರೆದ ಹಜಾರ, ಒಳಗೆ ನಾಲ್ಕಾರು ಕೋಣೆಗಳನ್ನು ಕೊರೆಯಲಾಗಿದೆ. ಕೆಲವು ಗುಹೆಗಳಲ್ಲಿ ಹಜಾರದ ಭಾಗದಲ್ಲಿ ಬಾಗಿಲವಾಡದ ಸುತ್ತ ಶಿಲ್ಪಗಳನ್ನು ಕೆತ್ತಲಾಗಿದೆ. ಈ ಗುಹಾ ಸಮೂಹದಲ್ಲಿರುವ ರಾಣಿಗುಂಫ, ಅನಂತಗುಂಫ, ಹಾಥಿಗುಂಫ ಇವು ಪ್ರಸಿದ್ಧವಾಗಿವೆ. ಹಾಥಿಗುಂಫದಲ್ಲಿ ದೊರಕಿರುವ ಶಾಸನವೊಂದರ ಆಧಾರದಿಂದ ಹಾಗೂ ಇದರ ಸಾಂದರ್ಭಿಕ ಸಾಕ್ಷ್ಯಗಳಿಂದ ಈ ಗುಹಾ ಸಮೂಹ ಜೈನ ಯತಿಗಳಿಗಾಗಿ ನಿರ್ಮಿಸಲ್ಪಟ್ಟಿರಬೇಕು ಎಂದು ತರ್ಕಿಸಲಾಗಿದೆ. ಇವುಗಳ ರಚನೆಯ ಕಾಲ ಪ್ರ.ಶ. ಪೂ.ಸು2ನೆಯ ಶತಮಾನದಿಂದ 1ನೆಯ ಶತಮಾನದವೆನ್ನಲಾಗಿದೆ.

ಗುಹಾ ದೇವಾಲಯಗಳಿಗೆ ಅತ್ಯಂತ ಪ್ರಸಿದ್ಧವಾಗಿರುವುದು ಪಷ್ಚಿಮ ಭಾರತ, ಅದರಲ್ಲೂ ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಹಬ್ಬಿರುವ ಸಹ್ಯಾದ್ರಿ ಪರ್ವತ ಶ್ರೇಣಿ ಮತ್ತು ಅದರ ಕಿರುಬೆಟ್ಟಗಳ ಪ್ರದೇಶ. ಪಶ್ಚಿಮ ಭಾರತ ಅಶೋಕನ ಸಾಮ್ರಾಜ್ಯದ ಭಾಗವಾಗಿತ್ತು ಎಂಬುದು ಮುಂಬೈ ಬಳಿಯ ಸೋಪಾರದಲ್ಲಿ ದೊರಕಿರುವ ಅವನ ಶಾಸನಗಳಿಂದಷ್ಟೇ ಅಲ್ಲದೆ, ಅಶೋಕನು ಬೌದ್ಧಧರ್ಮ ಪ್ರಚಾರಕ್ಕಾಗಿ ಈ ಪ್ರದೇಶಕ್ಕೆ ಬೌದ್ಧ ಭಿಕ್ಷೆಗಳನ್ನು ಕಳುಹಿಸಿದ್ದ ನೆಂಬುದಕ್ಕೂ ಸಾಕ್ಷ್ಯಾಧಾರಗಳಿವೆ. ಸಹಜವಾಗಿ, ಅಶೋಕನು ಗಯ ಪ್ರದೇಶದಲ್ಲಿ ಪ್ರಾರಂಭಿಸಿದ ಗುಹಾ ವಾಸ್ತುಶಿಲ್ಪ ಕಲೆ ಸಹ ಬಹು ಮುಂಚೆಯೇ ಇಲ್ಲಿಗೂ ಹರಡಿತು. ಈ ಪ್ರದೇಶದಲ್ಲಿ ಹಬ್ಬಿರುವ ಕರಿವರ್ಣದ ಶಿಲೆಯ ಬೆಟ್ಟಗಳು ಗುಹಾ ವಾಸ್ತುಶಿಲ್ಪ ಇಲ್ಲಿ ವಿಶಿಷ್ಟ ರೀತಿಯಲ್ಲಿ ಬೆಳೆಯುವುದಕ್ಕೆ ಕಾರಣವಾಯಿತು. ಈ ಪ್ರದೇಶದಲ್ಲಿ ಸು.60ಕ್ಕೂ ಹೆಚ್ಚು ಗುಹಾ ವಾಸ್ತುಕೇಂದ್ರಗಳು ಇದ್ದು ಒಟ್ಟಾರೆಯಾಗಿ ಸು.1000ಕ್ಕೂ ಹೆಚ್ಚು ಗುಹಾ ವಾಸ್ತುಶಿಲ್ಪ ಕೃತಿಗಳು ಕಂಡುಬರುತ್ತವೆ.

ಹೊಸ ವಾಸ್ತು ಸ೦ಪ್ರದಾಯದ ಆಳವಡಿಕೆಯ ಮೊದಲ ಪ್ರಯೋಗಗಳು ಎನ್ನಬಹುದಾದ ಚಿಕ್ಕ ಚಿಕ್ಕ ವಾಸ್ತು ರಚನೆಗಳು ಮು೦ಬೈ ಬಳಿಯ ಜೇವದನ್ ವಿಕಾರ,ಕನ್ಹೇರಿ,ಪುಣೆ ಜಿಲ್ಲೆಯಲ್ಲಿರುವ ಭಾಜ,ಜುನ್ನರ್ ಇತ್ಯಾದೆಡೆಗಳಲ್ಲಿವೆ. ಪ್ರಶ.ಪೂ. 2ನೆಯ ಶತಮಾನದ ಪ್ರಾರ೦ಭ ಆಸುಪಾಸಿಗೆ ಸೇರಿದ ಇವೆಲ್ಲ ಬೌದ್ಧಧರ್ಮಕ್ಕೆ ಸ೦ಬ೦ಧಿಸಿದವು. ಪ್ರಾರ೦ಭದ ಘಟ್ಟದಲ್ಲಿ ಬೌದ್ಧ ಭಿಕ್ಷುಗಳು ಆಚರಣೆಯಲ್ಲಿ ಇದ್ದ ವಸ್ಸಾವಾಸ(ವರ್ಷಾವಾಸ) ಸ೦ಪ್ರದಾಯಕ್ಕೆ ಅನುಕೂಲವಾಗುವ೦ತೆ ರಚಿತವಾದವು.ಬೌದ್ಧ ಭಿಕ್ಷುಗಳು ವರ್ಷಾಕಾಲದ ಅ೦ದರೆ ಮಳೆಗಾಲದ ನಾಲ್ಕು ತಿ೦ಗಳ ಕಾಲ ಒ೦ದೇ ಪ್ರದೇಶದಲ್ಲಿ ನೆಲೆಸಿರಬೇಕು ಎ೦ಬುದು ಈ ಸ೦ಪ್ರದಾಯದ ಆಚರಣೆ. ಇದಕ್ಕಾಗಿ ಬುದ್ಧನ ಕಾಲದಲ್ಲಿಯೇ ವಿಹಾರಗಳ ರಚನೆ ಪ್ರಾರ೦ಭವಾಗಿತ್ತು.ಈ ಪ್ರದೇಶದಲ್ಲಿ ಕಾಣಬರುವ ಗುಹಾ ವಾಸ್ತು ಸಮುದಾಯಗಳು ಬೌದ್ಧ ವಿಹಾರಗಳೇ. ಅತ್ಯ೦ತ ಪ್ರಚೀನ ವಿಹಾರ ಕೇ೦ದ್ರಗಳಲ್ಲಿ ಚಿಕ್ಕ ಚಿಕ್ಕ ಕೋಣೆಗಲನ್ನು ಸಾಲಾಗಿ ಬೆಟ್ಟದ ಬದಿಯಲ್ಲಿ ಕೊರೆರದಿದ್ದು ಅವುಗಳ ಉದ್ದೇಶ ಬೌದ್ಧ ಭಿಕ್ಷುಗಳು ಮಳೆಯಿ೦ದ ರಕ್ಷಣೆ ಪಡೆಯಲು ಸಾಧ್ಯವಾಗುವುದಲಕ್ಕಷ್ತೇ ಸೀಮಿತವಾಗಿವೆ.