ಪುಟ:Mysore-University-Encyclopaedia-Vol-6-Part-9.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗೂಡುಗಳು

೪೪೩

ಕಾಗೆ, ಹದ್ದುಗಳು ಕಟ್ಟುತ್ತವೆ. ಈ ಗೂಡುಗಳು ಎಷ್ಟು ಒರಟಾಗಿರುತ್ತವೆಂದರೆ ಕಡ್ಡಿಗಳ ಸಂದಿನಿಂದ ಮೊಟ್ಟೆಗಳು ಹೊರಕ್ಕೆ ಕಾಣುತ್ತಿರುತ್ತವೆ. ಅಲ್ಲದೆ ಮಳೆ, ಬಿಸಿಲು, ಗಾಳಿಗಳಿಂದ ಮೊಟ್ಟೆಗಳಿಗೆ ರಕ್ಷಣೆಯಿರುವುದಿಲ್ಲ. ಗೂಡು ಕಟ್ಟುವುದರಲ್ಲಿ ಇದಕ್ಕಿಂತ ಮುಂದುವರಿದ ಹಕ್ಕಿಗಳು ಗೂಡುಗಳಿಗೆ ವಿಶಿಷ್ಟವಾದ ಆಕಾರವನ್ನು ಕೊಡುತ್ತವೆ. ಇಂಥ ಗೂಡುಗಳಲ್ಲಿ, ಕಡ್ಡಿಗಳ ನಡುವೆ ಮೊಟ್ಟೆಗಳು ಸುರಕ್ಷಿತವಾಗಿರಲು ಸಾಕಷ್ಟು ತಗ್ಗಾದ ಸ್ಥಳವಿರುತ್ತದೆ. ಕೆಲವು ಸಣ್ಣ ಪುಟ್ಟ ಹಕ್ಕಿಗಳು ಸಣ್ಣ ಕಡ್ಡಿಗಳು, ಗಿಡದ ಬೇರುಗಳು, ಹುಲ್ಲು ಮುಂತಾದ ನಯವಾದ ವಸ್ತುಗಳನ್ನು ಗೂಡು ಕಟ್ಟಲು ಉಪಯೋಗಿಸುತ್ತವೆ. ಹೀಗೆ ಹುಲ್ಲುಗಳಿಂದ ಕಟ್ಟಿದ ಗೂಡುಗಳನ್ನು ಗುಬ್ಬಚ್ಚಿ ಮುಂತಾದ ಹಕ್ಕಿಗಳಲ್ಲಿ ಕಾಣಬಹುದು. ಕೆಲವು ಪಕ್ಷಿಗಳು ಈ ವಸ್ತುಗಳನ್ನು ಕುಶಲವಾಗಿ ನೇಯ್ದು ಬಟ್ಟಲಿನಂತಹ ಗೂಡುಗಳನ್ನು ಮರದ ಮೇಲೋ ಗಿಡಗಳ ಪೊದರಿನಲ್ಲಿಯೋ ಕಟ್ಟುತ್ತವೆ. ಅಲ್ಲದೆ ಗೂಡುಗಳ ಒಳಗೆ ಮೃದುವಾದ ನಾರು, ಕೂದಲು, ಹತ್ತಿ, ಉಣ್ಣೆ ಮುಂತಾದ ವಸ್ತುಗಳಿಂದೊಡಗೂಡಿದ ಮೆತ್ತೆಗಳನ್ನು ರಚಿಸುತ್ತವೆ.

ಹಾಡುವ ಥ್ರಶ್ (ಸಾಂಗ್ ಥ್ರಶ್) ಹಕ್ಕಿ ತನ್ನ ಗೂಡಿನ ಒಳಭಾಗವನ್ನು ಜೇಡಿಯ ಮಣ್ಣಿನಿಂದ ಮೆತ್ತಿ ಗಟ್ಟಿಯಾದ ಮಣ್ಣಿನ ಬಟ್ಟಲಿನಂತಿರುವ ಗೂಡನ್ನು ಕಟ್ಟುತ್ತದೆ.

ಇದಕ್ಕಿಂತಲೂ ಹೆಚ್ಚು ಕುಶಲತೆಯನ್ನು ತೋರಿಸುವ ಹಕ್ಕಿಗಳು, ಗೂಡಿಗೆ ಮೇಲ್ಛಾವಣಿಯನ್ನು ಕಟ್ಟಿ, ಒಂದು ಪಕ್ಕಕ್ಕೆ ಸಣ್ಣದೊಂದು ಬಾಗಿಲನ್ನು ರಚಿಸುತ್ತವೆ.

ಈ ರೀತಿಯ ಕುಶಲತೆಯನ್ನು ಉದ್ದನೆಯ ಬಾಲದ ಟೆಟ್ ಹಕ್ಕಿಯ ಗುಂಡನೆಯ ಗೂಡಿನಲ್ಲಿ ನೋಡಬಹುದು. ಈ ಗೂಡಿನ ಒಳಭಾಗದಲ್ಲಿ ಹಕ್ಕಿ ಆಯ್ದು ತಂದ ಪುಕ್ಕಗಳ ಮೆತ್ತೆ ಇರುತ್ತದೆ.

ಇವೆಲ್ಲಕ್ಕಿಂತಲೂ ಹೆಚ್ಚು ಕುಶಲತೆಯನ್ನು ತೋರುವ ಹಾಗು ಸುಂದರವಾದ ಗೂಡುಗಳನ್ನು ಕಟ್ಟುವ ಹಕ್ಕಿಗಳೆಂದರೆ ಗೀಜಗನ ಜಾತಿಗೆ ಸೇರಿದ ಹಕ್ಕಿಗಳು. ಅವುಗಳ ಗೂಡಿನ ರಚನೆಯನ್ನನುಸರಿಸಿ ಅವನ್ನು ಗೀಜುಗ (ವೀವರ್ ಬರ್ಡ್) ಮತ್ತು ದರ್ಜಿ ಹಕ್ಕಿ (ಟೇಲರ್ ಬರ್ಡ್) ಎಂದು ಕರೆಯುತ್ತಾರೆ. ಗೂಡು ಕಟ್ಟುವುದರಲ್ಲಿ ಇವುಗಳ ಚಮತ್ಕಾರ ನಿಜವಾಗಿಯೂ ಪ್ರಶಂಸನೀಯವಾದುದು. ಇವು ಗೂಡು ಕಟ್ಟುವ ಸ್ಥಳವನ್ನು ಹುಡುಕುವುದರಲ್ಲೂ ನಿಜವಾದ ಜಾಣ್ಮೆಯನ್ನು ತೋರಿಸುತ್ತವೆ.

ದಟ್ಟವಾದ ಎಲೆಗಳುಳ್ಳ ಮರಗಳಲ್ಲಿ, ಗಿಡಗಳಲ್ಲಿ, ಪೊದೆಗಳಲ್ಲಿ, ಎಲೆಗಳನ್ನೇ ಹೊಲಿದು ಕಟ್ಟಿರುವ ದರ್ಜಿಹಕ್ಕಿಯ ಗೂಡನ್ನು ಸುತ್ತಲ ಸನ್ನಿವೇಶದಿಂದ ಪ್ರತ್ಯೇಕಿಸಿ ಪತ್ತೆಹಚ್ಚುವುದು ಬಹಳ ಕಷ್ಟ. ಎಲೆಗಳ ನಡುವೆ ಅದರ ಗೂಡು ಸಹ ಒಂದು ಎಲೆಯಂತೆ ಕೊಂಬೆಯಿಂದ ತೂಗಾಡುತ್ತಿರುತ್ತದೆ. ಒಂದೇ ಒಂದು ಎಲೆಯಿಂದ ಗೂಡು ಕಟ್ಟಬಹುದು ಅಥವಾ ಎರಡು ಎಲೆಗಳನ್ನು ಸೇರಿಸಿ ಹೊಲಿದು ಕಟ್ಟಬಹುದು. ಜೇಡರ ಹುಳಗಳ ಬಲೆಯಲ್ಲಿರುವ ದಾರಗಳನ್ನು ತಂದು, ದರ್ಜಿ ಹಕ್ಕಿ ತನ್ನ ಗೂಡನ್ನು ಎಲೆಗಳನ್ನು ಸೇರಿಸಿ, ದರ್ಜಿಯಂತೆ ಹೊಲಿದು ಕಟ್ಟುತ್ತದೆ. ಗೂಡಿನ ಒಳಗೆ ಹತ್ತಿ, ಹುಣ್ಣೆ ಮುಂತಾದ ಮೆತ್ತನೆಯ ವಸ್ತುಗಳಿಂದ ಮೆತ್ತೆಗಳನ್ನು ಮಾಡಿ ಮೊಟ್ಟೆಗಳನ್ನಿಡುತ್ತವೆ. ಗೀಜಗ ಹಕ್ಕಿ ಸಣ್ಣ ಸಣ್ಣ ನಾರಿನ ತುಂಡುಗಳನ್ನು ಶೇಖರಿಸಿ ತಂದು, ಅದನ್ನು ಗೂಡಿನಂತೆ ನೇಯುತ್ತದೆ. ಕೆರೆಕುಂಟೆಗಳ ದಡದಲ್ಲಿ ಬೆಳೆದಿರುವ ಮರಗಿಡಗಳ ರೆಂಬೆಗಳಿಂದ ಇಂಥ ಗೂಡುಗಳು ತೂಗುಬಿದ್ದಿರುವುದನ್ನು ಕಾಣಬಹುದು. ಈ ಎರಡು ಜಾತಿಯ ಹಕ್ಕಿಗಳೂ ಗೂಡನ್ನು ಕಟ್ಟುವಾಗ ನೋಡಲು ಬಹಳ ಮೋಜೆನಿಸುತ್ತದೆ. ಗೂಡಿನ ಒಳಗೊಂದು, ಹೊರಗೊಂದು ಹಕ್ಕಿ ಕುಳಿತು ಕೊಕ್ಕಿನ ಸಹಾಯದಿಂದ, ದಾರ ಅಥವಾ ನಾರನ್ನು ಹೊರಗಿನ ಹಕ್ಕಿ ಹೊರಗಿನಿಂದ ಒಳಕ್ಕೂ ಒಳಗಿರು ಹಕ್ಕಿ ಹೊರಕ್ಕೂ ಗಂಟೆಗಟ್ಟಲೆ ಆಹಾರ ಸೇವನೆಯನ್ನು ಮರೆತು, ಹೊಲಿಯುವುದನ್ನೂ ನೇಯುವುದನ್ನೂ ನೋಡಲು ಬಲು ಸೊಗಸು. ಹೀಗೆ ನೇಯ್ದ ಗೂಡುಗಳಲ್ಲಿ ಶತ್ರುಗಳನ್ನು ಮೋಸಪಡಿಸಲು, ಎಲ್ಲಿಗೋ ದಾರಿತೋರುವ ಸುಳ್ಳು ಬಾಗಿಲನ್ನೂ ಮಾಡುವುದುಂಟು. ಈ ರೀತಿಯ ಗೂಡುಗಳನ್ನು ಪೆಂಡ್ಯು ಲೈನ್ ಟಿಟ್ ಎಂಬ ಹಕ್ಕಿಗಳಲ್ಲಿ ಕಾಣಬಹುದು. ಗೂಡನ್ನು ಕೇವಲ ಒಣ್ದು ಸಂಸಾರದ ಎರಡು ಹಕ್ಕಿಗಳೇ ಅಲ್ಲದೆ, ಆ ಜಾತಿಯ ಇತರ ಹಲವಾರು ಹಕ್ಕಿಗಳೂ ಸೇರಿ ಕಟ್ಟಬಹುದು. ಆದರೆ ಇದು ಬಹಳ ಅಪರೂಪ.

ಕೇಲವು ಹಕ್ಕಿಗಳು ಗೂಡು ಕಟ್ಟುವುದಿಲ್ಲ. ಬದಲಾಗಿ, ತಮ್ಮ ಮೊಟ್ಟೆಗಳನ್ನು ಬೇರೆ ಹಕ್ಕಿಗಳ ಗೂಡಿನಲ್ಲಿಟ್ಟು ಮರಿ ಮಾಡುತ್ತವೆ. ಇಲ್ಲಿ ಎರಡು ಬಗೆಯ ಹಕ್ಕಿಗಳ ಮೊಟ್ಟೆಗಳೂ ತಮ್ಮ ಗಾತ್ರ, ಆಕಾರ ಮತ್ತು ಬಣ್ಣದಲ್ಲಿ ಒಂದೇ ರೀತಿಯಲ್ಲಿ ಇರುವುದರಿಂದ ಮೋಸಹೋಗುವ ಹಕ್ಕಿಗೆ ತನ್ನ ಮೂಢತ್ವ ತಿಳಿಯುವುದಿಲ್ಲ. ಕೋಗಿಲೆಗಳು ಹೀಗೆ ಕಾಗೆಯ ಗೂಡನಲ್ಲಿ ಮೊಟ್ಟೆಗಳನ್ನಿಡುತ್ತವೆ. ಕಾಗೆಯ ಮೊಟ್ಟೆಗೂ ಕೋಗಿಲೆಯ ಮೊಟ್ಟೆಗೂ ವ್ಯತ್ಯಾಸವೇ ಇರುವುದಿಲ್ಲ, ಮೊಟ್ಟೆಯೊಡೆದು ಮರಿ ಹೊರಬೀಳುವವರೆಗೂ ಕಾಗೆ ಅದನ್ನು ಪೋಷಿಸುತ್ತದೆ. ಮರಿ ಕೂಗಲು ತೊಡಗಿದಾಗಲೇ ಕಾಗೆಗೆ ತನ್ನ ತಪ್ಪು ತಿಳಿಯುವುದು. ಇಶ್ಟು ಹೊತ್ತಿಗಾಗಲೇ ಕೋಗಿಲೆಯ ಮರಿಗೆ ಹಾರುವ ಶಕ್ತಿ ಬಂದಿರುವುದರಿಂದ ಕಾಗೆಗೆ ಸಿಗದಂತೆ ಹಾರಿ ಹೋಗುತ್ತದೆ.