ಪುಟ:Mysore-University-Encyclopaedia-Vol-6-Part-9.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗೂಳೂರು - ಗೃಹ ೪೫೮

5-6 ವಾರಗಳು ಮಾತ್ರ ಈ ಅವಧಿಯಲ್ಲಿ ರೂಪಾಂತರಗೊಂಡು ಎರಡು ರೆಕ್ಕೆಯುಳ್ಳ ಪ್ರೌಢ ನೊಣಗಳಾಗುತ್ತವೆ.

ಗೂಳಿ ನೊಣಗಳ ಡಿಂಭಗಳು ದನಗಳ ಚರ್ಮವನ್ನು ಕೊರೆಯುವುದರಿಂದ ರೋಗಪೀಡಿತ ದನಗಳ ಚರ್ಮ ಅಪ್ರಯೋಜಕವಾಗುತ್ತದೆ. ಅಲ್ಲದೆ ದನಗಳ ಮಾಂಸವೂ ಕೆಟ್ಟುಹೋಗುತ್ತದೆ.ಹಸುಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಇವೆಲ್ಲ ಕಾರಣಗಳಿಂದಾಗಿ ಗೂಳಿ ನೊಣಗಳು ದನಗಳ ಪಿಡುಗು ಎನಿಸಿಕೊಂಡಿವೆ. ಇವನ್ನು ನಾಶ ಪಡಿಸಲು ಕೋಶಾವಸ್ಥೆಯಲ್ಲಿರುವಾಗಲೀ ಇವುಗಳ ಡಿಂಭಗಳನ್ನು ಹಿಡಿದು ಕೊಲ್ಲುವುದೊಂದೇ ಮಾರ್ಗ. (ಬಿ.ಎನ್.ಬಿ.)

ಗೂಳೂರು : ಒಂದು ಚಾರಿತ್ರಿಕ ಸ್ಥಳ. ತುಮಕೂರು ನಗರಕ್ಕೆ ದಕ್ಷಿಣದಲ್ಲಿ 7 ಕಿಮೀ ದೂರದಲ್ಲಿದೆ. ಇದಕ್ಕೆ ಸಂಸ್ಕೃತದಲ್ಲಿ ನಂದಿಪುರವೆಂಬ ಹೆಸರಿದೆ. ಇಲ್ಲಿ ಶೂನ್ಯಸಂಪಾದನೆ ಮತ್ತು ಅನಾದಿ ವೀರಶೈವಸಂಗ್ರಹವನ್ನು ಬರೆದ ಸಿದ್ಧವೀರಣಾಚಾರ್ಯ ಹಾಗೂ ಸಂಪಾದನೆ ಪರ್ವತೇಶ್ವರ, ವಿರಕ್ತ ತೋಂಟದಾರ್ಯ ಮೊದಲಾದ ಕವಿಗಳು ಆಗಿ ಹೋಗಿದ್ದಾರೆ. ಎಡೆಯೂರಿನ ಸಿದ್ಧಲಿಂಗೇಶ್ವರರು ಇಲ್ಲಿ ಕೆಲಕಾಲ ಇದ್ದರೆಂದು ಹೇಳಲಾಗುತ್ತದೆ.

ಪ್ರತಿವರ್ಷವೂ ಮಣ್ಣಿನಿಂದ ನಿರ್ಮಿಸಿ ಕೆರೆಯಲ್ಲಿ ವಿಸರ್ಜಿಸಲಾಗುವ ಬೃಹದ್ ಗಣಪತಿ ವಿಗ್ರಹದಿಂದಾಗಿ ಈ ಸ್ಥಳ ಈಗ ಪ್ರಸಿದ್ಧಿ ಪಡೆದಿದೆ. ಈ ಗಣಪತಿಯ ಹೆಸರಿನಲ್ಲಿ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ. ಎತ್ತರದಲ್ಲಿ 2.5ಮೀ (8 ಅಡಿ) ಮೀರಿದ ಈ ಗಣಪತಿಯ ಸುಂದರ ವಿಗ್ರಹವನ್ನು ರಚಿಸಲು ಸುಮಾರು ಎರಡು ತಿಂಗಳು ಹಿಡಿಯುತ್ತದೆ. ಗಣಪತಿ ಹಬ್ಬದ ದಿನದಿಂದಲೇ ಬೃಹದ್ ಗಣಪತಿಯ ರಚನೆ ಆರಂಭವಾಗುತ್ತದೆ. ವಿಗ್ರಹದ ಪೂರ್ಣ ರಚನೆಯಾದ ಮೇಲೆ ಒಂದು ತಿಂಗಳ ಕಾಲ ಸತತವಾಗಿ ಅದಕ್ಕೆ ಪೂಜಾವಿಶೆಷಗಳು ನಡೆಯುತ್ತವೆ. ಈ ಸಮಯದಲ್ಲಿ ಭಕ್ತಾದಿಗಳು ದೂರದಿಂದ ಬಂದು ದರ್ಶನ ಪಡೆದು ಹೋಗುತ್ತಾರೆ.

ಈ ಊರಿನ ಪಶ್ಚಿಮಕ್ಕೆ 1 ಕಿಮೀ ದೂರದಲ್ಲಿ ಪ್ರಸಿದ್ಧ ಕೈದಾಳ ಕ್ಷೇತ್ರವಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನಲ್ಲಿ ಇದೇ ಹೆಸರಿನ ಒಂದು ಊರಿದೆ. ಇಲ್ಲಿ ಪ್ರಸಿದ್ಧವಾದ ವೀರೆಶ್ವರ ಮಠವೊಂದಿದೆ.

ಗೃಹ: ಮಾನವ ತಾತ್ಕಾಲಿಕವಾಗಿ ಇಲ್ಲವೇ ಶಾಶ್ವತವಾಗಿ ವಾಸಿಸಲು ಬಳಸುವ ನೈಸರ್ಗಿಕವಾದ ತಾಣ ಅಥವಾ ತಾನೇ ರಚಿಸಿದ ಆಸರೆ. ಮಾನವ ನಾಗರಿಕತೆಯ ವಿಕಾಸದೊಂದಿಗೆ ಗೃಹದ ವಿಕಾಸ ನಿಕಟವಾಗಿ ಹೆಣೆದುಕೊಂಡಿದೆ. ಮರದ ಪೊಟರೆ, ಕಲ್ಲುಬಂಡೆಗಳ ಸಂದು, ಗುಹೆಗಳಿಂದ ತೊಡಗಿ ಆಧುನಿಕ ಗಗನಚುಂಬಿ ಗೃಹಗಳವರೆಗಿನ ಇದರ ಬೆಳವಣಿಗೆ ಮಾನವ ಸಮಾಜದ ವಿಕಾಸದ ಒಂದು ಮುಖ. ತನಗಾಗಿ ತನ್ನವರಿಗಾಗಿ ವಾಸಸ್ಥಳವೊಂದನ್ನು ರಚಿಸಿಕೊಳ್ಳಬೇಕೆಂಬ ಕಲ್ಪನೆ ಮಾನವನಿಗೆ ಬಂದುದೇ ಸು.11000 ವರ್ಷಗಳ ಹಿಂದೆ, ಪ್ರ.ಶ.ಪೂ. ಸು. 9000 ಸುಮಾರಿಗೆ ಎನ್ನಬಹುದು. ಅದಕ್ಕೂ ಹಿಂದೆ ಆತ ತನ್ನ ಸುತ್ತಲಿನ ಪ್ರಾಕೃತಿಕ ಸನ್ನಿವೇಶಗಳನ್ನು ಅವಲಂಬಿಸಿದ್ದ. ಆಹಾರಕ್ಕಾಗಿ ಹಣ್ಣುಹಂಪಲುಗಳನ್ನು-ಅವು ಬೆಳೆದಷ್ಟು ಕಾಲ, ಪ್ರಾಯಶಃ ವರ್ಷದಲ್ಲಿ ಒಂದೆರಡು ತಿಂಗಳು-ತಿನ್ನುತ್ತಿದ್ದ. ಉಳಿದ ವೇಳೆಯಲ್ಲಿ ಸುತ್ತಲಿನ ಪ್ರಾಣಿಗಳೇ ಇವನ ಆಹಾರ. ಸ್ವಂತ ಜೀವಕ್ಕೆ ಅವುಗಳಿಂದ ಅಪಾಯ ಒದಗದಂತೆ ರಕ್ಷಣೆ ಪಡೆಯಲು ಮಾನವ ಮರದ ಪೊಟರೆಗಳಲ್ಲೋ ಬಂಡೆಗಳ ಸಂದುಗಳಲ್ಲೋ ರಾತ್ರಿಗಳನ್ನು ಕಳೆಯುತ್ತಿದ್ದ. ಸ್ವಾಭಾವಿಕವಾಗಿ ಗುಹೆಗಳೂ ಇವನ ತಂಗುದಾಣಗಳಾದುವು. ಆಹರಕ್ಕಾಗಿ ಅಲೆಮಾರಿ ಜೀವನವನ್ನು ಅವಲಂಬಿಸಿದ ಇವನಿಗೆ ಶಾಶ್ವತವಾದ ನೆಲೆಯ ಅವಶ್ಯಕತೆಯಿರಲಿಲ್ಲ. ಕ್ರಮೇಣ ಇವನ ಜೀವನಕ್ರಮದಲ್ಲಿ ಸುಧಾರಣೆಗಳಾದುವು. ಆಹಾರವನ್ನು ಹುಡುಕುವ ಶ್ರಮಕ್ಕೆ ಬದಲಾಗಿ ಆಹಾರವನ್ನು ತಾನೇ ಬೆಳೆಯುವ ವಿಧಾನವನ್ನು ಅರಿತುಕೊಂಡ. ಈ ಘಟನೆ ಮಾನವನ ಇತಿಹಾಸದಲ್ಲಿ ಅತಿ ಪ್ರಮುಖವಾದದ್ದು. ಅಂದಿನಿಂದ ಇವನು ಅಲೆಮಾರಿ ಜೀವನವನ್ನು ಮುಕ್ತಾಯಗೊಳಿಸಿ ಒಂದು ಕಡೆ ಸ್ಥಿರವಾಗಿ ನೆಲೆಸುವುದನ್ನು ಕಲಿತ. ತನ್ನೊಡನಿದ್ದ ಜನರೊಡನೆ ಗುಂಪುಗೂಡಿ ವಾಸಿಸಲಾರಂಭಿಸಿದ್ದು ಈ ಅವಧಿಯಲ್ಲಿ. ಕ್ರಮೇಣ ತಾನು, ತನ್ನದು ಎಂಬ ಮನೋಭಾವ ಬೆಳೆದು ಕುಟುಂಬ ಪದ್ಧತಿ ಆರಂಭವಾಯಿತು. ಕುಟುಂಬದವರೆಲ್ಲ ಒಂದು ಕಡೆ ಇರಬೇಕೆನಿಸಿದ್ದಾಗಲೇ ಏಕಾಂತತೆಯ ಅವಶ್ಯಕತೆಯೂ ಉಂಟಾಯಿತು. ಅದಕ್ಕಾಗಿ ಮನೆಯ ರಚನೆ ತಲೆದೋರಿತು. ಈ ಮನೆಗಳು ಕೇವಲ ಪ್ರಾರಂಭಿಕ ಸ್ಥಿತಿಯ ಗುಡಿಸಲುಗಳು ಮಾತ್ರ.

ಅತಿಪ್ರಾಚೀನವೆನಬಹುದಾದ ಗುಡಿಸಲುಗಳು ಅಸ್ಸೀರಿಯದ ಉಬೈದನ್ ಗ್ರಾಮಗಳಲ್ಲಿ ದೊರೆತಿವೆ(ಪ್ರ.ಶ.ಪೂ. 3000). ಇವುಗಳ ರಚನೆ ಜೊಂಡಿನಿಂದ. ಇವನ್ನು ಮಣ್ಣು ಮೆತ್ತಿ ನಿಲ್ಲಿಸುತ್ತಿದ್ದರೆಂದು ತೋರುತ್ತದೆ. ಸುಮರನ ಎರಿದು ಎಂಬಲ್ಲಿ ಬೇರೆ ಭಾಗಗಳುಳ್ಳ ಇಂಥ ಜೊಂಡಿನ ಗುಡಿಸಲಿನ ಅವಶೇಷ ದೊರೆತಿದೆ. ಆದರೆ ಇದು ಮಣ್ಣಿನ ಗೋಡೆಗಳಿಂದ ಮಾಡಿದ ಮನೆಯೊಂದಕ್ಕೆ ಸೇರಿದಂತಿದೆ. ಪಶ್ಚಿಮ ಇರಾನಿನ ಸಿಯಾಲ್ಕನ ಉತ್ಖನನದಲ್ಲಿ ಕೆಳಗಿನ ಪದರಗಳಲ್ಲಿ ವಾಸಸ್ಥಾನದ ಕುರುಹುಗಳೇನೂ ಕಾಣದಿದ್ದರೂ ಜೊಂಡಿನ ಗುಡಿಸಲುಗಳ ಉಪಯೋಗ ಅಲ್ಲಿನ ಜನರಿಗೆ ತಿಳಿದಿತ್ತೆಂದು ಊಹಿಸಲಾಗಿದೆ. ಆದರೆ ಗಟ್ಟಿಸಿದ ಮಣ್ಣಿನ ಗೋಡೆಗಳಿಂದ ಕಟ್ಟಿದ ಮನೆಗಳ ಅವಶೇಷಗಳು ಸು.4ಮೀ. ಮೇಲಿನ ಪದರದಲ್ಲಿ ಕಂಡುಬಂದಿವೆ. ಗೋಡೆಹಾಕುವ ಸ್ಥಳದಲ್ಲಿ ಗರಸುಬೆರೆಸಿದ ಮಣ್ಣು ಅಥವಾ ಜೇಡಿಯನ್ನು ಹಲಗೆಗಳ ಮಧ್ಯೆ ಚೆನ್ನಾಗಿ ಗಟ್ಟಿಸಿ ಅದು ಗಡಸಾದ ಮೇಲೆ ಹಲಗೆಗಳನ್ನು ತೆಗೆದು ಬಿಡುವುದರ ಮೂಲಕ ಇಂಥ ಜೋಡಿಗೋಡೆಗಳನ್ನು ಕಟ್ಟುತ್ತಿದ್ದಿರಬೇಕು.