ಪುಟ:Naavu manushyare - Niranjana.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸುಪ್ತಪ್ರತಿಭೆ ಇದ್ದಿರಬಹುದು. ಆದರೆ ಆ ಕೂಟದಲ್ಲಿ ಅದು ಬಹಿರಂಗವಾಗಲಿಲ್ಲ.[೧] ನರ್ತಕರಂತೆ ಉದ್ದ ತಲೆಗೂದಲಿದ್ದ ಕೋ.ಶಿ.ಕಾರಂತರು ಅಲ್ಲಿ ಸೂತ್ರಧಾರರು. ನನ್ನ ಪಾಲಿಗೆ ಅವರು ಸೋಜಿಗದ ವ್ಯಕ್ತಿ, ಒಂದು 'ರಾತ್ರಿ 'ಕೂಲಿ' ಎಂಬ ನಾಟಕವಿತ್ತು. ಬೆಂಗಳೂರಿನ ಅ.ನ.ಸುಬ್ಬರಾಯರು. ಬರೆದದ್ದು, ಅವರ ತಂಡದ್ದೇ ಅಭಿನಯ. ತೆರೆ ಸರಿದಾಗ ಒಬ್ಬ ಸ್ಫುರದ್ರೂಪಿ ಯುವಕ ಬಣ್ಣದಿಂದ ಒಪ್ಪಗೊಂಡು ರಂಗದ ಬಲಮೂಲೆಯಲ್ಲಿ ಸ್ಟೂಲಿನ ಮೇಲೆ ಕುಳಿತಿದ್ದ. ಬಿಳಿ ಪಾಯಜಾಮ-ನಿಲುವಂಗಿ, ಅವರು ಅ.ನ.ಕೃ. 'ನಾಟಕದಲ್ಲಿ ಕಾರ್ಮಿಕ ಮುಖಂಡ. ಇನ್ನೊಂದು ರಾತ್ರೆ ನೋಡಲು ದೊರೆತದ್ದು ಕಾರಂತರೇ ನಿರ್ಮಿಸಿದ್ದ 'ಭೂತರಾಜ್ಯ'ಎಂಬ ಮೂಕಿ ಸಿನಿಮಾ. ಅದಕ್ಕೂ ಮುಂಚೆ ಅವರು ತಮ್ಮ 'ಡೊಮಿಂಗೊ' ನಾಟಕವನ್ನು ಮೂಕಿ ಚಲಚ್ಚಿತ್ರವಾಗಿ ಮಾಡಿದ್ದರಂತೆ. ಅದು ಆಕಸ್ಮಿಕದಲ್ಲಿ ಸುಟ್ಟುಹೋಗಿತ್ತಂತೆ. ಆಕಸ್ಮಿಕದ ವಿಷಯದಲ್ಲಿ ಸುಳ್ಳ ಹಿಂದೆ ಬೀಳಲಿಲ್ಲ. ಹಿಮಯುಗ ರಂಗಸ್ಥಳದಲ್ಲಿ ಹಾಸಿದ್ದ ಹತ್ತಿರಾಶಿಗೆ ಯಾವುದೋ ಕಡ್ಡಿಬೆಂಕಿ ತಗಲಿತು. ಸದ್ಯಃ ಕ್ಷಿಪ್ರ ಕಾರ್ಯಾಚರಣೆಯಿಂದ ಬೆಂಕಿ ಹತೋಟಿಗೆ ಬಂತು! ಸುಳ್ಯ ಗೆದ್ದಿತು. ಕಾರ್ಯಕ್ರಮಗಳಲ್ಲಿ ದೃಶಾವಳಿಯ ಜತೆಗೆ ಯಕ್ಷಗಾನಕ್ಕೂ ಸ್ಥಾನವಿತ್ತು.

  1. ಕಾರಂತರ ಸ್ಮೃತಿಪಟಲದಲ್ಲಿ' ಕೃತಿಯ ಮೊದಲ ಭಾಗದಲ್ಲಿ ನನ್ನ ಪ್ರಸ್ತಾಪವಿದೆಯೆಂದು ಸಾಹಿತ್ಯ ಮಿತ್ರದ್ವಯರು ನಾಲ್ಕು ವರ್ಷ ಹಿಂದೆ ಹೇಳಿದರು. ಆ ಮೊದಲಭಾಗ ಪುಸ್ತಕದಂಗಡಿಯಿಂದ ಖರೀದಿ ಮಾಡಿದ್ದು ಮನೆಯಲ್ಲಿತ್ತು. ಓದಿರಲಿಲ್ಲ. ಮಿತ್ರರ ಎದುರಲ್ಲೇ ಪುಸ್ತಕ ತರಿಸಿದೆ. ತೆರೆದು ಪುಟ ಪತ್ತೆ ಹಚ್ಚಲು ಅವರು ನೆರವಾದರು. ಅಲ್ಲಿತ್ತು ಈ ಕೆಳಗಿನ ವಾಕ್ಯಃ
    "ಸುಳ್ಯ - ಮಕ್ಕಳ ಕೂಟದಲ್ಲಿ ಸೇರಿಕೊಂಡ ಕುಳಕುಂದೆ ಶಿವರಾಯನೆಂಬಾತ ಇಂದು ನಿರಂಜನನಾಗಿ ಕರ್ನಾಟಕದಲ್ಲಿ ಹೆಸರಾಗಿದ್ದಾನೆ.”
    ನಾನೆಂದೆ: “ತಮ್ಮ ಪ್ರತಿಷ್ಟೆ ಮೆರೆಸಲು ನನ್ನ ಹೆಸರನ್ನು ಕಾರಂತರು ಬಳಸಬೇಕಾಗಿರಲಿಲ್ಲ."
    ಕಾರಂತರ ನಿಜವಾದ ಆರಾಧಕರಾಗಿದ್ದು ಜೀವತೇದು ತೀರಿಕೊಂಡ ನನ್ನ ಹೆಡ್ ಮಾಸ್ಟರು ರಾಮಪ್ಪಯ್ಯನವರ ಹೆಸರು ಪುಸ್ತಕದಲ್ಲಿ ಇಲ್ಲದಿರುವುದು ಗಮನಾರ್ಹ.(ತಮ್ಮಸ್ವತಂತ್ರ ಭಾರತದ ಕನಸು ನೆನಸಾಗುವುದಕ್ಕೆ ತುಸು ಮುನ್ನ ಪುತ್ತೂರಿನಲ್ಲೇ ಅವರು ತೀರಿಕೊಂಡರು.ವಯಸ್ಸಾಗುವುದಕ್ಕೆ ಮುಂಚೆಯೇ.)