ಪುಟ:Naavu manushyare - Niranjana.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸುಳ್ಯಕ್ಕೊಂದು ನಾಟಕ ಕಂಪನಿ ಬಂತು; 1937ರಲ್ಲಿ. ಆ ಜನ ಬಸ್ ನಿಲ್ದಾಣದ ಬಳಿ ತಟಿಕೆಯ, ಮುಳಿಯ ಮಾಡಿನ ರಂಗಮಂದಿರ ರಚಿಸಿದರು. ಕರಪತ್ರಗಳು ಪುತ್ತೂರಿನಲ್ಲಿ ಅಚ್ಚಾಗಿ ಬರುತ್ತಿದ್ಧುವು. ಕಂಪನಿ ಒಂದೆರಡು ತಿಂಗಳು ಅಲ್ಲಿತ್ತೆಂದು ತೋರುತ್ತದೆ. ಟಿಕೆಟು ಕೊಳ್ಳಲು ಕಾಸಿರದಿದ್ದ ದಿನಗಳು. ಆದರೂ ಒಂದೆರಡು ನಾಟಕ ನೋಡಿದೆ. ನೆನಪು ಗಾಢವಾಗಿರುವ ನಾಟಕ 'ಭಕ್ತ ಕಬೀರ'.

ಕಂಪನಿ ಬೇರೆ ಊರಿಗೆ ಹೋದಮೇಲೂ ರಂಗಮಂದಿರವನ್ನು ಕೆಡವಿರಲಿಲ್ಲ. ಸುಳ್ಯದಲ್ಲಿ ಆಗ ಆಫೀಸರರ ಕ್ಲಬ್ ಇತ್ತು. ಸದಸ್ಯವರ್ಗ, ಸಬ್ ರಿಜಿಸ್ಟ್ರಾರ್, ಪೊಲೀಸ್ ಸಬ್ಇನ್ಸ್ ಪೆಕ್ಟರ್ ಅಥವಾ ರೈಟರ್, ಸರಕಾರೀ ಆಸ್ಪತ್ರೆಯ ಡಾಕ್ಟರು, ಮಣೆಗಾರರು ಮತ್ತಿತರರು; ಜಮೀನ್ದಾರರೊಬ್ಬರು; ಅವರಿಗೆ ಸರಿಗಟ್ಟಬಲ್ಲ ನಮ್ಮ ಶಾಲೆಯ ಅಧ್ಯಾಪಕವರ್ಗ. ಇವರೆಲ್ಲ ಸುಳ್ಯದ ಶಿಷ್ಟಜನ. ಒಬ್ಬರಿಗೆ ಹಾರ್ಮೋನಿಯಂ ನುಡಿಸಲು ಬರುತ್ತಿತ್ತು. ಯಾರು ಬೀಜ ಬಿತ್ತಿದರೊ? ತೆರಳಿದ್ದ-ಕಂಪನಿಯ ಪರಾಗಸ್ಪರ್ಶವಾಗಿತ್ತೇನೊ! ಅಂತೂ ಈ ಶಿಷ್ಟರು ನಾಟಕ ಆಡಲು ಹೊರಟರು. ಸ್ವಲ್ಪ ಕಾಲ ಬ್ಯಾಡ್ಮಿಂಟನ್ ನ ವೇಳೆಯನ್ನು ನಾಟಕದ ರಂಗತಾಲೀಮು ಆಕ್ರಮಿಸಿತು.

ಆ ವರ್ಷದ ಆರಂಭದಲ್ಲಿ ನನಗೆ ಯು. ಎಸ್. ಪಣಿಯಾಡಿಯವರ 'ತುಳುನಾಡ್' ಮಾಸಪತ್ರಿಕೆಯ ಪರಿಚಯವಾಗಿತ್ತು. ಎಂ. ವಿ. ಹೆಗ್ಡೆಯವರ ಕವಿತೆಗಳು ಆ ಪತ್ರಿಕೆಯಲ್ಲಿ ನನಗೆ ಮುಖ್ಯ ಆಕರ್ಷಣೆ. ವ್ಯಾವಹಾರಿಕ ತುಳುವಿನಲ್ಲಿ ನಾನೂ ಕವಿತೆ ರಚಿಸಿದೆ. ಕತೆ, ಕಿರುನಾಟಕ ಬರೆದೆ. ಅವೆಲ್ಲ ಅಚ್ಚಾದುವು.

ಸುಳ್ಯದ ಶಿಷ್ಟರು ಆಡಿದ ನಾಟಕಗಳಲ್ಲಿ ಮುಖ್ಯವಾದುವು: 'ಒಂದೇ ಗುಟುಕು' ಮತ್ತು 'ಮೇವಾಡದ ಪತನ.' ಇವೆರಡನ್ನೂ ಒಂದನ್ನು ಮರಾಠಿಯಿಂದ, ಇನ್ನೊಂದನ್ನು ಹಿಂದಿಯಿಂದ ಕನ್ನಡಕ್ಕೆ ತಂದರು ಬಿ. ಕೆ. ರಾಮಕೃಷ್ಣ. ಒಂದು ದಿನ ರಂಗತಾಲೀಮು ನಡೆಯುತ್ತಿದ್ದಾಗ ಡ್ರಾಯಿಂಗ್ ಮಾಸ್ಟರು ಸುಬ್ಬಣ್ಣನವರು ನನ್ನನ್ನು ಕರೆದು, "ಇಲ್ಲಿ ನಡೆಯುತ್ತಿರುವ ರಿಹರ್ಸಲನ್ನು