ಪುಟ:Naavu manushyare - Niranjana.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚಿತ್ರಿಸಿ ಒಂದು ನಾಟಕ ಬರಿ ನೋಡುವ,” ಎಂದರು. ನನ್ನ ತುಳುಸಾಹಸ ಆಗ ಅಲ್ಲಿ ಎಲ್ಲರಿಗೂ ಗೊತ್ತಿದ್ದ ಸಂಗತಿ. ಹೆಸರು ಅವರೇ ಹೇಳಿದರು. 'ನಾಟಕವೆಂಬ ನಾಟಕ' ನಾಲ್ವತ್ತು ಪುಟಗಳ ಒಂದು ನೋಟ್ ಬುಕ್ ಪುಡಿ ಮಾಡಿದೆ. ಸುಬ್ಬಣ್ಣ ಮಾಸ್ಟರು ನಾನು ಬರೆದದ್ದನ್ನು ಓದಿದರು. ಏನೂ ಹೇಳಲಿಲ್ಲ. ಆ ಹಸ್ತಪ್ರತಿ ನನ್ನಲ್ಲಿಲ್ಲ. ಅವರಲ್ಲೇ ಉಳಿಯಿತೊ? ಗೊತ್ತಿಲ್ಲ.

'ಮೇವಾಡ ಪತನ' ನಾಟಕಕ್ಕೆ ನನ್ನನ್ನು ಸೆಳೆದರು. ಹದಿನಾಲ್ಕರ ಶಿವ ಸುಳ್ಯದಲ್ಲಿ 'ಸುದ್ದಿ' ಯಾದ. ಮೊಘಲ್ ಸಮ್ರಾಜ್ಞೆ, ಉದಯಪುರಿಯ ಪಾರ್ಟು. ಧ್ವನಿ ಒಡೆದಿತ್ತು. ಆದರೆ ಬೆಳವಣಿಗೆಯಲ್ಲಿ ಎತ್ತರವನ್ನು ಸಾಧಿಸಿರಲಿಲ್ಲ, ಸಾಲುಗಳನ್ನು ಗಟ್ಟಿಮಾಡಿದೆ. ಅಭಿನಯ ಕೇಳಬೇಡಿ. ಅಕ್ಬರ್ ಪಾತ್ರಧಾರಿ ಸುಮಾರು ಆರಡಿ ಎತ್ತರದ ಎಂ. ಮಿರಾಸಾಹೇಬರು. ಊರಿನ ಜಮೀನ್ದಾರರು.1

ಅಕ್ಬರ್: "ಉದಯಪುರೀ...."

ಉದಯಪುರಿ: (ಪಲ್ಲಂಗದ ಮೇಲಿಂದ ತಲೆಎತ್ತಿ ಸಾಮ್ರಾಟನ ಎತ್ತರವನ್ನು ನೋಡುತ್ತ)

"ಜಹಾಪನಾ!"

ಕಂಪನಿ ಮಂದಿರವನ್ನು ಕೆಡಹುವುದಕ್ಕೆ ಮುಂಚೆ ನಡೆದ ಕಾರ್ಯಕ್ರಮದಲ್ಲಿ


1 ಅವರ ಹೆಸರು ಮರೆತಿದ್ದೆ. ಈ ಲೇಖನದ ರೂಪುರೇಷೆ ಸ್ಪಷ್ಟವಾದೊಡನೆ, ಸುಳ್ಯದ ಪ್ರಮುಖ ವರ್ತಕ- ಬಾಲ್ಯದಲ್ಲಿ ನನ್ನ ಸಹಪಾಠಿ- ಕೆ. ಮಹಮ್ಮದ್ ಹಾಜಿ ಅವರಿಗೆ ಬರೆದೆ. ಮರುಟಪಾಲಲ್ಲೆ ಅಕ್ಬರ್ ಪಾತ್ರ ವಹಿಸಿದ ಮಹಾನುಭಾವರ ಹೆಸರು ತಿಳಿಸಿದರು. ಮೀರಾ ಸಾಹೇಬರ ಬೇಗಂ ಒಂದು ದಿನ ಶಾಲೆಗೆ ಹೋಗುತ್ತಿದ್ದ ನನ್ನನು ಕರೆಸಿ ತಿಂಡಿ ಕೊಟ್ಟಿದ್ಧರು. ಅವರ ಮಗ ಶಬೀರ್ ಇನ್ನೊಂದು ದಿನ ಮರದಿಂದ ಮಾವಿನ ಹಣ್ಣು ಕಿತ್ತುಕೊಟ್ಟಿದ್ದ. ಈಗ ಶಬೀರ್ ಸಾಹೇಬರು ಮಂಗಳೂರಿನಲ್ಲಿರುವರಂತೆ.