ಪುಟ:Naavu manushyare - Niranjana.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಂದು ಕಿರುನಾಟಕವೂ ಇತ್ತು. “ನಾಲ್ಕನೆಯ ಪಿಶಾಚಿ."1 ಇಲ್ಲಿ ನಾನು ರಾಣಿಯಲ್ಲ, ನಾಲ್ಕು ಮಕ್ಕಳ ತಾಯಿ. ಫರಂಗಿರೋಗದ ತಂದೆಗೆ ಹುಟ್ಟುವ 'ಶನಿಸಂತಾನ' ಇವು. ನಾನು ಅಮ್ಮ. ಮುಖ್ಯೋಪಾಧ್ಯಾಯರು ಅಪ್ಪ. ನಾಟಕ ಈಟಿಯಂತೆ ತಿವಿಯಬೇಕು; ಜನ ಎಚ್ಚರಗೊಳ್ಳಬೇಕು ಎಂದು ರಾಮಪ್ಪಯ್ಯನವರು ಬಯಸಿದಂತೆ ತೋರುತ್ತದೆ. ಅಭಿನಯಿಸಿದ ವೇಳೆಯಲ್ಲಿ ನನಗೆ ಅದು ಪೂರ್ತಿಯಾಗಿ ಅರ್ಥವಾಗಿರಲಿಲ್ಲ.

೧೯೩೭ರ ಮೇ ಅಂತ್ಯದಲ್ಲೋ ಜೂನ್ ಆರಂಭದಲ್ಲೋ ಕನ್ನಡದಲ್ಲಿ ನನ್ನ ಮೊದಲ ಸಣ್ಣಕತೆ ಬರೆದೆ. ನಮ್ಮ ಶಾಲೆಗೆ ಮಂಗಳೂರಿನಿಂದ 'ರಾಷ್ಟ್ರಬಂಧು' ವಾರಪತ್ರಿಕೆ ಬರುತ್ತಿತ್ತು. ಎರಡನೆಯ ಪುಟದಲ್ಲಿ ವಾರದ ಕತೆ ಇರುತ್ತಿತ್ತು. ಅಲ್ಲಿಗೆ ನನ್ನದನ್ನು ಕಳಿಸಿದೆ. ಪ್ರಾಧ್ಯಾಪಕ-ಸಾಹಿತಿ ಸಂಪಾದಕ ಕಡೆಂಗೋಡ್ಲು ಶಂಕರ ಭಟ್ಟರು'ಕಿಶೋರ'ನ ಕತೆಗೆ ಪಾಸ್ ಮಾರ್ಕ್ ಕೊಟ್ಟರು. ಜುಲೈ ೫ರ ಸಂಚಿಕೆಯಲ್ಲಿ ಅದು ಪ್ರಕಟವಾಗಿಯೇ ಬಿಟ್ಟಿತು.... ನನಗೆ ಕತೆಗಾರನ ಪಾತ್ರ ಇನ್ನು.

ಊರಿನ ಕ್ಲಬ್ಬಿನಲ್ಲಿ ಒಂದು ವಿದಾಯಕೂಟ ಏರ್ಪಟ್ಟಿತು. ಸುಳ್ಯದ ಜನಪ್ರಿಯ ಡಾಕ್ಟರಿಗೆ ವರ್ಗವಾಗಿತ್ತು. ಆ ಸಮಾರಂಭದ ಒಂದು ಮೂಲೆಯಲ್ಲಿ ನಾನು ಕುಳಿತಿದ್ದೆ. ನಾಲ್ಕು ಸಾಲುಗಳ ಸುದ್ದಿಯನ್ನು 'ರಾಷ್ಟ್ರಬ೦ಧು'ವಿಗೆ ದಾಟಿಸಿದೆ. ಅಚ್ಚಾಯಿತು. ಸುಳ್ಯದ ಶಿಷ್ಟರಿಗೆ ಸಂತೋಷ. ಪತ್ರಿಕೆಗಳಿಗೆ ಸುಳ್ಳು ಸುದ್ದಿ ಕಳುಹಿಸಿ, ಪ್ರಕಟವಾದಾಗ ಸುದ್ದಿಗೆ ಗುರಿಯಾದವರು


1 ಬಣ್ಣದ ಬಯಲು ಪೀಠಿಕೆ ಬರೆಯುವ ಸಿಧ್ಧತೆಯಲ್ಲಿದ್ದಾಗ ಮಿತ್ರರಾದ ಎಸ್. ಎಸ್. ಶಿವಸ್ವಾಮಿ ಬಂದರು. ದೇಶದ ಸಮೂಹಮಾಧ್ಯಮ ಕ್ಷೇತ್ರದಲ್ಲಿ (ಆಕಾಶವಾಣಿ, ದೂರದರ್ಶನ) ಹಿರಿಯ ಹುದ್ದೆಯಲ್ಲಿದ್ದು ನಿವೃತ್ತರಾದವರು. ಬರೆಹ, ಭಾಷಣಗಳಲ್ಲಿ ಈಗ ನಿರತರು. ಹಿರಿಯ ಲೇಖಕರೂ ಮಿತ್ರರೂ ಆಗಿದ್ದ ಪಡುಕೋಣೆ ರಮಾನಂದ ರಾಯರು ತಮ್ಮ ಗೆಳೆಯನ 'ನಾಲ್ಕನೆಯ ಪಿಶಾಚಿ' ನಾಟಕವನ್ನು The Fourth Spectre ಎಂದು ಇಂಗ್ಲಿಷಿಗೆ ಭಾಷಾಂತರಿಸಿ, ಶಿವಸ್ವಾಮಿಯವರಿಗೆ ಕೊಟ್ಟರಂತೆ. ಸ್ವಾತಂತ್ರ್ಯೋತ್ತರ ಕಾಲಾವಧಿ. ಅವರು ಮೂಲವನ್ನೂ ಅನುವಾದವನ್ನೂ ದಿಲ್ಲಿಗೆ ಕಳೆಸಿದರಂತೆ. ಪ್ರತಿಕ್ರಿಯೆ ಬರಲಿಲ್ಲ.