ಪುಟ:Naavu manushyare - Niranjana.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xviii / ನಾವೂ ಮನುಷ್ಯರು!

ಜತೆಯಲ್ಲೆ ಪ್ರಸಾರ ಮಾಡುವ ಉದ್ದೇಶಕ್ಕಾಗಿ ಬೆಂಗಳೂರು ನಿಲಯ ಒಂದು ನಾಟಕ ಕೇಳಿತು. 'ಸಂಗಮಸ್ನಾನ' ಬರೆದೆ. ನಿಲಯ ನಿರ್ದೇಶಕ ಡಾ! ನಟೇಶರ ದ್ವಿಉದ್ದೇಶ ಯೋಜನೆ ದಿಲ್ಲಿಯ ಟೀಕೆಗೊಳಗಾಗಿ, 'ಸಂಗಮಸ್ನಾನ' ಪ್ರಸಾರವಷ್ಟೇ ಆಯಿತು. (ರಂಗನಾಟಕ ಬೇರೆ, ಪ್ರಸಾರ ನಾಟಕ ಬೇರೆ ಎಂಬುದು ನನ್ನ ಅಭಿಪ್ರಾಯವೂ ಆಗಿತ್ತು.) ಧಾರವಾಡ ನಿಲಯಕ್ಕಾಗಿ ನಾನು ಬರೆದ ಪ್ರಸಾರನಾಟಕಗಳು: 'ಅನುರಾಗ', 'ಸೂತ್ರಕಿತ್ತಪಟ' 'ಕಣ್ಣಿದ್ದವರಿಗೂ ನೀನೆ ಶಿವಾ' ಮತ್ತು ನಿಲಯ ನಿರ್ದೇಶಕ ಮಧುರಕಾಂತ ವೈದ್ಯರ ಅಧಿಕಾರಾ ವಧಿಯಲ್ಲಿ, ನೆರೆಹೊರೆಯಲ್ಲಿದ್ದ ಭಾಸ್ಕರ ಯೇಸುಪ್ರಿಯರ ಸ್ನೇಹದ ಬಲವಂತಕ್ಕೆ ಒಪ್ಪಿ, ವೈದ್ಯರ ಅಪೇಕ್ಷೆಯಂತೆ ರಚಿಸಿದ ಆರು ಭಾಗಗಳ ನಾಟಕ ಮಾಲಿಕೆ 'ಆಹ್ವಾನ'.

ಬೆಂಗಳೂರಿಗೆ ಮರಳಿದೆ. ಬದುಕಿನ ಅಲೆದಾಟದ ಕೊನೆಯ ತಾಣ.

ಅಂಕಣಗಳನ್ನೂ ಕಾದಂಬರಿಗಳನ್ನೂ ಹೊಸೆಯುವ ಕೆಲಸ. ಜತೆಯಲ್ಲಿ ಆಕಾಶವಾಣಿಗಾಗಿ ಮೂರು ಮೊಳದ ಅರೆ ಬಟ್ಟೆಗಳು. ಚೀನದೊಡನೆ ಘರ್ಷಣೆ ಸಂಭವಿಸಿದಾಗ ಬರೆದ ನಾಟಕಗಳು. 'ಬಂದ ದಾರಿಗೆ ಸುಂಕವಿಲ್ಲ' ಮತ್ತು 'ಪಾಪಾಸುಕಳ್ಳಿ' ಮುಂದೆ, ಮೊದಲಿನದನ್ನು 'ಸಮ್ರಾಜ್ಞಿ'ಎಂಬ ತಲೆಕಟ್ಟಿನಲ್ಲಿ ರಂಗನಾಟಕವಾಗಿ ಬರೆದೆ.'ಪಠ್ಯ ನಾಟಕ' ಎಂದರೂ ಸಂದೀತು. ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗೆ ಅದು ಉಪಪಠ್ಯವಾಗಿ, ಮನೆಸಾಲ ತೀರಿಸಲು ಅಗತ್ಯವಿದ್ದ ಹಣ ದೊರೆಯಿತು.

ಪ್ರಸಾರಕ್ಕೆಂದೇ ಬರೆದ ರೂಪಕಗಳು ಇನ್ನೂ ನಾಲ್ಕಾರಿವೆ. ಹೆಸರುಗಳ

ಪಟ್ಟಿ ಕೊಟ್ಟರೇನು? ಬಿಟ್ಟರೇನು?

ಈಗ ದೂರದರ್ಶನ ಬಂದಿದೆ.೧೯೭೧ರಲ್ಲಿ ಪಾರ್ಶ್ವಪೀಡಿತನಾದ ಮೇಲೆ

ನಾಟಕ ನೋಡುವ ಸುಖದಿಂದ ವಂಚಿತನಾದವನಿಗೆ ಈಗ ತುಸು ಸಮಾಧಾನ. ಸಮುದಾಯ ತಂಡ, ಬೀದಿ ನಾಟಕದ ಬಂಧುಗಳು, ಹವ್ಯಾಸೀ ನಟವೃಂದ, ಇತರ ರಂಗಭೂಮಿ ಪ್ರಯೋಗಗಳನ್ನು ಕಾಣಲಾರೆನಾದರೂ ದೂರದರ್ಶನ ದಲ್ಲಿ ಬರುವ ನಾಟಕ, ಯಕ್ಷಗಾನ ನೋಡಿ, ಬಯಲನ್ನೂ ಅಗೋಚರ ಪ್ರೇಕ್ಷಕಗಣವನ್ನೂ ಕಲ್ಪಿಸಿಕೊಳ್ಳುತ್ತೇನೆ. ಬಣ್ಣಮೆತ್ತಿದ ನಾಟಕಗಳೂ ಬರತೊಡಗಿದೆ ಈಗ.