ಪುಟ:Naavu manushyare - Niranjana.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬಣ್ಣದ ಬಯಲು

ನಾಟಕದ ಅಂಟುಬಣ್ಣಕ್ಕೂ ನನಗೂ ನಂಟು ಹಳೆಯದು.ಐದನೆಯ ವಯಸ್ಸಿನ ಅನಂತರದ ಅನುಭವ ನೆನಪಿನ ಗವಿಯಲ್ಲಿ ಜ್ವಲಂತವಾಗಿರುತ್ತದೆಂದು ಮನೋವಿಜ್ಞಾನ ಮನವರಿಕೆಮಾಡಿಕೊಟ್ಟಿದೆ. ಐದಕ್ಕೂ ಮುಂಚಿನ ಘಟನೆಗಳು ನೆನಪಿವೆ ಅನಿಸಿದರೆ, ನಾವು ವಂಚನೆಗೆ ಒಳಗಾದಂತೆಯೇ: ಅವು ನಿಜನೆನಪಲ್ಲ; ಹಿರಿಯರು ಪದೇ ಪದೇ ಹೇಳಿ ಭೈರಿಗೆ ಕೊರೆದುದರ ಫಲವಾಗಿ ಮೆದುಳಿಗೆ ಅಂಟಿಕೊಂಡ ಜಿಗುಟು.ನಿಜ ಇರಬಹುದು. ಆದರೆ ಅವು ಯಾವುದೇ ವ್ಯಕ್ತಿಯ ಸ್ವಂತ ಅನುಭವವಲ್ಲ.

ಪ್ರತಿಯೊಂದು ಸಾಹಿತ್ಯಕೃತಿಗೂ ಒಂದಿಷ್ಟು ಹಿಂದು ಮುಂದು ಇದ್ದೇ ಇರುತ್ತದೆ. 1944ರಲ್ಲಿ ನಾನು ಬರೆದು ನಿರ್ದೇಶಿಸಿದ 'ನಾವೂ ಮನುಷ್ಯರು!'ನಾಟಕಕ್ಕೂ ಹಿಂದು ಮುಂದು ಇರಲೇಬೇಕಲ್ಲ? ಆ ಹಿಂದುಮುಂದು ಅರಿಯಲು ನೆನಪಿನ ಆಳವನ್ನು ಕಲಕಿದೆ. ಹಲವು ತುಣುಕುಗಳು ಮೇಲೆ ಬಂದುವು. ಐದನೆಯ ವಯಸ್ಸಿನ ಅನಂತರದ್ದೇ. ಆದರೂ ಕೆಲ ತುಣುಕುಗಳ ಬಗೆಗೆ ಶಂಕೆ, ಆ ಮಿತ್ರರಿಗೆ ಈ ಮಿತ್ರರಿಗೆ ಬರೆದು ಖಚಿತಪಡಿಸಿಕೊಂಡೆ. ಪರಿಣಾಮ ನೆನಪುಗಳ ಒಡ್ಡೋಲಗ- ಬಣ್ಣದ ಬಯಲು.

ದಕ್ಷಿಣ ಕನ್ನಡದಲ್ಲಿ ಹುಟ್ಟಿ ಸ್ವಲ್ಪಕಾಲವಾದರೂ, ಅಲ್ಲಿ ಬೆಳೆದವನಿಗೆ ಭೂತದ ಕೋಲ,ಯಕ್ಷಗಾನ,ತಾಳವುದ್ಧಳೆ ತೀರಾ ಅಪರಿಚಿತವಾಗುವುದು ಸಾಧ್ಯವಿಲ್ಲ. ಅಂಥವರಲ್ಲಿ ಒಬ್ಬ ನಾನು.ಕುಮಾರ ಪರ್ವತ ಕುಮಾರಧಾರೆ; ಆವರಿಸಿದ ಕುಳುಕುಂದದ ಬಯಲಲ್ಲಿ ಹುಟ್ಟಿ ಆರು ತಿಂಗಳಾದ ಮೇಲೆ, ಮಡಿಕೇರಿ : ಮಂಗಳೂರು ಹೆದ್ದಾರಿಯಲ್ಲಿನ ಕಾವು ಎಂಬ ಪುಟ್ಟ ಊರಿಗೆ; (ದಕ್ಷಿಣಕ್ಕೆ ಪುತ್ತೂರು, ಉತ್ತರಕ್ಕೆ ಸುಳ್ಳ)ನನ್ನ ಸ್ಥಳಾಂತರವಾಯಿತು. ಕಾವು ಊರು ಎಂದರೂ ಒಂದೇ: ಕಾವು ಗ್ರಾಮ ಎಂದರೂ ಒಂದೇ.