ವಿಷಯಕ್ಕೆ ಹೋಗು

ಪುಟ:Nanna Nalla.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನನ್ನ ನಲ್ಲ


ಮಾಣಿಕದ ಮೂಗಿನವ ಮೈ ಪಚ್ಚರತ್ನದವ

ಹಣ್ಣು ಕುಕ್ಕುತ ಹಾರುವಣ್ಣ ಬಾರೋ |

ಜಾಣ ರಂಗಯ್ಯ ತಾ ಕಾಣದಡಗಿದನೆಲ್ಲಿ

ಗಿಣಿರಾಮ ನೀನಾರೆ ಸುದ್ದಿ ಬೀರೊ || 5 ||


ಬೆಳದಿಂಗಳಿರುಳಲ್ಲಿ ನಟ್ಟನಡುರಾತ್ರಿಯಲಿ

ಸಪ್ಪಳಿಲ್ಲದ ಗಪ್ಪುಗಾರಿನಲ್ಲಿ |

ಕೊಳದ ಬಾಂದಳದಲ್ಲಿ ಟಿಂವ್ಗುಡುವ ಟೀಂವಕ್ಕಿ

ನೀನಾರೆ ಬಲ್ಲೆಯಾ ನಲ್ಲನೆಲ್ಲಿ || 6 ||


ಬಿರುಗಣ್ಣ ಮಲ್ಲಿಗೆಯೆ ಸರಿಯೆ ನಿನಗೀ ಮೌನ

ಕಣ್ಣಿಲ್ಲದವರು ಕಂಡಿಲ್ಲದಿರಲಿ |

ಸಿರಿವಂತರಾ ಮಗಳು ಸೊರಗಿ ಸಾಯುತಲಿರುವೆ

ಪುರುಷನೆಡೆ ಹೇಳಮ್ಮ ಪುಣ್ಯಬರಲಿ || 7 ||


ಬಹುರಸದ ಮೊಲೆಯೂಣಿಸಿ ಜೀವತಣಿಸುವ ತಾಯಿ

ಸರ್ವರಾಧಾರೆ ಭೂದೇವಿ ತಾಯೀ |

ಬಹಳ ಬೇಡುವಳಲ್ಲ ನನ್ನ ರಾಯನ ಸೊಲ್ಲ

ನೀನಾರೆ ಹೇಳಿಕೊಡಬಾರೆ ತಾಯೀ || 8 ||


ಇಲ್ಲಿಯೂ ಮುಗಿಯುವ ಅಲ್ಲಿಯೂ ಮುಗಿಯದವ

ಎಲ್ಲಿಯೂ ಮುಗಿಯದಾಕಾಶ ತಂದೆ |

ಎಲ್ಲಿ ನನ್ನರಸನಿಹನೆಲ್ಲಿ ನನ್ನಾಶ್ರಯವು

ಕೈಮುಗಿವೆ ಹೇಳೆನ್ನನಂತ ತಂದೆ || 9 ||


ಎಂದಿಗೂ ಇದ್ದವನು ಎಂದಿಗೂ ಇರುವವನು

ಜೇಷ್ಠನೇ ಶಾಶ್ವತನೆ ಕಾಲನಟನೆ |

ಹಿಂದು ಮುಂದರಿಯದಲೆ ಕುಣಿಯುವೆನು ನಿನ್ನೊಡನೆ

ನನ್ನ ರಾಯನ ನೆಲೆಯ ತೋರು ಗಡನೆ || 10 ||