ವಿಷಯಕ್ಕೆ ಹೋಗು

ಪುಟ:Nanna Nalla.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦

ನನ್ನ ನಲ್ಲ


ಹರಳು-ಮುತ್ತಿನ ರಾಶಿ ಸೆರೆಸೊರೆ ಮುಗಿಲಲ್ಲಿ

ಆಂತರದೊಳೆತ್ತಿ ತೇಲಿಸುವ ಶಕ್ತಿ |

ಹೊರಳಿ ನೋಡೆನ್ನ ಸ್ಥಿತಿ ಸೂರ್ಯಚಂದ್ರರ ಕಣ್ಣು

ತೆರೆದು ನೋಡೆನ್ನ ಗತಿ ಹೇಳೆ ಯುಕ್ತಿ || 11 ||


ತೀರ ಸನಿಯೆಂದರೂ ತೀರ ದೂರದೊಳಿರುವಿ

ಸಾವಿರಜ್ಜಿದ ಗಾವುದಂಗಳಾಚೆ |

ತೋರಿ ನಗೆಬೀರಿ ನೀನೇನು ಹೇಳುವಿ ಚಿಕ್ಕೆ

ಏನೆಂದು ಭಾವಿಸಲಿದೇನು ಸೂಚಿ ? || 12 ||


ತೊರಲಾರದ ಗಾಳಿ ತಟ್ಟಿ ತಿಳಿಸುವಿಯೇನು

ಯಾವ ನಾಡಿನ ಸೀಮೆ ಸುಳಿದು ಬಂದೆ ?

ಮೀರಿತೆನ್ನಯ ತಾಪ ಅರಿಸೆನ್ನಯ ತಂದೆ

ನನ್ನರಾಯನ ಸುದ್ದಿ ಸಾರು ಇಂದೆ || 13 ||


ಹಗಲು ನೆರಳಿನ ನಾರಿ ಮುಗಿಲು ಮುಚ್ಚಿದ ನಾರಿ

ಇರುಳಲ್ಲಿ ಕಗ್ಗಕತ್ತಲೆಯ ನಾರಿ |

ಮಿಗಿಲು ಮಾಟದ ನಾರಿ ತೋರೆ ನಲ್ಲನ ದಾರಿ

ಕಾಳಿ ಕಿಂಕಾಳಿ ನೀ ಮರುಕದೋರಿ || 14 ||


ನಿದ್ರಿಸುವ ಕತ್ತಲೆಯೆ ಕನಸಿಡುವ ತಿಳಿಬೆಳಕೆ

ಜಾಗ್ರತದ ಕಿಚ್ಚೆ ನೀನಾರೆ ಹೇಳು |

ನಿದ್ರೆಬಾರದೆ ನಿಂತು ಸೋತು ಸಣ್ಣಾಗಿಹೆನು

ರಾಜರಾಜನ ಠಾವ ತೋರಿಸೇಳು || 15 ||


ಕಣ್ಣು ಮುಚ್ಚಲು ಮಣ್ಣು ಕಣ್ಣು ಬಿಚ್ಚಲು ಬಣ್ಣ

ಕಣ್ಣಿನಾಚೆಯ ನಿನ್ನ ರೂಪವರಿಯೆ |

ಹಣ್ಣಾದೆ ಸುಣ್ಣಾದೆ ಸಣ್ಣಾದೆ ಕಳವಳಿಸಿ

ಮರೆತು ಮಲಗಿದ ದೊರೆಯ ತೋರೆ ಸಿರಿಯೆ || 16 ||