ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೨
ನನ್ನ ನಲ್ಲ
ಹೇಳು ಕಮಲವೆ, ಮೇಲೆ
ಮುಖಮಾಡಿ ದೈನಾಸ
ದಿಂದೇನು ನೋಡುತಿರುವೆ ?
ಗೋಳಿಟ್ಟು ಗೋಣೆತ್ತಿ
ಕೈಮುಗಿದು ಕೈಲಾಸ
ದಿಂದೇನು ಬೇಡಿತರುವೆ ?
ಏನಿಲ್ಲ ಎಂತಿಲ್ಲ
ಅಲ್ಲೆನ್ನ ದೊರೆ ನಲ್ಲ
ನಲ್ಲೆಯರ ಬಳಗದೊಳಗೆ
ತಾನಲ್ಲಿ ಇಹನಲ್ಲ
ನಾನಿಲ್ಲಿ ಕೆಳಗಿಳಿಸಿ
ಕರೆಯುತಿಹನೊಳಗೆ ಒಳಗೆ
ಹದಿನಾರು ಸಾವಿರದ
ಅಬ್ಜಕೋಟಿಗು ಮಿಕ್ಕಿ
ರಾಣಿಯರು ರಾಜಮಣಿಗೆ
ಮದನಾರಿಯರ ಬಳಗ
ಮುತ್ತಿ ಮುಗಿಬಿದ್ದಿರಲು
ಬಹನೆ ಬಿಟ್ಟೆನ್ನ ಬಳಿಗೆ ?
ಒಬ್ಬಳನು ಮುದ್ದಿಡುತ
ಒಬ್ಬಳನು ತೆಕ್ಕಿಸುತ
ಮತ್ತೊಬ್ಬಳನು ಬಳಸುತ
ಒಬ್ಬೊಬ್ಬಳನೆ ರಮಿಸಿ
ಉಬ್ಬುಬ್ಬಿಸುತ ಮತ್ತೆ
ನೋಟ ನನ್ನೆಡೆ ಸುಳಿಸುತಾ
ಸನ್ನೆಯಿಂದೆನ್ನೆದೆಗೆ
ರನ್ನ ಮುದ್ರೆಯನೊತ್ತಿ
ಸನ್ನೆ ಹಿಡಿಸಿರುವನಲ್ಲಾ
ಇನ್ನೆಂದಿಗೇ ಇರಲಿ
ಸನ್ನಿಧಿಯ ಭರವಸದ
ಕೀಲು ಜಡಿಸಿರುವನಲ್ಲಾ