೫೬
ನನ್ನ ನಲ್ಲ
ಜೀವದ ಪತಂಗ ತಾನಾತ್ಮ ದೀಪದ ಮೇಲೆ
ಅಬ್ಬರಿಸಿ ಆವರಿಸಿದಾಗ ಮಬ್ಬು
ಕಾವಿನಲಿ ಬೆಂದೋಡಿ ಆತ್ಮಜಯವಾದಾಗ
ನೆಲಮುಗಿಲ ತೇಲಿಸುವ ಬೆಳಕಿನುಬ್ಬು 8
ಆಗ ಎಂಥಾ ನಿರಾಶೆ ಆಗ ಎಂಥಾ ದುಃಖ
ಆಗ ಎಂಥಾ ಕಷ್ಟ ಚೂರುಚೂರೇ
ಆಗಿನಂಥಾ ವ್ಯರ್ಥದನಿಸಿಕೆಯ ನೆನೆಸಿದರೆ
ಈಗಲೂ ಹೃದಯಕ್ಕೆ ಘೋರುಘೋರೇ 9
ಹೀಗಿರುವ ಹೊತ್ತಿನೊಳೆ ಹೊಟ್ಟೆಯನು ಬಿಚ್ಚಿ ಮಾ-
ತಾಡಿದರೆ ಬಂದಥ ಮೋಡ ಬಯಲೇ
ಆಗ ಏನಾನಂದ ಆಗ ಎಂಥಾ ಸಮತೆ
ಹೇಳಲೇನಾಗಿನದ್ಭುತದ ಲೀಲೆ 10
ಮುಚ್ಚಿರುವ ಮೊಗ್ಗೆ ತಾನರಳಿದರೆ ಕೋಮಲವು
ಆಗ ನಸುಬಿಸಿ ಕೂಡ ಬಾಡಿಸುವದು
ಹದಗೆಟ್ಟು ಕುಗ್ಗಿ ಬಗ್ಗಿದ ಹೊತ್ತಿನಲಿ ಕೂಡ
ನಸುಗಾಳಿ ಬಂದು ನಗಿಸಾಡಿಸುವದು 11
ಬಂದ ರಾತ್ರಿಯು ಕಳೆದು ಅಂದು ಹಗಲಾದೊಡನೆ
ಹಿಗ್ಗುತಿದ್ದೆವು ಪೀಡೆ ಹೋಯಿತೆಂದು
ಮುಂದೆ ತುಸು ಹೊತ್ತಿನೊಳೆ ಕಾಳರಾತ್ರಿಯ ಕಾಟ
ಎಲ್ಲಿಂದಲೋ ಮುಸುಕುತಿತ್ತು ಬಂದು 12
ಮತ್ತೆ ಮುಂಚಿನ ಗೋಳೆ ಬೀಸಿದ್ದೆ ಬೀಸುವುದು
ಬುದ್ಧಿಗೇ ಬಿಚ್ಚದಂತಾಗುತಿತ್ತು
ಅತ್ತು ತೆಕ್ಕೆಗೆ ತೆಕ್ಕೆಬಿದ್ದು ಒಳನೋಡುತಿರೆ
ಕತ್ತಲೆಯು ಹರಿದು ಬೆಳಕಾಗುತಿತ್ತು 13