ವಿಷಯಕ್ಕೆ ಹೋಗು

ಪುಟ:Nanna Nalla.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫

ನನ್ನ ನಲ್ಲ


17. ಸುಖ-ದುಃಖ

ಸುಖವು ಬೀದಿಯ ನೆರಳ | ದುಃಖವು ದೂಡುವ ಬಿಸಿಲ

ಸುಖ-ದುಃಖ ನಮಗ ಸರಿಸವನ | ತಂಗೆಮ್ಮಾ

ಒಂದುಬಿಟ್ಟೊಂದು ದೊರಿಯಾವ 1


ಸುಖಕ ಮರುಳಾದೀವ | ದುಃಖಕ ಬ್ಯಾಸತ್ತೀವ

ಸುಖ ಬೇಡಿ ಮನವು ಮಲಮಲ | ತಂಗೆಮ್ಮಾ

ದುಃಖ ನೋಡಿ ಜೀವ ಗಲಬಲ 2


ಸುಖವಂತ ಹಿಡಿದೀವ | ದುಃಖವಾಗಿ ಪಡೆದೀವ

ಹೂವಲ್ಲ ಜಾಣಿ ಹುಳ ನೋಡ | ತಂಗೆಮ್ಮಾ

ಬೆಳದಿಂಗಳಲ್ಲ ಉರಿಬಿಸಿಲ 3


ಮುತ್ತಂತ ಮುಟ್ಟೀವ | ಕಿಡಿಯಾಗಿ ಕಚ್ಚ್ಯಾವ

ಹಣ್ಣಲ್ಲ ಜಾಣಿ ಹಿಡಿಗೆಂಡ | ತಂಗೆಮ್ಮಾ

ಬಳ್ಳೆಲ್ಲ ಬಿಗಿದ ಬಲಿ ನೋಡ 4


ನೆಲವಂತ ನಿಂತೀವ | ನೀರಾಗಿ ನುಂಗೀತ

ಬೆಣ್ಯಲ್ಲ ಜಾಣಿ ಬಿಳಿ ಸುಣ್ಣ | ತಂಗೆಮ್ಮಾ

ಪರಿಮಳವಲ್ಲ ವಿಷಗಾಳಿ 5


ಜಪ್ಪೀಸಿ ನಡಿದೀವ | ತಪ್ಪೀಸಿ ಒಯ್ದೀತ

ನಿಂತನಿಂತಲ್ಲೆ ನುಂಗೀತ | ತಂಗೆಮ್ಮಾ

ಬಲ್ಲಂದ ದಿಕ್ಕಿಗೆಳಸೀತ 6


ತಪ್ಪೀಸಿ ನಡಿದೀವ | ಜಪ್ಪೀಸಿ ಹಿಡಿದೀತ

ಜಾರಟಿಗೆ ಕಾಲ ಜಾರೀತ | ತಂಗೆಮ್ಮಾ

ಹಾರಟಿಗೆ ರೆಕ್ಕಿ ಮುರಿದೀತ 7