೬೭
ನನ್ನ ನಲ್ಲ
ನಿಂತಲ್ಲೆ ನಿಂತೀವ | ಕುಂತಲ್ಲೆ ಕುಂತೀವ
ದಣೆವೀಕಿಗಳಿದು ಎದ್ದೀವ | ತಂಗೆಮ್ಮಾ
ದುರಗುಟ್ಟಿ ದಿಕ್ಕ ನೋಡೀವ 16
ಆರ್ಯಾಣದಡವ್ಯಾಗ | ಯಾರ್ಯಾರ ಸುಳವಿಲ್ಲ
ಎಲ್ಲೀದು ಬಂತು ಹಿರಿಹರಕಿ | ತಂಗೆಮ್ಮಾ
ಒಳಹೊರಗ ನಮಗ ಹಿರಿಹಿಗ್ಗ 17
ಮೂರ್ಹೆಜ್ಜಿ ದಾಟಿದರ | ಮುಂದಲ್ಲೆ ಗುಡಿಸಲವ
ಅಲ್ಲಿ ಮುನಿಗೋಳ ಅರಸೊತಿಗೆ | ತಂಗೆಮ್ಮಾ
ಅವರಂಥ ಸುಖವ ಅರಸರಿಯ 18
ನಮ್ಮಂಗೆ ಅತ್ತವರು | ನಮ್ಮಂಗೆ ಕರೆದವರು
ನಮ್ಮಂಗೆ ಬಾಡಿ ಬೆಂದವರು | ತಂಗೆಮ್ಮಾ
ಕಡಿಗೊಮ್ಮೆ ಗಟ್ಟಿಗೊಂಡವರು 19
ಊರಿದ್ದೆ ಊರಾಯ್ತ | ನಿಂತದ್ದೆ ನೆಲೆಯಾಯ್ತ
ಅಂದದ್ದೆ ವೇದಋಚಿಯಾಯ್ತು | ತಂಗೆಮ್ಮಾ
ಬಂದದ್ದೆ ಹರಕೆ ಹಿರಿದರಾಯ್ತ 20
ಹರಿದದ್ದೆ ಹಳ್ಳಮ್ಮಾ | ನಿಂತದ್ದೆ ತೀರ್ಥಮ್ಮಾ
ಆ ನೀರ ಮತ್ತ ಈ ನೀರ | ಬ್ಯಾರಿಲ್ಲ
ತಿಳಿಬೇಕ ತಂಗಿ ಹೊಳಿಬೇಕ 21
ಬೇಡೂತ ನಡದಾಂಗ | ಕಾಡೂತ ಹೋದೀತ
ಬೇಡೂದು ಮರೆತ ಘಳಿಗ್ಯಾಗ | ತಂಗೆಮ್ಮಾ
ಆಡೂತ ಓಡಿ ಬಂದೀತ 22
ಸುಖವು ಬೀದಿಯ ನೆರಳ | ದುಃಖವು ದೂಡುವ ಬಿಸಿಲ
ಸುಖ-ದುಃಖ ನಮಗ ಸರಿಸವನ | ತಂಗೆಮ್ಮಾ
ಒಂದುಬಿಟ್ಟೊಂದು ದೊರಿಯಾವ 23
_____