೬
ನನ್ನ ನಲ್ಲ
ಗಲ್ಲ ಹಿಡಿಯುವ ಕೆಲರು ಗಲ್ಲ ಹಿಂಡುವ ಕೆಲರು
ಬೆಸನಿಸುವ ಕೆಲರು ಬೆದರಿಸುವ ಕೆಲರು |
ಕಲ್ಲುಗೊಳ್ಳುವ ಕೆಲರು ಹಲ್ಲುಕಿಸಿಯುವ ಕೆಲರು
ಬಲ್ಲವರು ಬಲ್ಲಂತೆ ಬಣಗುತಿಹರು || 8 ||
ತಾಳ್ಮೆ ಗಲಿಸುವ ಕೆಲರು ತಪ್ಪು ಹೊರಿಸುವ ಕೆಲರು
ತಿರುತಿರುಗಿ ತಿವಿತಿವಿದು ಬಯ್ವ ಕೆಲರು |
ತಾಳು ತಪ್ಪೀ ರೀತಿ ಬೇತಾಳದಂತೆನ್ನ
ಗಾಳಿಸುವ ಗೋಳಿಸುವ ಖಲರು ಕೆಲರು || 9 ||
ಆಶೆ ಹಚ್ಚುವ ಕೆಲರು ಆಶೆ ಹರಿಯುವ ಕೆಲರು
ಆಶೆ ತೋರಿಸಿ ಅಡ್ಡ ಸೆಳೆವ ಕೆಲರು |
ಆಸರಾಗುವ ಕೆಲರು ಆಶೆಬುರುಕರು ಕೆಲರು
ಮುಖ ತಿರುವಿ ಮೂಗು ಮುರಿವವರು ಕೆಲರು || 10 ||
ಅಣಕವಾಡುವ ಕೆಲರು ಅಣಗಿಸ್ಯಾಡುವ ಕೆಲರು
ಅನುವು ಹೇಳುವ ಕೆಲರು ಅಳುವ ಕೆಲರು |
ಕೆಣಕಿ ಕೇಳುವ ಕೆಲರು ಗುಣಿಸಿ ಗುಣುಗುವ ಕೆಲರು
ಹಣಿಕೆಹಾಕದೆ ಹಾದುಹೋಹ ಕೆಲರು || 11 ||
ಧೈರ್ಯ ಹೇಳುವ ಕೆಲರು ದಿಕ್ಕುಗೆಡಿಸುವ ಕೆಲರು
ದಂಗುಬಡಿಸುವ ದಂಭದವರು ಕೆಲರು |
ಶೌರ್ಯಗಲಿಸುವ ಕೆಲರು ಶಾಂತಗೊಳಿಸುವ ಕೆಲರು
ಸಾಕು ಬಿಡು ಸುಮ್ಮನಿರು ಎಂಬ ಕೆಲರು || 12 ||
ಸತ್ತವರ ಮನೆಯಲ್ಲಿ ಸಂತೆ ನೆರೆಯುವ ತೆರದಿ
ಬಲ್ಲವರು ಬಲ್ಲಂತೆ ರಂಬಿಸುವರು |
ಸತ್ತವನ ಬದುಕಿಸುವ ಸಾಮಥರ್ಯ್‌ದವರಾರು
ಮಾತುಕತೆ ಹೇಳಿ ಮನೆಗೇಳುವವರು || 13 ||