೭೨
ನನ್ನ ನಲ್ಲ
20. ಅಣ್ಣಯ್ಯನಿಗೆ
ಮಾತುಮಾತಿಗೆ ಬಿಡದೆ ನಡುವೆ ನುಸುಳುವ ನಿನ್ನ
ಅರ್ಥವಿಲ್ಲದ ಆ `ಅದಲ್ಲ'ದರ್ಥಕೆ ನಾನು
ಬೆರಗುಬಟ್ಟೆನು ನಿನ್ನ ನೇರಿನೇತಿಯ ಹೋಲ್ವ
ಅರುವಿನಾ ಆಳವರಿದು 1
ಇತಿಯೆಂದು ಇತಿಯೆಂದು ಅಲ್ಲಲ್ಲೆ ಮಲೆಮಲೆತು
ಮತಿಯ ಮಡುಗಟ್ಟಿರಲು ನೇತಿಯಿಂದಗಿದಗಿದು
ಹರಿಗಡಿದ ಹೊನಲನ್ನು ಹರಿಯಹಚ್ಚುವ ನಿನ್ನ
ಹದವುಳ್ಳ ತರ್ಕ ಹಿರಿದು 2
ಅಲ್ಲೆನ್ನದಲ್ಲಮನು ಅಹುದೆನುತ ಇದುರಿಪನು
ಅವರಂತೆ ಮಾತಾಡಿ ಅವರ ಮರವೆಯ ಹರಿದು
ನೋವುಗೊಳಿಸದೆ ಕೊಳೆಯ ಕೊಯ್ದ ಕಳೆಯುವ ನಿನ್ನ
ವೈದ್ಯಕದ ಚೋದ್ಯ ಮಿಗಿಲು 3
ನೀ ಕಿಚ್ಚು ನಾ ಕೆಂಡ ಬೆನ್ನುಬೆನ್ನಲಿ ಬೆಸೆದ
ಏಕತೇಜದ ಎರಡು ಹಿರಿಕಿರಿಯ ಪಿಂಡಗಳ
ಬೆಳಗಿಸುವ ಜ್ಯೋತಿ ಶ್ರೀ ಅರವಿಂದಯೋಗಿಗಳ
ಹೃದಯಸ್ಥ ವಿಶ್ವಭಾನು 4
ಹನ್ನೆರಡು ವರುಷಗಳ ದೈವದಾಟವ ಕಂಡ
ನನ್ನ ನಿನ್ನಯ ಸಖ್ಯ ಮೊಳೆತೊಂದು ತಪವಿಂದು
ಮುಂದೆ ಬಹುಕಾಲದಲ್ಲಿ ಬಿಡಲಿರುವ ಹೂ ಕಾಯಿ
ಭವಿತವ್ಯ ಗರ್ಭಗತವು 5
ಇಂದು ಬೇಸಿಗೆಯಲ್ಲಿ ಜೀವ ಬಸವಳಿದಿರಲು
ಬಂತು ದ್ವಾದಶ ವರ್ಷದನುಪಮದ ಹಿರಿ ದಿನವು
ಮೀರಲಾಗದು ಪರ್ವಕಾಲ ಸಮಯವನೆಂದು
ಹಾಡಿದೆನು ಅಂತು ಇಂತು 6
________