xii
ಕವಿಪರಿಚಯ
`ಮಧುರಚೆನ್ನ'ರು ಚೆನ್ನಮಲ್ಲಪ್ಪ ಎಂಬ ಹೆಸರು ತೊಡಲಿರುವ ಶಿಶುವಾಗಿ 1903ನೇ ಇಸವಿಯ ಜುಲೈ ತಿಂಗಳ 31ಕ್ಕೆ ಜನ್ಮವೆತ್ತಿದರು. ತಾಯಿ ಅಂಬವ್ವ- ತಂದೆ ಸಿದ್ದಲಿಂಗಪ್ಪ; ಊರು ಹಲಸಂಗಿ. ಹಳ್ಳಿಯ ಒಂದು ಸಾಹುಕಾರ ಮನೆತನ ಅವರದು. ಅವರು ಜನ್ಮವೆತ್ತುವ ಹೊತ್ತಿಗೆ `ಸಾಹುಕಾರ' ಎನ್ನುವದು ಅನ್ವರ್ಥಕ ನಾಮದಿಂದ ಅಡ್ಡಹೆಸರಿಗೆ ಬಂದಿತೆನ್ನಬಹುದು. ಅವರಿಗೆ ತಂದೆಯ ನೇತೃತ್ವದಲ್ಲಿ ಬೆಳೆಯುವ ಸಂದರ್ಭವೊದಗಲಿಲ್ಲ. ತಾಯಿಯ ಅಕ್ಕರೆಯಲ್ಲಿ ಒಬ್ಬನೇ ಒಬ್ಬ ಮಗನಾಗಿ ಬದುಕಿ ಬೆಳೆದರು. ಹಳ್ಳಿಯ ಶಾಲೆಯಲ್ಲಿ ಕಲಿಯುತ್ತ 18ನೇ ವಯಸ್ಸಿಗೆ ಮುಲಕೀ ಪರೀಕ್ಷೆಯಲ್ಲಿ ಹೆಚ್ಚು ಗುಣಗಳನ್ನು ಪಡೆದು ಪ್ರಥಮ ಸ್ಥಾನವನ್ನು ದೊರಕಿಸಿದರು. ಆಯಿತು ಅದೇ ಅವರ ಕೊನೆಯ ಪರೀಕ್ಷೆ. ಆಬಳಿಕ ಅವರು ಇನ್ನಾವ ಪರೀಕ್ಷೆಗೂ ಕುಳಿತುಕೊಳ್ಳಲಿಲ್ಲ. ಆದರೆ ಹನ್ನೆರಡನೇ ವಯಸ್ಸಿನಿಂದಲೇ ಅವರು ತಮ್ಮ ಜೀವನವನ್ನು ಮಹಾ ಅಗ್ನಿಪರೀಕ್ಷೆಗೆ ಈಡುಮಾಡುವ ಸಿದ್ಧತೆ ನಡೆಸಿದ್ದರು. ಪರಮಾತ್ಮನ ಸಲುವಾಗಿ ಜಿಜ್ಞಾಸೆ ತಳೆದು ಆಗಲೇ ಗುರೂಪದೇಶವನ್ನೂ ಪಡೆದರು. ಅದರಿಂದ ತಮಗೆ ಪ್ರಯೋಜನವುಂಟಾಗಲಿಲ್ಲವೆಂಬ ಕಾರಣದಿಂದ ಅವರು 17ನೇ ವಯಸ್ಸಿಗೆ ಪ್ರಚಂಡ ನಾಸ್ತಿಕರೇ ಆಗಿ ನಿಂತರು.
ಗುರೂಪದೇಶದ ಭ್ರಮೆಯು ಬಯಲಾಗುತ್ತಲೇ ಮಾನಸಪೂಜೆಯನ್ನು ಆರಂಭಿಸಿದರಾದರೂ ತರ್ಕದ ಮರ್ಕಟತನವು ಕಾಣಿಸಿಕೊಂಡ ಕಾರಣದಿಂದ ವಿಚಾರದ ತೂಕ ತಪ್ಪಿ, ನಿರಾಶೆಯು ತಲೆಯೆತ್ತಿತು. ಅದರಿಂದ ಆತ್ಮಹತ್ಯೆಯ ತಾರಣೋಪಾಯಕ್ಕೆ ಬಂದರು. ಆಗವರಿಗೆ 22 ವಯಸ್ಸು. ``ದೇವರಾಯನ ಹೆಸರನೇಕೆ ಕೇಳಿದೆನಮ್ಮ ನಾನೇಕೆ ನಂಜು ನುಂಗಿದೆನೆ ತಾಯೀ ಎಂದು ಪರಿತಪಿಸಿದ ಸಂದರ್ಭವು ಇದೇ. ``ಯಾವ ಕಡೆಗೂ ಮಗ್ಗಲೂರಗೊಡದಮ್ಮಯ್ಯ ಈ ನೊವ ನಾ ತಾಳಲೆಂತು ತಾಯೀ ಎಂದು ನರಳಿದ್ದು ಅದಕ್ಕಾಗಿಯೇ.
ಆ ಮೃತ್ಯುಹಾಸದ ಮಸಮಸಕಿನಲ್ಲಿ ಶ್ರೀ ಅರವಿಂದರ ಕೆಲವು ಮಾತುಗಳಿಂದ ಬೆಳಕು ತೋರಿ ಸತ್ಸಂಗ, ಶಾಸ್ತ್ರವ್ಯಾಸಂಗ, ವಿಶ್ವಚಾಲಕನ ಮೇಲೆ ಹೊರಹಾಕಿ ನಿಲ್ಲುವದು ಎಂಬ ಹಾದಿ ಕಾಣಿಸಿಕೊಂಡಿತು. ಆ ಹಾದಿಯಲ್ಲಿಯೂ ಬೀಳುತ್ತೇಳುತ್ತ ಸಾಗಿ ಬೇಸರಿಯುವ ಹೊತ್ತಿಗೆ ಆಪ್ತಸಂಬಂಧಿಕ ಸಾಧುವೊಬ್ಬರ ಸತ್ಯಾಲಾಪದಿಂದ