ಪುಟ:Putina Samagra Prabandhagalu.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫

ನೌಕಾಚಂದ್ರ


ಭಾವಿಸಿಕೊಳ್ಳುತ್ತಿರುವಾಗ ಹೊರಗಡೆ ಎದುರು ಕಿಟಕಿಯ ಮೂಲಕ ಉಜ್ವಲವಾಗಿ ಮಿನುಗುತ್ತಿರುವ ಮಿಥುನರಾಶಿಯು ಕಣ್ಣಿಗೆ ಬಿತ್ತು, ನೀವೂ ಈ ಪ್ರಣಯ ವ್ಯಾಪ್ತಿಯಿಂದ ತಪ್ಪಿಸಕೊಂಡಿಲ್ಲ ಎಂದು ಮನದಲ್ಲಿ ನಕ್ಕೆ.

ಈ ರೀತಿಯಾಗಿ ಪ್ರಣಯವನ್ನು ಒಂದು ನೆರೆಯನ್ನಾಗಿ ಭಾವಿಸಿ, ಸೃಷ್ಟಿಯನ್ನು ಅದರಲ್ಲಿ ತೇಲಿಬಿಟ್ಟಿರುವ ನನ್ನ ಕಲ್ಪನೆಯು ನನಗೆ ಒಂದು ವಿಧವಾದ ಸಂತೋಷವನ್ನುಂಟುಮಾಡಿತು. ಈ ಹರ್ಷವು ಮನಸ್ಸಿಗೆ ಒಂದು ತೆರದ ನೆಮ್ಮದಿಯನ್ನು ತಂದಿತು-ಈ ನೆಮ್ಮದಿ ನಿದ್ರೆಯನ್ನು-ನಿದ್ರೆಯೊಂದು ಕನಸನ್ನು. ಅದೊಂದು ವಿಚಿತ್ರವಾದ ಕನಸು. ನನ್ನ ಜಾಗೃತ ಭಾವನೆಗಳೆಲ್ಲಾ ಕನಸಿಗಿಳಿದು ರೂಪುಗೊಂಡಿದ್ದವು.

ಚಂದ್ರನು ಮುತ್ತಿಡುತ್ತಿರುವ ಇರುಳು. ಎರಡು ದಡಗಳನ್ನೂ ಮೀರಿ ಹರಿಯುತ್ತಿರುವ ನೆರೆಗೊಂಡ ವಿಶಾಲ ನದಿ. ಈ ನದಿಯಲ್ಲಿ ಅದೇ ಅತಿಹಗುರವಾದ ಪ್ರಣಯ ನೌಕೆಗಳ ಯಾತ್ರೆ. ಅಲೆಗಳ ಹೊಡೆತ ಮೊರೆತಗಳನ್ನು ಅಲಕ್ಷಿಸಿ, ನೆರೆಯ ಪೆರ್ಮೆಯನ್ನೂ ದರ್ಪವನ್ನೂ ಹೀಯಾಳಿಸುವಂತೆ, ಮದಗಜವನ್ನೇರಿ ಅದನ್ನು ಕೆಣಕಿ ಕೆರಳಿಸಿ ಅದರ ಕೋಪಾಟೋಪಕ್ಕೆ ವಿನೋದಗೊಳ್ಳುವ ಚತುರ ಮಾವತಿಗನಂತೆ, ತೆರೆಗಳ ಮೇಲೇರಿ, ಹಾರಿ, ಧುಮುಕಿ, ದೆಸೆದೆಸೆಗೆ ವಿಚಿತ್ರಗತಿಯಿಂದ ಧಾವಿಸುವ ದೋಣಿಗಳು. ಆ ಪ್ರವಾಹದ ಗಂಭಿರನಾದವನ್ನೇ ಶ್ರುತಿಗೊಂಡು, ಆ ವಾತಾವರಣವನ್ನು ತುಂಬುವಂತೆ ಈ ದೋಣಿಗಳಿಂದೇಳುವ, ಹೃದಯಸ್ಪರ್ಶಿಯಾದ ಪ್ರಮೋದಾನಂದ ಗಾನ! ಈ ಗಾನದಂಚಿನಲ್ಲಿ, ಅಶುದ್ಧ ಸ್ವರದಂತೆ, ರಾಗದ ಸೊಗಸನ್ನು ಹೆಚ್ಚಿಸುವ ಮಿಶ್ರಸ್ವರದಂತೆ, ಒಡೆದ ದೋಣಿಗಳಿಂದೆದ್ದು ಒಮ್ಮೆಗೊಮ್ಮೆ ಕೇಳಿಸುವ ಅಕ್ರಂದನ. ಒಂದು ಗಳಿಗೆಯ ಮೇಲೆ ಇವುಗಳೆಲ್ಲಾ ತೆರೆಯಲ್ಲಿ ಮರೆಯಾಗಿ ಮತ್ತೊಂದು ಕನಸು ರೂಪುಗೊಳ್ಳುವುದು.

ಈಗೊಂದು ಪಟ್ಟಣ. ಅಲ್ಲಿ ತನುಮನಗಳನ್ನು-ಯಾಕೆ ಜೀವಿತ ಸರ್ವಸ್ವವನ್ನೂ ಅಭಿಲಾಷೆಗೆ ಒತ್ತೆಯಿಟ್ಟು, ಸಂಕೇತವನ್ನು ಅರಸಿಕೊಂಡು ಹೋಗುವ ಪ್ರಣಯ ಮಗ್ಧರ ಅಭಿಸಾರ! ಆ ಮೇಲೆ ವಿರಹಿಗಳ ನಿಟ್ಟುಸಿರು, ಪೂಣಯ ಚ್ಯುತರ ನಿರಾಶೆಯ ಬೇಗೆ. ಕುಲದಲ್ಲಿ ಕಳಂಕವು ಹರಡುವ ಜ್ವಾಲೆ, ಈ ಜ್ವಾಲೆಗೆ ತುತ್ತಾಗಿ ದಹಿಸಿಹೋಗುವ ಸೌಂದರ್ಯ, ಮಾಧುರ್ಯ, ಮೌಗ್ಧ್ಯ, ಒಳ್ಳೆಯತನ, ಕಳಂಕವೂ ಕೂಡ. ಇದಾದಮೇಲೆ ಒಂದು ಉದ್ಯಾನವನ. ಅಲ್ಲಿ ಚಿರಾಕಾಂಕ್ಷಿತ ಸುಖವೊಂದು ಕೈಗೆ ದೊರೆತಿರುವುದನ್ನು ನಂಬಲಾರದೆ, ನಂಬದಿರಲಾರದೆ ಸ್ವಲ್ಪ ಹೊತ್ತು