ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೌಕಾಚಂದ್ರ

೧೭

ನಾನು ನನ್ನ ಕಿರುಮನೆಯಲ್ಲೇ ಮಲಗಿದೇನೆಂಬ ಅರಿವು ಉಂಟಾಯಿತು. ಎದ್ದು ಹೊರಗಡೆ ನೋಡಿದೆ. ಇನ್ನೂ ಕತ್ತಲು. ರಾತ್ರಿಯ ಮೂರು ಜಾವಗಳು ಮಾತ್ರ ಕಳೆದಿದ್ದವು. ಬ್ರಾಹ್ಮ ಮೂಹೂರ್ತವು ಆಗ ತಾನೆ ಪ್ರಾರಂಭವಾಗಿತ್ತು. ಹಾಸಿಗೆ ಬಿಟ್ಟು ಮನೆಯ ಹೊರಗೆ ಹೊರಟು ಬಂದೆ.

ಬ್ರಾಹ್ಮ ಮುಹೂರ್ತವು ಎಷ್ಟು ನೀರವವಾದ ಕಾಲ! ಆ ವೇಳೆಯಲ್ಲಿ ಗಾಳಿ ಕೂಡ ಅಲಗುವುದಿಲ್ಲ. ಹಕ್ಕಿಗಳು ಕನವರಿಸುವುದಿಲ್ಲ. ನಿಶಾಚರಜೀವಿಗಳನ್ನು ಸಹ ಮೌನವೊಂದು ಬಿಗಿದಿರುತ್ತದೆ. ತರುಲತಾಗುಲ್ಮಾದಿಗಳೆಲ್ಲವೂ ಮಂತ್ರಮುಗ್ಧವಾದಂತೆ ನೀರವವಾಗುತ್ತವೆ. ಊರಿನಲ್ಲಿಯೂ ಗಾಢವಾದ ಮೌನ, ಅಕ್ಷುಬ್ಧವಾದ ಮೌನ. ರೋಗಿಗಳ ನರಳಿಕೆಯಿಂದಾಗಲಿ ನಾಯಿಗಳ ಬೊಗಳುವಿಕೆಯಿಂದಾಗಲಿ ಈ ಮೌನಕ್ಕೆ ಭಂಗ ಬರುವುದಿಲ್ಲ. ಈ ವಿಚಿತ್ರ ನೀರವತೆಯ ಸೃಷ್ಟಿ ಸುಷುಪ್ತಿಯಲ್ಲಿರುವುದರ ಪರಿಣಾಮವಲ್ಲ, ವಿಶ್ವಚೈತನ್ಯವು ಯಾವುದೋ ಒಂದು ಹೊಸ ಹುಟ್ಟಿಗೆ ವೇದನೆಯಲ್ಲಿರುವ ನೀರವಭಾವ.

ಈ ಮೌನವು ನನ್ಮಾತ್ಮವನ್ನದುಮಿತು. ಕಾತರಗೊಂಡು ಸುತ್ತಲೂ ಹಬ್ಬಿರುವ ಮನೆಗಳನ್ನೂ ಹಿತ್ತಲ ಗಿಡಗಳನ್ನೂ ಬೆಟ್ಟವನ್ನೂ ಉತ್ಸುಕತೆಯಿಂದ ನೋಡಿದೆ. ಈ ಅಚರ ಪ್ರಪಂಚವು ತನ್ನ ಚಿಪ್ಪಿನಲ್ಲಿ ಹುದುಗಿಕೊಂಡು ಯಾವದೋ ಒಂದು ಆವಿರ್ಭವವನ್ನು ಉಸಿರು ಹಿಡಿದು ನಿರೀಕ್ಷಿಸುತ್ತಿರುವಂತೆ ತೋರಿತು. ಮೇಲೆ ಬಾನಿನಲ್ಲಿ ಉಜ್ವಲ ನಕ್ಷತ್ರ ರಾಶಿಗಳು ಮಿನುಗದೆ, ಕಣ್ಣೆವೆಯಿಕ್ಕದೆ, ಏಕದೃಷ್ಟಿಯಿಂದ ಕೌತುಕವೊಂದನ್ನು ನಿಟ್ಟಿಸುತ್ತಿರುವಂತೆ ತೋರಿದುವು. ಈ ಕಡೆ ಸೂರ್ಯನು ಉದಿಸುವ ದಿಕ್ಕಿನಲ್ಲಿ ಕೃಷ್ಣ ತ್ರಯೋದಶಿಯ ಕೊಂಬಿನ ಚಂದ್ರನು ಒಂಟಿಯಾಗಿ, ಮ್ಲಾನನಾಗಿ, ವಿವರ್ಣನಾಗಿ, ವಿಷಣ್ಣನಾಗಿ ತೇಲುತ್ತಿದ್ದನು. ಹ್ಞ, ಚಂದ್ರನೆಂದೆನೆ? ಅಲ್ಲ ಅಲ್ಲ, ಇದು ಚಂದ್ರನಲ್ಲ. ಆ ತಿರಸ್ಕೃತ ಪ್ರಣಯಿನಿಯ ದೋಣಿಯಿರಬಹುದು. ಅ ಪ್ರೇಮದಗ್ಧಳನ್ನು ಯಾವುದೋ ಒಂದು ವಿಷಾದಾಂತಕ್ಕೆ ಒಯ್ಯುವ ನೌಕೆ! ನನ್ನ ಕನಸಿನ ಕನಸು! ಹೌದು ಅದೇ ಸಾಗರ, ಪ್ರಶಾಂತ ಧೀರ ಭೀಮ ಸಾಗರ ! ಅದೇ ಮೌನ-ಅಕ್ಷುಬ್ಧ ಸ್ನಿಗ್ಧಮೌನ. ಅದೇ ದೋಣಿ, ಅತಿ ಸುಂದರವಾದ, ಲಘುತಮವಾದ ಒಂಟಿ ದೋಣಿ ! ಅದೋ, ಅದರಲ್ಲಿ ಕುಳಿತಿರುವ ಆ ಅಪ್ಸರ ಕನ್ಯೆಯ ಅಂಗರೇಖೆಯು ಹೇಗೆ ಕಣ್ಣಿಗೆ ಕಾಣಿಸಿಕೊಳ್ಳುತ್ತಿದೆ! ಈ ಹತಭಾಗ್ಯೆಯನ್ನು ಹೊತ್ತುಕೊಂಡು ಈ ಶೋಕಪಾತ್ರೆ ಎಲ್ಲಿಗೆ ಹೋಗುತ್ತಿದೆ? ಯಾವ ಗತಿಗೆ?

ನಾನು ವಿಷಾದ ಕುತೂಹಲಗಳಿಂದ ನನ್ನ ದೃಷ್ಟಿಯನ್ನು ಆ ದೋಣಿಯ ಮೇಲೆ ನೆಟ್ಟು ಬೆರಗು ಬಡಿದವನಂತೆ ನಿಂತುಬಿಟ್ಟೆ.