ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯

ರಥಸಪ್ತಮಿ

ಇಂದು ಯದುಗಿರಿಯಲ್ಲಿ ರಥಸಪ್ತಮಿ ಹಬ್ಬ. ಸೂರ್ಯಮಂಡಲ ವಾಹನದ ಉತ್ಸವವೂ ಜನರ ಜಾತ್ರೆಯೂ ಕನಸಿನಂತೆ ಕಳೆದುಹೋದುವು. ದೇವಸ್ಥಾನದಿಂದ ಈಗತಾನೆ ಉತ್ಸವ ಮುಗಿಸಿಕೊಂಡು ಬಂದು ಕುಳಿತಿದ್ದೇನೆ. ಮನಸ್ಸೇಕೊ ಕುಗ್ಗಿ ಹೋಗಿದೆ. ಇಂದು ಈ ಹಬ್ಬಕ್ಕೆ ಹಿಂದಿನ ಪೂಭೆಯಿಲ್ಲ. ಜನಗಳಲ್ಲಿ ಅಂದಿನ ಶ್ರದ್ಧೆಯಿಲ್ಲ. ಹಬ್ಬದ ಆತ್ಮವು ಅಳಿದುಹೋಗಿ ಅದರ ನೆರಳಿನ್ನೂ ಈ ದಿನಕ್ಕೆ ಅಂಟಿಕೊಂಡಿರುವಂತೆ ತೋರುತ್ತದೆ. ಹಬ್ಬವು ಆತ್ಮವಂತವಾಗಿದ್ದ ದಿನಗಳಲ್ಲಿ ತಿರುಗಿ ಜೀವಿಸಬೇಕೆಂಬ ಹಂಬಲು ನನಗೆ ಹುಟ್ಟಿದೆ. ಆದರೆ ಅವು ಇರುವುದು ಇಪ್ಪತ್ತುವರ್ಷಗಳಿಂದಾಚೆ. ಅಲ್ಲಿಗೆ ಹೋಗುವುದಕ್ಕೆ ಕಾಲದ ನೆರೆಯಲ್ಲಿ ಸಿಕ್ಕಿಕೊಚ್ಚಿಹೋಗುತ್ತಿರುವ ಮತರ್ಯ್ನಿಂದ ಸಾಧ್ಯವಿಲ್ಲ. ಮನಸ್ಸು ತನ್ನ ಅಪ್ಸರೆಯ ನೆರವಿಗೆ ಮೊರೆಯಿಡುತ್ತದೆ. ಆಕೆ ನನ್ನನ್ನು ಕನಸಿನ ದೋಣಿಯೊಂದರಲ್ಲಿ ಕುಳ್ಳಿರಿಸಿಕೊಂಡು ಕಾಲದ ನದಿಯಮೇಲೆ ಹಿಂದಕ್ಕೆ ಒಯ್ಯುತ್ತಾಳೆ.

ಇರುಳು-ಮಾಘ ಶುದ್ಧ ಷಷ್ಠಿಯ ರಾತ್ರಿ. ಮಂದಿಯೆಲ್ಲಾ ಊಟ ಮುಗಿಸಿಕೊಂಡು ಮಲಗುವ ಹೊತ್ತು. ಇತರ ದಿನಗಳಲ್ಲಿ ಇಷ್ಟು ಹೊತ್ತಿಗೆ ಊರಲ್ಲಿ ಸದ್ದಡಗಿ ಜೀವವು ನಿದ್ದೆಯ ಚಿಪ್ಪಿನಲ್ಲಿ ಹದುಗಿರುತ್ತಿತ್ತು. ಆದರೆ ಇಂದು ಬೀದಿಗಳಿನ್ನೂ ಜನವಿಹೀನವಾಗಿಲ್ಲ. ಮಂದಿ ಮಲಗಿಲ್ಲ. ಕೂಸುಗಳೂ ಎಚ್ಚತ್ತಿವೆ. ಎಷ್ಟು ನಿರ್ಮಲವಾಗಿ, ನಿರಭ್ರವಾಗಿ ಜ್ಯೋತಿರ್ಮಯವಾಗಿದೆ. ಷಷ್ಠಿಯ ಬಾಲಚಂದ್ರನು ತಾರೆಗಳ ಕಾಂತಿಗೆ ಕುಂದು ತಾರದೆ ಅವುಗಳೊಡನೆ ಹೊಂದಿಕೊಂಡು ಆಕಾಶಕ್ಕೆ ಅಪೂರ್ವವಾದ ಒಂದು ಒಡವೆಯಂತೆ ಹೊಳೆಯುತ್ತಿದ್ದಾನೆ. ತಾರಾಚಂದ್ರರ ಮೃದುವಾದ ಮಾಸು ಬೆಳಕು ಇರುಳಿನೊಡನೆ ಹಗೆತನಕ್ಕಿಂತಲೂ ಕೆಳೆತನ ಬೆಳೆಸುವುದಕ್ಕೆ ಉನ್ಮುಖವಾಗಿರುವಂತೆ ಬೆರೆದು ನಾಡು ತುಂಬಿ ಊರಿಗೆ ಒಂದು ನೂತನ ಶೋಭೆಯನ್ನು ಬೀರಿದೆ. ಈ ಬೆಳಕಿನಲ್ಲಿ ಪುರ ಮಹಿಳೆಯರು ಹಾಡುತ್ತಾ ತಮ್ಮ ಮನೆ ಮುಂದಿನ ನಡುಬೀದಿಯನ್ನು ಸಾರಿಸಿ ಗುಡಿಸಿ ರಂಗವಲ್ಲಿಯನ್ನಿಡುವ ದೃಶ್ಯವು ಕಣ್ಣಿಗೆ ಬೀಳುತ್ತದೆ. ಅವರು ಕಿರುದನಿಯಲ್ಲಿ ಹಾಡುವ ಹಾಡುಗಳೂ ಪಿಸುಮಾತುಗಳೂ ಮಿದುನಗೆಗಳೂ ಆ ಹೊತ್ತಿಗೆ ಸಹಜವಾದ ನೀರವತೆಯನ್ನು