ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಥಸಪ್ತಮಿ

೨೭

ಮೆರವಣಿಗೆಯ ಮೊದಲಿಗನಾದ ಚೆಲುವನು ಕೊಂಬೂದಿ ಹೊರಟು ಹೋದ ಮೇಲೆ, ಉತ್ಸವದ ಇತರ ಅವಯವಗಳು ಮುಂದುವರಿದು ಈ ಮೂಲೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ವಾದ್ಯತತಿಯ ಕೋಲಾಹಲವು ಸ್ಫುಟತರವಾಗಿ ಆಗಸವನ್ನು ತುಂಬುವಂತೆ ಮೊಳಗುತ್ತಿರುವುದು ಕೇಳಿಬರುತ್ತದೆ. ಒಂದು ಗಳಿಗೆಯಾದ ಮೇಲೆ, ಹೆದರಿಕೆ ಹುಟ್ಟಿಸುವಂತೆ ಉದ್ದವಾಗಿ ತುದಿ ಬಗ್ಗಿರುವ, ಚಿನ್ನ ಬೆಳ್ಳಿಯ ಹಿಡಿಗಳಿಂದಲೂ ರೇಷ್ಮೆಯ ಕುಚ್ಚುಗಳಿಂದಲೂ ಅಂದವಾಗಿರುವ ಕೊಂಬುಗಳುಳ್ಳ ಪುಷ್ಪವಾದ ದೊಡ್ಡ ಎತ್ತೊಂದು ಈ ಮೂಲೆಯಲ್ಲಿ ಕಣ್ಣಿಗೆ ಬೀಳುತ್ತದೆ. ಈ ಎತ್ತನ್ನೇರಿ, ಅದರ ಮೇಲೆ ಹೊರಿಸಿರುವ ನಗಾರಿಗಳನ್ನು ಬಿಲ್ಲಿನಂತೆ ಬಗ್ಗಿರುವ ಕಡ್ಡಿಗಳಿಂದ ಮೃದುವಾಗಿ, ಅದೊಂದು ಗತಿಯಲ್ಲಿ ಹೊಡೆದು, ಮಂಜುಳನಾದವನ್ನೆಬ್ಬಿಸುತ್ತಾ ಆರೋಹಿಯೊಬ್ಬನು ಮುಂದುವರಿಯುತ್ತಾನೆ. ಅವನ ಹಿಂದೆ, ತುತ್ತೂರಿ, ಕೊಂಬು, ಕಹಳೆ, ಶಂಖ, ಜಾಗಟೆ ಇವುಗಳ ವಾದನದೊಂದಿಗೆ `ಗೋವಿಂದ' ನಾಮೋಚ್ಚಾರಣೆಯನ್ನು ಬೆರಸುತ್ತಾ ಪರಿಸೆ ಸಾಲಿಡುತ್ತದೆ. ಇದಾದ ಮೇಲೆ ಮೃದಂಗ ತಾಳ ತಂತ್ರೀವಾದ್ಯಗಳೊಡನೆ ಶ್ರೀಹರಿಯ ಭಜನೆ ಮಾಡುತ್ತಾ, ಭಕ್ತ್ಯಾವೇಶದಿಂದ ಕುಣಿಯುತ್ತಾ ಸಾಗಿ ಬರುವ ಭಜನೆಯ ಕೂಟಗಳು ಕಣ್ಣಿಗೆ ಬೀಳುತ್ತವೆ. ಸುಗಂಧ ಧೂಮವನ್ನೆರಚುವ ಧೂಪದಾನಿಗಳನ್ನು ಹಿಡಿದುಕೊಂಡು ಬರುವ ಭಕ್ತರು ಅಲ್ಲಲ್ಲಿ ದೃಷ್ಟಿಗೋಚರವಾಗುತ್ತಾರೆ. ಆಮೇಲೆ ಉತ್ಸಾಹದಿಂದುಬ್ಬಿ ಕೀರ್ತನೆಗೆ ಹುಮ್ಮಸ್ಸಿನೊಡನೆ ಡೋಲನ್ನು ಬಾರಿಸುವವನನ್ನು ಮುಂದಿಟ್ಟುಕೊಂಡು ಓಲಗದವರ ಗುಂಪು ಕಾಣಿಸಿಕೊಳ್ಳುತ್ತದೆ. ಈ ಮೇಳದವರ ಮುಂದೆ ಊರ ರಸಿಕರು ನೆರೆದು ತಲೆಯಾಡಿಸಿ ಹುಂಗುಟ್ಟಿ, ಭಲೆ ಎಂದು ರಸಭಿಜ್ಞತೆಯನ್ನು ಸೂಚಿಸುತ್ತಾ ಮೆಲ್ಲನೆ ಸಾಗುತ್ತಾರೆ. ಶ್ವೇತಚ್ಛತ್ರಗಳನ್ನೂ, ಧ್ವಜಗಳನ್ನೂ, ಬಾವುಟಗಳನ್ನೂ, ಬಿರುದುಗಳನ್ನೂ ಹಿಡಿದಿರುವವರು ಈ ಮೂಲೆಯಲ್ಲಿ ಒಬ್ಬೊಬ್ಬರಾಗಿ ಕಾಣಿಸಿಕೊಂಡು ಇಕ್ಕೆಲದಲ್ಲಿ ಸಾಲುಗೊಳ್ಳುತ್ತಾರೆ. ಇವರ ಹಿಂದುಗಡೆಯೇ ವಾಹನ ಹೊರುವವರ ಹುಂಕಾರವೂ, ವೇದಘೋಷವೂ ಕೇಳಿಬರುತ್ತವೆ. ಕೊನೆಗೆ, ಮಗುವಿನ ಚಿರಕಾಂಕ್ಷಿತವಾದ ಬಯಕೆಯೇ ರೂಪುಗೊಂಡಂತೆ ಸೂರ್ಯಮಂಡಲವಾಹನವೂ ಮೂಲೆ ತಿರುಗಿ ದರ್ಶನಕೊಡುತ್ತದೆ.

ಎಷ್ಟು ಸೋಜಿಗವಾದ ನೋಟವದು! ದೇವದೇವನು ತನ್ನ ದಿಕ್ಕಿಗೆ ಅಭಿಮುಖವಾಗುವ ಗಳಿಗೆಯನ್ನು ನಿರೀಕ್ಷಿಸಿಕೊಂಡಿದ್ದವನಂತೆ, ವಾಹನವು ಈ ಮೂಲೆಯನ್ನು ತಿರುಗಿದ ಕ್ಷಣದಲ್ಲಿ, ಸೂರ್ಯನು ಇದಿರು ಬಂಡೆಯ ಮೇಲೆ