ನಾರಾಯಣನ ಗುಡಿಯಲ್ಲಿ
೩೫
ನಾರಾಯಣನು ಕಲ್ಯಾಣದಾಯಕನೆಂಬ ನಚ್ಚು ನಂದುವುದಿಲ್ಲ. ಈ ಸಂಬಂಧದ ನಿದರ್ಶನವಾಗಿ ನಾನು ದೇವಸ್ಥಾನದಲ್ಲಿ ಕಂಡ ಒಂದು ದಿನದ ದೃಶ್ಯವನ್ನು ವರ್ಣಿಸಿ ವಿರಮಿಸುತ್ತೇನೆ.
ಬೇಸಗೆಯ ರಜದ ದಿನದ ಒಂದು ಸಂಜೆ, ಪದ್ಧತಿಯ ಮೇರೆಗೆ ಕೊಳದಲ್ಲಿ ಸಂಧ್ಯಾವಂದನೆಯನ್ನು ಮಾಡಿ ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಬಂದೆ. ಅಂದು ನಿತ್ಯಕ್ಕಿಂತಲೂ ಹೆಚ್ಚಾಗಿ ಜನರು ನೆರೆದಿದ್ದರು. ಒಂದೆರಡು ಸಲ ಪ್ರಾಕಾರವನ್ನು ಪೂದಕ್ಷಿಣೆ ಮಾಡುವ ಹೊತ್ತಿಗೆ ನಾರಾಯಣ ದೇವರಿಗೆ ಅಲಂಕಾರ ಪೂರ್ತಿಯಾಗಿ ಗರ್ಭಗುಡಿಯ ತೆರೆ ತೆಗೆದಿತ್ತು. ಅಲ್ಲಿಗೆ ಹೋಗಿ, ಜನಸಂದಣಿಯಲ್ಲಿ ನುಸಿದು ಮೂರ್ತಿಯ ಹತ್ತಿರ ನಿಂತುಕೊಂಡು ದರ್ಶನ ಮಾಡಿ ಕಣ್ತಣಿದ ಮೇಲೆ ನನ್ನ ಸುತ್ತಮುತ್ತಲೂ ನೆರೆದಿದ್ದ ಮಂದಿಯನ್ನು ನೋಡಹತ್ತಿದೆ.
ಅಲ್ಲಿದ್ದವರಲ್ಲಿ ಹೆಂಗಸರು ಹೆಚ್ಚುಮಂದಿ. ಗಂಡಸರು ಐದೋ ಆರೋ ಜನರಿದ್ದರು. ಅವರೆಲ್ಲರೂ ನನಗೆ ಪರಿಚಿತ ವ್ಯಕ್ತಿಗಳೇ. ಅಗೋ, ನಾಚಿಕೆಯಿಂದ, ಆಗತಾನೆ ಮದುವೆಯಾದ ಗಂಡನ ಮರೆಯಲ್ಲಿ ನನ್ನ ದೃಷ್ಟಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿರುವ ಕಿಶೋರಿ ಯಾರು?-ನಮ್ಮ ಓಣಿಯ ಲಕ್ಷ್ಮಿ: ನಾನೆತ್ತಿಕೊಂಡು ಮುದ್ದಾಡಿದ ಕೂಸು. ಸಾಧ್ಯವಾಗಿದ್ದರೆ ಅವಳು ತನ್ನ ಗಂಡನ ಹತ್ತಿರದಿಂದ ದೂರ ಸರಿದು ಹೋಗುತ್ತಿದ್ದಳು. ಆದರೆ ಅವರಿಬ್ಬರಿಗೂ `ಗಂಟು' ಬಿದ್ದಿತ್ತು. ಗಂಡ ಒಳ್ಳೆಯ ಸ್ಫುರದ್ರೂಪಿ: ರಸಿಕನೆಂದೂ ತೋರುತ್ತದೆ. ಹುಡುಗ ನೋಡಿ, ನಗುತ್ತಾನೆ. ಇಂದು ಈ ನೂತನ ದಂಪತಿಗಳು ತಮ್ಮ ಸಂಸಾರವು ಸುಸೂತ್ರವಾಗಿ ಸಾಗಲೆಂದು ಈ ಸೂತ್ರಧಾರನಿಗೆ ನಮಸ್ಕಾರ ಮಾಡಿಹೋಗಲು ಕಾಣಿಕೆಯೊಡನೆ ಬಂದಿದಾರೆ. ಈ ಸಣ್ಣ ಗುಂಪು ಇವರ ಬಳಗವೇನೋ... ಇವರಾರು? ಆಚೆ ಬೀದಿಯ ಲಕ್ಷ್ಮಮ್ಮನವರು. ಅಂದು ಬಂದವರು ಇನ್ನೂ ಈ ಊರಿನಲ್ಲಿಯೆ ಉಳಿದಿದಾರೆಯೆ? ಅವರ ಗಂಡನಿಗೆ ಅಮಲ್ದಾರಿಕೆಗೆ ಬಡ್ತಿಯಾಯಿತೆಂದು ಈ ಬೆಳಗ್ಗೆ ಊರಲ್ಲೆಲ್ಲಾ ವರ್ತಮಾನ ಹಬ್ಬಿತ್ತು. ನಿಜ-ಅದಕ್ಕೆ ಇಂದವರ ಹಣ್ಣುಕಾಯಿ ದೇವರಿಗೆ, ಆಮೇಲೆ ಅಗೋ ತೇರುಮೂಲೆಯ ಶೃಂಗಾರಮ್ಮನವರು. ಅವರ ಯಜಮಾನರಿಗೇನೊ ಖಾಯಿಲೆ ಎಂದು ಸಮಾಚಾರ; ಹೇಗಿದೆಯೋ ಕಾಣೆ.... ಇದೇನು ಶಾಮಣ್ಣನ ಕುಟುಂಬ ಮತ್ತು ಈ ಪಿಲ್ಟು! ಇದಕ್ಕೇನು ಇಂದಿಷ್ಟು ಸಿಂಗಾರ? ವರುಷದ ಹೆಚ್ಚಿರಬಹುದು. ಪಾಪ, ಇದೊಂದು ಉಳಿದುಕೊಂಡಿದೆ ಅವನಿಗೆ. ಎಲ ಎಲಾ ನಮಗೊಂದು ಊಟಹಾಕಬೇಡವೆ!... ಇವರಾರು ಹಿಂದೆ ನೆಳಲಂತೆ ನಿಂತಿರುವವರು? ಓ ನಿತ್ಯಯಾತ್ರೆಯ ವ್ಯಕ್ತಿಗಳು