ಪುಟ:Putina Samagra Prabandhagalu.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋಕುಲಾಷ್ಟಮಿ


ನನ್ನ ಮನಸ್ಸಿನ ಮೇಲೆ ಒತ್ತುತ್ತಿದೆ. ದಿವ್ಯ ಪ್ರಾದುರ್ಭಾವವೊಂದರ ಅರಿವುಂಟಾಗಿದೆ. ಅಪೂರ್ವವಾದ ಅನುಭವವಿದು. ಸ್ಪರ್ಶ ಮಣಿಯು ಕ್ಷುದ್ರಲೋಹವೊಂದಕ್ಕೆ ಸೋಕುವಂತೆ ಈ ಅನುಭವವು ನನ್ನ ಬಾಳನ್ನು ಸೋಕಿ ಅದನ್ನು ಮಾರ್ಪಡಿಸಿದೆ. ಈ ಭಾವದ ಮಾತೃಕೆ ಯಾವುದೋ ಕಾಣೆ. ಈ ಪವಿತ್ರವಾದ ದಿನದ ವಾತಾವರಣವೇನು? ಪೂಜೆಯಲ್ಲಿ ನನ್ನಾತ್ಮವನ್ನು ಪರಮಾತ್ಮನಿಗೆ ನಿವೇದಿಸಿದ ಭಾವವೇನು? ಗೀತೆಯ ಪುಣ್ಯವಾಹಿನಿಯಲ್ಲಿ ಸ್ನಾನಮಾಡಿದುದರ ಫಲವಾಗಿ ಸಂಸಾರ ಮಲಮೋಚನವಾದುದರ ಅನುಭವವೇನು? ಅಥವಾ ಆ ಕೂಸಿನ ನಗೆಯ ಪೂಭಾವವೊ? ಎಂತಹ ಪುಟ್ಟ ಮುದ್ದು ಮಗು ಅದು! ಅರಳಿದ ಕಣ್ಣುಗಳು-ನಗೆಯಿಂದ ಕಳೆಗೊಂಡ ಕಣ್ಣುಗಳು; ದುಂಡುಮುಖ-ಸುಳಿಗುರುಳಿನಿಂದ ಸಿಂಗಾರಗೊಂಡ ಮುಖ; ದುಂಡು ಮೈ; ಪುಟ್ಟ ದುಂಡು ಕೈ; ದುಂಡುದುಂಡಾದ ಕಾಲುಗಳು; ತಾಳೆ ಹೂವಿನಂತೆ ಬಣ್ಣ; ನಮ್ಮ ನೆರೆಮನೆಯ ಮೊಲೆಗೂಸದು. ಯಾವ ಸ್ಫೂರ್ತಿಯಿಂದಲೋ ಕಾಣೆ, ನಮ್ಮಾಕೆ ಅದನ್ನೆತ್ತಿಕೊಂಡು ಬಂದು ನಾನು ಗೀತಾಪಾರಾಯಣ ಮಾಡುತ್ತಿದ್ದಾಗ ನನ್ನ ಮುಂದೆ ಮಲಗಿಸಿದ್ದಳು. ಹನ್ನೊಂದನೆಯ ಅಧ್ಯಾಯವನ್ನು ಓದುತ್ತಾ ಓದುತ್ತಾ ವಿಶ್ವರೂಪ ದರ್ಶನದ ವರ್ಣನೆಯನ್ನು ಆತ್ಮೀಕರಿಸಿ ಆ ವಿರಾಟ್-ಮೂರ್ತಿಗೆ ಭಯಗೊಂಡು ಪುಸ್ತಕದಿಂದ ದೃಷ್ಟಿಯನ್ನು ಮೇಲಕ್ಕೆತ್ತಿದೆ. ಈ ಮಗು ಕಣ್ಣಿಗೆ ಬಿತ್ತು. ಕಾಲುಗಳನ್ನು ಗಾಳಿಯಲ್ಲಿ ಹೊಡೆದು, ಕೈಗಳನ್ನು ನೆಲಕ್ಕೆ ಬಡಿದು, ತಲೆಯನ್ನು ಮೇಲಕ್ಕೆತ್ತಿ, ಹೊಟ್ಟೆಯಮೇಲೆ ತೆವಳುವುದಕ್ಕೆ ಯತ್ನಮಾಡುತ್ತಾ, ಆ ಕೂಸು ಕೇಕೆ ಹಾಕಿ ನಗುತ್ತಿತ್ತು. ಆ ವಿಶ್ವಮೂರ್ತಿಯೇ ತನ್ನ ವಿರಾಟ್-ಸ್ವರೂಪವನ್ನು ಕನಿಕರದಿಂದ ಸಂಕುಚಿಸಿಕೊಂಡು ಈ ಮಗುವಾಗಿದಾನೆಂದು ನನಗೆ ತೋರಿತು. ಮಗುವನ್ನು ನೋಡಿದೆ: ಹರ್ಷವೇ-ಮೌಗ್ಧ್ಯವೇ-ಅಲ್ಲ ಪುಣ್ಯವೇ ರೂಪು ತಳೆದು-ದೇಹವೆತ್ತಿ-ಚೈತನ್ಯಗೊಂಡು ಈಗ ಶಿಶುವಾಗಿ ಬಂದಿದೆ ಎಂದುಕೊಂಡೆ. ಅಪೂರ್ವವಾದೊಂದು ಸುಖದ ಅನುಭವವಾಯಿತು. ಗೀತೆಯನ್ನು ಕೆಳಗಿಟ್ಟು ಮಗುವನ್ನೆತ್ತಿಕೊಂಡು ಮುತ್ತಿಡುವುದಕ್ಕೆ ಹೊರಟೆ. ಮುಟ್ಟಲೂ, ಮುತ್ತಿಡಲೂ ಭಯವಾಯಿತು. ಅದರ ನಿಸರ್ಗ ನೈರ್ಮಲ್ಯಕ್ಕೂ, ಅಪಾರ್ಥಿವ ಭಾವಕ್ಕೂ, ನನ್ನ ಸ್ಪರ್ಶ ಕುಂದುತರುವುದೆಂಬ ಭಯ. ಕಣ್ತಣಿಯ ನೋಡಿ ``ಶ್ರೀ ಕೃಷ್ಣನ ಜನನವಾಯಿತು ಎಂದುಕೊಂಡೆ.

ಈ ಚಿತ್ರದೊಡನೆ ಮನಸ್ಸಿಗೆ ಇನ್ನೂ ಅನೇಕ ನೆನಪುಗಳು ಅದಕ್ಕೆ ಕೊಂಡಿ ಬಿದ್ದ ಹಾಗೆ ಸುಳಿಯುತ್ತವೆ. ಗೋಕುಲಾಷ್ಟಮಿಗೂ ಮಕ್ಕಳಿಗೂ, ಏನೋ ಒಂದು ಅಂತರ್ಯವಾದ ಸಂಬಂಧವಿದೆ. ಕೃಷ್ಣನ ಯೌವನಕ್ಕಿಂತಲೂ ಶೈಶವವಲ್ಲವೆ ನಮ್ಮ