ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಲ್ ಮಾಳಿಗೆ ಉತ್ಸವ

೪೫

ಒಂದಾಗಿ ಹರಿದೆವು. ಹಿಗ್ಗು ಇಳಿದು ನಾವು ನಾವಾಗುಳಿದ ಮೇಲೂ ಮನಸ್ಸು ಹಗುರವಾಗಿ ಒಂದು ತೆರದ ನಿರ್ಮಲೋಲ್ಲಾಸ ನಮ್ಮ ಬಾಳನ್ನು ತುಂಬಿದಂತಾಗಿದೆ. ಎಷ್ಟು ಜನ! ಇಷ್ಟು ಜನಕ್ಕೂ ಸಂಸಾರದಲ್ಲಿ ಎಷ್ಟು ಖೇದ ಮೋದಳಿರಬಹುದು. ಆದರೆ ಈ ದಿವ್ಯಾನಂದಲೀಲೆಯಲ್ಲಿ ಭವವೆಲ್ಲಾ ಕೊಚ್ಚಿಹೋಗಿ ನಾವೂ ತುಸ ಕಾಲ ದೇವಭಾವವನ್ನು ಪಡೆಯುತ್ತೇವೆ. ಈ ಅನುಭವ ಕಲೆಯಿಂದ ಸಿದ್ಧಿಸುವುದೇ ಎಂಬ ವಿಚಾರದಲ್ಲಿ ನನಗೆ ಸಂದೇಹ. ಏಕೆಂದರೆ ಈ ತೆರದ ಆನಂದದ ಮೈ ತುಂಬು ಉದಯಶಂಕರನ ನೃತ್ಯವನ್ನು ನೋಡಿದಾಗಲೂ ನನಗೆ ಬರಲಿಲ್ಲ. ಗುಡಿ ದೇವರು ಉತ್ಸವಾದಿಗಳಿಂದ ನಾವು ಪಡೆಯುವ ಅನುಭವ ತೀರ ವಿಚಿತ್ರ. ಗುಡಿ ಮಾನವನ ಬಾಳಿನ ಕೆರೆಗೆ ತೂಬಿದ್ದ ಹಾಗೆ. ಸಂದಿ ಇಕ್ಕಟ್ಟು, ಆದರೆ ಕೆರೆಯ ನೀರಿನ ಸೆಳೆತವೆಲ್ಲಾ ಆ ರಂಧ್ರದ ಕಡೆಗೇ ಅಲ್ಲವೆ. ಹಾಗೆ ಗುಡಿ ಭವಮುಕ್ತಿಯ ಆಸೆಯನ್ನು ತೋರಿ ಜನತೆಯನ್ನು ತನ್ನೆಡೆಗೆ ಸೆಳೆಯುತ್ತದೆ.

ಇನ್ನೂ ಏನೇನೋ ಭಾವನೆಗಳು ಮನಸ್ಸಿನಲ್ಲಿ ಮೂಡಿ ಬರುತ್ತಿವೆ. ಅವನ್ನೆಲ್ಲ ಹೇಳಿ ಒಂದು ಕಾಗದದಲ್ಲಿ ಮಗಿಸುವ ಹಾಗಿಲ್ಲ. ನಿನಗೂ ಬೇಸರವಾಗಬಹುದು. ನೀನು ಬರಲಿಲ್ಲವಲ್ಲಾ ಎಂದು ನಾಣುಗೆ ಒಂದು ತೆರದ ಕೊರತೆ. ನನಗೂ ಏನೋ ಒಂದು ತೆರದ ಅರಕೆ. ಅಷ್ಟು ದೂರದಲ್ಲಿದ್ದರೂ ನಿನ್ನ ಹಿಂಸೆ ನನಗೆ ತಪ್ಪಲಿಲ್ಲ. ಮೋಹ ಕೆಟ್ಟದ್ದು. ಮೋಹದ ಮಾತು ಬಂದಿತಲ್ಲಾ-ನಾಣು ಮನೆಗೆ ಮರಳುವಾಗ ಆ ಜನಜಂಗುಳಿಯ ಗಲಭೆಯ ನಡುವೆ ಆ ಹುಡುಗಿಯನ್ನು ತೋರಿಸಿದ. ಚಂದವಷ್ಟರಲ್ಲೇ ಇದೆ.- ಈ ದಿನದ ಮಹತ್ವ ಹಾಗೆ. ರಾತ್ರಿ ಬಹಳ ಹೊತ್ತಾಗಿದೆ; ಕಾವಿನಲ್ಲೆ ಬರೆಯಬೇಕೆಂದು ಕುಳಿತು ಬರೆದೆ. ಇಷ್ಟಕ್ಕೆ ಮುಗಿಯಿತಲ್ಲಾ, ನಿನ್ನ ಪುಣ್ಯ. ನಾನು ಇಲ್ಲಿರುವಾಗಲೇ ನೀನೂ ಬೇಗ ಇಲ್ಲಿಗೆ ಬಂದುಬಿಡು. ನಾಣು ಇನ್ನೂ ಏನೇನೋ ಉತ್ಸವಗಳನ್ನೂ ಪೊಂಗಲು ಪುಳಿಯೋಗರೆಗಳನ್ನೂ ಬಣ್ಣಿಸಿ ನೀರೂರಿಸುತ್ತಿದ್ದಾನೆ. ಇಂಥ ಜನ, ಇಂಥ ಗುಡಿ, ಇಂಥ ಚೆಲುವರಾಯ, ಇಂಥ ಉತ್ಸವಗಳು, ಬೇರೆ ಎಲ್ಲೂ ಇಲ್ಲ. ನೆವ ಹೇಳಿ ನಿಲ್ಲದೆ ಬೇಗ ಬಾ.