೪೬
ಮಳೆ
ಯದುಗಿರಿಯಲ್ಲಿ ಮಳೆ ಬಾರದೆ ಹಾಹಾಕಾರವೆದ್ದಿದೆ. ಜಾತ್ರೆಯ ಕಶ್ಮಲ ತೊಳೆದು ಹೋಗಿಲ್ಲ. ಕೊಳಗಳೆಲ್ಲಾ ಬತ್ತಿಹೋಗಿವೆ. ಸೀನೀರಿನ ಕೊಳದಲ್ಲಿ ತೇವ ಮಾತ್ರ ಅಡಿಬಂಡೆಗಳ ಸಂದುಗಳಲ್ಲಿ ಪಾಚೆಗೆ ತುಸು ಅಂಟಿಕೊಂಡಿದೆಯೇ ಹೊರತು ಸ್ವಾದೂದಕವಿಲ್ಲ. ಊರಿನ ಐನೂರು ಬಾವಿಗಳಲ್ಲಿ ಕೇವಲ ಹತ್ತು ಬಾವಿಗಳಲ್ಲಿ ಒಂದು ನೂರು ಕೊಡ ಸಿಕ್ಕಬಹುದು. ಕೆರೆಯಲ್ಲಿ ಸ್ನಾನಕ್ಕೆಷ್ಟಕ್ಕೋ ಅಷ್ಟಕ್ಕೇ ಅನುಕೂಲ. ಶ್ಮಶಾನದ ಹತ್ತಿರವಿರುವ ಒಂಭತ್ತು ಕಲ್ಲಿನ ಬಾವಿಯಿಂದ ನೀರು ಹೊರುವ ಸಂಭವ ಇಂದೋ ನಾಳೆಯೋ ಒದಗಬಹುದು. ಊರಿನಲ್ಲೆಲ್ಲಾ ಉಪದ್ರವಗಳು. ಬೇಸಗೆಯ ಬಿಸಲಿನ ಝಳ ವಿಪರೀತ. ಮಳೆರಾಯ ಮುಳಿದು ನಿಂತುಬಿಟ್ಟಿದ್ದಾನೆ. ಸೀಮೆಯೆಲ್ಲಾ ಸುಳಿದಾಡುತ್ತಿದ್ದರೂ ಇತ್ತ ಕಡೆ ಸುಳಿಯವೊಲ್ಲ. ಮುಳಿಸಿನ ಕಾರಣ ಗೊತ್ತಿಲ್ಲ. ಇದನ್ನಿಳಿಸುವುದಕ್ಕೆ ಯಾವ ದೇವರು ಶಕ್ತನೋ ಕಾಣೆ. ತಾರಕ ದೇವರು ನಮ್ಮ ಬೆಟ್ಟದ ನರಸಿಂಹ. ಆತನಿಗೆ ಸಹಸ್ರ ಕುಂಭಾಭಿಷೇಕ ಮಾಡಿದರೆ ಈ ತಂಪಿನಿಂದ ಆತ ಎಚ್ಚತ್ತು ಏನಾದರೂ ಉಪಕಾರಮಾಡಿಯಾನು. ಸರಿ, ಊರಿನ ಹಾರುವರೆಲ್ಲಾ ತಾಮ್ರದ ಕೊಡಗಳನ್ನು ಹೊಳಪಾಗಿ ಬೆಳಗಿಕೊಂಡು ಊರಿಗೆ ಎರಡು ಮೈಲಿ ದೂರದಲ್ಲಿರುವ ಒಂಭತ್ತು ಕಲ್ಲಿನ ಬಾವಿಯ ಚಿಲುಮೆಯಿಂದ ಸೀನೀರು ತುಂಬಿಕೊಂಡು ತಮಗೆ ಬಂದ ಸ್ತೋತ್ರಗಳನ್ನು ಹೇಳುತ್ತಾ ಬೆಟ್ಟಕ್ಕೆ ನೀರು ಹೊರುತ್ತಿದ್ದಾರೆ.
ವಿಪೂರ ಈ ಕಾರ್ಯ ``ವಿಜ್ಞಾನಿಗಳಿಗೆ ಅಜ್ಞಾನವೆಂದು ತೋರಬಹುದು. ವಿಚಿತ್ರವಾದ ಈ ಆಧುನಿಕ ಯುಗದಲ್ಲಿ ಯಾವ ಕಾರಣದಿಂದ ಯಾವ ಫಲಪ್ರಾಪ್ತಿಯಾಗುತ್ತದೆ ಎಂದು ಯಾರಾದರೂ ತರ್ಕದಿಂದ ಹೇಳಲಾಗುತ್ತದೆಯೇ? ``ನಿಮ್ಮ ಸಿಪಾಯಿ ಜೋಡನ್ನು ಸರಿಯಾಗಿ ಹಾಕಿಕೊಂಡಿಲ್ಲ-ಇಂಥ ಅನೇಕ ಅಸಂಬದ್ಧ ದೂರುಗಳಿಗೂ ನನ್ನಾಕೆ ಬಯಸುವ ಸೀರೆಗೂ ಕಾರ್ಯಕಾರಣ ಭಾವವನ್ನು ಕಲ್ಪಿಸಬಲ್ಲಿರಾ? ಆದರೆ ಒಂದು ನಡೆಯದೆ ಮತ್ತೊಂದು ಆಗುವಹಾಗಿಲ್ಲ. ಇಂಥ ನೂರು ದೂರುಗಳನ್ನು ತರುವವರು ತಂದು ಅವನ್ನು ನಾನು ಯಂತ್ರದ ಮೇಲೆ ಕೊಟಕೊಟ ಕುಟ್ಟಿದರೆ ಆಗ ನೆಯ್ಗೆಯವನ ನೆಯ್ಗೆಯಿಂದ ಮೇಲಕ್ಕೆದ್ದು ಶೆಟ್ಟಿ