ಪುಟ:Putina Samagra Prabandhagalu.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪು.ತಿ.ನ ಸಮಗ್ರ


ಮನಸ್ಸನ್ನು ಮೋಹಿಸಿರುವುದು; ಹೃಯವನ್ನು ಸೆಳೆದಿರುವುದು ! ಮಕ್ಕಳೇ ನಮ್ಮಂಥ ನಾಸ್ತಿಕರಿಗೆ-ಆಸ್ತಿಕರಿಗೂ-ಶ್ರೀಕೃಷ್ಣ ಜನನ ವಾರ್ತೆಯನ್ನು ತರುವ ಹರಿಕಾರರು. ಶಿಶುಗಳಿಲ್ಲದೆ ಈ ದಿನಕ್ಕೆ ಕಳೆಬರುವುದಿಲ್ಲ; ಮನಸ್ಸಿಗೆ ಕೃಷ್ಣನುದಯವಾಯಿತೆಂಬ ನಂಬಿಕೆ ಹುಟ್ಟುವುದಿಲ್ಲ. ನನ್ನ ನೆನಪಿನಲ್ಲಿ ಉಳಿದಿರುವ ಗೋಕುಲಾಷ್ಟಮಿ ಚಿತ್ರಗಳೆಲ್ಲವುಗಳ ಕೇಂದ್ರದಲ್ಲೂ ಅವುಗಳ ಆತ್ಮದಂತೆ ಹಸುಳೆಯೊಂದಿದೆ. ಹೋದ ವರುಷ ನನ್ನ ತಂಗಿಯ ಮಗ; ಅದರಾಚೆ ವರುಷ ನನ್ನ ತಮ್ಮನೊಬ್ಬ; ಅದರಾಚೆ.... ಹೋದವರುಷದ ಗೋಕುಲಾಷ್ಟಮಿ ಚಿತ್ರವನ್ನು ನಾನಿಲ್ಲೇಕೆ ಕೊಡಬಾರದು ? ಅದು ನೆನಪಿನಲ್ಲಿ ಇನ್ನೂ ಉಜ್ವಲವಾಗಿದೆ. ಅದೊಂದನ್ನು ಹೇಳಿಬಿಟ್ಟರೆ ಸ್ಥಾಲೀಪುಲಾಕ ನ್ಯಾಯದಂತೆ ಮಿಕ್ಕವನ್ನೆಲ್ಲಾ ಹೇಳಿದ ಹಾಗೆ ಆಗುತ್ತದೆ.

ಹೋದವರುಷದ ಗೋಕುಲಾಷ್ಟಮಿ ಹಬ್ಬಕ್ಕೆ ನಾನು ನಮ್ಮೂರಿನಲ್ಲಿದ್ದೆ. ಆಗ ಒಂದು ದೊಡ್ಡ ಕುಟುಂಬದ ಮಗ ಮಾತ್ರ. ನನಗೆ ಪೂಜೆಗಧಿಕಾರವಿಲ್ಲ. ತಿಂಡಿಮಾಡುವ ಕಾರ್ಯದಲ್ಲಿ ಅಮ್ಮನಿಗೆ ನೆರವಾಗುವುದಕ್ಕೂ ನಾನು `ಮಡಿ' ಅಲ್ಲ. ಆದರೆ `ಫಲವಸ್ತ್ರ'ವನ್ನು ಕಟ್ಟುವುದಕ್ಕೆ ಅಧಿಕಾರವುಂಟು! ಅಲ್ಲಿ ನಾನು ನಿರಂಕುಶಪೂಭುತ್ವವನ್ನು ವಹಿಸಿದೆ. ನನ್ನ ತಮ್ಮಂದಿರಿಗೆ ತಮ್ಮ ವ್ಯಕ್ತಿಸ್ವಾತಂತ್ರ್ಯ ಅಳಿದುಹೋಯಿತಲ್ಲಾ ಎಂಬ ದುಃಖ-ಗೊಣಗುಟ್ಟುವುದಕ್ಕೆ ಮೊದಲು ಮಾಡಿದರು. ಆ ಮೇಲೆ ಸಲಹೆಗಳನ್ನು ಕೊಡುವುದಕ್ಕೆ ಪ್ರಾರಂಭಿಸಿದರು. "ಹುಡುಗರು, ನಿಮಗೆ ಅಂದವೇನು ಗೊತ್ತು? ಚಂದವೇನು ಗೊತ್ತು? ಸುಮ್ಮನೆ ಹಣ್ಣುಕಾಯಿಗಳಿಗೆ ನಾರು ಬಿಗಿದುಕೊಡಿರೊ" ಎಂದೆ. ದೊಡ್ಡ ಮನೆ, ದೊಡ್ಡ ಹಜಾರ, ಹಜಾರಕ್ಕೆ ಸರಿಯಾದ ದೊಡ್ಡ `ಫಲವಸ್ತ್ರ'ದ ಚಪ್ಪರ. ಈ ಚಪ್ಪರ ತುಂಬುವಂತೆ ನಮ್ಮ ತೋಟದಿಂದ ಸಾಮಾನುಗಳು ಬಂದಿದ್ದುವು. ಹೊಂಬಾಳೆ, ಅಡಕೆ, ಹುಣಸೆ, ಸೀತಾಫಲ, ನಿಂಬೆ, ಮಾದಲ, ಬಾಳೆಗೊನೆ, ಬಾಳೆಹಣ್ಣು, ಎಳನೀರು, ಇನ್ನೂ ಏನೇನೊ. ಆಮೇಲೆ ಇವುಗಳ ಜತೆಗೆ ಸೀಬೆಯ ಹಣ್ಣು, ಚಕ್ಕೋತನ ಹಣ್ಣು, ದಾಳಿಂಬೆ ಹೀಚು ಇವುಗಳನ್ನು ನನ್ನ ತಮ್ಮಂದಿರು ಯಾವುದೋ ಬೇಲಿ ಬಿದ್ದು ಮೈ ಕೈ ತರಚಿಕೊಂಡು ಕದ್ದು ತಂದಿದ್ದರು. ಕದ್ದು ತಂದ ಒಡವೆ ಕಳ್ಳ ಕೃಷ್ಣನಿಗೆ ಪ್ರೀತಿಯಂತೆ. ಇವನ್ನೆಲ್ಲಾ ಸಾಯಂಕಾಲದ ಹೊತ್ತಿಗೆ ಆಯವರಿತು, ಹುಡುಗರ ಮನ ನೋಯದಂತೆ ಅವರ ಸಲಹೆಗಳನ್ನೂ ಮನ್ನಿಸಿ, ಚಪ್ಪರಕ್ಕೆ ನೇತುಹಾಕಿದೆ. "ಎಷ್ಟಾದರೂ ಪಟ್ಟಣದಲ್ಲಿದ್ದವನು, ನಾಜೋಕಾಗಿ ಕಟ್ಟಿದ್ದಾನೆ" ಎಂದರು ಅಮ್ಮ. ಅಪ್ಪ, ತಂಗಿ, ಇವರೂ ಮೆಚ್ಚಿದರು. ಒಟ್ಟಿನಲ್ಲಿ ಎಲ್ಲರಿಗೂ ತೃಪ್ತಿಯಾಯಿತೆಂದೇ ಹೇಳಬಹುದು.