ಮಳೆ
೫೧
ರೆಂಬೆಗಳಂತೆ ಕುಲುಕಿಸುತ್ತಾ ಬೀದಿಗೆ ಒಂದು ಸಲ ಹಾರಿ ಮಳೆಯಲ್ಲಿ ತೊಯ್ಯುತ್ತಾ ಕುಣಿದು ಮರಳಿ ಜಗಲಿಗೆ ಬಂದ ಝಂ ಎಂದು ಎರಡು ಕಾಲೆತ್ತಿ ನೆಗೆಯುತ್ತಿದ್ದಾರೆ. ಇವರ ಉತ್ಸಾಹ ಜನಕ್ಕೆಲ್ಲಾ ಹರಡುತ್ತಿದೆ. ಇಂದು ಈ ಮೊದಲ ಮಳೆಯಲ್ಲಿ ನೆನೆಯುವುದೇ ಒಂದು ಆನಂದ. ಕೊಳಕ್ಕೆ ನೀರು ಬರುವ ಕಾಲುವೆ ಸರಿಯಾಗಿದೆಯೋ ಇಲ್ಲವೋ, ದಾರಿಯ ಶೋಧಿಸುವ ತೊಟ್ಟಿಯಲ್ಲಿ ಮರಳಿದೆಯೋ, ಸಲಾಕಿಯ ಒಂದರಿಗಳಿಗೆ ಎಲೆ ಕಸಕಡ್ಡಿ ಬಂದು ಮುಚ್ಚಿಕೊಂಡುಬಿಡುತ್ತವೆ. ತೆಗೆದುಹಾಕಬೇಕು, ಬನ್ನಿ ಬನ್ನಿ, ಎಂದು ಒಂದು ಗುಂಪು ಬೆಳ್ಳಗಿರುವ ಗರಿ ಗರಿ ಬಟ್ಟೆಗಳಿಗೆ ಬೀದಿಯ ಕೆಂಬಣ್ಣದ ನೀರು ಹಾರುತ್ತಿರುವುದನ್ನು ಲೆಕ್ಕಿಸದೆ ಮಳೆಯಲ್ಲೇ ಓಟ ಹಾಕುತ್ತಿದ್ದಾರೆ. ಕಣಿವೆಯ ಹೆಬ್ಬಳ್ಳ ತುಂಬಿ ಬರುತ್ತಿದೆ, ನೋಡೋಣ ಬನ್ನಿ ಎಂದ ಮತ್ತೆ ಕೆಲವರು ಅಲ್ಲಿಗೆ ಹೊರಡುತ್ತಿದಾರೆ. ಜಗಲಿಯ ಮೇಲೆ ಮಕ್ಕಳೆಲ್ಲಾ ನೆರೆದು ಸಿಕ್ಕಿದಕಾಗದ ಕಡ್ಡಿಕಸಗಳನ್ನೆಲ್ಲಾ ಹೆಬ್ಬಾವಿನಂತೆ ಹರಿದು ಬರುವ ಚರಂಡಿಯ ನೆರೆಗೆ ಹಾಕುತ್ತಿದಾರೆ. ನೂರಾರು ಹಾವುಗಳು ಹರಿಯುವಂತೆ ಬೀದಿಯ ನಡುವೆ ಜಲವೇಣಿಗಳು ಹರಿಯುತ್ತಿವೆ. ಈ ನೆರೆಯ ಮೇಲೆ ಮಳೆ ಧಾರೆ ಬಿದ್ದು ಕುಳಿಕುಳಿ ಸುಳಿಸುಳಿಯಾಗಿ ಸಾವಿರಾರು ಗುಬ್ಬಚ್ಚಿಗಳು ಕುಪ್ಪಳಿಸುತ್ತರುವಂತೆ ಮನೋಹರವಾಗಿದೆ. ಹುಡುಗರ ಹಿಂದೆ ಹೆಂಗಸರೆಲ್ಲಾ ಮಡಿ ಮೈಲಿಗೆ ಮರೆತು ಈ ರಮ್ಯ ಪ್ರವಾಹಗಳ ವಿನೋದವನ್ನು ನೋಡುತ್ತಿದಾರೆ. ಇದರಲ್ಲಿ ಎಂಜಲೆಲೆಗಳು ಕೊಚ್ಚಿ ಹೋಗುತ್ತಿರುವುದು ಬಹು ವಿನೋದಕರವಾಗಿದೆ. `ಓ ಓ ಆ ಮೂಲೆಮನೆ ಬಿತ್ತು, ಆ ಮುದುಕಿ ಹುಯಿಲಿಡುತ್ತಾಳೆ; ಭಲೆ ಭೇಷೆ'ಂದು ಹರ್ಷಾಧಿಕ್ಯದ ನಿರ್ದುಷ್ಟ ನಿರಾನುಕಂಪದಿಂದ ನನ್ನ ಗೆಳೆಯನೊಬ್ಬ ಎಲ್ಲರಿಗೂ ಸುದ್ದಿ ಸಾರುತ್ತಿದಾನೆ.
ಇಂತು ನಮ್ಮೂರಿಗೆ ಅಂದು ನೆಲವೆಲ್ಲ ಕಂಪಾಗುವಂತೆ, ನಾಡೆಲ್ಲ ತಂಪಾಗುವಂತೆ, ನಮ್ಮೆಲ್ಲರ ದಗೆಯಿಂಗುವಂತೆ, ಹಳೆ ಮನೆಗಳು ಬೀಳುವಂತೆ, ಕೆರೆಗೆ ಮೂರು ಮೆಟ್ಟಲು ನೀರು ಬರುವಂತೆ, ಕಲ್ಯಾಣಿಯ ಕಿರಿತೂಬು ಮುಳುಗುವಂತೆ, ಕಲ್ ತೊಟ್ಟಿಲಿನತೊರೆ ಕರೆಯ ಕಲ್ಲುಮಂಟಪವನ್ನುರುಳಿಸಿ ಮೊರೆಯುವಂತೆ, ಕಣಿವೆಯ ಕೆಳಗಿನ ಹೆಬ್ಬಳ್ಳದ ಭೋರ್ಗರೆತ ಊರಿಗೆ ಕೇಳಿಬರುವಂತೆ, ಕೊಳ ತುಂಬಿ ತುಳುಕಾಡುವಂತೆ, ಎಲ್ಲೆಲ್ಲೋ ನಗೆ ಬೆಳಕಾಡುವಂತೆ, ಮಟ ಮಟ ಮಧ್ಯಾಹ್ನದಲ್ಲಿ ಹಾರುವರ ಸಹಸ್ರ ನಾಮದ ಆರ್ತಘೋಷ ಶಾಂತವಾಗಿ ಕಪ್ಪೆಗಳ ಮನೋಹಾರಿ ಮಹಾಮೇಳವು ಇರುಳಿನ ತಾರೆ ಬೆಳಕಿನ ತಂಪಿನಲ್ಲಿ ಮೊಳಗುವಂತೆ, ಮಳೆ ಬಂದಿತು ಆವೊತ್ತು. ವೃದ್ದರೂ ಕೂಡ