ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬

ಪು.ತಿ.ನ.ಸಮಗ್ರ


ಆದರೆ ಬಸವ ಮೂಕ ಪ್ರಾಣಿ. ಅದಕ್ಕೆ ಮಾತು ಬಾರದು. ನಾವು ಹೇಳುವುದನ್ನು ಕೇಳಿ ತಿಳಿದುಕೊಳ್ಳುವುದಕ್ಕೆ ಅದಕ್ಕೆ ಶಕ್ತಿ ಇತ್ತೋ ಇಲ್ಲವೊ ನಾನು ನಿರ್ಧರವಾಗಿ ಹೇಳುವಹಾಗಿಲ್ಲ; ನನಗದರ ಪರಿಚಯ ಈವತ್ತೆ. ಈರನೇನೋ ಇದರ ಸಂಗಡ ಮಾತಾಡುತ್ತಿದ್ದ. ಆದರೆ ಆತನ ಸಂಜ್ಞೆ, ಅಭಿನಯ ಮತ್ತು ನೃತ್ಯ ಇವುಗಳು ಇದಕ್ಕೆ ಅರ್ಥವಾಗುತ್ತಿದ್ದ ಹಾಗೆ ಆತನ ಮಾತುಗಾರಿಕೆ ಅರ್ಥವಾಗುತ್ತಿತ್ತೇ ಎಂದು ನನಗೆ ಸಂಶಯ. ಈರನ ಕಥಕಳಿಯನ್ನು ಎಂಥ ದಡ್ಡ ಪ್ರಾಣಿಯೂ ಅರ್ಥಮಾಡಿಕೊಳ್ಳಬಲ್ಲುದು. ಗೂಳಿ ನಮ್ಮ ಮನೆಯ ಹಸುವಿನಷ್ಟು ಚುರುಕಲ್ಲದಿದ್ದರೂ ದಡ್ಡನಲ್ಲ. ಮತ್ತು ಮಾತುಗಾರಿಕೆಯಲ್ಲಿ ಒಂದು ವಿಶೇಷ ಸೌಕರ್ಯವಿದೆ : ಕೇಳುವವನು ಅದನ್ನು ಕೇಳಿದರೂ ಸರಿಯೆ, ಬಿಟ್ಟರೂ ಸರಿಯೆ, ಅರ್ಥಮಾಡಿಕೊಳ್ಳಲಿ, ಅಪಾರ್ಥಮಾಡಿಕೊಳ್ಳಲಿ, ಇವೆರಡನ್ನೂ ಮಾಡಿಕೊಳ್ಳದೆಯೇ ಇರಲಿ, ನಾವು ಹೇಳುವುದನ್ನು ಹೇಳಲೇಬಹುದು. ಕೇಳುವವರು ಬುದ್ಧಿವಂತರಾದರೆ ನಮಗೆ ಎಷ್ಟು ಗೊತ್ತಿದೆಯೋ ಅಷ್ಟನ್ನು ಮಾತ್ರ ಹೇಳಿ ಬುದ್ಧಿವಂತರೆನ್ನಿಸಿಕೊಳ್ಳಬಹುದು. ದಡ್ಡರಾದರೆ ಇನ್ನೂ ಸರಿ, ನಾವು ಹೇಳುತ್ತಿರುವಾಗಲೇ ನಮ್ಮ ಬುದ್ಧಿ ಅವರ ಮಂದವಾದ ಮನಸ್ಸಿನ ಮೇಲೆ ಮಸೆದು ಮಸೆದು ಹರಿತವಾಗುತ್ತದೆ. ಹರಿತವಾದ ಬುದ್ಧಿಯನ್ನು ಮಂದವಾಗಿ ಮಾಡಿಕೊಳ್ಳುವುದಕ್ಕೆ ಮೇಧಾವಿಗಳಾದ ಶಿಷ್ಯರು ಅಥವಾ ಶ್ರೋತೃಗಳು. ಹೀಗೆ ಮೊಂಡಾದುದನ್ನು ಹರಿತವಾಗಿ ಮಾಡಿಕೊಳ್ಳುವುದಕ್ಕೆ ಮಂದರಾದ ಶಿಷ್ಯರು ಅಥವಾ ಶ್ರೋತೃಗಳು-ವಕ್ತಾರನಿಗೆ ಇವರಿಬ್ಬರೂ ಬಹು ಪ್ರಿಯರು. ನಡಕಲವರದೇ ತಾಪತ್ರಯ. `ಅಜ್ಞಃ' ಸುಖಮಾರ್ಯಾಧ್ಯಃ' ಎಂಬ ಶ್ಲೋಕವನ್ನು ಈಗ ಜ್ಞಾಪಕಮಾಡಿಕೊಳ್ಳಿ. ನನ್ನ ಮಂದವಾದರೂ ಹರಿತವಾಗಬಲ್ಲ ಬುದ್ಧಿಗೆ ಈ ದಿನ ಈ ಗೂಳಿ ಮಾತನಾಡುವುದಕ್ಕೆ ಸಿಕ್ಕಿ ನನಗೆ ಬಹು ಹಾಯಾಯಿತು. ಆದುದರಿಂದ ನನ್ನ ಮುಂದೆ ಪೂಸನ್ನವಾಗಿ ಸಿಪ್ಪೆಯನ್ನು ಮೆಲ್ಲುತ್ತಾ ಕೆಂಪನೆಯ ಅಗಲವಾದ ಕಣ್ಣಿನಿಂದ ನನ್ನನ್ನು ಮಾತನಾಡಿಸುವಂತೆ ನೋಡುತ್ತಾ ನಿಂತಿರುವ ಈ ಪ್ರಾಣಿಯನ್ನು ನಾನು ಈ ರೀತಿ ಸಂಬೋಧಿಸಿದೆ:

ಅಯ್ಯಾ ಗೂಳಿ, ನೀನು ಕರವಾಗಿದ್ದಾಗ, ನಾನು ಬಲ್ಲೆ, ನಮ್ಮ ಮಗ್ಗಲು ಬೀದಿಯ ಅಜ್ಜಿಯ ಮನೆಯವನು ನೀನು. ನಿನ್ನ ಆಗಿನ ರೂಪವನ್ನು ನೆನೆದುಕೊಂಡರೆ ನೀನು ಒಂದು ದಿನ ಹೀಗಾಗುತ್ತೀಯ ಎಂದು ನಾವಾರೂ ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ಸ್ವಾತಂತ್ರ್ಯ ಬೇಕೇಬೇಡವೇ ಎಂಬ ವಿಚಾರದಲ್ಲಿ ನಡೆಯತಕ್ಕ ಎಲ್ಲ ಚರ್ಚಾಕೂಟಕ್ಕೂ ನಿನ್ನನ್ನು ಕರೆದುಕೊಂಡು ಹೋಗೋಣ