ಪುಟ:Putina Samagra Prabandhagalu.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋಕುಲಾಷ್ಟಮಿ


ಗೋಕುಲಾಷ್ಟಮಿಯ ದಿನ `ಫಲವಸ್ತ್ರ' ಕಟ್ಟುವವರೆಗೂ ಹುಡುಗರಿಗೆ ಕಾಲ ನೀರು ಕುಡಿದಂತೆ ಕಳೆದುಹೋಗುತ್ತದೆ. ಅಲ್ಲಿಂದ ಮುಂದೆ ರಾತ್ರಿ ಕೃಷ್ಣನಿಗೆ ಅಘರ್ಯ್‌ ಕೊಡುವವರೆಗೂ ಕಾಲವನ್ನು ಕಳೆಯುವುದು ಅವರಿಗೆ ದುಸ್ತರವಾಗುತ್ತದೆ. ಅಲ್ಲಿಯತನಕ ಅವರು ಬಾಯಿಗೆ ಕುಕ್ಕೆ ಕಟ್ಟಿಕೊಂಡಿರಬೇಕು. ಅದರಲ್ಲೂ ಗೋಕುಲಾಷ್ಟಮಿಯ ದಿನ ಹುಡುಗರಿಗೆ ಹೊಟ್ಟೆತುಂಬ ಅನ್ನ ಹಾಕುವುದಿಲ್ಲ. ತಂಗಳನ್ನೊ ಉಪ್ಪಿಟನ್ನೊ ತಿಂದುಕೊಂಡು ಅವರು ರಾತ್ರಿಯವರೆಗೂ ಜೀವಿಸಬೇಕು. ಒಳಗಡೆ ಹತ್ತು ದಿವಸಗಳಿಂದ ಮಾಡಿದ ತಿಂಡಿ ತುಂಬಿದೆ. ಒಲೆಯ ಮುಂದೆ ಬೆಳಗಿನಿಂದ ಸಂಜೆಯವರೆಗೂ ಒಂದೇ ಸಮನಾಗಿ ಕೂತು ಅಮ್ಮ ಹೊಸ ಹೊಸ ಭಕ್ಷ್ಯಗಳನ್ನು ಕರಿದು ಇಡುವ ವಾಸನೆ ಗಮಗಮನೆ ಮನೆಯಲ್ಲೆಲ್ಲಾ ಹರಡಿದೆ. ಇದರಿಂದ ಹುಡುಗರ ಹಸಿವೆಯ ಬೆಂಕಿಗೆ ಆಜ್ಯ ಹುಯ್ದಂತೆ ಆಗಿ ಅದರ ಕಾವು ಹೆಚ್ಚುತ್ತದೆ. ಆ ಕಾವಿಗೆ ಈ ಕಾಲ ಪರಿಮಾಣವು ನಿಡಿದಾಗಿ ನಿಡಿದಾಗಿ ಅದರ ತುದಿಯಲ್ಲಿರುವ ಕೃಷ್ಣ ಜನನ ಮುಹೂರ್ತವು ದೂರದೂರ ಸಾಗಿ ಕೊನೆಗೆ ಹುಡುಗರ ಆಸೆಯ ಕಣ್ಣಿಗೂ ಅದು ಮರೆಯಾಗಿ ಹೋಗುತ್ತದೆ. `ಫಲವಸ್ತ್ರ' ಕಟ್ಟಿದ ಮೇಲೆ ಮಕ್ಕಳು ಅಕ್ಕಿ ಹಿಟ್ಟನ್ನು ಕಲಸಿ ಅದರ ಮೇಲೆ ಕೃಷ್ಣನ ಅಚ್ಚೊತ್ತಿ, ಮೋಂಬತ್ತಿಯನ್ನು ಕರಗಿಸಿ ಹುಯಿದು, ಐದಾರು ಮೋಂಬತ್ತಿ ಕೃಷ್ಣರನ್ನು ಮಾಡಿ, ಗರಿತಿದ್ದಿ, ಸಿಂಗರಿಸಿ, ಹಸೆಯ ಮೇಲಿಟ್ಟರು. ಅಷ್ಟು ಹೊತ್ತಿಗೆ ಹಾಗೂ ಹೀಗೂ ಇರುಳಾಯಿತು. ಆದರೂ ತಂದೆಯವರು ಪೂಜೆಗೇಳಲೊಲ್ಲರು. ನಡುರಾತ್ರಿಗಿನ್ನೂ ಐದು ತಾಸುಗಳು ಉಳಿದಿವೆ ! ಒಂಭತ್ತು ಘಂಟೆಯ ಹೊತ್ತಿಗೆ ಎಲ್ಲರಿಗಿಂತ ದೊಡ್ಡವನು ನಾನು ಒಬ್ಬ ಹೊರತು, ಎಲ್ಲರಿಗಿಂತ ಚಿಕ್ಕದಾದ ನನ್ನ ತಂಗಿಯ ಕೂಸೊಂದು ವಿನಾ, ಉಳಿದವರೆಲ್ಲರೂ ಎಲ್ಲೆಂದರಲ್ಲಿ ನಿದ್ದೆಯಲ್ಲಿ ಒರಗಿದರು.

ಹತ್ತೂವರೆ ಘಂಟೆಯಾಯಿತು. ಪೂಜೆಯ ಪೂರ್ವಭಾಗವನ್ನು ಮುಗಿಸಿಕೊಂಡು ತಂದೆಯವರು ಭಾಗವತ ಪುರಾಣದಲ್ಲಿ ಶ್ರೀಕೃಷ್ಣ ಜನನ ಪೂಕರಣವನ್ನು ಪಾರಾಯಣ ಮಾಡಲು ಅಂಗಳದಲ್ಲಿ ಮಣೆಯಮೇಲೆ ಕುಳಿತಿದಾರೆ. ಮುಂದೆ ವ್ಯಾಸಪೀಠದಲ್ಲಿ ಭಾಗವತವು ತೆರೆದಿಟ್ಟಿದೆ. ಅದರ ಪಕ್ಕದಲ್ಲಿ ಅಘರ್ಯ್‌ ಪಾತ್ರೆ, ಪೂಜಾದ್ರವ್ಯಗಳ ತಟ್ಟೆ, ಅಕ್ಷತೆಯ ಬಟ್ಟಲು ಇವು ಅಣಿಯಾಗಿವೆ. ಹಣತೆಯೊಂದರ ಬೆಳಕು ಇವುಗಳೆಲ್ಲವನ್ನೂ ಬೆಳಗಿ ಮುಂದುವರಿದು ಪ್ರಾಣಾಯಾಮವನ್ನು ಮಾಡುತ್ತಿರುವ ನಮ್ಮ ತಂದೆಯವರ ಮುಖದಮೇಲೆ ವಿರಮಿಸುತ್ತಿದೆ. ಜ್ಞಾನದಿಂದ ಓಜಸ್ವಿಯಾದ, ವ್ರತನೇಮಗಳಿಂದ ತೇಜಸ್ವಿಯಾದ,