ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೀದಿಯ ಬಸವ

೬೫

ಓಣಿಯ ಬಾಗಿಲಲ್ಲಿ. ಹಿಂತಿರುಗುವುದಕ್ಕೆ ಗೂಳಿಗೆ ನೆಗೆದೆ. ನಾನು ಇಲ್ಲಿ, ಗೂಳಿ ನಡುವೆ, ಅಣ್ಣ ತಮ್ಮ ಓಣಿಯ ಬಾಗಿಲಲ್ಲಿ. ಹಿಂತಿರುಗುವುದಕ್ಕೆ ಗೂಳಿಗೆ ಆಗದು. ಅದು ಹಿಂದಕ್ಕೆ ಹಿಂದುಹಿಂದಾಗಿಯೇ ಜರುಗಬೇಕು. ನಾನು ಗದ್ದರಿಸಿ ಕೋಲು ತೋರದೆ ಅದು ಹಾಗೆ ಹೋಗುವ ಹಾಗಿಲ್ಲ. ನನಗೆ ಅದನ್ನು ಇಲ್ಲಿಯವರೆಗೂ ಗೌರವದಿಂದ ಕಂಡು ಈಗ ಹೀಗೆ ಅವಮಾನಗೊಳಿಸುವುದಕ್ಕೆ ಇಷ್ಟವಿಲ್ಲ. ಪರಿಸ್ಥಿತಿ ನಿಜವಾಗಿ ಬಹಳ ವಿನೋದಕರವಾದದ್ದು. ತಮ್ಮ ದೂರದಲ್ಲೆ ಲ್ಹೇಲ್ಹೇ ಎನ್ನುತ್ತಾನೆ. ಅಮ್ಮ-ಏನೋ ನಿನ್ನದು ಸರಿ ಬಿಡಪ್ಪ-ಎಂದು ನನ್ನನ್ನು ಸಿಡುಕುತ್ತಾಳೆ. ನಾನು ಹೊಸಿಲಿನ ಮೇಲೆ ನಿಂತು ಹಲಸಿನ ತೊಳೆಯನ್ನು ತಿನ್ನುತ್ತಾ ನಗುತ್ತೇನೆ. ಗೂಳಿ ಏನು ಮಾಡುವುದಕ್ಕೂ ತೋಚದೆ ಇದ್ದಬಿದ್ದ ಕೀತನ್ನೂ ಬಿತ್ತವನ್ನೂ ಮೆಲ್ಲುತ್ತಾ ನಡುವೆ ಅಲುಗಾಡದೆ ನಿಂತೇ ಇದೆ. ಕೊನೆಗೆ ತಮ್ಮ ನೆರೆಮನೆಯ ಮಾಳಿಗೆಗೇರಿ, ನಮ್ಮ ಓಣಿಯ ನನ್ನ ಪಕ್ಕಕ್ಕಿಳಿದು ಬಸವನನ್ನು ಗದ್ದರಿಸಿ ಹಿಂದಕ್ಕೆ ಜರುಗಿಸಬೇಕಾಯಿತು.

ಹೀಗೆ ಗೂಳಿ ನಮ್ಮ ಮನೆ ಓಣಿಗೆ ಆ ದಿನ ಬಂದು ಅನೇಕ ಭಾವಗಳನ್ನು ತಂದು ನನ್ನ ಮನದ ತುಂಬ ತುಂಬಿ ನಿಂತುಕೊಂಡಿತ್ತು. ಅದು ಓಣಿಯನ್ನು ಬಿಟ್ಟಮೇಲೆ ಮಿಕ್ಕ ಒಂದೆರಡು ಹಲಸಿನ ತೊಳೆಗಳನ್ನು ತಮ್ಮನಿಗೆ ಕೊಟ್ಟು ಒಂದು ತುತ್ತು ಪೊಂಗಲನ್ನೂ ಒಂದೆರಡು ಸುತ್ತು ತೇಂಗೊಳಲನ್ನೂ ತಿಂದೆ. ಆ ತೊಳೆಯನ್ನು ತಿಂದ ಬಾಯಿಗೆ ಸಪ್ಪೆ ಇದು. ನನಗೆ ಬೇಡ ನೀನೇ ತಿನ್ನು ಎಂದು ಅವನನ್ನು ಇನ್ನೂ ಸ್ವಲ್ಪ ಕೊಡೆಂದು ಕೇಳದೆ, ದೇವಸ್ಥಾನದಿಂದ ಮುಂಚೆಯೇ ಬಂದೆನಲ್ಲಾ ಎಂದು ನಿರ್ವೇದವನ್ನು ತುಸವೂ ಪಡದೆ, ಸಂಜೆಯ ಕೆಂಬೆಳಕಿನಲ್ಲಿ ಬೀದಿಯ ನಡುವೆ ಹಾಯಾಗಿ ಮಲಗಿದ್ದ ಈ ಗೂಳಿಯನ್ನು ಮತ್ತೊಮ್ಮೆ ನೋಡಿ ಸ್ನೇಹವನ್ನು ಸೂಚಿಸಿ ಕೊಳದ ಕಡೆಗೆ ಸಂಧ್ಯಾವಂದನೆಗೆ ಹೊರಟೆ.

ಬಸವ ನನ್ನ ಮನಸ್ಸನ್ನು ಬಿಟ್ಟು ಹೋಗಿ ಬಹು ಬಿಮ್ಮೆನ್ನುತ್ತಿದೆ. ಇದನ್ನು ಬೇರೊಂದು ನೇಹದಿಂದ ಬೇಗ ತುಂಬಿಕೊಳ್ಳುವುದೊಂದೇ ಈಗ ಉಪಾಯ.