ಪುಟ:Putina Samagra Prabandhagalu.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪು.ತಿ.ನ ಸಮಗ್ರ


ಶಮದಮ ದಯಾದಿಗುಣಗಳಿಂದ ಪ್ರಸನ್ನವಾದ, ವಯಸ್ಸಿನ ಅಧಿಕ್ಯದಿಂದ ಗೌರವಾಧಿಷ್ಠಾನವಾದ, ಅಂದಿನ ಉಪವಾಸದಿಂದ ಶುಷ್ಕವಾದ ಮುಖವದು. ಈ ಕಡೆ ಕಂಬವೊರಗಿಕೊಂಡು ನಮ್ಮ ತಾಯಿಯವರೂ ಅವರ ಮಗ್ಗುಲಲ್ಲಿ ನನ್ನ ತಂಗಿಯೂ ಪುರಾಣಶ್ರವಣೋನ್ಮುಖರಾಗಿ ಕುಳಿತಿದಾರೆ. ವ್ಯಾಸಪೀಠದ ಮುಂದುಗಡೆ ದೀಪದ ಕಂಬದ ಹತ್ತಿರ ನನ್ನ ತಂಗಿಯ ಕೂಸು ಬಾಯಲ್ಲಿ ಬೆರಳಿಟ್ಟು ದೀಪಜ್ವಾಲೆಯಲ್ಲಿ ದೃಷ್ಟಿಯನ್ನು ನೆಟ್ಟು ಮಲಗಿದೆ. ಎಂತಹ ಸೋಜಿಗವಾದ ಚಿತ್ರವದು ! ನನ್ನ ತಂದೆಯವರ ಧ್ಯಾನಸಕ್ತವಾದ, ಪುರಾತನ ಆರ್ಯಸಂಸ್ಕೃತಿಯ ಅಕಳಂಕಿತ ಪಕ್ವಫಲದಂತಿರುವ, ಮುಖದ ಮುದ್ರೆ-ಆ ಸಂಸ್ಕೃತಿಯ ಪಾತ್ರದಲ್ಲಿ ಹರಿದು, ಶ್ರದ್ಧೆಯ ನೆರೆಗೊಂಡು, ವೈದಿಕ ಧರ್ಮಕರ್ಮಗಳ ಕೂಲಗಳಿಂದ ನಿಯಮಿತವಾಗಿ, ಜ್ಞಾನಾರ್ಜನೆಯ ವೇಗದಿಂದ ನಿಷ್ಕಲ್ಮಷವಾಗಿ, ಹಾದಿ ಸಾಗುತ್ತಾ ಸಾಗುತ್ತಾ ಕ್ರಮೇಣ ತಿಳಿದು, ಅನಂತದಲ್ಲಿ ಆತ್ಮನಿವೇದನ ಮಾಡಲು ಅಣಿಯಾದ ಜೀವನದಿಯ ಚಿತ್ರವದು ! ಈ ಮಹಾನದಿಗೆ ಉಪನದಿಯಾಗಿ ತನ್ನ ಬಾಳನ್ನು ಬೆರಸಿರುವ ಪತಿಮನೋನುಕೂಲೆಯಾದ ತಾಯಿ; ಆ ಮೇಲೆ ಈ ವಾತಾವರಣದಲ್ಲೇ ಬೆಳೆದ ನನ್ನ ತಂಗಿ, ಮತ್ತು ಆ ಮಗು- "ಅಂಗಿ ಕೂಡ ಇಲ್ಲದೆ" ಬೆತ್ತಲೆಯಾಗಿ ಮಲಗಿರುವ ಕೂಸು, ಆ ಹಣತೆ, ಆ ಸನ್ನಿವೇಶ, ಆ ವೈದಿಕ ವಾತಾವರಣ. ಈ ಪ್ರಪಂಚ ಬೇರೆ-ಈ ವ್ಯಕ್ತಿಗಳೂ ಬೇರೆ; ನನಗೂ ಇವರಿಗೂ ಯಾವ ಸಂಬಂಧವೂ ಇರಲಾರದು; ಇವರೆಲ್ಲರೂ ನನ್ನಿಂದ ದೂರ ದೂರ-ಬಹು ದೂರ-ಇನ್ನಾವುದೋ ಮಹಾ ಸಾಗರದ ಆಚೆ ತೀರದಲ್ಲಿ ಉಳಿದಂತೆಯೂ, ಇವರ ನಾಡಿಗೆ ನಾನು ಯಾವುದೋ ಒಂದು ಆಕಸ್ಮಿಕ ಘಟನೆಯಿಂದ ಬಂದಂತೆಯೂ ನನಗೆ ಕಂಡುಬಂದಿತು. ಈ ಮನೆಯಲ್ಲಿ ನಾನು ಪರಕೀಯನಂತೆ ಭಾಸವಾಯಿತು. ತಲೆಯೆತ್ತಿ ಮೇಲೆ ನೋಡಿದೆ. ಗಡಿಯಾರವೊಂದು ಟಿಕ್ ಟಿಕ್ ಎಂದು ಹೊಡೆದುಕೊಳ್ಳುತ್ತಿತ್ತು. ನೋಡಿ ನಂಟನನ್ನು ಕಂಡಷ್ಟು ಸಮಾಧಾನವಾಯಿತು. ಇಲ್ಲಿ ನಾನು ಮತ್ತು ಆ ಗಡಿಯಾರ ಇಬ್ಬರೇ ಸಹೃದಯ ವಿದೇಶೀಯರು !

ತಂದೆಯವರು ಪೂಣಾಯಾಮ ಮಾಡಿ, ಪೂಜೆ ಮುಗಿಸಿ, ಪುರಾಣವನ್ನು ಓದುವುದಕ್ಕೆ ಪ್ರಾರಂಭಿಸಿದಾರೆ. ಸಂಸ್ಕೃತ ಬಾರದಿದ್ದರೂ ಅನೇಕಾವೃತ್ತಿ ಕೇಳಿರೋಣದರಿಂದ ಅಮ್ಮನಿಗೂ ತಂಗಿಗೂ ಅರ್ಥಗ್ರಹಣ ಶಕ್ತಿಯುಂಟಾಗಿದೆ. ಹೃದಯವಿದ್ರಾವಕವಾದ ಸನ್ನಿವೇಶವದು. ಸೆರೆಮನೆಯಲ್ಲಿ ದೇವಕೀವಸುದೇವರುಗಳು ಬಂಧಿತರಾಗಿದಾರೆ. ಏಳು ಮಕ್ಕಳನ್ನು ಹೆತ್ತು ಕಂಸನಿಗೆ ಕೊಟ್ಟ ತಾಯಿಗೆ ಎಂಟನೆಯ ಗರ್ಭ ಪ್ರಾಪ್ತವಾಗಿ ಪ್ರಸವಕಾಲ ಒದಗಿದೆ. ಇದೂ ಕಂಸನಿಗೆ ಅಹುತಿ